ಸೆರಗು ಸುಟ್ಟೆನೇ ಯವ್ವಾ
ಸೆರಗು ಸುಟ್ಟೆನೇ ಯವ್ವಾ
ನಾನು ನಿನ್ನಾ
ಸೆರಗು ಸುಟ್ಟೆನೇ ಯವ್ವಾ//
ಎದೆ ಹಾಲು ಕೊಡುವಾಗ
ಕಣ್ಣಾಸರು ತಪ್ಪಿಸಲು
ನೀ ನನಗೆ ಹೊದಿಸಿದಾ //ಸೆರಗು//
ಹೊಟ್ಟೆ ಬಾಧೆಗೆ ರಚ್ಚೆ
ಹಿಡಿದು ಅಳುವಾಗ
ಹೊದಿಸಿದಾ ರಮಿಸಿದಾ //ಸೆರಗು//
ಗೆಳೆಯರಾ ಜೊತೆಯಲ್ಲಿ
ಆಡಿ ಬಿದ್ದಳುವಾಗ
ಜೋಕಾಲಿ ತೂಗಿದಾ//ಸೆರಗು//
ಶಾಲೆಮಾಸ್ತರ ಬೆತ್ತ ಗೆಣ್ಣು
ಗೆಣ್ಣಿಗು ಬಿದ್ದು ಕಣ್ಣೀರು
ಹರಿದಾಗ ರಮಿಸಿದಾ //ಸೆರಗು//
ಬೆಳೆದು ದೊಡ್ಡವನಾಗಿ
ಫೇಲಾಗಿ ಕುಂತಾಗ
ಕಣ್ಣೀರನೊರೆಸಿದಾ //ಸೆರಗು//
ಜಗದೆಲ್ಲ ತಾಪಗಳ
ತೊಡೆ ತೊಟ್ಟಿಲಲಿಟ್ಟು
ತವಿಸಿ ಸಂತೈಸಿದಾ //ಸೆರಗು//
ಜೀವರಿಗು ದೇವರಿಗು
ಸಕಲ ಜೀವಾತ್ಮರಿಗು
ಬೆವರಗಂಧದ ತವರಾದ//ಸೆರಗು//
– ಪ್ರೊ ಎಸ್ ಜಿ ಸಿದ್ಧರಾಮಯ್ಯ




