ದೀಪವಾದವರು

3 months ago

ದೀಪವಾದವರು

ಇವರು ನಮ್ಮವರು
ಜೊತೆ ಜೊತೆಯಲಿ ಬೆಳೆದವರು
ಆಡಾಡುತ ಬಾಳಿದವರು.

ಇವರು ನಮ್ಮವರು
ಮಾತಾಡಿದವರು
ಮಾತು ಮಾತಿಗೆ ಕಿತ್ತಾಡಿದವರು
ಮತ್ತೆ ಮಾತು ಮಾತಲಿ ಬೆಸಗೊಂಡವರು.

ಇವರು ನಮ್ಮವರು
ಬಳಿಸಾಲ  ಬಳಗಪ್ರಜ್ಞೆಯ
ಅಣ್ಣತಮ್ಮಂದಿರು ಅಕ್ಕತಂಗಿಯರು

ಇವರು ನಮ್ಮವರು
ಒಂದೆ ಊರವರಲ್ಲ
ಒಂದೆ ಗುಡಿಯವರಲ್ಲ
ಒಂದೆ ನುಡಿಯವರಲ್ಲ .

ಇವರು ನಮ್ಮವರು
ಒಡಹುಟ್ಟಿದವರು ಅಲ್ಲವೇ ಅಲ್ಲ
ಒಡನಾಟದಲಿ ಇದ್ದವರು

ಇವರು ನಮ್ಮವರು
ಹೇಳದೆ ಕೇಳದೆ ಮರೆಯಾದವರು
ಮರಳಿ ಬಾರದ ಮನೆಗೆ ಹೋದವರು.

ಇವರು ನಮ್ಮವರು
ನೆನಪಿನ ಸಂಪುಟದಲ್ಲಿ
ಹಸಿರಾಗಿ ಉಸಿರಾಗಿ ಕಾಡುವವರು.

ಇವರು ನಮ್ಮವರು
ಇದ್ದಾಗ ಇರವಿನ ಪಾಠ ಬಾಳಿದವರು
ಮರೆವಿನ ಪಾಠ ಉಣಿಸಿದವರು
ಇರವು ಮರೆವುಗಳಲ್ಲಿ
ಮಹಾಮನೆಯ ದೀಪ ಮುಡಿಸಿದವರು.

ಇವರು ನಮ್ಮವರು
ಇವರು ಹೋದರು
ದೀಪ ಬೆಳಗಿದೆ
ದೀಪಕ್ಕೆ ದೀಪವಾಗಿ
ದೀಪಾವಳಿಯ ನೆನಪು ಬೆಳಗಿದೆ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

Leave a Reply

Share this post: