ಎಷ್ಟು ದುಬಾರಿ ಒಡವೆಗಳ ಧರಿಸಿದರೆ ಏನು, ದುಬಾರಿ ವಸ್ತ್ರಗಳ ತೊಟ್ಟರೇನು, ಅಂಗಾಂಗಗಳು ಸಮತೋಲನದಲ್ಲಿ ಇರಬೇಕು.
ಮೈಬಣ್ಣ ಯಾವುದಾದರೂ ಏನು, ರೂಪ ಎಷ್ಟಿದ್ದರೇನು, ಆಸ್ತಿ ಅಂತಸ್ತು ಎಷ್ಟಿದ್ದರೇನು, ಕೀರ್ತಿ ಪ್ರಶಂಸೆ ಎಷ್ಟಿದ್ದರೇನು, ಅಂಗಾಂಗಗಳು ಸಮತೋಲನವಿರದಿದ್ದರೆ.
ಮಾಸಿದ ಚೀಲದೊಳಗೆ ರುಚಿರುಚಿಯಾದ ಹಣ್ಣುಗಳು ಇದ್ದರೇನು ಹಣ್ಣಿನ ಆದ್ಯತೆ ಕಡಿಮೆಯಾಗುವುದಿಲ್ಲ, ಸುಂದರ ಕಲಾಕೃತಿಯ ಚೀಲದೊಳಗೆ ಕೊಳೆತ ಹಣ್ಣುಗಳು ಎಷ್ಟಿದ್ದರೇನು ಕೇಳುವವರು ಯಾರು, ಆರೋಗ್ಯವಂತ ದೇಹಕ್ಕೆ ಬಾಹ್ಯ ಅಲಂಕಾರಗಳು ಅವಶ್ಯವಲ್ಲ, ಅನಾರೋಗ್ಯ ದೇಹಗಳಿಗೆ ಬಾಹ್ಯ ಅಲಂಕಾರಗಳು ದೇಹಕ್ಕೆ ಶಕ್ತಿ ತುಂಬುವುದಿಲ್ಲ.
ಒಂದಷ್ಟು ಅಗಲದ ಕಣ್ಣಿನ ಕಾಯಕವ ಕಳೆದುಕೊಂಡಿದ್ದರೆ ಎಷ್ಟು ಬೆಳಕಿದ್ದರೇನು, ಎಷ್ಟು ಲಕ್ಷದ ಕನ್ನಡಕವ ಧರಿಸಿದರೇನು
ಕಾಳಿನ ಗಾತ್ರದ ಮೂತ್ರಪಿಂಡಗಳು ಕ್ರಿಯಾಶೀಲವಾಗಿರದಿದ್ದರೆ, ದೇಹ ಯಾವ ಗಾತ್ರದ್ದಾದರೇನು
ಎಷ್ಟು ಅಗಲದ ದೇಹವಾದರೇನು, ಕೂದಲಿನ ಗಾತ್ರದ ನರಗಳು ಮೆದುಳಿನಲ್ಲಿ ಜೀವಂತವಾಗಿರದಿದ್ದರೆ.
ಎಷ್ಟು ಸಂಪತ್ತುಗಳಿದ್ದರೇನು, ಹೃದಯದ ಕವಾಟಿನಲ್ಲಿ ರಕ್ತ ಸಂಚಾರ ಏರುಪೇರಾದರೆ.
ದೇಹ ಹೇಗಿದ್ದರೇನು ಕಿವಿ ಕ್ರಿಯಾಶೀಲವಾಗಿರದಿದ್ದರೆ, ಕಾಲುಗಳು ಸತ್ವಹೀನವಾದರೆ, ಕೈಗಳು ಕಾಯಕವ ಮಾಡುವ ಸ್ಥಿತಿಯ ಕಳೆದುಕೊಂಡರೆ.
ದೇಹದ ಚಾಲಕ ನಮ್ಮೊಳಗೆ ಇದ್ದಾನೆ, ನಾವು ಏನಿದ್ದರೇನು? ಏನು ಇಲ್ಲದಿದ್ದರೇನು ನಮ್ಮೊಳಗಿರುವ ಚಾಲಕ ನಿದ್ರೆಗೆ ಜಾರಬಾರದು, ಕ್ರಿಯಾಶೀಲವಾಗಿರಬೇಕು ಜೊತೆಗೆ ಚಲನೆಯಲ್ಲಿ ಸಮತೋಲನವು ಇರಬೇಕು, ಆಗ ಪ್ರತಿದಿನವೂ ಪ್ರತಿಕ್ಷಣವೂ ಆನಂದದ ಬದುಕು.
– ಕೆ ಎಸ್ ನಾಗರಾಜ್, ಬೆಂಗಳೂರು



