ಬಾಗಿನ
ಮೊರ ಅಂದರೆ ಗೊತ್ತಲ್ಲಾ. . ..
ಕೇರುತ್ತೆ ಅದು ,ಅಲ್ಲಿ
ಇಲ್ಲಿ ಮತ್ತು ಎಲ್ಲೆಲ್ಲೂ
ಆ ದಿನ. . . .
ಸೇವಂತಿಗೆ ಹೂವು ಚಳ್ಳನೆ ನಗು
ಚಿಮುಕಿಸುತ್ತಿತು. ದಿನ ತುಂಬಿದ್ದ
ಮೋಡ ಎರಡೂ ಕೈಯಲಿ ಸೊಂಟ
ಹಿಡಿದು ಬೆವರಿನಿಂದ ತೊಯ್ದು
ಉಸ್ಸೆಂದಾಗ
ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ
ಅಂತ ಚಿಮ್ಮುತ್ತಿದ್ದವ್ತು. ಅಸೂಯೆಯಿಂದ ಸೂರ್ಯ
ಕೆಂಪಾಗಿದ್ದ, ನನಗಿಲ್ಲದ ವಾತ್ಸಲ್ಯದಲ್ಲಿ ಇವಳು
ಹೇಗೆ ಮಿನುಗುತ್ತಾಳೆ ಅಂತ
ಅದೇನೂ ಎಂದಿನ ದಿನವಾಗಿರಲಿಲ್ಲ
ಸಂಭ್ರಮಕೇ ದೊಡ್ಡ ಮುಳ್ಳು ಚಿಕ್ಕ ಮುಳ್ಳು
ಅಂಟಿ ಜೂಟಾಟವಾಡುತ್ತಿದ್ದವಲ್ಲಾ
ಅಚ್ಚ ಕೃಷಿಕ ಬಸವರಾಜಣ್ಣನ ಎಡ
ಹೆಗಲಿನ ವಲ್ಲಿಯೊಡನೆ ಮಣ್ಣಿನ
ಗುಣ ಹೀರಿದ್ದ ನಾನು ಬಾನು
ವಿನಿಂದ ಜಯಾ ಅಗಿದ್ದು ಹೀಗೆ
ಯಾವುದೇ ಗೋಡೆಗಳಿರಲಿಲ್ಲ ಬಿಡಿ
ಪ್ರೀತಿಯ ಒಳ ಒರತೆಗಳು
ಜಿನುಗುವುದು ಹೀಗೆ ನೋಡಿ
ಸಾಬರ ಮಗಳು ಸಾಬರ ಸೊಸೆಗೆ
ಜೀವದುಂಬಿದ ಹಸಿ ಮಣ್ಣಿನ ಬಾಗಿನ
“ಜಯಾ. . . .ನಡಿಯವ್ವ ಹಬ್ಬಕೆ ‘
ಅರಿಶಿನದ ಎಲೆ ಕಡುಬು
ಗಂಡನ ಮನೆಯ ಕಸೂತಿ ನೆರಿಗೆಗಳ
ಸದಾ ಚಿಮ್ಮುತ್ತಿದ್ದರೂಎದೆಯಾಳದಲಿ
ಪಿಸುಗುಟ್ಟಿದ್ದು ಆ ಎಲೆ ಹಸಿರು
ವಾತ್ಸಲ್ಯವ ನೆಯ್ದ ಸಾದಾ ಸೀರೆ
ಮಡಿಲಲಿ ತುಂಬಿಸಿ ಕವುಚಿದ ಮೊರವ
ಮರಳುವ ದಾರಿಯಲಿ ನಿಂತು
ಅರಳಿಮರವ ಕೇಳಿದ್ದೆ
ಹೇಗೆ ಕೊಂಡೊಯ್ಯಲಿ ಇದನು
ನನ್ನತ್ತೆ ಮನೆಗೆ ಅರಿಶಿನ ಕುಂಕುಮದೊಡನೆ
ಹೇಗೆ ಬಿಡಿಸಲಿ ಬಾಂಧವ್ಯದ ಎಳೆಗಳ
ರಂಗೋಲಿಯನು ಸಾಬರ ಮನೆ ಬಾಗಿಲಲಿ
ಕೊಡಲೇ ಯಾರಿಗಾದರೂ ದಾರಿಹೋಕರಿಗೆ?
ಕೊಡಬಹುದೇ ಆದನು ಯಾರಿಗಾದರೂ
ಆ ಒಲವನು ಬಲವನು
ಪಿತೃ ವಾತ್ಸಲ್ಯದ ಮಾತೃತ್ವವನು
ನೆನೆಸಿಕೊಂಡಾಗ ಈಗಲೂ
ಕಣ್ಣಂಚಿನಲಿ ತೇವ
ಮೊರದ ತುಂಬಾ ಬದುಕಿನ ಪಸೆಯ
ಹಸೆಯ ಬರೆದ ಬೇಸಿಗೆ ಹಕ್ಕಿಯ ವಿದಾಯ
ಬಸವರಾಜಣ್ಣ. . . .
ನೀವು ಕೊಟ್ಟ ಮೊರಹೇಳುತ್ತೆ
ಮಿಡಿಯುತ್ತೆ ಸಹಸ್ರ ಆರೋಪಗಳೆದುರು
ಒಂಟಿಯಾಗಿ ನಿಲ್ಲುತ್ತೆ, ದ್ವೇಷದ ಎಲ್ಲಾ
ಭಾಷೆಗಳ ಕವುಚಿ ಹಾಕುತ್ತೆ ಮುಂಜಾವಿನ
ಹೊಂಬೆಳಕಿನೊಂದಿಗೆ ಪ್ರೀತಿಯ ನಿರ್ಮಲ
ಅಲೆಗಳು ಮೊರದ ತುಂಬಾ
ತೂರುತ್ತಿರುತ್ತವೆ.
– ಬಾನು ಮುಷ್ತಾಕ್
(ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್ ಅವರು ವಾಚಿಸಿದ ಕವಿತೆ)




