ಶೀಲಕೆ ಬೆಲೆಯುಂಟು; ಆದರೆ….
ಯತ್ರ ನಾರ್ಯಸ್ತು
ಪೂಜ್ಯಂತೆ ರಮಂತೆ
ತತ್ರ ದೇವತಾಃ
ಇಲ್ಲಿ ಹೆಣ್ಣಿನ ಶೀಲಕೆ
ಅಪಾರ ಗೌರವವುಂಟು,
ಬೆಲೆಯುಂಟು,
ಕಣ್ಣೀರುಗಳುಂಟು,
ಪ್ರತಿಭಟನೆಗಳುಂಟು,
ಎನ್‌ಕೌಂಟರ್‌ಗಳು
ಗಲ್ಲುಶಿಕ್ಷೆಗಳೂ ಉಂಟು;
ಆದರೆ,
ಇವೆಲ್ಲವೂ
ಆ ಶೀಲದ ಮೇಲೆ
ಅತ್ಯಾಚಾರ ಎಸಗಿದವರ
ಪ್ರಭಾವವನು
ಅವಲಂಬಿಸಿರುವುದುಂಟು!
ದಿಲ್ಲಿಯ ನಿರ್ಭಯಾಳಿಗೆ
ಇಡೀ ದೇಶವೇ
ಸಿಡಿದೇಳುವುದುಂಟು,
ತ್ವರಿತ ಶಿಕ್ಷೆ,
ಲಾಕಪ್ ಡೆತ್ತುಗಳುಂಟು;
ಹೈದ್ರಾಬಾದಿನ ವೈದ್ಯೆಗಾಗಿ
ಆಕ್ರೋಶದ ಕಟ್ಟೆ
ಒಡೆಯುವುದುಂಟು,
ಎನ್‌ಕೌಂಟರಿನ
ತುರ್ತು ಪ್ರತೀಕಾರವುಂಟು;
ಹೌದೌದು,
ಹೆಣ್ಣಿನ ಶೀಲಕೆ ಇಲ್ಲಿ
ಅಪಾರ ಬೆಲೆಯುಂಟು!
ಆದರೆ,
ತಿಂದು ಕೊಂದವರ
ರಕ್ಷಣೆಗಾಗಿ
ಹತ್ರಾಸಿನ ಸಂತ್ರಸ್ತೆಯನು
ಆಳುವವರೇ ಸರಿರಾತ್ರಿಯಲಿ
ಸುಟ್ಟುಹಾಕುವುದೂ ಉಂಟು;
ನಡುರಸ್ತೆಯಲಿ
ಅಪಘಾತವಗೈದು
ಸಂತ್ರಸ್ತೆಯನು
ಸಜೀವ ದಹನಗೈದ
ಉನ್ನಾವೊದ
ಉದಾಹರಣೆಯೂ
ಜೊತೆಯುಂಟು;
ಆಸೀಫಾಳ ಎಳೆಶೀಲವ
ಮುಕ್ಕಿದವರ ಪರವಾಗಿ
ಮಂತ್ರಿಗಳೇ ಬೀದಿಗಿಳಿದು
ಪ್ರತಿಭಟಿಸುವುದೂ ಉಂಟು!
ಗಾಯಕಿಯ ಭಕ್ಷಿಸಿದ
ಕಾವಿ ಮೃಗಕೆ ಹೆದರಿ
ನ್ಯಾಯಪೀಠದ ಮೈಲಾರ್ಡುಗಳೇ
ಪಲಾಯನಗೈದಿರುವುದೂ ಉಂಟು;
ಒಟ್ಟಿನಲಿ
ಇಲ್ಲಿ ಹೆಣ್ಣಿನ ಶೀಲಕೆ
ಅಪಾರ ಬೆಲೆಯುಂಟು;
ಆ ಬೆಲೆಯ ಹಿಂದೆ
ದುಬಾರಿ ಲೆಕ್ಕಾಚಾರಗಳೂ ಉಂಟು!!
ಕೊಲ್ಕೊತ್ತಾದ ನರ್ಸಿಗಾಗಿ
ದೇಶ ಒಕ್ಕೊರಲ
ಮಿಡಿಯುವುದುಂಟು;
ಖಾಕಿಗಳು ಹಗಲಿರುಳು
ದುಡಿಯುವುದುಂಟು;
ಸೆಲೆಬ್ರಿಟಿಗಳ ಟ್ವೀಟುಗಳುಂಟು,
ಮೇಣದ ಬತ್ತಿಗಳುಂಟು,
ನ್ಯಾಯಪೀಠಗಳ
ಮುತುವರ್ಜಿಯುಂಟು,
ಶೀಘ್ರ ಶಿಕ್ಷೆಯ
ವರವೂ ಉಂಟು;
ಆದರೆ,
ಒಂದಲ್ಲ, ಎರಡಲ್ಲ..
ಮೂರಲ್ಲ, ನಾಲ್ಕಲ್ಲ
ಹನ್ನೆರಡು ವರ್ಷಗಳ
ವನವಾಸ ಮುಗಿಸಿ
ಒಂದು ವರ್ಷದ
ಅಜ್ಞಾತವ
ಪೂರೈಸಿದರೂ
ಕರುನಾಡ ಸೌಜನ್ಯಳ ಪಾಲಿಗೆ
ನ್ಯಾಯ ಮರೀಚಿಕೆ
ಆಗಿರುವುದುಂಟು;
ಖಾಕಿ ಕಠಿಣವಾಗಿರುವುದುಂಟು;
ಆಳುವವರು ಹೊಣೆ
ಮರೆತಿರುವುದುಂಟು;
ಮೇಣದ ಬತ್ತಿಗಳು
ಇಬ್ಭಾಗವಾಗಿರುವುದುಂಟು;
ದನಿ ಎತ್ತಿದವರ ಮೇಲೆ
ಧರ್ಮದ್ಹಿನ್ನೆಲೆಯ
ದಾಳಿ ನಡೆಯುವುದುಂಟು;
ದನಿ ಬಿಚ್ಚುವ ಜಾಗಗಳ
ಪರವಾನಗಿಯೂ
ದಿಡೀರ್ ರದ್ದಾಗುವುದುಂಟು;
ಯಾಕೆಂದರೆ,
ಇಲ್ಲಿ ಒಬ್ಬೊಬ್ಬ
ತಾಯಿಯ ಶೀಲಕೆ
ಒಂದೊಂದು ಬೆಲೆಯುಂಟು,
ತಿಂದು ಮುಕ್ಕಿದವರ
ಪ್ರಭಾವವನು ಅದು
ಅವಲಂಬಿಸಿರುವುದುಂಟು!!
– ಮಾಚಯ್ಯ ಎಂ ಹಿಪ್ಪರಗಿ




