ಕೃಷ್ಣ ಬೈರೇಗೌಡ ಮಾಹಿತಿ
• ಜನರಿಂದ ಮೆಚ್ಚುಗೆ ಪಡೆದ ಮೊದಲ ಹಂತದ ಅಭಿಯಾನ
• ಅಭಿಯಾನದಲ್ಲಿ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸ
• ಆತುರಕ್ಕೆ ಬಿದ್ದು ಗುಣಮಟ್ಟದಲ್ಲಿ ರಾಜಿ ಬೇಡ ಎಂದು ಅಧಿಕಾರಿಗಳಿಗೆ ಸೂಚನೆ
• ಅಧಿಕಾರಿಗಳ ಕೆಲಸವನ್ನು ಶ್ಲಾಘಿಸಿದ ಸಚಿವ ಕೃಷ್ಣ ಬೈರೇಗೌಡರು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ‘ವಾರ್ಡ್ ಒನ್’ಅಭಿಯಾನಕ್ಕೆ ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕಿದ್ದು, ನವೆಂಬರ್ 07 ರಿಂದ 50ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಎರಡನೇ ಹಂತದ ಅಭಿಯಾನ ಆರಂಭಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಜಿಬಿಎ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ “ವಾರ್ಡ್ ಒನ್”ಅಭಿಯಾನದ ಮುಂದಿನ ಹಂತಕ್ಕೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆತುರಪಟ್ಟು ಅಭಿಯಾನವನ್ನು ಮುಗಿಸುವುದಕ್ಕಿಂತ ಸಾರ್ವಜನಿಕರಿಗೆ ತಲುಪುವ ಕೆಲಸ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು.
ಕೆಲವೊಂದು ವಾರ್ಡ್ ಗಳಲ್ಲಿ ವಿಸ್ತೃತವಾಗಿ ಪರಿಶೀಲನೆ ನಡೆಸಿ ಕೆಲಸ ಪೂರ್ಣಗೊಳಿಸಲು ಹೆಚ್ಚಿನ ಸಮಯ ತಗುಲುತ್ತಿದೆ. ಈ ಹಿನ್ನೆಲೆಯಲ್ಲಿ, ಕೇವಲ ಗುರಿ ತಲುಪುವ ಆತುರದಲ್ಲಿ ಅಭಿಯಾನದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಜಿಬಿಎ ನಾಗರಿಕರಿಗೆ ಸಮಗ್ರ ಹಾಗೂ ಸುಸ್ಥಿರ ಫಲಿತಾಂಶ ನೀಡುವ ಉದ್ದೇಶದಿಂದ ಈ ಪ್ರಚಾರ ಮತ್ತು ಆಂದೋಲನವನ್ನು ಡಿಸೆಂಬರ್ ಮಧ್ಯದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಸಂಖ್ಯೆಗಿಂತ ಕೆಲಸದ ಅಚ್ಚುಕಟ್ಟುತನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಮೊದಲ ಹಂತದಲ್ಲಿ 43 ವಾರ್ಡ್ ಗಳಲ್ಲಿ ಕೆಲಸ: ವಾರ್ಡ್ ಒನ್ ಅಭಿಯಾನದ ಮೊದಲ ಹಂತದಲ್ಲಿ ಉತ್ತಮ ಕೆಲಸವಾಗಿದೆ. ಈ ಹಂತದಲ್ಲಿ 43 ವಾರ್ಡ್ಗಳನ್ನು ಆಯ್ಕೆ ಮಾಡಿ, ಆಯ್ದ ವಾರ್ಡ್ಗಳ ಮಿತಿಯಲ್ಲಿ 357.41 ಕಿಮೀ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 704 ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಬದಿಯಲ್ಲಿ ಕಸ ಎಸೆಯಲಾಗುತ್ತಿದ್ದ 342 ಬ್ಲಾಕ್ ಸ್ಪಾಟ್ ಗಳಿಂದ ಸುಮಾರು 426.6 ಟನ್ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. 820 ಸ್ಥಳಗಳಲ್ಲಿ 1141.2 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಅಲ್ಲದೆ, 29.68 ಕಿಮೀ ಫುಟ್ಪಾತ್ ರಿಪೇರಿ ಮಾಡಲಾಗಿದ್ದು, 455.15 ಕಿಮೀ ಫುಟ್ಪಾತ್ ಒತ್ತುವರಿಯನ್ನೂ ತೆರವುಗೊಳಿಸಲಾಗಿದೆ. ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆದಿರುವ ಈ ಕೆಲಸಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಶಂಸಿಸಿದರು.
ಮೊದಲ ಹಂತದ ಅಭಿಯಾನ ಬೆನ್ನಿಗೆ ಇದೀಗ ಎರಡನೇ ಹಂತದಲ್ಲಿ ಮತ್ತಷ್ಟು ವಾರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಹಂತದಲ್ಲಿ ನಿಗದಿಪಡಿಸಿದ ವಾರ್ಡ್ ಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಬೇಕು. ವಾರ್ಡ್ ಮಟ್ಟದ ಈ ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ವಿವಿಧ ನಾಗರಿಕ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕು ಎಂದು ಸೂಚಿಸಿದರು.
ಸ್ಥಳೀಯ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು ಕೆಲಸ ಮಾಡುವುದರಿಂದ ವಾರ್ಡ್ಗಳಲ್ಲಿರುವ ನೈಜ ನಾಗರಿಕ ಸಮಸ್ಯೆಗಳ ಬಗ್ಗೆ ಜಿಬಿಎಗೆ ಹೆಚ್ಚಿನ ತಿಳುವಳಿಕೆ ಸಿಗಲಿದ್ದು, ಜನರಿಗೆ ಹೆಚ್ಚು ಸಮಗ್ರವಾದ ಪರಿಹಾರ ಹಾಗೂ ಉತ್ತಮ ಫಲಿತಾಂಶ ನೀಡಲು ನೆರವಾಗುತ್ತದೆ. ಆದ್ದರಿಂದ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವಾಗ ಆಯಾ ಭಾಗದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಗಳ ನಡುವೆ ಸಮನ್ವಯತೆ ಇರಲಿ: ಇದೇ ವೇಳೆ ಇಲಾಖೆಗಳ ನಡುವಿನ ಸಮನ್ವಯತೆಯ ವಿಚಾರದಲ್ಲಿ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದರು. ಪ್ರಸ್ತುತ ಕ್ಷೇತ್ರ ಮಟ್ಟದಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಎಲ್ಲಾ ವಿಭಾಗಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು. ಮುಖ್ಯವಾಗಿ ಅರಣ್ಯ ಇಲಾಖೆಯೊಂದಿಗೆ ನಿಕಟ ಸಮನ್ವಯ ಸಾಧಿಸಿ ಮರಗಳ ನಿರ್ವಹಣೆ ಹಾಗೂ ತೆರವು ಕಾರ್ಯಗಳನ್ನು ಸುಗಮಗೊಳಿಸಬೇಕು ಎಂದು ತಿಳಿಸಿದರು.
ಬಿಡಿಎ (BDA) ವ್ಯಾಪ್ತಿಯ ಖಾಲಿ ಸೈಟ್ಗಳಲ್ಲಿ ಮಾಲೀಕರು ಇಂದಿಗೂ ಕಸವನ್ನು ಕ್ಲೀನ್ ಮಾಡದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಂತಹ ಜಾಗಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸರ್ಕಾರ ಮಾಡುತ್ತಿರುವ ಗುಣಮಟ್ಟದ ಕೆಲಸಗಳು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಕಮ್ಯುನಿಟಿ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಈ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಸೂಚಿಸಿದರು.
ನಗರದ ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ಒತ್ತು: ರಸ್ತೆ ಹಾಗೂ ಮೂಲಸೌಕರ್ಯಗಳ ವಿಸ್ತರಣೆಯ ಬಗ್ಗೆಯೂ ಮಾತನಾಡಿದ ಅವರು, ಪ್ರಸ್ತುತ ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಮುಂದಿನ ಹಂತವಾಗಿ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದರೊಂದಿಗೆ ನಗರದ ಪ್ರಮುಖ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಲೇನ್ ಮಾರ್ಕಿಂಗ್ ಹಾಗೂ ರಿಫ್ಲೆಕ್ಟರ್ಗಳನ್ನು ಅಳವಡಿಸಿ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ಮೊದಲ ಹಂತದಲ್ಲಿ ಸಮಾಜದ ಎಲ್ಲಾ ವರ್ಗಗಳಿಂದ ಬಂದಿರುವ ಉಪಯುಕ್ತ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಅವುಗಳನ್ನು ಎರಡನೇ ಹಂತದ ಅಭಿಯಾನದ ಯೋಜನೆಯಲ್ಲಿ ಅಳವಡಿಸಿಕೊಂಡು ಜಿಬಿಎ ಮುನ್ನಡೆಯಲಿದೆ ಎಂದು ಭರವಸೆ ನೀಡಿದರು.
ಸಭೆಯ ಮುಖ್ಯಾಂಶಗಳು:
ಎರಡನೇ ಹಂತದ ಆರಂಭ ಹಾಗೂ ಕಾಲಮಿತಿ ವಿಸ್ತರಣೆ: ಮೊದಲ ಹಂತದ ಯಶಸ್ಸಿನ ಬಳಿಕ 2ನೇ ಹಂತದ ಅಭಿಯಾನವು ನವೆಂಬರ್ 07 ರಿಂದ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಆರಂಭವಾಗಲಿದೆ. ಆತುರಕ್ಕೆ ಬೀಳದೆ ಕೆಲಸದ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಅಭಿಯಾನವನ್ನು ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸಲಾಗಿದೆ.
ಮೊದಲ ಹಂತದ ಸಾಧನೆ: ಆಯ್ಕೆಯಾಗಿದ್ದ 43 ವಾರ್ಡ್ಗಳಲ್ಲಿ 704 ರಸ್ತೆ ಗುಂಡಿ ಮುಚ್ಚಲಾಗಿದೆ, 342 ಬ್ಲಾಕ್ ಸ್ಪಾಟ್ಗಳಿಂದ 426.6 ಟನ್ ಕಸ ಹಾಗೂ 820 ಸ್ಥಳಗಳಿಂದ 1141.2 ಟನ್ ಡೆಬ್ರಿಸ್ (ತ್ಯಾಜ್ಯ) ತೆರವುಗೊಳಿಸಲಾಗಿದೆ. ಜೊತೆಗೆ 29.68 ಕಿಮೀ ಫುಟ್ಪಾತ್ ರಿಪೇರಿ ಹಾಗೂ 455.15 ಕಿಮೀ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಲಾಗಿದೆ.
ಸಾರ್ವಜನಿಕರ ಭಾಗವಹಿಸುವಿಕೆ ಹಾಗೂ ಸಮನ್ವಯತೆ: ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯತೆ ಇರಬೇಕು. ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಮತ್ತು ನಾಗರಿಕ ಸಂಸ್ಥೆಗಳನ್ನು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಶುಚಿತ್ವ ಹಾಗೂ ಮೂಲಸೌಕರ್ಯ ಅಭಿವೃದ್ಧಿ: ಬಿಡಿಎ (BDA) ಖಾಲಿ ಸೈಟ್ಗಳಲ್ಲಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು. ಕಸ ನಿಯಂತ್ರಣದ ಜೊತೆಗೆ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಹಾಗೂ ಜಂಕ್ಷನ್ಗಳಲ್ಲಿ ಲೇನ್ ಮಾರ್ಕಿಂಗ್ ಮತ್ತು ರಿಫ್ಲೆಕ್ಟರ್ ಅಳವಡಿಕೆಗೆ ಆದ್ಯತೆ ನೀಡಲು ನಿರ್ದೇಶಿಸಲಾಗಿದೆ.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್, ಶಿಲ್ಪಾ ನಾಗ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಗದೀಶ್ ಜಿ, ಅಪರ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.




