ಬೋಧಿಸದೆ ಬಂದವರಿಗೆ ಬದುಕು ಕೊಟ್ಟ ಭಗವಂತ
ದೇವರ ಹುಡುಕಿ ಅಲೆದಾಡುತ್ತಿದ್ದ ಅಸಹಾಯಕರಿಗೆ ಅವರಿರುವಲ್ಲಿಗೆ ಬಂದು ನಿಂತವರು ನಡೆದಾಡುವ ದೇವರು.
ಸ್ಥಿರವಾಗಿ ನಿಂತ ಭಗವಂತ ಬೇಡಿದವರಿಗೆ ಅನ್ನವ, ಆಶ್ರಯವ, ಅಕ್ಷರದ ನೀಡುವಲ್ಲಿ ಸಾಧ್ಯವಾಯಿತು ಇಲ್ಲವೋ ಬಲ್ಲವರಿಲ್ಲ ಆದರೆ ಬೇಡುವ ಮುನ್ನವೇ ಬದುಕು ಕಾಣಲು ಬಂದವರಿಗೆ ಅನ್ನವನ್ನು ಇಟ್ಟು ಆಶ್ರಯವನ್ನ ಕೊಟ್ಟು ಅಕ್ಷರವ ಕಳಿಸಿದ ಈ ಕಲಿಯುಗದ ನಡೆದಾಡಿದ ದೇವ.
ಇಲ್ಲಿ ನೋಟದಲ್ಲಿ ಪಂಕ್ತಿ ಭೇದವಿಲ್ಲ, ಊಟದಲ್ಲಿ ಭೇದವಿಲ್ಲ, ಆಶ್ರಯದಲ್ಲೂ ತಾರತಮ್ಯವಿಲ್ಲ, ನೆರವು ಬೇಡಿ ಬಂದವರ ಗೋತ್ರಗಳ ಕೇಳಲಿಲ್ಲ, ಜಾತಿ ಮತ ಧರ್ಮಗಳ, ಯಾವುದೆಂದು ಕೇಳಲಿಲ್ಲ ಚರ್ಮದ ಬಣ್ಣದ ಮೇಲೆ ಮನ್ನಣೆ ಎಂಬ ಮಾತೇ ಇರಲಿಲ್ಲ.
ಹಸಿದವರಿಗೆ ಉಪದೇಶವ ಮಾಡಲಿಲ್ಲ, ಅನ್ನವನಿಟ್ಟು ಹಸಿವನ್ನು ನೀಗಿಸಿದರು, ಆಶ್ರಯ ಕೊಟ್ಟು ಅಕ್ಷರದ ಕಲಿಸಿ ಜ್ಞಾನದ ಜ್ಯೋತಿಯ ಸಾಗರದಲ್ಲಿ, ನಾವಿಕರಾಗಿ ತಾವೇ ಲಕ್ಷ ಮಂದಿಯ ಬದುಕಿನ ದಡವ ಸೇರಿಸಿದ್ದಾರೆ.
ಶಾಸ್ತ್ರ, ಪುರಾಣಗಳ, ಪುಣ್ಯ ಕಥೆಗಳ ಪ್ರವಚನ ಇಲ್ಲಿರಲಿಲ್ಲ ಇಲ್ಲಿ ಕಳಿಸಿದ್ದು ಭಾಷೆ, ಹೇಳಿ ಕೊಟ್ಟಿದ್ದು ಗಣಿತ, ಮನಸ್ಸಿನಲ್ಲಿ ಬಿತ್ತಿದ್ದು ವೈಜ್ಞಾನಿಕ ಚಿಂತನೆ, ಮಾನವೀಯತೆಯ ಮೂಲ್ಯಗಳ, ಹಸಿವಿಗಿಲ್ಲ ಭೇದ, ವಿದ್ಯೆ ಬದುಕಿನ ಮೂಲವೆಂದು.
ಇವರು ಎಂದು ಸನ್ಮಾನಿಸಿಕೊಳ್ಳಲಿಲ್ಲ, ಕಿರೀಟಗಳ ಧರಿಸಿ ಸಂಭ್ರಮಿಸಲಿಲ್ಲ, ಆಶ್ರಯವ ಬಯಸಿ ಬಂದವರ ಸಹಸ್ರಾನು ಮಂದಿಯ ಸಾಧಕರನ್ನಾಗಿಸಿ ಸನ್ಮಾನಿತರ ಸಾಲಿನಲ್ಲಿ ಜಗದ ಮುಂದೆ ನಿಲ್ಲುವಂತೆ ಬೆಳೆಸಿದರು. ಬಡವರ ಮನೆಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮುಗಿಲೆತ್ತರಕ್ಕೆ ಬೆಳೆದು ದೇಶ ವಿದೇಶಗಳಲ್ಲಿ ಮೆರೆಯುವಂತೆ ಮಾಡಿದರು.
ಕೆಲವರಿಗೆ ಇವರು ಶಿವನ ರೂಪವಾದರು, ಕೆಲವರಿಗೆ ಇವರೇ ಅಲ್ಲಾ ಎನಿಸಿದರು, ಮತ್ತೆ ಕೆಲವರಿಗೆ ಇವರೇ ಯೇಸು ಎಂದೆನಿಸಿದರು, ಎಲ್ಲ ಧರ್ಮದವರ ಅಸಹಾಯಕ ಮಕ್ಕಳ ಪಾಲಿಗೆ ಅವರವರ ದೇವರಾದರು.
ಯಾವುದೋ ಊರು, ಯಾರದು ಮನೆಯ ಮಕ್ಕಳು, ಎಲ್ಲರ ಪಾಲಿಗೆ ಇವರು ತಂದೆಯಾದರು, ಗುರುವಾದರೂ, ಅಜ್ಜನಾದರೂ, ದೇವರಾದರು.
ಬಸವಣ್ಣನನ್ನು ಯಾರೂ ನೋಡದಿದ್ದರೂ, ಬಸವಣ್ಣ ಹೀಗೆಯೇ ಬದುಕಿದ್ದರೂ ಎಂದು ಇವರ ಮೂಲಕ ಅನಿಸುತ್ತಿದೆ, ಬಸವಣ್ಣನವರ ಹೆಸರು ಹೇಳುವುದು ಬಹಳ ಸುಲಭ, ಆದರೆ ಬಸವಣ್ಣನಂತೆ ಬದುಕುವುದು ಸಾಧ್ಯವಿಲ್ಲ, ಅದು ಸಾಧ್ಯವಾಗಿಸಿರುವುದು ಈ ನಡೆದಾಡಿದ ದೇವರು.
ದೇವರೆಂದರೆ, ದೇವಾಲಯವೆಂದರೆ ಉಪದೇಶ ನೀಡುವುದಲ್ಲ, ಪ್ರವಚನ ಕೊಡುವುದಲ್ಲ, ಅನ್ನ ಆಶ್ರಯ ಅಕ್ಷರವ ಕೊಡುವುದು ಎಂಬುದ ತೋರಿಸಿಕೊಟ್ಟ ಜಗತ್ತಿನ ಮಾದರಿ ಮಠಾಧಿಪತಿಗಳಿವರು.
– ಕೆ ಎಸ್ ನಾಗರಾಜ್, ಬೆಂಗಳೂರು




