ಮುಖವಾಡ

1 year ago

ಶ್ರೀನಿವಾಸನಿಗೆ ಭಾನುವಾರದ ದಿನ ನಗರದಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗೆ ಹೋಗುವಂತಹ ಅಭ್ಯಾಸವಿದೆ. ಭಾನುವಾರ  ಹೋಟೆಲ್ಗೆ ಮಧ್ಯಾಹ್ನದ ಮೇಲೆ ರಜಾ ನೀಡುವುದರಿಂದ, ಇವನು ಸಹ ವಾರದ ಪೂರ್ತಿ ವ್ಯಾಪಾರ ವ್ಯವಹಾರ ಎಂಬ ಚಿಂತೆಯಲ್ಲೇ ಮುಳುಗುವುದರಿಂದ ಕಡೆಯ ಪಕ್ಷ ಭಾನುವಾರವಾದರೂ ಬೇರೆಬೇರೆ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕಾರಣದಿಂದ ತಪ್ಪದೆ ನಗರದಲ್ಲಿ ನಡೆಯುವ ಭಾಷಣದ ಕಾರ್ಯಕ್ರಮಗಳಿಗೆ ಹೋಗುತ್ತಾನೆ.

ಇವನಿಗೆ ಪ್ರಗತಿಪರವಾದಂತಹ ವಿಚಾರಗಳು, ಹೋರಾಟದ ಸಂಗತಿಗಳು ಇಂತಹ ಭಾಷಣಗಳ ಬಗ್ಗೆ ಹೆಚ್ಚು ಆಸಕ್ತಿ. ಅದು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ‘ಶೋಷಣೆಯ ವಿವಿಧ ಆಯಾಮಗಳು’ ಎಂಬ ವಿಚಾರದಲ್ಲಿ ಭಾಷಣವಿತ್ತು. ಇಲ್ಲಿ ರಾಜ್ಯದ ಬೇರೆಬೇರೆ ಕಡೆಯಿಂದ ಭಾಷಣಕಾರರು ಆಗಮಿಸಿ ತಮ್ಮ ವಿಚಾರವನ್ನು ಮಂಡನೆ ಮಾಡುವಂತಹ ವಿವರಗಳು ಪತ್ರಿಕೆಯಲ್ಲಿ ಗಮನಿಸಿ, ಈ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಿಸಿ ಸಮಯಕ್ಕೆ ಸರಿಯಾಗಿ ಸಭಾಂಗಣಕ್ಕೆ ಬಂದು ಮುಂದಿನ ಚೇರುಗಳಲ್ಲಿ ಆಸೀನನಾದ.  ಆರಂಭದಲ್ಲಿ ಕೆಲವು ಕ್ರಾಂತಿಕಾರಿಗೀತೆಗಳನ್ನು ಹಾಡಿದರು, ತದನಂತರ ಭಾಷಣಕಾರರನ್ನು ಒಬ್ಬೊಬ್ಬರನ್ನೇ ವೇದಿಕೆಗೆ ಬರಮಾಡಿಕೊಂಡರು. ಐದು ಮಂದಿ ಭಾಷಣಕಾರರ ಪೈಕಿ ಇವನು ಹೆಚ್ಚು ಆಸಕ್ತಿಯಿಂದ ಗಮನಿಸುವಂತೆ ಮಾಡಿದ್ದು ಆ ಒಂದು ಹೆಸರು.

ರಾಮಸ್ವಾಮಿ ಎಂಬ ಹೆಸರು ಕೇಳುತ್ತಿದ್ದಂತೆ ಅವರ ಮುಖವನ್ನು ನೋಡುವಂತಹ ಕಾತುರ ಹೆಚ್ಚಾಗಿದ್ದು. ಸುಮಾರು 70 ವರ್ಷ ಹಿರಿಯರಾದ ವ್ಯಕ್ತಿ ವೇದಿಕೆಯ ಮೇಲೆ ಬಂದು ಎಲ್ಲರಿಗೂ ಕೈ ಮುಗಿದು  ನಿಗದಿಯಾಗಿದ್ದ ಕುರ್ಚಿಯಲ್ಲಿ ಕುಳಿತುಕೊಂಡರು. ರಾಮಸ್ವಾಮಿಯನ್ನ ಒಂದೇ ಸಮನೆ ಶ್ರೀನಿವಾಸ ಗಮನವಿಟ್ಟು ನೋಡುತ್ತಾ ಕುಳಿತ, ಈ ಹೆಸರು ಮತ್ತು ಇವನ ಪರಿಚಯ ಎಲ್ಲೋ ಆದಂತಿದೆ ಎಂಬ ಸಂಗತಿ ಬಹಳಷ್ಟು ಕಾಡಿತು.  ಕೆಲವು ನಿಮಿಷಗಳಲ್ಲಿ ರಾಮಸ್ವಾಮಿ ಯಾರು ಅವರ ಹಿನ್ನೆಲೆ ಏನು ಎನ್ನುವುದು ಸ್ಪಷ್ಟವಾಯಿತು.

ಸಭೆ ಆರಂಭವಾಯಿತು. ಸ್ವಾಗತ ಪ್ರಸ್ತಾವನೆ ಮೊದಲನೇ ಭಾಷಣಕಾರರಾಗಿ ರಾಮಸ್ವಾಮಿಯವರ ಹೆಸರನ್ನು ಹೇಳುತ್ತಾ, ಅವರನ್ನು ಸಭೆಗೆ ಪರಿಚಯವನ್ನ ಮಾಡಲು ನಿರೂಪಕರು ತಮ್ಮ ಮಾತುಗಳನ್ನ ಆರಂಭಿಸಿದರು. ಇಷ್ಟರ ಒಳಗೆ ಶ್ರೀನಿವಾಸನಿಗೆ 35 ವರ್ಷಗಳ ಹಿಂದೆ ತನ್ನ ಊರಿನಲ್ಲಿ ನಡೆದ ಘಟನೆ. ರಾಮಸ್ವಾಮಿ ನಡೆದುಕೊಂಡ ರೀತಿ ತಾನು ಹೋಟೆಲ್ ಮುಚ್ಚಿದ ಕಾರಣ ಎಲ್ಲವೂ ಕಣ್ಮುಂದೆ ಬಂದಿತು.

ರಾಮಸ್ವಾಮಿ ಪ್ರಗತಿಪರ ವಿಚಾರಧಾರೆಯವರು. ಅಸ್ಪೃಶ್ಯತೆಯ ವಿರುದ್ಧ ಹಲವಾರು ದಶಕಗಳಿಂದ ಹೋರಾಟವನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೆಲ್ಲ ಹೇಳುತ್ತಿದ್ದಂತೆ ಶ್ರೀನಿವಾಸನಿಗೆ ಕೇಳಲು ಸಾಧ್ಯವಾಗಲಿಲ್ಲ. ಕೂಡಲೇ ಎದ್ದುನಿಂತು ಇವನ ಹೀನ ಕೃತ್ಯವನ್ನ ಸಭೆಯ ಮುಂದೆ ಹೇಳಬೇಕೆಂದು ಮನಸ್ಸು ಪ್ರಚೋದಿಸುತ್ತಿದೆ. ಆದರೆ ಸಭೆಗೆ ಅವಮಾನವಾಗಬಾರದು, ಸಭಿಕರಿಗೆ ನನ್ನಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸುಮ್ಮನೆ ಕುಳಿತ.

ರಾಮಸ್ವಾಮಿ ಶೋಷಣೆಯ ವಿವಿಧ ಆಯಾಮಗಳು ಎಂಬ ವಿಚಾರದಲ್ಲಿ ಮಾತನಾಡುತ್ತಾ ಅಸ್ಪೃಶ್ಯತೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹೆಚ್ಚಾಗಿ ಮಾತನಾಡಿ ಇನ್ನೇನು  ಹೋಗಿ ತನ್ನ ಕುರ್ಚಿಯಲ್ಲಿ ಕುಳಿತಕ್ಕೊಳ್ಳಬೇಕು ಎನ್ನುವಷ್ಟರಲ್ಲಿ, ಶ್ರೀನಿವಾಸ ತನ್ನ ಎಲ್ಲಾ ಸಿಟ್ಟನ್ನು ಹೊರ ಹಾಕುತ್ತ ಎದ್ದು ನಿಂತು ಸ್ವಾಮಿ ರಾಮಸ್ವಾಮಿ ಅವರೇ, ನಾನು ಶ್ರೀನಿವಾಸ 35 ವರ್ಷಗಳ ಹಿಂದೆ ಉಡುಪಿಯ ರಸ್ತೆಯಲ್ಲಿ ಹೋಟೆಲಿಟ್ಟವನು. ನನ್ನ ಪರಿಚಯ ನಿಮಗಿರಬಹುದು ಎಂದು ಪ್ರಶ್ನಿಸಿದ.

ತಪ್ಪು ತಿಳಿಯಬೇಡಿ, ನನಗೆ ನಿಮ್ಮ ಪರಿಚಯವಿಲ್ಲ. ಎಷ್ಟೋ ಊರುಗಳನ್ನು ಸುತ್ತಿರುತ್ತೇವೆ. ಎಷ್ಟೋ ಹೋರಾಟ ಮಾಡಿರುತ್ತೇವೆ. ಎಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ನನಗೂ ವಯಸ್ಸಾಗಿದೆ ಎಂದು ಸ್ವಲ್ಪ ಸಣ್ಣ ನಗೆಯೊಂದಿಗೆ ಹೇಳಿದರು.

ಅದಕ್ಕೆ ಪ್ರತಿಯಾಗಿ ಶ್ರೀನಿವಾಸ ನಿಮಗೆ ನೆನಪು ಇಲ್ಲದಿರಬಹುದು ರಾಮಸ್ವಾಮಿ ಅವರೇ, ನನಗೆ ನೆನಪಿದೆ ನಿಮ್ಮ ಕಾರಣದಿಂದಾಗಿ ನಾನು ಉಡುಪಿಯಲ್ಲಿ ನನ್ನ ಹೋಟೆಲ್ ಮುಚ್ಚಿ ಬೆಂಗಳೂರಿಗೆ ಬಂದು ಹೋಟೆಲ್ ನಲ್ಲಿ ಕೆಲಸ ಮಾಡುವಂತಹ ಸ್ಥಿತಿಗೆ ಬಂದಿದ್ದೇನೆ ಎಂದು ಸಿಟ್ಟಿನಿಂದ ಹೇಳಿದ.

ನನ್ನಿಂದ ನಿಮಗೆ ತೊಂದರೆಯಾಯಿತು ಅದು ಹೇಗೆ, ಎಂದು ಮತ್ತೆ ಪ್ರಶ್ನಿಸಿದ. ಹೌದು ಸ್ವಾಮಿ, ಉಡುಪಿಯ ಮುಖ್ಯರಸ್ತೆಯಲ್ಲಿ ನಾನು ಹೋಟೆಲ್ ಇಟ್ಟಿದ್ದೆ. ನನ್ನ ಹೋಟೆಲ್ ಗೆ ಎಲ್ಲ ಜನರು ಬಂದು ಊಟ ತಿಂಡಿಯನ್ನು ತಿಂದು ಹೋಗಬಹುದಿತ್ತು. ಯಾವುದೇ ರೀತಿಯ ತಾರತಮ್ಯ ಇರಲಿಲ್ಲ,  ಎಲ್ಲ ವರ್ಗದವರಿಗೂ ನನ್ನ ಹೋಟೆಲ್ ಬಾಗಿಲು ತೆರೆದಿತ್ತು, ಆದರೆ ನಿಮ್ಮ ತಂದೆಯವರು ನನ್ನ ಹೋಟೆಲ್ ಗೆ ಅಸ್ಪೃಶ್ಯರು ಬರುತ್ತಾರೆ ಅವರನ್ನು ಸೇರಿಸಬಾರದು ಎಂದು  ನನ್ನ ಮೇಲೆ ರೇಗಾಡಿದರು, ನಾನು ಅದು ಸಾಧ್ಯವಿಲ್ಲ ನನ್ನ ನಂಬಿಕೆ ಮತ್ತು ವಿಚಾರಗಳಿಗೆ ದ್ರೋಹವಾಗುತ್ತದೆ ಅವರು ಮನುಷ್ಯರು, ತಾವು ಬೇಕಾದರೆ ನನ್ನ ಹೋಟೆಲ್ ಗೆ ಬರಬೇಡಿ ಎಂದು ಹೇಳಿದೆ. ಅದಕ್ಕೆ ನಿಮ್ಮ ತಂದೆಯವರು ದೊಡ್ಡ ಜಗಳವನ್ನ ಮಾಡಿ ನನ್ನ ಹೋಟೆಲ್ ಮುಂದೆ ರಂಪಾಟ ಮಾಡಿದರು, ನಿಮ್ಮ ಕಾರಣದಿಂದಾಗಿ ಹೋಟೆಲ್ ನ ಬಾಡಿಗೆಗೆ ನೀಡಿದ್ದ ಮಾಲೀಕ ಕೂಡಲೇ ನನ್ನನ್ನು ತೆರವು ಮಾಡುವಂತೆ ತಿಳಿಸಿದ. ನಾನು ಅವನಿಗೆ ಹೆದರದೆ ಮತ್ತೆ ಹೋಟೆಲ್ ಮುಂದುವರಿಸಿದೆ. ಕೊನೆಗೆ ನಿಮ್ಮ ತಂದೆಯವರು ಜೊತೆಗೆ ತಾವು ಬಂದು ಊರಿನಲ್ಲಿ ನಿಮ್ಮಿಂದ ವಾತಾವರಣ ಕೆಡುತ್ತಿದೆ, ಜನರ ನಂಬಿಕೆಗಳಿಗೆ ತೊಂದರೆ ಕೊಡಬೇಡಿ, ನಿಮಗೆ ನಿಮ್ಮ ದಾರಿಯೇ ಸರಿ ಎನಿಸುವುದಾದರೆ ಬೇರೆ ಊರಿನಲ್ಲಿ ವ್ಯಾಪಾರ ಮಾಡಿ. ನಮ್ಮ ಊರಿನಲ್ಲಿ ನಿಮ್ಮ ಕಾರಣದಿಂದ ಗಲಭೆಗಳಾಗಬಾರದು ಎಂದು ಎಚ್ಚರಿಕೆಯನ್ನು ನೀಡಿ ಹೋಟೆಲ್ ಖಾಲಿ ಮಾಡುವಂತೆ ಧಮಕಿ ಹಾಕಿದಿರಿ. ಇದರಿಂದಾಗಿ ಒತ್ತಡ ಹೆಚ್ಚಾಗಿ ನನ್ನ ಹೋಟೆಲ್ ಮುಚ್ಚ ಬೇಕಾಯಿತು. ಅಲ್ಲಿಂದ ಬೆಂಗಳೂರಿಗೆ ಬಂದು  ದೊಡ್ಡ ಹೋಟೆಲ್ ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದೇನೆ. ವೇದಿಕೆಗಳ ಮೇಲೆ ನಿಂತು ಮಾತನಾಡುವ ನೀವು, ನಿಮ್ಮ ಬದುಕಿನಲ್ಲಿ ಎಷ್ಟರಮಟ್ಟಿಗೆ ಅಸ್ಪೃಶ್ಯತೆಯ ವಿರುದ್ಧ ನಡೆದುಕೊಂಡಿದ್ದೀರಿ ಎಂಬುದನ್ನು ಮೊದಲು ಪ್ರಶ್ನಿಸಿಕೊಳ್ಳಿ, ಭಾಷಣ ಮಾಡಿ ಚಪ್ಪಾಳೆಗಿಟ್ಟಿಸಿಕೊಳ್ಳುವುದಲ್ಲ ಎಂದು ಒಂದೇ ಸಮನೆ ಮಾತನಾಡಿದ.

ಇದರಿಂದ ಗೊಂದಲ ಮೂಡಿತು ರಾಮಸ್ವಾಮಿಯ ಅಭಿಮಾನಿಗಳು ಶ್ರೀನಿವಾಸನನ್ನ ಇವನೊಬ್ಬ ಹುಚ್ಚ ಏನೇನೋ ಮಾತನಾಡುತ್ತಿದ್ದಾನೆ ಎಂದು ಸಭೆಯಿಂದ ಹೊರ ಬರುವಂತೆ ಒತ್ತಡವನ್ನು ಹಾಕಿದರು. ರಾಮಸ್ವಾಮಿಗೆ ಮುಜುಗರವಾಯಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಬಿಡಿ ಏನೋ ಮಾತನಾಡುತ್ತಿದ್ದಾರೆ, ಅವರಿಗೆಲ್ಲೋ ಸ್ವಲ್ಪ ಮಾನಸಿಕ ಸಮಸ್ಯೆ ಇರಬಹುದು, ಚಿಂತೆ ಮಾಡುವುದು ಬೇಡ, ದಯವಿಟ್ಟು ಅವರನ್ನು ಗೌರವದಿಂದ ಹೊರಗಡೆ ಕಳಿಸಿಕೊಟ್ಟು ಬನ್ನಿ ಎಂದು ನಯವಾಗಿ ಮಾತನಾಡಿದರು.

ಶ್ರೀನಿವಾಸನಿಗೆ ಸಭೆಯಿಂದ ಹೊರಹೋಗುವಂತೆ ಸಭಿಕರು ಒತ್ತಡ ಹೇರಿದ ಕಾರಣ ರಾಮಸ್ವಾಮಿಯ ಕಡೆಗೆ ತಿರುಗಿಕೊಂಡು ಮತ್ತೆಮತ್ತೆ ಇವನದು ಮುಖವಾಡ ಎಂದು ಹೇಳುತ್ತಾ ಸಿಟ್ಟಿನಿಂದಲೇ ಸಭೆಯಿಂದ ಹೊರಬಂದ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply