ಆತ್ಮೀಯರೇ ಹಾಗೂ ನನ್ನ ಕ್ಷೇತ್ರದ ಕಾರ್ಯಕರ್ತ ಬಂಧುಗಳೇ, ತಮ್ಮೆಗೆಲ್ಲರಿಗೂ ಆದರಪೂರ್ವಕ ನಮಸ್ಕಾರಗಳು. ನೆನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ನನಗೆ ಸ್ಥಾನ ಸಿಗದೇ ಇರುವುದಕ್ಕೆ ತಾವು ಬೇಸರಪಟ್ಟು ಪ್ರತಿಕ್ರಿಯಿಸಿರುತ್ತೀರಿ. ನಿಮ್ಮಂತೆ ನನಗೂ ನೋವಾಗಿದೆ. ಆದರೆ, ನಾನು ಹತಾಶನಾಗಿಲ್ಲ. ನಾನು ನಡೆದು ಬಂದ ದಾರಿ ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಸಮಾಜದಲ್ಲಿ ಸಮಾನತೆ ತರಲು ಮಹಾತ್ಮಾ ಗಾಂಧಿ, ಲೋಹಿಯಾ, ಜಯಪ್ರಕಾಶ್ ನಾರಾಯಣ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ರಾಜಕಾರಣ – ಸಮಾಜಕಾರಣ ಮಾಡುತ್ತಾ ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಸಲ ಜೈಲು ಸೇರಿದ್ದೇನೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಸಮಾಜವಾದಿ ಸಿದ್ಧಾಂತಕ್ಕೆ ಬದ್ಧನಾಗಿ ಸಾಧ್ಯವಾದಷ್ಟು ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರ, ಅವೈಜ್ಞಾನಿಕ ಚಿಂತನೆ, ಬಡತನ, ನಿರುದ್ಯೋಗ, ಜಾತಿ ನಿರ್ಮೂಲನೆಗಳ ವಿರುದ್ಧ ಹೋರಾಟ ಹಾಗೆಯೇ ಮಹಿಳಾ ಸಮಾನತೆಗಾಗಿ ಮತ್ತು ಸಮ ಸಮಾಜ ಕಟ್ಟಲು ಪ್ರಯತ್ನ ಪಟ್ಟಿದ್ದೇನೆ. ಅನೇಕ ಬಾರಿ ಸೋಲುಗೆಲುವುಗಳನ್ನು ಕಂಡಿದ್ದೇನೆ. ಸಾಮಾನ್ಯ ಮನೆತನದಿಂದ ಬಂದು ಕಾನೂನು ಪದವಿ ಪಡೆದು, 1983ರಲ್ಲಿ ಕೇಳದೆಯೇ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆದು ನಾಲ್ಕು ಬಾರಿ ಶಾಸಕನಾಗಿ, ಒಂದು ಸಲ ವಿಧಾನ ಪರಿಷತ್ತಿನ ಸದಸ್ಯನಾಗಿ, ಉಪ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದೇನೆ.
ನಂತರದಲ್ಲಿ ಹಿಂದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನನ್ನನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿದ ಕೆಲವೇ ದಿನಗಳಲ್ಲಿ ಗ್ರಾಮ ಮತ್ತು ವಾರ್ಡ್, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಯೋಜನೆಗಳ ಪ್ರಸ್ತಾವನೆ ಪಡೆದು 35 ವರ್ಷಗಳಿಂದ ಆಗದೇ ಇರುವ ಪ್ರಕ್ರಿಯೆಗೆ ಚಾಲನೆ ನೀಡಿ ವರದಿ ಸಲ್ಲಿಸಿದ್ದೇನೆ. ಜೊತೆಗೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರಯತ್ನ ಪಟ್ಟಿದ್ದೇನೆ.
ಈ ಹಿಂದಿನಿಂದಲೂ ನಮ್ಮ ದೇಶ ಮತ್ತು ನಾಡಿನಲ್ಲಿ ನಡೆಯುತ್ತಿರುವ ರೈತ, ಕಾರ್ಮಿಕ, ಪರಿಸರ, ದಲಿತ ಹಾಗೂ ಮುಖ್ಯವಾಗಿ ಅಹಿಂದ ಚಳುವಳಿಗಳಲ್ಲಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಇಂದಿಗೂ ಅರಣ್ಯ ಮತ್ತು ಅಂತರ್ಜಲ ರಕ್ಷಿಸುವುದಕ್ಕೆ ಹಾಗೂ ಸಾಮಾಜಿಕ ಪಿಡುಗಾದ ಮದ್ಯಪಾನ ನಿಷೇಧ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತೇನೆ.
ಇತ್ತೀಚಿನ ವರ್ಷಗಳಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ರೈತ, CAA-NRC ಮತ್ತು SIR ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತೇನೆ. ಇತ್ತೀಚಿನ NEET ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ದ ಜಂತರ್ ಮಂತರ್ ನಲ್ಲಿ ನಡೆದ ಚಳುವಳಿಯಲ್ಲೂ ಪಾಲ್ಗೊಂಡಿದ್ದೇನೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೋಮುವಾದವನ್ನು ಸದೆ ಬಡಿಯಲು ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುತ್ತಾ ಬಂದ ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಬುಡ ಮೇಲು ಮಾಡುವ ಆಘಾತಕಾರಿ ವೋಟ್ ಚೋರಿ ಪ್ರಕರಣವನ್ನು ನನ್ನ ಮತ ಕ್ಷೇತ್ರವಾದ ಆಳಂದದಲ್ಲಿ ಬೆಳಕಿಗೆ ತಂದಿರುತ್ತೇನೆ. ಈ ವಿಷಯವಾಗಿ ಶ್ರೀ ರಾಹುಲ್ ಗಾಂಧಿ ಅವರು ದೇಶದಾದ್ಯಂತ ಹೋರಾಟ ಹಮ್ಮಿಕೊಂಡಿದ್ದು, ಆಳಂದ ಕ್ಷೇತ್ರದ ವೋಟ್ ಚೋರಿ ಪ್ರಕರಣದ ಮೂಲಕ ನಿಖರವಾದ ಮತ್ತು ಸತ್ಯವಾದ ದೃಡೀಕೃತ ಮಾಹಿತಿಯನ್ನು ಅವರಿಗೆ ಒದಗಿಸಿರುತ್ತೇನೆ. ಇದು ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಒಂದು ದೊಡ್ಡ ಅಸ್ತ್ರವನ್ನು ಒದಗಿಸಿರುತ್ತದೆ.
ಈ ರೀತಿಯಾಗಿ ಹಲವಾರು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಮಾಡಿದ ಸಾಮಾಜಿಕ ನ್ಯಾಯದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಬದ್ಧತೆ ಮತ್ತು ಹೋರಾಟ ಹಾಗೂ ಮತೀಯ ಮತ್ತು ವಿಭಜಕ ಶಕ್ತಿಗಳ ವಿರುದ್ಧ ಅತ್ಯಂತ ಕಾಳಜಿಯಿಂದ ತೊಡಗಿಸಿಕೊಂಡು ರಾಜ್ಯವಷ್ಟೇ ಅಲ್ಲದೇ ರಾಷ್ಟ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಶ್ರಮಿಸಿದ್ದಕ್ಕೆ ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ? ಇದು ಸರಿಯೋ ತಪ್ಪೋ ಎನ್ನುವುದು ನಾಡಿನ ಜನರ ವಿವೇಚನೆಗೆ ಬಿಡುತ್ತೇನೆ. ಜೈ ಸಮಾಜವಾದ!
– ಬಿ ಆರ್ ಪಾಟೀಲ್, ಶಾಸಕರು, ಆಳಂದ ವಿಧಾನಸಭಾ ಕ್ಷೇತ್ರ




