ಯಮಕನಮರಡಿ ಕ್ಷೇತ್ರ ಕೋಮುವಾದಿ ಯೋಗಿಯ ಪ್ರವೇಶದಿಂದ ಮೈಲಿಗೆಯಾದರೆ, ಅಲ್ಲಿನ ಮತದಾರರು ಮೇ. ಹತ್ತನೆ ತಾರೀಕು “ಮತಗಳೆಂಬ ಪವಿತ್ರ ಜಲ”ದ ಮೂಲಕ ಆ ಕ್ಷೇತ್ರವನ್ನು ತೊಳೆದು ಮತ್ತೆ ಸುಪವಿತ್ರಗೊಳಿಸುತ್ತಾರೆ.
ತನ್ನ ರಾಜ್ಯದಲ್ಲಿ ಮನೀಷಾ ವಾಲ್ಮೀಕಿ ಎಂಬ ದಲಿತ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆ ಆದಾಗ ಇವನು ನಡೆದುಕೊಂಡ ರೀತಿ ಅಸಹ್ಯ. ದೇಶದಾದ್ಯಂತ ನಡೆದ ಪ್ರತಿರೋಧದ ಬಿಸಿ ವಿಶ್ವಸಂಸ್ಥೆಯ ನಡುಮನೆಯಲ್ಲಿ ಸದ್ದು ಮಾಡಿದಾಗ ಎಚ್ಚೆತ್ತ ನಾಟಕವಾಡಿದ್ದ ಇವನು ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ಬಗ್ಗೆ ಸಂತಾಪವನ್ನಾಗಿ ಅವಳ ಕುಟುಂಬದವರಿಗೆ ಸಾಂತ್ವನ ಹೇಳುವ ಬದಲು ಪತ್ರಕರ್ತರ ಮುಂದೆ ಕೊಟ್ಟ ಹೇಳಿಕೆ ಅತ್ಯಂತ ಹೇಯ ಮತ್ತು ಭಯಾನಕ.

“ಠಾಕೂರ್ ಹುಡುಗರ ರಕ್ತ ಸ್ವಲ್ಪ ಜಾಸ್ತಿ ಬಿಸಿ” ಎನ್ನುವ ರೀತಿ ಹೇಳಿದ್ದ. ಇದು ತನ್ನ ಸಮುದಾಯದ ಹುಡುಗರ ಕೃತ್ಯಕ್ಕೆ ಗಂಡುಗರ್ವಕ್ಕೆ ಮತ್ತಷ್ಟು ಪುಷ್ಟಿ ಮತ್ತು ಪ್ರೇರೇಪಣೆ ಮಾಡುವಂತೆಯೇ ಇತ್ತು. ಅಲ್ಲಿಗೆ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಚಲಿಸಬಲ್ಲದು ಎಂಬುದೂ ದೇಶಕ್ಕೆ ಮನದಟ್ಟಾಗಿತ್ತು. ಹಿಂದೂ ಧರ್ಮದ ಹೆಸರಿನ ಅಂಧಾ ದರ್ಬಾರ್ ಹೇಗಿರುತ್ತದೆ, ಭಾರತ ಹಿಂದೂ ರಾಷ್ಟ್ರವಾದರೆ ಆಗ ಜಾರಿಯಾಗುವ ಕಾನೂನುಗಳ ಯಾರ ಪರವಾಗಿ ಹೇಗೆ ರೂಪಿತವಾಗಿ ಜಾರಿಯಾಗಬಲ್ಲವು ಎಂಬುದಕ್ಕೆ ಇಂತಹಾ ಘಟನೆಗಳು ಇಂತಹಾ ವ್ಯಕ್ತಿಗಳೇ ಪ್ರತ್ಯಕ್ಷ ಸಾಕ್ಷಿಗಳು.
ಇವನು ಕರ್ನಾಟಕಕ್ಕೆ ಬಂದು ಹೋಗಲು ಯಾವ ನೈತಿಕತೆ ಇದೆ? ಎಸ್ಟಿ ಮೀಸಲು ಕ್ಷೇತ್ರವಾದ ಯಮಕನಮರಡಿಗೆ ಬರುತ್ತಿರುವ ಈತ ದೇಶದ ಮೂಲ ನಿವಾಸಿ ಸಮುದಾಯವೊಂದರ ಹೆಣ್ಣುಮಗಳ ಮೇಲೆ ತನ್ನ ರಾಜ್ಯದ ತನ್ನ ಜಾತಿಯ ಇವನೇ ಹೇಳಿದಂತೆ, “ಬಿಸಿರಕ್ತದ ಠಾಕೂರ್ ಹುಡುಗರು” ನಡೆಸಿದ ಹೇಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಇಲ್ಲಿ ಬಂದು ನಮ್ಮ ಜನಕ್ಕೆ ಉತ್ತರ ಕೊಡಲಿ.
ಬೇಡ ವಾಲ್ಮೀಕಿ ಸಮುದಾಯ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ ಎಂದು ನಂಬಿ ಇವರಿಗೆ ದೊಡ್ಡ ಪ್ರಮಾಣದಲ್ಲಿ ಮತಹಾಕಿದ್ದರು. ರಾಮುಲು ಉಪಮುಖ್ಯಮಂತ್ರಿಯಾಗುವುದಿರಲಿ ಈ ಚುನಾವಣೆಯಲ್ಲಿ ಆ ಮನುಷ್ಯನ ಅಡ್ರೆಸ್ಸೇ ಇಲ್ಲದಂತೆ ಮಾಡಿದರು. ಈ ಬಗ್ಗೆ ಸಮುದಾಯ ಪ್ರಶ್ನೆ ಎತ್ತಲಿ. ಯಮಕನಮರಡಿ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿ ಸತೀಶ್ ಜಾರಕಿ ಹೊಳಿ ಎಂಬ ಕರ್ನಾಟಕದ ವಿಶಿಷ್ಟ ಅತ್ಯಂತ ಘನತೆ ಗೌರವ ಇರುವ ವ್ಯಕ್ತಿ ಸ್ಪರ್ಧಿಸಿರುವ ಕ್ಷೇತ್ರ. ಅಲ್ಲಿಗೆ ಗೋಳ್ವಾಲ್ಕರನ ಸಂಸ್ಕೃತಿಯ ಸರ್ವಾಧಿಕಾರಿ ಮನಸ್ಥಿತಿಯ ದಲಿತರ ಕೊಲೆ ಸುಲಿಗೆ ಅತ್ಯಾಚಾರಗಳನ್ನು ಕಾಲಿನ ಕಸಕ್ಕಿಂತ ಕಡೆಯಾಗಿ ಕಾಣುವ ಮತಾಂಧ ಬಂದು ಅಪವಿತ್ರ ಮಾಡಿ ಹೋಗುತ್ತಾನೆ. ಆದರೆ ಮತದಾರರು ಚುನಾವಣೆಯಲ್ಲಿ ಇವರ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಯಮಕನಮರಡಿಗೆ ಆದ ಮೈಲಿಗೆಯನ್ನು ತೊಳೆದು ಮತ್ತೆ ಪವಿತ್ರಗೊಳಿಸುತ್ತಾರೆ.
– ಸುರೇಶ ಎನ್ ಶಿಕಾರಿಪುರ, ಸಂಶೋಧಕರು




