ಸಮಯ ಪ್ರಜ್ಞೆ ಮೆರೆದ ಸಂದೀಪ

9 months ago

ಪುರುಷೋತ್ತಮ ಮನೆಗೆ ಬಂದ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದ. ಅವರು ಪುರುಷೋತ್ತಮನ ಬಳಿಯಲ್ಲಿ  ಮಗುವಿನ ವಿದ್ಯಾಭ್ಯಾಸಕ್ಕಾಗಿ ನೆರವು ಕೇಳಿಕೊಂಡು ಬಂದಿದ್ದರು. ಪುರುಷೋತ್ತಮ ಸಾಮಾನ್ಯವಾಗಿ ಸಹಾಯವನ್ನು ಕೇಳಿ ಯಾರೇ ಬಂದರೂ ಸಹ ತನ್ನ ಇತಿಮಿತಿಯಲ್ಲಿ ಕೂಡಲೇ ಆ ಕ್ಷಣದಲ್ಲಿಯೇ ಹಣವನ್ನು ಕೊಟ್ಟು ಕಳುಹಿಸುವುದು ವಾಡಿಕೆಯಾಗಿದೆ. ಆದರೆ, ಇಂದು ಪುರುಷೋತ್ತಮ ಸಹಾಯ ಕೇಳಿ ಬಂದವರ ಜೊತೆಯಲ್ಲಿ ಸುಮ್ಮನೆ ಮಾತನಾಡುತ್ತಾ ಕುಳಿತಿದ್ದಾನೆ. ಅವನ ಮುಖದಲ್ಲಿ ಸ್ವಲ್ಪ ಬೇಸರವಿದೆ. ತನ್ನ ಪ್ಯಾಂಟ್ ಜೇಬಿನಲ್ಲಿ ಹಣ ಇದ್ದರೆ ಅದನ್ನು ತಂದುಕೊಡಲು ಕೊಠಡಿಗೆ ಹೋದ. ಆದರೆ, ತನ್ನ ಜೇಬಿನಲ್ಲಿ ಹಣವಿಲ್ಲದ ಕಾರಣದಿಂದ ಬೇಸರದಿಂದ ಬಂದ. ನೀವು ನಾಳೆ ಬರುತ್ತೀರಾ? ಎಂದು ಪ್ರಶ್ನೆ ಮಾಡಿದ.

ಇಲ್ಲ ಸಾರ್, ಇವತ್ತೇ ಕಾಲೇಜಿಗೆ ಫೀಸ್ ಕಟ್ಟಬೇಕು, ನಾಳೆ  ಅಂದ್ರೆ ಅಡ್ಮಿಶನ್ ಕ್ಯಾನ್ಸಲ್ ಮಾಡ್ಬಿಡ್ತಾರೆ. ಇವತ್ತು ಕೊನೆ ದಿನ ಎಂದು ಬಂದಿದ್ದಂತಹ ತಂದೆ ಮತ್ತು ಆತನ ಮಗಳು ದುಃಖದಿಂದ  ಪುರುಷೋತ್ತಮನ ಬಳಿಯಲ್ಲಿ ಕೈಮುಗಿದುಕೊಂಡು ಬೇಡಿಕೊಂಡರು.

ಪುರುಷೋತ್ತಮನಿಗೆ ಈಗ ಮತ್ತಷ್ಟು ದುಃಖವಾಯಿತು. ಇವರಿಗೆ ಹಣ ಕೊಡಲು ತನ್ನ ಬಳಿ ಹಣ ಇಲ್ಲವೆಂದು ಹೇಗೆ ಹೇಳುವುದೆಂದು ಗೊತ್ತಾಗದೆ ಒತ್ತಡದಲ್ಲಿ ಸಿಲುಕಿದ. ತಂದೆಯ ಪೇಚಾಟ ಆತಂಕವನ್ನು ದೂರದಿಂದ ಗಮನಿಸಿದ ಸಂದೀಪ ಕೂಡಲೇ ತನ್ನ ಜೇಬಿನಿಂದ ಒಂದಷ್ಟು ಹಣವನ್ನು ತಂದು ತಂದೆಯ ಕೈಗೆ ಕೊಟ್ಟು, ಅಪ್ಪ, ನೀವು ನಿನ್ನೆ ನನಗೆ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರಲು ಹೇಳಿದ್ದಿರಿ, ನಾನು ಹಣವನ್ನು ನಿಮ್ಮ ಕೈಗೆ ಕೊಡುವುದನ್ನು ಮರೆತಿದ್ದೆ. ಈಗ ತೆಗೆದುಕೊಳ್ಳಿ ಎಂದು ತಂದೆಯ ಕೈಗೆ ನೀಡಿದ.

ಪುರುಷೋತ್ತಮನಿಗೆ ಮಗನ ಮಾತು ಕೇಳಿ ಆಶ್ಚರ್ಯವಾಯಿತು. ನಾನು ನಿನಗೆ ಯಾವಾಗ ಹಣ ಡ್ರಾ ಮಾಡಿಕೊಂಡು ಬರಲು ಹೇಳಿದ್ದೆ ಎಂದು  ಪ್ರಶ್ನಿಸಿದರು.

ನೀವು ಕೊಟ್ಟಿದ್ರಿ, ಆದರೆ ಮರೆತುಬಿಟ್ಟಿದ್ದೀರಿ, ಇದು ನಿಮ್ಮದೇ ಹಣ ಎಂದು ಸಂದೀಪ ಹೇಳಿ ಅಲ್ಲಿಂದ ಮುಂದೆ ಹೋದ. ಪುರುಷೋತ್ತಮನಿಗೆ ಮಗ ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ತಿಳಿಯಿತು. ಆದರೂ ಆ ಕ್ಷಣದಲ್ಲಿ ಈ ಹಣ ಅನಿವಾರ್ಯವಾಗಿತ್ತು. ಸಂದೀಪ್  ಕೊಟ್ಟ ಹಣದಲ್ಲಿ ಒಂದಷ್ಟು ಪಾಲನ್ನು ತೆಗೆದು ಸಹಾಯ ಕೇಳಿ ಬಂದಿದ್ದ ತಂದೆ ಮಗಳಿಗೆ ನೀಡಿದರು. ಹಣವನ್ನು ಪಡೆದ ಇವರು ಅತ್ಯಂತ ಸಂತೋಷದಿಂದ ಪುರುಷೋತ್ತಮನ ಸಹಾಯಕ್ಕೆ ಕೃತಜ್ಞತಾ ಪೂರ್ವಕವಾಗಿ ನಮಸ್ಕಾರ ಮಾಡಿ ಹೊರಟರು.

ಪುರುಷೋತ್ತಮ ಮಗನ ಬಳಿಗೆ ಬಂದು ಅಲ್ಲ, ನಾನು ನಿನಗೆ  ಬ್ಯಾಂಕಿನಿಂದ ಹಣ ತರಲು ಹೇಳಿರಲಿಲ್ಲ. ಆದರೆ, ನೀನು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಣ ಕೊಟ್ಟು ಅವರಿಗೆ ಸಹಾಯ ಮಾಡಲು ಸ್ಪಂದಿಸಿರುವೆ. ಅದಕ್ಕೆ ನಿನಗೆ ನಾನು ಧನ್ಯವಾದ ಹೇಳಬೇಕು ಎಂದ.

ಅಪ್ಪ ನಿನ್ನ ಪರಿಸ್ಥಿತಿಯನ್ನು ನಾನು ಗಮನಿಸಿ ಹಣವನ್ನು ಕೊಟ್ಟೆ ಇದರಲ್ಲಿ ದೊಡ್ಡ ವಿಚಾರವೇನು ಎಂದು ತಂದೆಗೆ ತನ್ನ ನಡವಳಿಕೆಯ ಬಗ್ಗೆ ಸಮಜಾಯಿಷಿಕೊಟ್ಟ.

ಸಮಯಪ್ರಜ್ಞೆಯನ್ನ ಮೆರೆದಂತಹ ಮಗ ಸಂದೀಪನ ಬಗ್ಗೆ ಸಂತೋಷವಾಗಿ ಪುರುಷೋತ್ತಮ ಮಗನ ತಲೆ ಸವರಿ ಸಂತೋಷ ವ್ಯಕ್ತಪಡಿಸಿದರು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply