ತೊಡೆಗಳ ಮೇಲಿದ್ದ ಚಪ್ಪಲಿ ಓಡಿಸಿಕೊಂಡು ಬಂತಲ್ಲೋ ಪರಾಕ್!

2 years ago

ನಾನು ಬರೆದಿರುವ `ಬರಿ ನಿದ್ದೆಯಲ್ಲವೊ ಅಣ್ಣಾ! ಪುಸ್ತಕದಿಂದ ಆಯ್ದ ಒಂದು ತುಣುಕು.

ಪರೀಕ್ಷೆಗಾಗಿ ಓದುವಾಗ ನಿದ್ದೆ ಬಂದು ಕೊಡುವ ಹಿಂಸೆಯನ್ನು ವಿದ್ಯಾರ್ಥಿಗಳಿಗೆ ಮತ್ಯಾವುದೂ ಕೊಡಲಾರದು. ಮನೆಯಲ್ಲಿದ್ದು ಓದುವಾಗ ತೂಕಡಿಸಿದರೆ, ನಿದ್ದೆ ಮಾಡಿದರೆ ಒಂದು ಕಡೆ ಅಪ್ಪನೂ ಮತ್ತೊಂದು ಕಡೆ ಅಮ್ಮನೂ ಎಳೆದಾಡಿ ಏನೋ ಸ್ವಲ್ಪ ರಿಲೀಫ್ ಸಿಗಬಹುದು. ಆದರೆ ಹಾಸ್ಟೆಲ್ಗಳಲ್ಲಿ ಪರೀಕ್ಷೆಗಾಗಿ ಓದುವಾಗ ತೂಕಡಿಸಿದರೆ, ನಿದ್ದೆ ಮಾಡಿದರೆ ಅಲ್ಲಿ ಹೇಳುವವರು-ಕೇಳುವವರು ಯಾರು? ಇದು ಸಮಸ್ಯೆಯೂ ಹೌದು; ವರವೂ ಹೌದು. ಅಲ್ಲಿ ನಿದ್ದೆ ಮಾಡುತ್ತಿರುವವರನ್ನು ಓದಲು ಯಾರು ಏಳಿಸುತ್ತಾರೆ? ಓದುವಾಗ ತೂಕಡಿಸುವವರಿಗೆ ತೂಕಡಿಸಬೇಡ ಎಂದು ಯಾರು ಹೇಳುತ್ತಾರೆ? ಅದೊಂದು ದೊಡ್ಡ ಲೋಕ. ಅಲ್ಲಿ ಯಾರಿಗೆ ಯಾರೂ ಹೇಳುವುದಿಲ್ಲ. ಯಾರ ಮಾತನ್ನು ಯಾರೂ ಕೇಳುವುದೂ ಇಲ್ಲ. ಹಾಗಾಗಿ ಅವರವರ ನಿದ್ದೆಯನ್ನು ಅವರವರೇ ಕಂಟ್ರೋಲ್ ಮಾಡಿಕೊಳ್ಳಬೇಕು. ಇದು ಸೆಲ್ಫ್ ಕಂಟ್ರೋಲಿಂಗ್ ಪವರ್ಗೆ ಸಂಬಂಧಿಸಿದ್ದು. ಕೆಲವರಿಗೆ ಇದು ಸಾಧ್ಯವಾಗುತ್ತದೆ. ಮತ್ತೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಆದರೆ ಸಾಧ್ಯವಾಗದವರು ಪ್ರಯತ್ನ ಮಾಡದೆ ಸುಮ್ಮನೆ ಕೂರುವುದಿಲ್ಲ. ತಮ್ಮ ಕೈಲಾದ ಪ್ರಯತ್ನವನ್ನು ಮತ್ತು ತಮ್ಮ ಕೈಮೀರಿದ ಪ್ರಯತ್ನವನ್ನು ಮಾಡುತ್ತಾರೆ. ಅಂತಹ ಒಂದು ಪ್ರಸಂಗವನ್ನು ತಮ್ಮ ಮುಂದಿಡಲು ತಮ್ಮ ಅಪ್ಪಣೆ ಕೋರುತ್ತೇನೆ.

ನಾನು ಪಿ.ಯು.ಸಿ.ಯಿಂದ ಬಿ.ಎ.ವರೆಗೆ ಚಿಕ್ಕಮಗಳೂರಿನ ಕಾಲೇಜು ಹಾಸ್ಟೆಲ್ನಲ್ಲಿದ್ದು  ಓದಿದೆ. ಫಸ್ಟ್ ಬಿ.ಎ. ಮತ್ತು ಸೆಕೆಂಡ್ ಬಿ.ಎ. ಓದುವಾಗ ಮಾರ್ಕೆಟ್ ರೋಡಿನ ಮುಬಾರಕ್ ಬಿಲ್ಡಿಂಗ್ ನಲ್ಲಿ ನಮ್ಮ ಹಾಸ್ಟೆಲ್ ನಡೆಯುತ್ತಿತ್ತು. ಅದು ಬಾಡಿಗೆ ಬಿಲ್ಡಿಂಗ್. ಪರೀಕ್ಷೆಯ ಸಮಯದಲ್ಲಿ ರಾತ್ರಿ ಊಟ ಮಾಡಿದ ಮೇಲೆಯೂ ಓದುತ್ತಿದ್ದೆವು. ಆಗ ಕೆಲವರಿಗೆ ತೂಕಡಿಕೆ ಬರುತ್ತಿತ್ತು. ಅಂತವರಲ್ಲಿ ಕೆಲವರು ಆಗ ಕಡೂರು ಮಂಗಳೂರು ರೋಡಿನಲ್ಲಿ ರಾತ್ರಿಯಿಡೀ ಓಪನ್ ಇರುತ್ತಿದ್ದ ಬಿಲಾಲ್ ಹೋಟೆಲ್ ಗೆ ಹೋಗಿ, ನಿದ್ದೆ ಕಂಟ್ರೋಲ್ ಮಾಡಿಕೊಳ್ಳಲು ಕಾಫಿ, ಟೀ ಕುಡಿದು ಬಂದು ಓದುತ್ತಿದ್ದರು. ಮತ್ತೆ ಕೆಲವರು ಅಂತಹ ಯಾವುದೇ ಪ್ರಯತ್ನ ಮಾಡದೆ ರೂಮಲ್ಲೇ ಓದುತ್ತಾ ಕೂರುತ್ತಿದ್ದರು.

ಒಬ್ಬ ನಮ್ಮ ಗೆಳೆಯನಿಗೆ ರಾತ್ರಿ ಊಟ ಮಾಡಿದ ಮೇಲೆ ಓದಲು ಕೂತರೆ ಬರಬಾರದ ಯಮಲೋಕದ ನಿದ್ದೆ ಬರುತ್ತಿತ್ತು. ಪರೀಕ್ಷೆಗೆ ಓದಬೇಕೆಂಬ ಹಠ ಅವನಿಗೆ. ಅವನ ಕಣ್ಣು ಮುಚ್ಚಿಸಿ ನಿದ್ದೆ ಬರಿಸುವ ಹಠ ನಿದ್ದೆಗೆ. ಈ ಎರಡರ ಪರಸ್ಪರ ಎಳೆದಾಟಕ್ಕೆ ಅವನು ನಿತ್ಯ ಬಲಿಯಾಗುತ್ತಿದ್ದ. ಅನುಭವಿಸಲಾರದ ಹಿಂಸೆ ಅನುಭವಿಸುತ್ತಿದ್ದ. ರಾತ್ರಿ ಊಟ ಮಾಡಿದ ಮೇಲೆ ಗಟ್ಟಿಮುಟ್ಟಾದ ಮರದ ಕುರ್ಚಿಯ ಮೇಲೆ ಕೂತು ತನ್ನ ಎರಡೂ ಕೈಗಳಲ್ಲಿ ಪುಸ್ತಕ ಹಿಡಿದನೆಂದರೆ ಅವನಿಗೆ ತೂಕಡಿಕೆ ಮತ್ತು ನಿದ್ದೆ ಒಂದರಮೇಲೊಂದು ಬಂದು ದಾಳಿ ಮಾಡುತ್ತಿದ್ದವು. ಉಳಿದ ಅಷ್ಟೂ ವಿದ್ಯಾರ್ಥಿಗಳನ್ನು ಬಿಟ್ಟು ಆ ಹಾಳಾದ ನಿದ್ದೆ ಇವನ ಮೇಲೆಯೇ ಯಾಕೆ ಎರಗುತ್ತಿತ್ತೊ ಗೊತ್ತಿಲ್ಲ. ಬಹುಶಃ ಅವನೂ ಕೂಡ `ಅಷ್ಟು ಹುಡುಗರು ಓದ್ತಾ ಇದಾರೆ. ಅವರ್ಯಾರಿಗೂ ನಿದ್ದೆ ಬರ್ತಾ ಇಲ್ಲ. ಹೋಗಿಹೋಗಿ ನನಗೇ ಈ ಹಾಳಾದ ನಿದ್ದೆ ಯಾಕೆ ಬರುತ್ತೋ ದೇವರೇ!’ ಎಂದು ನೂರಾರು ಸಲ ಪರಿತಪಿಸಿರಬಹುದು. `ನಿದ್ದೆಯಿಂದ ನನ್ನನ್ನು ಪಾರು ಮಾಡು’ ಎಂದು ಅವನ ನಂಬಿಕೆಯ ನೂರಾರು ದೇವರಿಗೆ ಮನದಲ್ಲೇ ಕೈಮುಗಿದಿರಬಹುದು.

ಓದಲು ಕೂತಾಗ ತೂಕಡಿಸುತ್ತಿರುವಾಗ ಅವನ ತಲೆ ಆ ಕಡೆ ಈ ಕಡೆ ನಿಧಾನಕ್ಕೆ ವಾಲಾಡುತ್ತಾ ಇರುತ್ತಿತ್ತು. ಪುಸ್ತಕ ಕೈಲಿ ಹಿಡಿದುಕೊಂಡೇ, ಗಟ್ಟಿಯಾಗಿ ತೂಕಡಿಸುತ್ತಾ ತೂಕಡಿಸುತ್ತಾ ಅವನ ತಲೆ ನಿಧಾನಕ್ಕೆ ಹಿಂದಕ್ಕೆ ಓರೆಯಾಗುತ್ತಿತ್ತು. ತಕ್ಷಣ ಮಿಡುಕಿಬಿದ್ದು ನೆಟ್ಟಗೆ ಕೂರುತ್ತಿದ್ದ. ಓದಲು ತವಕಿಸುತ್ತಿದ್ದ. ಪಕ್ಕದ ಕುರ್ಚಿಯಲ್ಲಿ ಕೂತು ಓದುತ್ತಿದ್ದ ಗೆಳೆಯ `ತೂಕಡಿಸಿ ಯಾಕೆ ಮಿಡುಕಿ ಬೀಳ್ತಿಯ, ನಿದ್ದೆ ಬಂದರೆ ಈ ಗೋಳಿಗಿಂತ ಸುಮ್ಮನೆ ಆರಾಮಾಗಿ ಮಲಗು’ ಎನ್ನುತ್ತಿದ್ದ. ಅದಕ್ಕೆ ಇವನು `ನಾನೆಲ್ಲಿ ತೂಕಡಿಸಿದಿನಿ!’ ಎಂದು ಗದರಿಸುತ್ತಿದ್ದ. `ಮತ್ಯಾಕೆ ಮಿಡುಕಿ ಬೀಳ್ತಿಯ’ ಎಂದು ಕೇಳಿದರೆ, ಅದಕ್ಕೆ ಇವನು `ನಾನು ತೂಕಡಿಸ್ತಾ ಇಲ್ಲ, ಓದ್ತಾ ಓದ್ತಾ ಫುಲ್ ಸ್ಟಾಪ್ ಬಂದ ತಕ್ಷಣ ತಲೆಯನ್ನು ಆ ಥರ ಮಾಡ್ತಿನಿ. ಅದು ನನ್ನ ಅಭ್ಯಾಸ’ ಅಂತ ಸಮಜಾಯಿಷಿ ಕೊಡುತ್ತಿದ್ದ. `ಓದುವಾಗ ತೂಕಡಿಸುವುದು, ತೂಕಡಿಸಿ ಮಿಡುಕಿ ಬೀಳುವುದು -ಇದು ನನ್ನ ದೌರ್ಬಲ್ಯ ಹೌದು. ಆದರೆ ಆ ದೌರ್ಬಲ್ಯವನ್ನು ಹೊರಗಡೆ ತೋರಿಸಿಕೊಳ್ಳಬಾರದು’ ಎಂಬುದು ಆತನ ಬಲವಾದ ನಂಬಿಕೆಯೂ, ತೀರ್ಮಾನವೂ, ಹಠವೂ ಆಗಿತ್ತು. ತಾನಂದುಕೊಂಡ ದೌರ್ಬಲ್ಯವನ್ನು ಅತ್ಯಂತ ನಯವಾಗಿ ಮುಚ್ಚಿಟ್ಟುಕೊಳ್ಳಲು, ಬರವಣಿಗೆಯ ಪ್ರಾಥಮಿಕ ಅಗತ್ಯಗಳಲ್ಲಿ ಒಂದಾದ ಫುಲ್ ಸ್ಟಾಪನ್ನು ಅಲ್ಲಿಂದ ಅನಾಮತ್ತಾಗಿ ಎಳೆದು ತಂದು, ತನಗೆ ಸಾಕ್ಷಿಯಾಗಿ, ಬೆಂಬಲವಾಗಿ ಪಡೆಯುತ್ತಿದ್ದ. ಬಹುಶಃ ಇದು ಜಗತ್ತಿನ ವ್ಯಾಕರಣ ಪಂಡಿತರ ತಿಳುವಳಿಕೆಯನ್ನೂ ಇದು ಬುಡಮೇಲು ಮಾಡುತ್ತದೆ.

ಕೆಲವರು ಆ ಸುಂದರವಾದ ಸೀನನ್ನು ನೋಡಿ ಆನಂದ ಪಡುತ್ತಿದ್ದರು. ಇನ್ನು ಕೆಲವರಿಗೆ ಸಣ್ಣಪುಟ್ಟ ಪ್ರಮಾಣದಲ್ಲಿ ತೂಕಡಿಕೆ ಬಂದರೆ, ಅಂತವರು ಇವನು ತೂಕಡಿಸುವುದನ್ನು ನೋಡಿ, ಮುಗುಳ್ನಕ್ಕು ತಮ್ಮ ತೂಕಡಿಕೆಯನ್ನು ಹೋಗಲಾಡಿಸಿಕೊಳ್ಳುತ್ತಿದ್ದರು. ಇಂತಹ ಕೆಲವು ಕಾರಣಗಳಿಂದಲೂ ಇವನ ತೂಕಡಿಕೆಗೆ ವಿಶೇಷ ಮಹತ್ವವೂ, ಭಾರೀ ಬೇಡಿಕೆಯೂ ಇತ್ತು. ಕೆಲವು ಸಲ ಅದು ಅವನಿಗೆ ಗೊತ್ತಾಗಿ, ಹಾಗೆ ತೂಕಡಿಸುವುದು ಅವಮಾನ ಎಂದು ಭಾವಿಸಿ, ನೋಡಲು ಬಂದವರನ್ನು ಬೈಯ್ಯುತ್ತಿದ್ದುದೂ ಉಂಟು. ಮಾರನೆ ದಿನ ಬೆಳಿಗ್ಗೆ ಅವನು ಎದುರಿಗೆ ಇಲ್ಲದಿದ್ದಾಗ, ಕೆಲವರು ಸೇರಿಕೊಂಡು, `ನಿನ್ನೆ ರಾತ್ರಿ ಯರ್ಯಾವರಿಗೆ ದರ್ಶನ ಆಯಿತು?’ ಎಂತಲೂ, ಮತ್ತು `ನಿನ್ನೆ ರಾತ್ರಿ ಯರ್ಯಾರಿಗೆ ಆಶೀರ್ವಾದ ಆಯಿತು?’ ಎಂತಲೂ ಮಾತಾಡಿಕೊಳ್ಳುತ್ತಿದ್ದೆವು.

ಇವನು ತೂಕಡಿಸುವಾಗ ಇವನ ತಲೆಯೂ ಇವನ ಕಂಟ್ರೋಲ್ ಮೀರಿ ಸುಂದರವಾಗಿ ಅಲ್ಲಾಡುತ್ತಿತ್ತು. ಇದನ್ನು ಗಮನಿಸಿದ ಗೆಳೆಯನೊಬ್ಬ ಇದನ್ನು, ವಾಲಗ (ಶಹನಾಯಿ) ಊದುವಾಗ ಕೆಲವರು ತಲೆಯನ್ನು ಅಲ್ಲಾಡಿಸುತ್ತಾರೆ, ಅದಕ್ಕೆ ಹೋಲಿಕೆ ಮಾಡಿದ್ದ. ಹಾಗೆ ಹೋಲಿಕೆ ಮಾಡಿ ಇವನಿಗೆ `ವಾಲಗದವರು’ ಅಂತ ಹೆಸರಿಟ್ಟಿದ್ದ. ಈ ಹೆಸರನ್ನು ಅತ್ಯಂತ ಸೀಕ್ರೆಟ್ ಆಗಿ ಇಟ್ಟಿದ್ದ. ಇವನ ಗೈರು ಹಾಜರಿಯಲ್ಲಿ ನಾವೆಲ್ಲ ಇವನಿಗೆ `ವಾಲಗದವರು’ ಅಂತಲೇ ಕರೆಯುತ್ತಿದ್ದೆವು. ಅದ್ಯಾವುದೋ ಕೆಟ್ಟ ಘಳಿಗೆಯಲ್ಲೋ, ಅಥವಾ ಹೆಸರಿಟ್ಟವನಿಗೆ ಆಗದವರೋ, ಆ `ವಾಲಗದವರು’ ಎಂಬ ಹೆಸರನ್ನು ತೂಕಡಿಸುವ ಗೆಳೆಯನಿಗೆ ಹೇಳಿಬಿಟ್ಟಿದ್ದರು. ಯಾವುದಾದರೂ ವಿಷಯ ಮಾತಾಡುತ್ತಾ, `ವಾಲಗದವರು’ ಎಂಬ ಪದ ಇವನ ಕಿವಿಗೆ ಬಿದ್ದರೆ ಸಾಕು ಇವನಿಗೆ ಬರಬಾರದ ಸಿಟ್ಟು, ಕೋಪ ಬರುತ್ತಿತ್ತು. ಅಂತಹ ಪದ ಹೇಳಿದವರ ಮೇಲೆ ಇವನು ಸುಮ್ಮಸುಮ್ಮನೆ ಜಗಳಕ್ಕೂ ಹೋಗುತ್ತಿದ್ದ.

ಪರೀಕ್ಷೆಯ ಸಮಯದಲ್ಲಿ ಒಂದು ದಿನ ರಾತ್ರಿ ಇವನು ಊಟ ಮಾಡಿದ ಮೇಲೆ ಮರದ ಕುರ್ಚಿಯ ಮೇಲೆ ಕೂತು ಓದಲು ಶುರುಮಾಡಿದ. ಅವತ್ತಿನ ಭಂಗಿ ಸ್ವಲ್ಪ ವಿಶೇಷವಾಗಿತ್ತು. ಕುರ್ಚಿಗೆ ಬೆನ್ನು ಒರಗಿಸಿಕೊಂಡು, ಮುಂದಿನ ಟೇಬಲ್ ಮೇಲೆ ತನ್ನ ಎರಡೂ ಕಾಲುಗಳನ್ನು ನೀಡಿಕೊಂಡು, ತೊಡೆಗಳ ಮೇಲೆ ಪುಸ್ತಕ ಇಟ್ಟುಕೊಂಡು ಓದುತ್ತಿದ್ದ. ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಬರಬಾರದ ತೂಕಡಿಕೆ, ನಿದ್ದೆ ಮಿಕ್ಸಾಗಿ ಬಂದು, ಇವನು ಹಾಗೇ ಕುರ್ಚಿಯ ಮೇಲೆ ಒರಗಿದ್ದ. ಇದನ್ನು ಗಮನಿಸಿದ ಪಕ್ಕದ ಗೆಳೆಯ ಅಲ್ಲಿಂದ ನಿಧಾನವಾಗಿ ಪುಸ್ತಕ ತೆಗೆದು, ಅಲ್ಲಿಗೆ ಅವನ ಚಪ್ಪಲಿ ಇಟ್ಟ. ಅವನಿಗೆ ಎಚ್ಚರಿಕೆಯಾದರೆ ಚಪ್ಪಲಿ ಇಟ್ಟವನು ನಾನೇ ಎಂದು ಅವನಿಗೆ ಗೊತ್ತಾಗುತ್ತದೆ ಎಂದು ಮೊದಲೇ ಊಹಿಸಿ ಪಕ್ಕದ ರೂಮು ಸೇರಿಬಿಟ್ಟ. ಪಾದಗಳೊಂದಿಗೆ ಮಾತ್ರ ಸಂಬಂಧವಿದ್ದ ಚಪ್ಪಲಿಗಳಿಗೆ ಅಂದು ಒಮ್ಮೆಲೇ ಪ್ರೊಮೋಶನ್ ಸಿಕ್ಕಿ ತೊಡೆಗಳನ್ನು ಏರುವ ದಿಡೀರ್ ಭಾಗ್ಯ ಬಂದಿತ್ತು. `ಬಡವ ಬಲ್ಲಿದನಾಗನೆ, ಎಳೆಗರು ಎತ್ತಾಗದೆ’ ಎಂಬಂತೆ `ಇಂದಲ್ಲ ನಾಳೆ ಹೆಗಲನ್ನೋ, ತಲೆಯನ್ನೋ, ಮತ್ತೇನನ್ನೋ ಏರುವ ಭಾಗ್ಯ ಬಂದೇಬರುತ್ತದೆ’ ಎಂಬ ದರ್ಪದಲ್ಲೂ, ಅಹಂಕಾರದಲ್ಲೂ, ಚಪ್ಪಲಿಗಳು ತೊಡೆಗಳ ಮೇಲೆ ರಾಜಾರೋಷವಾಗಿ ವಿರಾಜಿಸುತ್ತಿದ್ದವು. `ಅಲ್ಲಿಯವರೆಗೆ ನಮ್ಮನ್ನು ಕೆಳಗಿಳಿಸುವ ಧೈರ್ಯ ಯಾವನಿಗಿದೆ’ ಎಂದು ಅವು ಬೀಗುತ್ತಿದ್ದವು. ಹೀಗೆ ಅವು ಬೀಗುತ್ತಿರುವಾಗ ಸ್ವಲ್ಪ ಹೊತ್ತಿನ ನಂತರ ಕುರ್ಚಿಯ ಮೇಲೆ ಕೂತು ನಿದ್ದೆ ಮಾಡುತ್ತಿದ್ದ ಮಹಾನುಭಾವ ಮಿಡುಕಿಬಿದ್ದ! ಅವನಿಗೆ ಎಚ್ಚರಿಕೆಯಾಯಿತು. ನೋಡುತ್ತಾನೆ, ಪುಸ್ತಕದ ಬದಲು ತನ್ನ ಪವಿತ್ರವಾದ ತೊಡೆಗಳ ಮೇಲೆ ಚಪ್ಪಲಿ ಇದೆ! ಒಂದೇ ಸಲ ಗಾಬರಿಯಾಗಿ, ಸಿಟ್ಟು-ಕೋಪ ಒಂದರ ಮೇಲೊಂದು ಬಂದವು. ಚಪ್ಪಲಿ ಇಟ್ಟವನು ಇಂತಹವನೇ ಎಂದು ಊಹಿಸಿ, ಅದೇ ಚಪ್ಪಲಿಯನ್ನು ಕೈಲಿ ಹಿಡಿದುಕೊಂಡ. ಚಪ್ಪಲಿಯನ್ನು ಕೈಲಿ ಹಿಡಿದುಕೊಂಡದ್ದೇ ತಡ, ಆ ಚಪ್ಪಲಿ, `ನನ್ನ ಯಜಮಾನನಿಗೆ ಅವಮಾನ ಮಾಡಿದವನು ಯಾವನು? ಅವನು ಯಾವನಾದರೂ ಸೈ! ಅವನು ಎಲ್ಲಿದ್ದರೂ ಸೈ! ನಾನೇ ಅವನನ್ನು ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಅತ್ಯಂತ ಸೀರಿಯಸ್ಸಾಗಿ ಆಕ್ರೋಶಗೊಂಡು, ಇವನಿಗೆ ಎಲ್ಲಾ ರೀತಿಯಲ್ಲೂ ಸಹಕರಿಸತೊಡಗಿತು. ಚಪ್ಪಲಿ ಇಟ್ಟವನು ಎಲ್ಲಿರಬಹುದೆಂದು ಹುಡುಕಿ, ಅವನನ್ನು ಓಡಿಸಿಕೊಂಡು ಹೋದ. ಇದನ್ನು ಮುಂದಾಗಿಯೇ ನಿರೀಕ್ಷಿಸಿದ್ದ ಚಪ್ಪಲಿ ಇಟ್ಟ ಗೆಳೆಯ ಹಾಸ್ಟೆಲ್ನಿಂದ ಹೊರಗೆ ಓಡಿಬಿಟ್ಟ.

ಈ ಪ್ರಸಂಗದಿಂದ ಇವನು ಬಹಳ ಅವಮಾನಗೊಂಡ; ನೊಂದುಕೊಂಡ. ಇನ್ನು ಮುಂದೆ ರಾತ್ರಿ ಓದುವಾಗ ತೂಕಡಿಕೆ ಬರದಂತೆ ಏನು ಮಾಡಬೇಕು ಎಂದು ಆಲೋಚಿಸತೊಡಗಿದ. ಒಂದು ಕಡೆ ಪರೀಕ್ಷೆಗೂ, ಮತ್ತೊಂದು ಕಡೆ ತೂಕಡಿಕೆ-ನಿದ್ದೆಗೂ ಒಳಗೊಳಗೇ ಹಾಕಬಾರದ ಶಾಪ ಹಾಕಿದ. ಪರೀಕ್ಷೆಯಲ್ಲಿ ಪಾಸಾಗುತ್ತೋ, ಫೇಲಾಗುತ್ತೋ ಅದು ಬೇರೆ ಪ್ರಶ್ನೆ. ಆದರೆ `ಇವನು ಏನೇನೂ ಓದದೆ ಫೇಲಾದ’ ಎಂಬ ಕೆಟ್ಟ ಆರೋಪ ಹೊರಲು ಇವನು ಸಿದ್ಧನಿರಲಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಫೇಲಾದರೂ ಪರವಾಗಿಲ್ಲ, `ತಾನು ಪರೀಕ್ಷೆಗೆ ಓದಿದ್ದು ನಿಜ’ ಎಂಬುದನ್ನು ಅಕ್ಕಪಕ್ಕದವರಿಗೆ ಸಾಬೀತು ಮಾಡಲು ಸೀರಿಯಸ್ಸಾಗಿ ಪಣತೊಟ್ಟ. ರಾತ್ರಿ ಊಟದ ನಂತರ ಓದುವಾಗ ತೂಕಡಿಕೆ ಬಂದಾಗ, ತಣ್ಣೀರಲ್ಲಿ ಮುಖ ತೊಳಕೊಂಡು ಬಂದು, ಜೊತೆಗೆ ಟವೆಲ್ಲನ್ನು ಸ್ವಲ್ಪ ಸ್ವಲ್ಪ ಒದ್ದೆಮಾಡಿಕೊಂಡು ಬಂದು, ಅದನ್ನು ಶರ್ಟು, ಬನಿಯನ್ ಎರಡೂ ಇಲ್ಲದ ತನ್ನ ಬೆನ್ನಮೇಲೆ ಹೊದ್ದುಕೊಂಡು, ಒದ್ದೆಯಾದ ಮುಖವನ್ನು ಒರೆಸಿಕೊಳ್ಳದೆ ಓದುತ್ತಾ ಕೂರುತ್ತಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಿದ್ದೆಯ ದಾಳಿಗೋ, ಅವನ ಟೆನ್ಶನ್ನಿಗೋ ದೇಹ ಬಿಸಿಯಾಗಿ, ಟವೆಲ್ ಒಣಗಿಹೋಗುತ್ತಿತ್ತು. ಅದರ ಭಾಗವಾಗಿ ಇವನ ಮುಖವೂ ಬಿಸಿಯಾಗಿ, ಆ ಮುಖದ ಮೇಲಿನ ನೀರು ಆರಿಹೋಗುತ್ತಿತ್ತು. ತಕ್ಷಣ ಅದ್ಯಾವುದೋ ಮಾಯದಲ್ಲಿ ತೂಕಡಿಕೆ-ನಿದ್ದೆ ಒಂದರಮೇಲೊಂದು ಬಂದು ಇವನನ್ನು ಆವರಿಸುತ್ತಿದ್ದವು. ಈ ಪ್ರಯತ್ನದಿಂದಲೂ ಅವನು ಸಂಪೂರ್ಣ ಸೋತುಹೋದ. ಒಂದು ವೇಳೆ ನಿದ್ದೆ ಏನಾದರೂ ಇವನ ಕೈಗೆ ಸಿಗುವಂತಿದ್ದರೆ, ಇವನು ಅದನ್ನು ಹಾಡುಹಗಲೇ, ಬಹಿರಂಗವಾಗಿ, ಲಾಂಗು-ಮಚ್ಚುಗಳಲ್ಲಿ ಕೊಚ್ಚಿ ಕೊಚ್ಚಿ ಕೊಲೆ ಮಾಡುತ್ತಿದ್ದ. ಆದರೆ ಆ ಹಾಳಾದ ನಿದ್ದೆ ಇವನ ಕೈಗೆ ಸಿಗಬೇಕಲ್ಲ!

ಪರಿಸ್ಥಿತಿ ಹೀಗಿರುವಾಗ `ತಾನು ತೂಕಡಿಸದೆ ಪರೀಕ್ಷೆಗೆ ಓದಿದೆ’ ಎಂಬುದನ್ನು ಪ್ರೂವ್ ಮಾಡಲು ಮತ್ತೊಂದು ಅತ್ಯಂತ ಉಪಯುಕ್ತವಾದ ಮತ್ತು ರೋಚಕವಾದ ಯೋಜನೆಯನ್ನು ತಾನೇ ಸ್ವತಂತ್ರವಾಗಿ ರೂಪಿಸಿ, ತಕ್ಷಣ ಅದನ್ನು ಅನುಷ್ಠಾನಕ್ಕೆ ತಂದ. ಅದೇನೆಂದರೆ, ಕುರ್ಚಿಯ ಮೇಲೆ ಕೂತು ಓದಿದಾಗ ತೂಕಡಿಕೆ-ನಿದ್ದೆ ಒಂದರ ಮೇಲೊಂದು ಬಂದು ಇವನ ಓದನ್ನು ಕಿತ್ತುಕೊಳ್ಳುತ್ತಿದ್ದವು. `ಆ ಹಾಳಾದ ನಿದ್ದೆಗೆ ಸರಿಯಾಗಿ ಮಾಡ್ತಿನಿ ನೋಡಿ’, ಎಂದುಕೊಂಡು, ರಾತ್ರಿ ಊಟ ಆದಮೇಲೆ ಪುಸ್ತಕವನ್ನು ಕೈಲಿ ಹಿಡಿದುಕೊಂಡು, ರೂಮಲ್ಲಿ ನಡೆದಾಡುತ್ತಾ ಓದಲು ಶುರುಮಾಡಿದ. ಆ ಇಡೀ ಹಾಸ್ಟೆಲ್ನಲ್ಲಿ ಮತ್ತು ಬೇರೆ ಕಡೆಯೂ ಕೂಡ ಈ ರೀತಿಯ ಪ್ರಯೋಗಗಳನ್ನು ಕಣ್ಣಾರೆ ಕಂಡವರು, ಕಿವಿಯಾರೆ ಕೇಳಿದವರು ಯಾರೂ ಇರಲಿಲ್ಲ. ಇವನ ಈ ನೂತನ ಪ್ರಯೋಗ ಉಳಿದವರಿಗೆ ವಿನೂತನ ಪ್ರದರ್ಶನವಾಗಿ ಕಂಡಿತು. ಈ ಪ್ರದರ್ಶನದ ದರ್ಶನ ಪಡೆಯಲು ಕೆಲವು ಗೆಳೆಯರು ಏನೋ ಪುಸ್ತಕ ಇತ್ಯಾದಿ ಕೇಳುವ ನೆಪದಲ್ಲಿ ಬಂದು, ಈ ವಾಕಿಂಗ್ ಕಮ್ ರೀಡಿಂಗ್ ದರ್ಶನ ಪಡೆಯಲು ಶುರುಮಾಡಿದರು. ಮೊದಮೊದಲು ಹೀಗೆ ಬರುತ್ತಿದ್ದವರನ್ನು ಇವನು ಅನುಮಾನಿಸಲಿಲ್ಲ. ಕೊನೆಕೊನೆಗೆ ತನ್ನ ವಿನೂತನ ಪ್ರಯೋಗದ ಪುಕ್ಕಟೆ ದರ್ಶನಕ್ಕೆ ಇವರು ಬರುತ್ತಿದ್ದಾರೆ ಎಂದು ತಿಳಿದು ಒಳಗೊಳಗೇ ಅವರ ಮೇಲೆ ಯಾವುಯಾವುದೋ ನೆಪದಲ್ಲಿ ಸಿಟ್ಟಿಗೆದ್ದು ಬೈಯ್ಯುತ್ತಿದ್ದ. ತೂಕಡಿಕೆ ಮತ್ತು ನಿದ್ದೆಯ ಮೇಲಿನ ಇವನ ಸಿಟ್ಟು-ಕೋಪ ಗೆಳೆಯರ ಕಡೆಗೆ ತಿರುಗಿತು.

ರಾತ್ರಿ ವೇಳೆ ಪರೀಕ್ಷೆಗೆ ಓದಲು ಕುಳಿತರೆ ಕೆಲವರಿಗೆ ತೂಕಡಿಕೆ-ನಿದ್ದೆ ಬರುತ್ತವೆ. ಅಂತಹವರು ಪುಸ್ತಕ ಅಥವಾ ನೋಟ್ಸ್ ಹಿಡಿದುಕೊಂಡು ನಡೆದಾಡುತ್ತಾ ಓದಿದರೆ ನಿದ್ದೆಯನ್ನು ಖಂಡಿತಾ ಹೊಡೆದು ಓಡಿಸಬಹುದು ಎಂಬುದು ಈಗಾಗಲೆ ಓದುಗರ ಗಮನಕ್ಕೆ ಬಂದಿದೆ. ಇದನ್ನು ಓದಿದವರು ಈ ಹೊಚ್ಚಹೊಸ ವಿಧಾನವನ್ನು ಬೇರೆಯವರಿಗೂ ಯಾವುದೇ ಗೌರವ ಧನ ಪಡೆಯದೆ ತಿಳಿಸಬಹುದು. ಆದರೆ ಇಲ್ಲಿಯೂ ಕೆಲವೊಮ್ಮೆ, ಕೆಲವರಿಗೆ ಸಮಸ್ಯೆ ಎದುರಾಗಬಹುದು. ಓದುವುದು ಎಂದರೆ ಪುಸ್ತಕ, ನೋಟ್ಸ್ ಓದುವುದು ಒಂದು ಬಗೆ. ಇದರ ಜೊತೆಗೆ ಸ್ಕ್ರೀನ್ ಮೇಲೆ ಓದುವುದೂ ಇದೆ. ಬರವಣಿಗೆಯನ್ನು ಕೆಲವರು ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳಲ್ಲೂ ಓದುತ್ತಾರೆ. ಅಂತಹವರು ಕಡ್ಡಾಯವಾಗಿ ಕೂತುಕೊಂಡೇ ಓದಬೇಕು. ಯಾಕೆಂದರೆ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳನ್ನು ಕೈಲಿ ಹಿಡಿದುಕೊಂಡು, ನಡೆದಾಡುತ್ತಾ ಓದಲು ಆಗುವುದಿಲ್ಲ. ಈಗ ಏನು ಮಾಡುವುದು? `ನಡೆದಾಡುತ್ತಾ ಓದಿದರೆ ನಿದ್ದೆ ಮಂಗಮಾಯ’ ಎಂಬುದನ್ನು ಇಡೀ ಜಗತ್ತಿಗೆ ಮೊಟ್ಟಮೊದಲ ಬಾರಿಗೆ ತಿಳಿಸಿಕೊಟ್ಟ ಆ ಗೆಳೆಯ ಈಗ ಸಿಗುವಂತಿದ್ದರೆ ಅವನನ್ನೇ ಇದಕ್ಕೆ ಏನು ಪರಿಹಾರ ಎಂದು ಕೇಳಬಹುದಿತ್ತು.

ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳಲ್ಲಿರುವ ಬರವಣಿಗೆಯನ್ನು ಓದುವಾಗ ನಿದ್ದೆ ಬಂದರೆ, ಅವುಗಳನ್ನು ಹಿಡಿದುಕೊಳ್ಳಲು ಬೇರೆಯವರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಆ ಕೆಲಸ ಮಾಡಿದ್ದಕ್ಕೆ ಸೂಕ್ತವಾದ ಸಂಬಳ ಕೊಡಬೇಕಾಗುತ್ತದೆ. ಅದನ್ನು ಹಿಡಿದುಕೊಂಡವರೂ ನಡೆಯುವುದು, ಓದುವವರೂ ನಡೆಯುವುದು. ಇದೊಂದು ರೀತಿಯ ನೂತನ ಪ್ರಯೋಗವೂ ಆಗುತ್ತದೆ. ಆದರೆ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಹಿಡಿದುಕೊಂಡವರು, ಅದರ ಸ್ಕ್ರೀನ್ ಶೇಕ್ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗೆ ಎಚ್ಚರ ವಹಿಸಬೇಕಾದರೆ, ಅಂತಹವರು ಸರಿಯಾಗಿ ಆ ಬಗ್ಗೆ ಟ್ರೈನಿಂಗ್ ತಗೋಬೇಕಾಗುತ್ತದೆ. ಆಗ ಅದಕ್ಕೆ ಟ್ರೈನಿಂಗ್ ಕೊಡುವ ಸೆಂಟರ್ಗಳು ಓಪನ್ ಆಗಬೇಕಾಗುತ್ತದೆ. ಏನಾದರಾಗಲಿ, ಈ ಮೂಲಕವಾದರೂ ಸಮಾಜದಲ್ಲಿ ಕೆಲವು ಉದ್ಯೋಗಗಳು ನಿರ್ಮಾಣವಾಗುತ್ತವೆ ಎಂದು ಧೈರ್ಯವಾಗಿ ಹೇಳಬಹುದು.

– ಡಾ.ಬಿ.ಎಂ.ಪುಟ್ಟಯ್ಯ, ಪ್ರಾಧ್ಯಾಪಕರು

Leave a Reply