ಕ್ರಿಕೆಟ್ ಮತ್ತು ಸಿನಿಮಾ ಈ ದೇಶದ ಜನರ ಮನಸ್ಸುಗಳನ್ನ ಆಕ್ರಮಿಸಿಕೊಂಡಿದೆ

11 months ago

ಈ ದೇಶದಲ್ಲಿ ಅನೇಕ ರೀತಿಯಲ್ಲಿ ಕೋಟ್ಯಾಂತರ ಜನರ ಬದುಕಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಿದ ಅಥವಾ ಕಾರ್ಯಕ್ರಮಗಳನ್ನು ಕೊಟ್ಟಂತಹ ಸಂಸ್ಥೆಗಳನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿಗಳ ಹೆಸರು ಅತಿ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಇನ್ನು ಅವರ ಮುಖ ಪರಿಚಯ ಮೊದಲೇ ಇರುವುದಿಲ್ಲ.

ಇದೇ ಸಂದರ್ಭದಲ್ಲಿ ಒಂದೆರಡು ಚಲನಚಿತ್ರಗಳಲ್ಲಿ ನಾಯಕನಾಗಿ ಅಥವಾ ನಾಯಕಿಯಾಗಿ ನಟಿಸಿದವರು ಕೆಲವೇ ತಿಂಗಳಲ್ಲಿ ಜನಪ್ರಿಯರಾಗುತ್ತಾರೆ. ಚಲನಚಿತ್ರದಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡಿದವರು ಸಹ ಜನರಿಗೆ ಪರಿಚಿತರಾಗಿರುತ್ತಾರೆ. ಇವರ ವೈಯಕ್ತಿಕ ಕಾರ್ಯಕ್ರಮಗಳು ಸಮುದಾಯದ ಕಾರ್ಯಕ್ರಮಗಳು ಎನ್ನುವ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ಹಲವಾರು ದಿನಗಳ ಕಾಲ ಇವುಗಳನ್ನು ತೋರಿಸುತ್ತಾ ಇವರುಗಳನ್ನು ಜನರ ಮನಸ್ಸಿನಲ್ಲಿ ಮತ್ತಷ್ಟು ಹತ್ತಿರಕ್ಕೆ ತಲುಪಿಸುತ್ತಾರೆ.

ಇದೇ ಪರಿಸ್ಥಿತಿ ಕ್ರಿಕೆಟ್ ಆಟಗಾರರ ವಿಚಾರದಲ್ಲೂ ನಡೆಯುತ್ತದೆ. ದೇಶಕ್ಕಾಗಿ ಆಡುವ ಆಟಗಾರರಿಗಿಂತ ತಮ್ಮ ವೈಯಕ್ತಿಕ ಲಾಭ ಮತ್ತು ಹಣಕ್ಕಾಗಿ ಆಡುವಂತಹ ಕಾರ್ಪೊರೇಟ್ ಸಂಸ್ಥೆಗಳ ಮಾಲೀಕತ್ವದ ತಂಡಗಳು ನಡೆಸುವ ಪಂದ್ಯಾವಳಿಗಳಲ್ಲಿ ಆಡುವ ಆಟಗಾರರು ಹೆಚ್ಚು ಜನಪ್ರಿಯರಾಗಿರುತ್ತಾರೆ.

ಚಲನಚಿತ್ರ ನಟ ನಟಿಯರನ್ನ ಮತ್ತು ಕ್ರಿಕೆಟ್ ಆಟಗಾರರನ್ನು ನೋಡುವ ಸಲುವಾಗಿ ಸೇರುವಷ್ಟು ಜನ ಬೇರೆ ಯಾವ ಕಾರ್ಯಕ್ರಮದಲ್ಲೂ ಸಿಗುವುದಿಲ್ಲ. ಇವರ ಮುಖ ದರ್ಶನಕ್ಕಾಗಿ ಹಗಲು ರಾತ್ರಿ ಕಾಯುತ್ತಾರೆ. ಅನೇಕ ರೀತಿಯ ಸಮಸ್ಯೆಗಳಿಗೂ ಗುರಿಯಾಗುತ್ತಾರೆ.

ದುರಂತವೆಂದರೆ ಬಹಳಷ್ಟು ಚಲನ ಚಿತ್ರ ನಟ ನಟಿಯರು ಮತ್ತು ಕ್ರಿಕೆಟ್ ಆಟಗಾರರು ಸಮಾಜಕ್ಕೆ ಮಾರಕವಾಗಿರುವ ವಸ್ತುಗಳ ರಾಯಭಾರಿಗಳಾಗಿರುತ್ತಾರೆ. ಅವುಗಳ ಪ್ರಚಾರಕ್ಕಾಗಿ ಕಂಪೆನಿಗಳಿಂದ ಹಣವನ್ನ ಪಡೆದು ಅಲ್ಲಿಯೂ ಲಾಭಕ್ಕಾಗಿ ತಮ್ಮ ಮುಖವನ್ನು ತೋರಿಸುತ್ತಾರೆ.

ಬೆರಳೆಣಿಕೆಯಷ್ಟು ನಟ ನಟಿಯರು ಸಮಾಜಮುಖಿಯಾಗಿ ಬದುಕುತ್ತಾರೆ. ಜನಪರ ಕಾಳಜಿಯಿಂದ ಪ್ರತಿಯೊಂದು ಸಂದರ್ಭದಲ್ಲೂ  ತಮ್ಮ ನಡೆ ನುಡಿಗಳ ಬಗ್ಗೆ ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತಾರೆ.

ಚಲನಚಿತ್ರ ನಟ ನಟಿಯರು ಅಥವಾ ಸಾಧಾರಣ ಕಲಾವಿದರು ನಿಧನರಾದರೆ ಕೆಲವು ಗಂಟೆಗಳ ಕಾಲ ಇಲ್ಲವೇ ಕೆಲವು ದಿನಗಳ ಕಾಲ ಅವರ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಲೇ ಇರುತ್ತದೆ. ಆದರೆ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಸಮಾಜ ಸುಧಾರಕರು, ಇವರುಗಳು ಎಷ್ಟೇ ಸಾಧನೆಯನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ್ದರೂ ಸಹ ಅವರ ವಿಚಾರಗಳು ಅವರ ಸಾವಿನ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಜನರಿಗೆ ಮುಟ್ಟಿಸುವ ಆಸಕ್ತಿಯನ್ನು ತೋರಿಸುವುದಿಲ್ಲ. ಪುಣ್ಯಕ್ಕೆ ನಮ್ಮ ಅಕ್ಷರ ಮಾಧ್ಯಮ ಇನ್ನೂ ಸಹ ತನ್ನ ಜವಾಬ್ದಾರಿಯನ್ನ ಉಳಿಸಿಕೊಂಡಿರುವುದರಿಂದ ಅವರುಗಳು ಇಂತಹ ಸಂದರ್ಭದಲ್ಲಿ ಉತ್ತಮವಾದಂತಹ ಲೇಖನಗಳ ಮೂಲಕ ಅವರ ಸಾಧನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ. ಇದೊಂದು ಸಮಾಧಾನಕರವಾದ ಸಂಗತಿ ಆದರೆ ದೃಶ್ಯ ಮಾಧ್ಯಮದಲ್ಲಿ ಇವುಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ.

ಚಲನಚಿತ್ರ ನಟ ನಟಿಯರು ಮತ್ತು ಕ್ರಿಕೆಟ್ ಆಟಗಾರರು ಸಾಧನೆಯನ್ನ ಮಾಡಿದಾಗ ಸಂಘಟಿಸುವ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಕಡೆ ಅನಾಹುತಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ ಪರೋಕ್ಷವಾಗಿ ದೃಶ್ಯ ಮಾಧ್ಯಮಗಳು. ಇವರು ಚಲನಚಿತ್ರ ಮತ್ತು ಕ್ರಿಕೆಟ್ ರಂಗವನ್ನ ಒಂದು ದೊಡ್ಡ ವಿಚಾರವನ್ನಾಗಿ ಪ್ರತಿ ದಿನವೂ ಬಿಂಬಿಸುತ್ತಾರೆ. ಜನರನ್ನ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಬರುವಂತೆ ಕೆರಳಿಸುತ್ತಾರೆ. ಪ್ರತಿ ಘಳಿಗೆಯೂ ಇದನ್ನೇ ಬಿತ್ತರಿಸಿ ಸಮೂಹ ಸನ್ನಿಯನ್ನ ಸೃಷ್ಟಿಸುತ್ತಾರೆ.

ಈ ರೀತಿಯ ಪ್ರಚಾರದಿಂದ ಜನರ ಮನಸ್ಸಿನ ಮೇಲೆ ಇದು ಹೆಚ್ಚು ಪರಿಣಾಮ ಬೀರಿ, ಅವರುಗಳು ಇಂತಹ ಕಾರ್ಯಕ್ರಮಗಳ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಲು ಪ್ರಯತ್ನಿಸುತ್ತಾರೆ. ಇವುಗಳಿಂದಾಗಿ ಅನಾಹುತಗಳು ಸಂಭವಿಸುತ್ತದೆ.

ಎಲ್ಲರೂ ಸಹ ಅನಾಹುತಗಳಾದ ಮೇಲೆ ಹಾಗೆ ಮಾಡಬೇಕಾಗಿತ್ತು, ಹೀಗೆ ಮಾಡಬೇಕಾಗಿತ್ತು ಎಂದು ಹೇಳುವವರೇ. ಆದರೆ ಯಾರು ಸಹ ಮುಂಚೆಯೇ ಇಂತಹ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯಾವ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಿರುವುದಿಲ್ಲ. ಅನಾಹುತಗಳಾದ ಮೇಲೆ ಎಲ್ಲರೂ ಸಲಹೆಗಳನ್ನು ಕೊಡುವವರೇ ಆಗಿರುತ್ತಾರೆ.

ಇನ್ನು ಮುಂದಿನ ದಿನಗಳಲ್ಲಾದರೂ ನಮ್ಮ ದೃಶ್ಯ ಮಾಧ್ಯಮದವರು ಯಾವ ವಿಚಾರಕ್ಕೆ ಎಷ್ಟು ಆದ್ಯತೆಯನ್ನು ಕೊಡಬೇಕು ಅಷ್ಟನ್ನು ಕೊಟ್ಟು ಸಮೂಹ ಸನ್ನಿ ವಾತಾವರಣವನ್ನು ಸೃಷ್ಟಿ ಮಾಡುವಂತಹ ಕೆಲಸವನ್ನು ಮಾಡುವುದನ್ನು ನಿಲ್ಲಿಸಿ. ಇದರಿಂದ ಸಾಕಷ್ಟು ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ದೊರೆಯುತ್ತದೆ.

ಕ್ರಿಕೆಟ್ ಮತ್ತು ಚಲನಚಿತ್ರ ರಂಗವೇ ಬದುಕಿನ ಪ್ರಮುಖವಾದಂತಹ ಆದ್ಯತೆಗಳಾಗಬಾರದು. ಇದನ್ನು ಮೀರಿದಂತಹ ಸಾಕಷ್ಟು ವಿಚಾರಗಳು ಚರ್ಚಿಸಲು ಮತ್ತು ವಿಮರ್ಶಿಸಲು ಇರುವ ಕಾರಣದಿಂದ ಅಂತಹ ವಿಚಾರಗಳ ಕಡೆಯಲ್ಲೂ ನಮ್ಮ ಗಮನ ಹರಿಯಲಿ.

ಗೆಲ್ಲುವುದು ಯಾರೋ, ತನ್ನ ಜೇಬುಗಳನ್ನ ತುಂಬಿಸಿಕೊಂಡು ಹೋಗುವವರು ಇನ್ನೂ ಯಾರು, ಇವರುಗಳಿಂದ ಶ್ರೀಮಂತರಾಗುವವರು ಮತ್ತಿನ್ಯಾರು, ಇವುಗಳನ್ನ ತೋರಿಸಿ ಟಿಆರ್ಪಿಗಳನ್ನು ಹೆಚ್ಚಿಸಿಕೊಳ್ಳುವವರು ಮತ್ತಿನ್ಯಾರು, ಇದರ ನಡುವೆ ಹಣವನ್ನು ಕಳೆದುಕೊಂಡು, ಸಮಯವನ್ನು ಹಾಳು ಮಾಡಿಕೊಂಡು, ಜೊತೆಗೆ ಪ್ರಾಣವನ್ನು ಕಳೆದುಕೊಳ್ಳುವವರು ಜನಸಾಮಾನ್ಯರಷ್ಟೇ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply