ವೀರಶೈವ ಪ್ರತಿಪಾದಕರಲ್ಲಿ ಸ್ವದೇಶಿಯೊಬ್ಬರು ವಿದೇಶಿಯಾಗಿ ಮಾರ್ಪಟ್ಟು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರಿಗೆ ಸ್ವಾಗತ. ಇದರೊಂದಿಗೆ ಇವರ ಲೇಖನಗಳನ್ನು ಪ್ರಕಟಿಸುತ್ತಿರುವ ಪತ್ರಿಕೆಯು ಈ ಲೇಖನಗಳ ಪ್ರತಿಕ್ರಿಯೆಗಳನ್ನು ಸಹ ಪ್ರಕಟಿಸಬೇಕಾಗಿದ್ದು ಪತ್ರಿಕಾ ಧರ್ಮ. ಹಣಕ್ಕಾಗಿ ಎಲ್ಲವನ್ನು ಮಾರಿಕೊಳ್ಳುತ್ತಿರುವ ಇಂತಹ ಪತ್ರಿಕೆಗಳಿಂದ ಪತ್ರಿಕಾ ಧರ್ಮವನ್ನು ನಿರೀಕ್ಷಿಸುವುದು ಮರುಭೂಮಿಯಲ್ಲಿ ನೀರು ಹುಡುಕಿದಂತೆಯೇ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಇನ್ನೂ ವೀರಶೈವ ಇತಿಹಾಸ ಮತ್ತು ಸಂಶೋಧನೆಯು ಮೊದಲಿನಿಂದಲೂ ‘ನೀರಿಗಿಂತ ರಕ್ತಗಟ್ಟಿ’ ಅನ್ನುವವರೆ ಮಾಡುತ್ತಿರುವ ಹಿನ್ನೆಲೆಯು ಎಲ್ಲರಿಗೂ ತಿಳಿದ ವಿಷಯವೆ. ಒಬ್ಬ ಸಂಶೋಧಕನು ತಾನು ಕಂಡುಕೊಂಡಿರುವ ಸತ್ಯವನ್ನು ಸಮರ್ಪಕವಾಗಿ ಮಂಡಿಸಬೇಕು, ಅದನ್ನು ತಜ್ಞರ ಅಥವಾ ಸಮಾಜದ ಎದುರುಗಿಡುವುದು ಸಾಮಾನ್ಯ ನಿಯಮ ಮತ್ತು ಸಾಮಾನ್ಯ ಜ್ಞಾನ. ಈ ಜ್ಞಾನ ಇಲ್ಲದಿರುವ ಹಂಜಿಮಠರಂತವರು ಅತ್ಯಂತ ಹೇಯ ಭಾಷೆಯನ್ನು ಬಳಸಿ ತನ್ನ ಸಂಸ್ಕಾರವನ್ನೇ ಬಯಲಿಗಿಡುತ್ತಿದ್ದಾರೆ. ಮೇಲಾಗಿ ಅದನ್ನು ಜಗಜ್ಜಾಹೀರಗೊಳಿಸುತ್ತಿದ್ದಾರೆ.
‘ನಿಂದಕರಿರಬೇಕು’ ಎಂದು ಬಸವಣ್ಣನವರು ತನ್ನ ನಿಂದಕರಿಗೆ ಮೊದಲ ಸ್ಥಾನ ನೀಡಿ ಅವರಿಗೆ ಸಮರ್ಪಕ ಉತ್ತರ ನೀಡಿಯಲ್ಲವೆ ಈ ವಿಶ್ವವಿಖ್ಯಾತ ಧರ್ಮ ಸ್ಥಾಪನೆ ಮಾಡಿದ್ದು? ಅಪ್ಪ ಬಸವಪ್ಪ ನೀಡಿದ ಈ ಸಂಸ್ಕಾರವೆ ಕಾಳಾಮುಖ, ನಾಥ, ಪಾಶುಪತಾಸ್ತರಾದಿಯಾಗಿ ಭಾರತವಲ್ಲದೆ ಅನ್ಯ ರಾಷ್ಟ್ರಗಳಿಂದ ಬಂದು ಸಂಸ್ಕಾರವಂತರಾಗಿ ಲಿಂಗಾಯತ ಧರ್ಮ ಸ್ವಿಕರಿಸಿದ್ದು. ಅದೆ ಸಂಸ್ಕಾರ ಲಿಂಗಾಯತರಲ್ಲಿ ಹರಿಯುವ ಕಾರಣ ನಾವು ಶರಣರು ನೀಡಿದ ಸಂಸ್ಕಾರವನ್ನು ತಪ್ಪದೆ ನಿಂದಕರಿಗೆ ಸಮರ್ಪಕ ಉತ್ತರ ನೀಡಲು ಬಯಸುತ್ತೇವೆ.
‘ಲಿಂಗಾಯತ ಚಳುವಳಿ ೨೦೧೭-೧೮‘ ಪುಸ್ತಕದಲ್ಲಿ ಬರೆದ ವಿಷಯವನ್ನೆ ಅವರು ಮತ್ತೊಮ್ಮೆ ಅಲ್ಪಸ್ವಲ್ಪ ಶಬ್ದಜೋಡಣೆಗೊಳಿಸಿ ತಮ್ಮ ಲೇಖನ ಮಂಡಿಸಿದ್ದಾರೆ. ಒಮ್ಮೆ ತಲೆಯಿಂದ ಹೊರಬಿದ್ದ ವಿಷಯವು ಸಾರ್ವಜನಿಕರ ಸೊತ್ತಂತೆ. ಲಿಂಗಾಯತ ಚಳುವಳಿ ೨೦೧೭-೧೮ ಪುಸ್ತಕವೀಗ ಸಾರ್ವಜನಿಕರ ಸ್ವತ್ತು. ಅದರಲ್ಲಿರುವ ವಿಷಯವನ್ನು ಅವರು ತಮ್ಮದೆಂದು ಬಿಂಬಿಸುವ ಹೊಸ ಹೊಣೆಗೇಡಿತನದ ಹಕ್ಕು ಅವರು ಮಾಡಿಕೊಂಡಿರಬಹುದು. ಇರಲಿ.
ಅವರ ಲೇಖನ ಓದುತ್ತಿದ್ದರೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಕೇಳಬೇಕೆಂದು ಮನಸ್ಸಾದರು ನಮ್ಮ ಓದುಗರು ‘ಅವರನ್ನು ನಿರ್ಲಕ್ಷಮಾಡಿ’ ಎಂದು ಕೇಳಿಕೊಳ್ಳುತ್ತಾರೆ. ಈ ಬಾರಿ ಕೊನೆಯದಾಗಿ ಅವರಿಗೆ ಕೆಲ ಪ್ರಶ್ನೆ ಕೇಳುವೆ. ಅವರು ಸಂಸ್ಕಾರವಂತರಾಗಿ ಉತ್ತರಿಸಿದಲ್ಲಿ ಪ್ರಶ್ನೋತ್ತರ ಮುಂದುವರಿಯುತ್ತದೆ. ಇಲ್ಲದಿದ್ದಲ್ಲಿ ಬೊರ್ಗಲ್ ಮೇಲೆ ನೀರು ಸುರಿದಂತೆ ಎಂದು ನಿರ್ಲಕ್ಷಿಸಬೇಕಾಗುತ್ತದೆ. ನಾನು ಕೂಡ ಅಮೇರಿಕೆಯಲ್ಲಿಯೇ ಇರುವೆ. ನೇರ ನೇರ ಭೆಟ್ಟಿ ಮಾಡಿ ತಜ್ಞರ ಎದುರಲ್ಲಿ ತಮ್ಮ ನಿಲುವನ್ನು ಮಂಡಿಸಲಿ. ನಾನು ಕೂಡ ನನಗೆ ತಿಳಿದ ವಿಷಯವನ್ನು ಮಂಡಿಸುವೆ. ಇದರಿಂದಾದರೂ ಸಾರ್ವಜನಿಕರು ಸತ್ಯವನ್ನು ಅರಿಯಲಿ.
ಮಾನ್ಯ ಹಂಜಿಮಠ ಸಾಹೇಬರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಕುರಿತು, ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿಯವರ ಕುರಿತು, ನಮ್ಮ ಸಹ ಹೋರಾಟಗಾರರ ಕುರಿತು ಮತ್ತು ನಾನು ಬರೆದ ‘ಲಿಂಗಾಯತ ಚಳುವಳಿ ೨೦೧೭-೧೮‘ ಕುರಿತು, ಕರ್ನಾಟಕ ಸರ್ಕಾರದ ನಡೆ ಕುರಿತು ಮತ್ತು ನಾಗಮೋಹನದಾಸ್ ವರದಿಯ ಕುರಿತು ಅವರು ಆಲೋಚನೆ ಮಾಡಿದ್ದಾರೆ. ಅವರ ಎಲ್ಲ ಪ್ರಶ್ನೆ ಮತ್ತು ಟೀಕೆಗಳಿಗೆ ‘ಲಿಂಗಾಯತ ಚಳುವಳಿ ೨೦೧೭-೧೮‘ ಪುಸ್ತಕದಲ್ಲಿ ಸಮರ್ಪಕವಾದ ಸಂಪೂರ್ಣ ಉತ್ತರವಿದೆ. ಓದುಗರ ತಕ್ಷಣದ ಕುತೂಹಲ ತಣಿಸಲು ಕೆಲ ವಿಷಯಗಳನ್ನು ಸಂಕ್ಷಿಪ್ತವಾಗಿ ಮತ್ತೊಮ್ಮೆ ಮಂಡಿಸುವೆ.
ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮ ಎಂಬ ಕೂಗು ಸುಮಾರು ದಶಕಗಳಿಂದಲೂ ಇದ್ದರೂ ಅದು ೨೦೧೭ರಲ್ಲಿ ಬಲವಾಗುತ್ತದೆ. ಆಗ ಪರ ವಿರೋಧದ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿ ಸರ್ಕಾರಕ್ಕೆ ಸಾರ್ವಜನಿಕರಿಂದ ಅಹವಾಲುಗಳು ಪ್ರತಿಕ್ರಿಯೆಗಳು ಸಲ್ಲಿಕೆಯಾಗುತ್ತವೆ. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದೂ ಅದು ವೀರಶೈವ ಮತ್ತು ಹಿಂದೂ ಧರ್ಮಕ್ಕಿಂತ ಭಿನ್ನವೆಂದೂ ಸಾರುವ ಅರ್ಜಿಗಳು ಮತ್ತು ಅದು ಹಿಂದೂ ಧರ್ಮದ ಭಾಗವೆಂದು ವೀರಶೈವವೂ ಹಿಂದೂ ಧರ್ಮದ ಭಾಗವೆಂದೂ ಪ್ರತಿಪಾದಿಸುವ ಒಟ್ಟು ೩೫ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಸಲ್ಪಡುತ್ತವೆ. ಅವುಗಳಲ್ಲಿ ಪರ ಹಾಗು ವಿರೋಧ ಅಂಶಗಳು ಇರುವ ಕಾರಣ ಅರ್ಜಿಗಳ ಇತ್ಯರ್ಥಕ್ಕಾಗಿ ಚುನಾಯಿತ ಸರ್ಕಾರವು ಸತ್ಯಾಸತ್ಯತೆಯನ್ನು ಕಾಣಲು ತಜ್ಞರ ಸಮಿತಿಯನ್ನು ರಚಿಸುತ್ತದೆ. (೧. ಡಿಸೆಂಬರ್ ೧೫, ೨೦೧೭ರ ಸರ್ಕಾರಿ ಆದೇಶ. ವಿಷಯ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸುವ ಕುರಿತು ಸ್ವೀಕೃತವಾಗಿರುವ ಮನವಿಗಳ ಬಗ್ಗೆ. ೨.ಅಂದೆ ತಜ್ಞರ ಸಮಿತಿ ರಚನೆಯ ಅಧಿಸೂಚನೆ. (Ref: MWD 645 MDS 2017 dt. 15.12.2017)
ಸರ್ಕಾರದ ಆದೇಶದಂತೆ ರಚನೆಯಾದ ತಜ್ಞರ ಸಮಿತಿಯು ಇಂತಹ ಒಂದು ಗಹನವಾದ ವಿಷಯಕ್ಕೆ ಸಾರ್ವಜನಿಕರಿಂದ ಇನ್ನಷ್ಟು ಪ್ರತಿಕ್ರಿಯೆ ಬಯಸಿ ಇಂಗ್ಲಿಷ್ ಹಾಗೂ ಕನ್ನಡದ ಪತ್ರಿಕೆಗಳಿಗೆ ಜಾಹೀರಾತನ್ನು ನೀಡಿ ಹದಿನೈದು ದಿನಗಳ ಕಾಲಾವಕಾಶ ನೀಡುತ್ತದೆ. ( ಪು.ಸಂ.೩೦೨ ಮತ್ತು ೩೦೩). ಈ ಅವಧಿಯಲ್ಲಿ ಮತ್ತಿಷ್ಟು ಅರ್ಜಿಗಳು ಅಲ್ಪ ಸಂಖ್ಯಾತ ಆಯೋಗಕ್ಕೆ ಸಲ್ಲಿಕೆಯಾಗುತ್ತವೆ. ಈ ಹಿಂದೆ ಸಲ್ಲಿಕೆಯಾದ ಅರ್ಜಿಗಳು ಮತ್ತು ಜಾಹಿರಾತು ಪ್ರಕಟವಾದ ನಂತರ ಬಂದ ಅರ್ಜಿಗಳೆಲ್ಲವೂ ಸೇರಿ ಸುಮಾರು ೬೮ ಅರ್ಜಿಗಳಲ್ಲಿ ೨೨ ಅರ್ಜಿಗಳು ವೀರಶೈವರ ಪರವಾಗಿ ಬಾಕಿ ಅರ್ಜಿಗಳು ಲಿಂಗಾಯತ ಧರ್ಮದ ಪರವಾಗಿ ಬಂದಿರುತ್ತವೆ. ಇದಲ್ಲದೆ ನ್ಯಾಯಮೂರ್ತಿಗಳು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುವ ಉದ್ದೇಶದಿಂದ ಮೌಖಿಕ ಅಹವಾಲು ಸಲ್ಲಿಸಲು ಸಹ ಎರಡು ದಿನಗಳ ಕಾಲಾವಕಾಶ ನೀಡಿ ಎಲ್ಲರ ಅಹವಾಲನ್ನು ಕೇಳುತ್ತಾರೆ.
ಇಂದು ಪ್ರಶ್ನೆ ಕೇಳುವ ವೀರಶೈವ ಪ್ರತಿಪಾದಕ ವಿದ್ವಾಂಸರಾದ ತಾವು ಆಗ ಏಕೆ ದಾಖಲೆಗಳೊಂದಿಗೆ ವಾದ ಮಂಡಿಸಲಿಲ್ಲ?
ಅಲ್ಲದೆ ತಜ್ಞರ ಸಮಿತಿಯೇ ಕಾನೂನು ಬಾಹಿರ ಮತ್ತು ಆ ಸಮಿತಿಗೆ ತಡೆ ಆಜ್ಞೆ ನೀಡಬೇಕೆಂದು ವೀರಶೈವ ಪ್ರತಿಪಾದಕ ಪಂಚಪೀಠಾಧೀಶ್ವರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪಿ.ಐ.ಎಲ್. ದಾಖಲಿಸಿ ಸಮರ್ಥ ವಕೀಲರನ್ನು ನೇಮಿಸಿದರೂ ಕರ್ನಾಟಕ ಉಚ್ಛ ನ್ಯಾಯಾಲಯ ತಮ್ಮ ಮನವಿಯನ್ನೇಕೆ ಪರಿಗಣಿಸಲಿಲ್ಲ? ಅಲ್ಲಿಯೂ ತಮ್ಮವರು ಸೋಲು ಯಾಕೆ ಹೇಗೆ ಕಂಡರು? (ಪು.ಸಂ.೩೦೦ & ೩೦೧)
ಒಂದು ವೇಳೆ ನೀವು ಅರ್ಜಿ ಸಲ್ಲಿಸಲು ವಿಫಲವಾದಲ್ಲಿ ನಿಮ್ಮಂತಹವರಿಗಾಗಿಯೇ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ರವರು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿರಲಿಲ್ಲವೆ? ಮೌಖಿಕ ಅಹವಾಲು ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ನೀಡಿದಾಗ ವಿದ್ವಾಂಸರಾದ ತಾವಾಗಲಿ ಅಥವಾ ನಿಮ್ಮ ಸಹೋದರರಾಗಲಿ (ವೀರಶೈವ ಪ್ರತಿಪಾದಕ) ಏಕೆ ದಾಖಲೆಗಳೊಂದಿಗೆ ವಾದ ಮಂಡಿಸಲಿಲ್ಲ?
ತಮ್ಮ ರಕ್ತ ಸಂಬಂಧಿಗಳೂ ಮತ್ತು ವೀರಶೈವ ಧರ್ಮ ಪ್ರತಿಪಾದಕರಾದ ಪಂಚಪೀಠಾಧೀಶ್ವರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಇಂದಿನವರೆಗೂ ಹೋರಾಡುತ್ತಿರುವುದು ತಮ್ಮ ಅಸಮರ್ಥತೆಯ ಪ್ರತೀಕ ಅಲ್ಲವೆ?
ಮೇಲಾಗಿ ಸಮರ್ಥ ವಕೀಲರೆಂದು ಹೆಸರುವಾಸಿಯಾದ ಶ್ರೀ ಗುರುಮಠರು ಮತ್ತು ಶ್ರೀ ಅಶೋಕ ಹಾರ್ನಳ್ಳಿಯವರು ಈ ಹಿಂದೆ ವಿಫಲರಾಗಿದ್ದು ಯಾವ ಕಾರಣಕ್ಕಾಗಿ? ಸಮರ್ಥ ವಾದದೊಂದಿಗೆ ಸಮರ್ಥ ದಾಖಲೆಗಳಿದ್ದರೆ ತಾನೆ ನ್ಯಾಯಾಲಗಳು ಪ್ರತಿವಾದಿಗಳ ಪರವಾಗಿ ನಿರ್ಣಯ ನೀಡಲು ಸಾಧ್ಯ? ಆಗ ಪ್ರಖಾಂಡ ಪಂಡಿತರಾದ ವೀರಶೈವ ಸಂಶೋಧಕರು ಎಲ್ಲಿ ಹೋಗಿದ್ದರು? (ಲಿಂಗಾಯತ ಚಳುವಳಿ ೨೦೧೭-೧೮ ಪು. ಸಂ. ೩೦೦ & ೩೦೧).
ನಿಮ್ಮ ಸಾಹಿತ್ಯದತ್ತ ತಿರುಗಿದರೆ ವೀರಶೈವ ಸಾಹಿತ್ಯವು ರಚನೆಯಾಗಿದ್ದೆ ಹನ್ನೆರಡನೆಯ ಶತಮಾನದ ನಂತರದ್ದೆಂದು ಇತಿಹಾಸಕಾರರು ಇನ್ನೆಷ್ಟು ಬಾರಿ ಪ್ರತಿಪಾದಿಸಬೇಕು? ನಿಮ್ಮ ಮೂಲ ಗ್ರಂಥ ಸಿದ್ಧಾಂತ ಶಿಖಾಮಣಿಯೇ ವೀರಶೈವರ ಮೂಲ ಗ್ರಂಥವಲ್ಲವೆಂದು ಅನೇಕ ವಿದ್ವಾಂಸರು ಹೇಳಿಲ್ಲವೆ?(ಅದೆ ಪುಸ್ತಕ ಪು.ಸಂ. ೫೧ & ೫೨) ಅಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿ ವೀರಶೈವ ಸಾಹಿತ್ಯವನ್ನು ಹುಟ್ಟು ಹಾಕಿ ಬ್ರಾಹ್ಮಣರ ವಿರುದ್ಧ ವೀರಶೈವರು ಲಿಂಗೀ ಬ್ರಾಹ್ಮಣರೆಂದು ಸಾರಲು ಮತ್ತು ದೇವಸ್ಥಾನದ ಪೂಜಾರಿಕೆಯನ್ನು ಸಂಪಾದಿಸಲು ಖೊಟ್ಟಿ ಇತಿಹಾಸ ರಚಿಸಲಿಲ್ಲವೆ? (ಅದೆ ಪುಸ್ತಕ ಪು. ಸಂ. ೩೬೫ ರಿಂದ ೩೮೬) ಹರಪ್ಪಾ ಮೊಹೆಂಜೋದಾರದಲ್ಲಿ ಲಿಂಗ ರೂಪದ ವಸ್ತು ಸಿಕ್ಕಲ್ಲಿ ಅದು ವೀರಶೈವರದು ಎಂದು ಯಾವ ಆಧಾರ ಮತ್ತು ಯಾವ ಸಂಶೋಧನೆಯಲ್ಲಿ ಹೇಳಿದೆ. ಅದಕ್ಕೇನಾದರು ಪ್ರತಿಷ್ಠಿತ ಇತಿಹಾಸಕಾರರಿಂದಾಗಲಿ ಅಥವಾ ಶ್ರೇಷ್ಠ ವಿಶ್ವವಿದ್ಯಾಲಯದಿಂದಾಗಲಿ ಮನ್ನಣೆ ಸಿಕ್ಕಿದೆಯೇ?
ಕಾಳಾಮುಖರು, ಪಾಶುಪತಾಸ್ತರು ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿ ಇದ್ದರೆಂದೂ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ತಮ್ಮ ವಾದವನ್ನು ಒಪ್ಪಿಕೊಂಡರೂ ಅವರೊಂದಿಗೆ ನಾಥ ಪಂಥೀಯರೂ, ಕಾಶ್ಮೀರಿ ಶೈವ ಬ್ರಾಹ್ಮಣರು ಸಹ ಇದ್ದರಲ್ಲವೆ? ಕಾಳಾಮುಖರ ಕರಾಳ ಆಚರಣೆಗಳನ್ನು ತೊರೆದಲ್ಲವೆ ಇವರೆಲ್ಲ ಬಸವಣ್ಣನವರ ಅನುಯಾಯಿಗಳಾಗಿ ತಮ್ಮ ಪೂರ್ವಾಪರಗಳನ್ನು ತೊರೆದು ಲಿಂಗಾಯತರಾಗಿದ್ದನ್ನು ಹೇಗೆ? ಏಕೆ ಮರೆತಿರಿ?
ಲಿಂಗಶಿಲೆಯಲ್ಲಿ ಉದ್ಭವವಾದವರು ತಮ್ಮ ಪೂರ್ವಜರಾದರೆ ತಮ್ಮ ಆಗಮನವೂ ಶಿಲೆಯಲ್ಲಿಯೇ ಆಗಬೇಕಲ್ಲವೆ? ಸ್ವಾಮೀಜಿ (ಹಂಜಿಮಠ ಸಾಹೇಬರೆ) ತಾವು ಕೂಡ ನಮ್ಮ ಹಾಗೆ ನರಮಾನವರಲ್ಲವೆ ಹಂಜಿಮಠ ಸಾಹೇಬರೆ? ( ವೀರಶೈವರ ವಿವರಗಳಿಗಾಗಿ ಲಿಂಗಾಯತ ಚಳುವಳಿ ೨೦೧೭-೧೮ ನೋಡಿ).
ಹಂಜಿಮಠ ಸಾಹೇಬರೆ ವ್ಯರ್ಥ ಆಲಾಪ ಬಿಡ್ರೀ, ಮೌಡ್ಯವನ್ನು ಅಮೇರಿಕೆಯಲ್ಲಿ ಬಿತ್ತುವುದನ್ನು ಕಣ್ಣಾರೆ ಕಂಡ ಅಲ್ಲಿಯ ಜನ ಅಪಹಾಸ್ಯ ಮಾಡುತ್ತಿದ್ದಾರೆ. ಜಗತ್ತು AI ಕಡೆ ಸಾಗುತ್ತಿರುವಾಗ ನೀವಿನ್ನೂ ಕಲ್ಲಲ್ಲಿ ಹುಟ್ಟಿದ್ದೇವೆಂದು ಸಾಬೀತು ಪಡಿಸುತ್ತ, ದೇವಸ್ಥಾನಗಳಲ್ಲಿ ಗಂಟೆ ಹೊಡೆಯುತ್ತ, ದೇವರು ಹಾಗೂ ಭಕ್ತನ ಮಧ್ಯದಲ್ಲಿ ದಲ್ಲಾಳಿಯಾಗುತ್ತ, ಮೌಢ್ಯವನ್ನು ಬಿತ್ತುತ್ತ, ವಾಸ್ತು, ಗೃಹಶಾಂತಿಯನ್ನು ಮಾಡುತ್ತ, ವೇದ ಮಂತ್ರಗಳನ್ನು ಪಠಿಸುತ್ತ ಜನರನ್ನು ಮುರ್ಖರನ್ನಾಗಿ ಮಾಡುವ ಕಾಯಕ ಬಿಟ್ಟು, ಜಾತಿ ಸಮಾನತೆಯನ್ನು ವರ್ಗ ವರ್ಣ ಲಿಂಗ ಭೇದ ಬೇಡವೆಂದು ಸಾರಿದ ಇವನಾರವ ಇವನಾರವ ಎನ್ನದೆ ಎಲ್ಲರೂ ನಮ್ಮವರೆನ್ನುವ ಬಸವಣ್ಣನನ್ನು ವರಿಸೋಣ. ಜಗತ್ತಿನಲ್ಲಿ ಇರುವವರೆಲ್ಲರೂ ಸಹೋದರರೆಂದು ಶಾಂತಿ ಧರ್ಮದಿಂದ ಬಾಳುವೆ ಮಾಡೋಣ.
ತಮ್ಮ ಮನಸ್ಸಿಗೆ ಕಿಂಚತ್ತು ನೋವಾದಲ್ಲಿ ಕ್ಷಮೆ ಕೆಳುತ್ತ ಲೇಖನ ಮುಗಿಸುವೆ.
ಶರಣು ಶರಣಾರ್ಥಿಗಳು.
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ





One Response
ಮಾನ್ಯ ಜಿ ಬಿ ಪಾಟೀಲರ ಉತ್ತರ ಸಮರ್ಪಕ