ಪ್ರತಿಯೊಂದಕ್ಕೂ ಹೆಣ್ಣನ್ನೇ ದೂಷಿಸುವ ಮಾನಸಿಕ ಸ್ಥಿತಿ, ದೃಷ್ಟಿಕೋನ ಬದಲಾಗಬೇಕು

1 week ago

ಹೆಣ್ಣುಮಕ್ಕಳನ್ನು ವೈಭವೀಕರಿಸುವ, ಪೂಜ್ಯ ಮನೋಭಾವನೆಯಿಂದ ಕಾಣಬೇಕು ಎನ್ನುವ ಮನುಸ್ಮೃತಿಯಲ್ಲಿ ಉಲ್ಲೇಖಗೊಂಡಿರುವ ಕೆಲವು ಶ್ಲೋಕದ ಸಾಲುಗಳು ಹೇಳುವ ಅರ್ಥ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ತಿಳಿದಿರುತ್ತದೆ. ಇದರ ಬಗ್ಗೆ ಪ್ರತ್ಯೇಕವಾಗಿ ಬರೆಯುವ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಪ್ರತೀ ಮಹಿಳಾ ದಿನಾಚರಣೆಯಂದು ಎಲ್ಲರೂ ಅಂತಹ ಸಾಲುಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರು ಗೌರವ, ಘನತೆಯಿಂದ ಬದುಕುವ ವಾತಾವರಣ ನಿರ್ಮಿಸುವಂತೆ ಕುಟುಂಬ, ಸಮಾಜ, ಜಿಲ್ಲೆ, ರಾಜ್ಯ, ದೇಶ ಹಾಗೂ ಪ್ರಪಂಚ ನಡೆದುಕೊಳ್ಳುತ್ತಿದೆಯೇ? ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಬರಹ, ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ನೋಡಿದರೆ ಮತ್ತು ನಮ್ಮ ದೇಶದಲ್ಲಿ ಘಟಿಸುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಅತ್ಯುನ್ನತ ಹಾಗೂ ಆಧುನಿಕತೆಯ ಉಚ್ಛ ಶ್ರೇಣಿಯಲ್ಲಿ ಇಡೀ ಪ್ರಪಂಚ ನಾಗಾಲೋಟದಿಂದ ಓಡುತ್ತಿದ್ದರೂ ಈ ಪ್ರಪಂಚ ಹೆಣ್ಣನ್ನು ನಡೆಸಿಕೊಳ್ಳುತ್ತಿರುವ ರೀತಿಯು ಇನ್ನೂ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೇ ಉಳಿದಿದೆ.

ತಾಂತ್ರಿಕತೆ, ಆಧುನಿಕತೆ, ವಿದ್ಯಾರ್ಹತೆ, ಸಂಸ್ಕಾರ ಎಲ್ಲದರಲ್ಲೂ ಮುಂಚೂಣಿಯಲ್ಲಿರುವ ಜನರೇ ಇದುವರೆಗೂ ಸ್ತ್ರೀಕುಲವನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ಮಾತ್ರ ಕಲಿತಿಲ್ಲ. ಮುಂದಿನ ಪೀಳಿಗೆಗೆ ನಾವು ಕಲಿಸಬೇಕು ಎನ್ನುವ ಮುನ್ನೆಚ್ಚರಿಕೆ ಕೂಡಾ ಎಷ್ಟೋ ಜನರಿಗೆ ಇದ್ದಂತೆಯೇ ಇಲ್ಲ. ಅಪ್ಪ ನೆಟ್ಟ ಆಲದ ಮರಕ್ಕೆ ಜೋತುಬಿದ್ದಂತೆ ಪೂರ್ವಾಗ್ರಹಪೀಡಿತ ಮೂಢನಂಬಿಕೆಯನ್ನೊಳಗೊಂಡ ಸಂಪ್ರದಾಯಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುವುದೇ ತಮ್ಮ ಕರ್ತವ್ಯ ಎಂಬಂತೆ ಬಹುತೇಕರು ತಿಳಿದಿದ್ದಾರೆ. ಈಗಿನ ಕಾಲದಲ್ಲಿ ಅನಕ್ಷರಸ್ಥರು, ಅವಿದ್ಯಾವಂತರು ತೀರಾ ವಿರಳ. ವಿದ್ಯೆಯೊಂದನ್ನೇ ಕಲಿತರೆ ಸಾಲದು. ಅಕ್ಷರಸ್ಥ ಹಾಗೂ ವಿದ್ಯಾವಂತ ಇವೆರಡರ ನಡುವೆ ವ್ಯತ್ಯಾಸವಿದೆ. ಅಕ್ಷರವು ಹೇಗೆ ಬರೆಯಬೇಕು ಮತ್ತು ಓದಬೇಕು ಎನ್ನುವ ಅರಿವನ್ನು ಕೊಟ್ಟರೆ, ವಿದ್ಯೆಯು ಓದಿ ಬರೆದು ಜ್ಞಾನವನ್ನು ಆರ್ಜನೆ ಮಾಡಿಕೊಳ್ಳುವ, ಹಂಚಿಕೊಳ್ಳುವ, ಪ್ರಪಂಚ ಜ್ಞಾನವನ್ನು ತಿಳಿದುಕೊಳ್ಳುವ ತಿಳಿವಳಿಕೆ ಬೆಳೆಸಿಕೊಳ್ಳಲು ಅವಕಾಶವನ್ನು ಕೊಡುತ್ತದೆ. ವಿದ್ಯೆಯ ಜೊತೆಗೆ ಉತ್ತಮ ನಡೆ, ಗುಣ ಮತ್ತು ಸಂಸ್ಕಾರವನ್ನು ಕೂಡಾ ಕಲಿಯಬೇಕಿದೆ. ಕಲಿತದ್ದನ್ನು ರೂಢಿಸಿಕೊಳ್ಳಬೇಕಿದೆ. ಜೊತೆಗೆ ಮಾನವ ಸಹಜವಾದ ಮನುಷ್ಯತ್ವ ಎನ್ನುವ  ಗುಣವನ್ನೂ ಮೈಗೂಡಿಸಿಕೊಳ್ಳಬೇಕಿದೆ. ಕಲಿಕೆಯ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮಾನವತೆ ಎನ್ನುವ ಅಂಶ ಈಗೀಗ ಮನುಷ್ಯರಲ್ಲಿ ಬಹಳ ವಿರಳವಾಗುತ್ತಾ ಬರುತ್ತಿದೆ.

ಹೆಣ್ಣುಮಕ್ಕಳನ್ನು ಬೆಳೆಸುವಾಗ ಚಿಕ್ಕಂದಿನಿಂದಲೂ ಗಂಡುಜೀವಕ್ಕೆ ವಿಧೇಯಳಾಗಿರು ಎನ್ನುವುದನ್ನು ಕಲಿಸಲಾಗುತ್ತದೆಯೇ ವಿನಹಾ ಗಂಡು ಮಕ್ಕಳಿಗೆ ನೀನು ಹೆಣ್ಣಿಗೆ ಗೌರವ ಕೊಡು ನೀನೂ ಕೂಡಾ ಆಕೆಗೆ ವಿಧೇಯನಾಗಿರು ಎನ್ನುವ ಅರಿವನ್ನು ತುಂಬುವುದಿಲ್ಲ. ಅವಳೂ ಕೂಡಾ ನಿನ್ನಂತೆಯೇ ಈ ಲೋಕದಲ್ಲಿ ಸೃಷ್ಟಿಸಲ್ಪಟ್ಟವಳು. ಇಬ್ಬರೂ ಸಮಾನರು. ಇಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ ಇರಬೇಕು ಎನ್ನುವುದನ್ನು ಏಕೆ ಕಲಿಸುವುದಿಲ್ಲ? ಹೆಣ್ಣಿಲ್ಲದೆ ಗಂಡಿಲ್ಲ, ಗಂಡಿಲ್ಲದೆ ಹೆಣ್ಣಿಲ್ಲ. ಇಬ್ಬರನ್ನೂ ಸಮಾನವಾಗಿ ಬೆಳೆಸುವ ಅಭ್ಯಾಸ ಎಷ್ಟೋ ಕುಟುಂಬಗಳಲ್ಲಿ ಈಗಲೂ ಇಲ್ಲ. ಸಣ್ಣ ವಯಸ್ಸಿನಿಂದಲೂ ಗಂಡಿನ ಸೇವೆ ಮಾಡಿಕೊಂಡು ಬದುಕಬೇಕು ಎನ್ನುವುದನ್ನು ಹೆಣ್ಣು ಮಕ್ಕಳಿಗೆ ಕಲಿಸಲಾಗುತ್ತದೆ. ಆದರೆ ಗಂಡು ಮಕ್ಕಳನ್ನು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಲಿಸಿ, ಸ್ವಾಲಂಬಿಗಳನ್ನಾಗಿ ಮಾಡುವುದಿಲ್ಲವೇಕೆ? ಏಕೆ ಸದಾ ಪರಾವಲಂಬಿಗಳಾಗಿ ಬೆಳೆಸಲಾಗುತ್ತದೆ? ಗಂಡುಮಕ್ಕಳು ಅಳಬಾರದು. ಅವರು ದುರ್ಬಲರಲ್ಲ ಎನ್ನುವ ಭಾವವನ್ನು ಬಲವಂತವಾಗಿ ಹೇರಲ್ಪಡುತ್ತದೆ, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಹಂಚಿಕೊಳ್ಳುವ ಸಾಮರ್ಥ್ಯ ಇಲ್ಲದಂತೆ ಬೆಳೆಸಿಬಿಡುತ್ತೇವೆ. ಸೂಕ್ಷ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಅವಕಾಶವನ್ನು ನಾವು ಕಸಿದುಕೊಳ್ಳುತ್ತಾ ಭಾವಹೀನರನ್ನಾಗಿ ಬೆಳೆಸುವತ್ತಲೇ ಗಮನ ಹರಿಸುತ್ತೇವೆ.

ಒಮ್ಮೆ ನಾವೇ ನಮ್ಮ ಕೈಯಾರ ಕಳೆದುಕೊಂಡಿದ್ದ  ಸ್ವಾತಂತ್ರ್ಯವನ್ನು ಆಂಗ್ಲರನ್ನು ಹೊರಗೆ ಅಟ್ಟುವ ಮೂಲಕ ಪುನಃ ನಮ್ಮ ದೇಶವನ್ನೇನೋ ಸ್ವತಂತ್ರ ಮಾಡಿಕೊಂಡೆವು. ಆದರೆ ನಮ್ಮಿಂದಲೇ ನಮಗೆ ಸ್ವಾತಂತ್ರ್ಯವಿಲ್ಲ. ಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಜೀವಿಯೂ ಒಂದಕ್ಕೊಂದು ಪೂರಕವಾಗುವಂತೆ ಈ ಸೃಷ್ಟಿಯು ನಿರ್ಮಿಸಿದೆ. ಆದರೆ ಅದನ್ನು ಅರ್ಥಮಾಡಿಕೊಂಡು ಅದರ ಹಾಗೆ ನಡೆದುಕೊಳ್ಳದೇ ತಮ್ಮೊಂದಿಗೆ ಸಹಾಯಕವಾಗಿ ಇರುವ ಇತರ ಜೀವಿಗಳ ಮೇಲೆ ಹಕ್ಕು ಸ್ಥಾಪಿಸಿಕೊಳ್ಳಲು ನಾವು ಹವಣಿಸುತ್ತಾ ನಾವೇ ಶ್ರೇಷ್ಠ ಎನ್ನುವಂತೆ ನಡೆದುಕೊಳ್ಳುತ್ತಿದ್ದೇವೆ. ಈ ಪ್ರಪಂಚದಲ್ಲಿ ಎಲ್ಲವೂ ಶ್ರೇಷ್ಠವೇ, ಇಲ್ಲಿ ಕನಿಷ್ಠ ಎನ್ನುವುದು ಯಾವುದೂ ಇಲ್ಲ. ಸಣ್ಣ ಅಣುವಿನಂತೆ ಇರುವ ಜೀವಿಗಳಿಂದ ಹಿಡಿದು ಬೃಹದಾಕಾರದ ಜೀವಿಗಳೂ ಸೃಷ್ಟಿಯ ದೃಷ್ಟಿಯಲ್ಲಿ ಒಂದೇ. ಎಲ್ಲವೂ ಪರಸ್ಪರ ಒಂದನ್ನೊಂದು ಅವಲಂಬಿತವಾಗಿವೆ. ಪರಸ್ಪರ ಸಂಬಂಧವನ್ನೂ ಹೊಂದಿವೆ. ಮಾನವನಂತೆ ಇತರೇ ಯಾವುದೇ ಜೀವಿಗಳು ಮತ್ತೊಂದು ಜೀವಿಯ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

ಈ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಎನ್ನುವ ವರ್ಗವು ಎಲ್ಲಾ ಜೀವಿಗಳಲ್ಲೂ ಇವೆ. ಅವು ಒಂದಕ್ಕೊಂದು ಪೂರಕವಾಗಿ ಬದುಕುತ್ತಿವೆ. ಪರಸ್ಪರ ಸಂವಹನಕ್ಕೆ ಮನುಷ್ಯನಂತೆ ಮಾತಿನ, ಭಾಷೆಗಳ ಅಗತ್ಯ ಅವುಗಳಿಗಿಲ್ಲವಾದರೂ ಅವೂ ಕೂಡಾ ತಮ್ಮದೇ ಆದ ರೀತಿಯಲ್ಲಿ ಸಂವಹನ ನಡೆಸುತ್ತವೆ. ಒಂದನ್ನೊಂದು ಅರ್ಥ ಮಾಡಿಕೊಳ್ಳುತ್ತವೆ. ಒಪ್ಪಿಗೆ ಮತ್ತು ನಿರಾಕರಣೆ ಎಂದರೆ ಏನೆಂದು ಅವುಗಳಿಗೆ ಚೆನ್ನಾಗಿ ತಿಳಿದಿದೆ. ಮಾಂಸಾಹಾರಿ ಪ್ರಾಣಿಗಳು ಆಹಾರ ಸರಪಳಿಗೆ ಅನುಗುಣವಾಗಿ ತಮ್ಮ ಆಹಾರದ ಅವಶ್ಯಕತೆಗೆ ಪೂರಕವಾಗಿ ಮಾತ್ರ ಇತರೇ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತವೆ. ಸಸ್ಯಾಹಾರಿ ಪ್ರಾಣಿಗಳು ಕೇವಲ ಸಸ್ಯಗಳನ್ನು ಮಾತ್ರ ತಿಂದು  ಬದುಕುತ್ತವೆ. ಇವುಗಳು ಎಂದಿಗೂ ಒಂದರ ಜೀವನ ಶೈಲಿಯನ್ನು ಮತ್ತೊಂದು ಬದಲಿಸಲು ಹವಣಿಸುವುದಿಲ್ಲ.

ಈ ಸೃಷ್ಟಿಯ ಪ್ರತಿಯೊಂದು ಜೀವಿಗಳಲ್ಲೂ ಹಸಿವು, ನೀರಡಿಕೆ, ನಿದ್ರೆ, ಲೈಂಗಿಕ ಬಯಕೆ ಎಲ್ಲವೂ ಇವೆ. ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ವಾಂಛೆಯನ್ನು ಸ್ವಯಂ ನಿಯಂತ್ರಿಸಿಕೊಂಡು ಬದುಕುವ ಸಾಮರ್ಥ್ಯವನ್ನು ಕೂಡಾ ರೂಢಿಸಿಕೊಂಡಿವೆ. ಲೈಂಗಿಕತೆಯ ವಿಚಾರದಲ್ಲಿ ಪ್ರಾಣಿಗಳು ನಿಜಕ್ಕೂ ಮನುಷ್ಯನಿಗಿಂತ ಶ್ರೇಷ್ಠ. ಅವು ಸಂಯೋಗದ ಋತುವಿನಲ್ಲಿ ಮಾತ್ರ ಸಂಗಾತಿಗಳನ್ನು ಹುಡುಕಿ ಅವುಗಳೊಂದಿಗೆ ರಮಿಸುತ್ತವೆ. ತಮ್ಮ ವಂಶಾಭಿವೃದ್ಧಿಗಾಗಿ ಅವುಗಳು ಈ ಕ್ರಮವನ್ನು ಅನುಸರಿಸುತ್ತವೆ. ಆದರೆ ಮನುಷ್ಯನ ಲೈಂಗಿಕ ವಾಂಛೆಗೆ ಯಾವುದೇ ಮಿತಿಯಿಲ್ಲ. ತನ್ನ ಅರಿಷಡ್ವರ್ಗಗಳ ಮೇಲೆ ನಿಯಂತ್ರಣವನ್ನು  ಸಾಧಿಸಲು ಮನುಷ್ಯನಿಗೆ ಏಕೆ ಸಾಧ್ಯವಿಲ್ಲ? ಮನುಷ್ಯ ಬುದ್ಧಿಜೀವಿ. ವಿವೇಚನಾ ಶಕ್ತಿಯನ್ನೂ ಮನುಷ್ಯ ಜೀವಿಗೆ ಸೃಷ್ಟಿ ವರವಾಗಿ ಕೊಟ್ಟಿದೆ. ಆದರೆ ತನ್ನ ಸಹಜೀವಿಯಾದ ಹೆಣ್ಣಿನೊಂದಿಗೆ ವರ್ತಿಸುವ ರೀತಿ ನಿಜಕ್ಕೂ ಶೋಚನೀಯ. ಮನುಷ್ಯ ಸಂಘಜೀವಿ. ಒಂಟಿಯಾಗಿ ಬದುಕಲಾರ. ಪ್ರಕೃತಿಯಲ್ಲಿ ಸೃಷ್ಟಿಯ ಮೂಲವೇ ಹೆಣ್ಣು ಮತ್ತು ಗಂಡು. ತನ್ನ ವಂಶವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಗಂಡು ಹೆಣ್ಣಿನ ಯೋಗದಾನವೂ ಅತ್ಯಗತ್ಯ.

ತಾನು ಹುಟ್ಟಿ ಬೆಳೆದ ಮನೆಯಿಂದ ಹಿಡಿದು ತಾನು ಸುರಕ್ಷಿತವಾಗಿ ಇರಬೇಕಾದ ಸಮಾಜದಲ್ಲಿ ಹೆಣ್ಣು ಸುರಕ್ಷಿತಳಲ್ಲ. ಪುಟ್ಟ ಹೆಣ್ಣು ಮಗುವಿನಿಂದ ಹಿಡಿದು ವಯೋವೃದ್ಧ ಮಹಿಳೆಯರೂ ಕೂಡಾ ಸುರಕ್ಷಿತರಲ್ಲ. ಅಪ್ಪ, ಅಣ್ಣ, ತಮ್ಮ, ಚಿಕ್ಕಪ್ಪ, ಮಾವ, ತಾತ, ಅಜ್ಜ, ಭಾವ ಮೈದುನ, ಕುಟುಂಬದ ಆಪ್ತರು ಇತ್ಯಾದಿ… ತನ್ನ ಪರಿಚಿತ ಮತ್ತು ಸ್ವಂತ ಕುಟುಂಬದ ಸದಸ್ಯರಿಂದಲೇ ದೌರ್ಜನ್ಯ ನಡೆಯುತ್ತಿರುವಾಗ ಹೆಣ್ಣು ಎಲ್ಲಿ ತಾನೇ ಸುರಕ್ಷಿತಳಾಗಿರಲು ಸಾಧ್ಯ? ಇನ್ನು ನೆರೆಹೊರೆಯ ಬಗ್ಗೆ ಹೇಳುವುದೇ ಬೇಡ. ಈಗಿನ ಜಾಗತಿಕ ಜಗತ್ತಿನಲ್ಲಿ ಗಂಡಿನ ಜೊತೆ ಹೆಣ್ಣು ಕೂಡಾ ದುಡಿಯುವುದು ಅನಿವಾರ್ಯ. ಕಾಲ ಬದಲಾಗಿದೆ. ಎಷ್ಟೋ ಸಂಗತಿಗಳು ಬದಲಾಗಿವೆ ಈ ಆಧುನಿಕ ಯುಗದಲ್ಲಿ. ಏನೆಲ್ಲಾ ಆವಿಷ್ಕಾರಗಳು ಆಗಿಲ್ಲ ಈ ಜಗತ್ತಿನಲ್ಲಿ? ಆದರೂ ಮನುಷ್ಯರಲ್ಲಿ ಲೈಂಗಿಕತೆಯ ಬಗೆಗಿನ ಮಾನಸಿಕ ಸ್ಥಿತಿ, ದೃಷ್ಟಿಕೋನ ಏಕೆ ಬದಲಾಗಿಲ್ಲ? ಹೆಣ್ಣು ಒಂದು ಭೋಗದ ವಸ್ತು. ಹೆಣ್ಣು ಎಂದರೆ ಎಲ್ಲರ ಅಧಿಕಾರ. ಅವಳೊಬ್ಬ ಸೇವಕಿ, ಅವಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವ ಮನೋಭಾವ. ಇವೆಲ್ಲವೂ ಏಕೆ ಬದಲಾಗುತ್ತಿಲ್ಲ? ಅವಳು ಅನ್ಯರ ಮನೆಯ ಹೆಣ್ಣುಮಗಳಾದರೂ ಕೂಡಾ… ಪ್ರತಿಯೊಂದು ಮನೆಯಲ್ಲೂ ಒಂದಲ್ಲಾ ಒಂದು ರೂಪದಲ್ಲಿ ಹೆಣ್ಣು ಇರುವಳು ತಾನೇ? ಮತ್ತೇಕೆ ಹೆಣ್ಣನ್ನು ಹೀನ ದೃಷ್ಟಿಯಿಂದ ನೋಡುವ ಮನೋಭಾವ ಗಂಡಿನಲ್ಲಿ?

ಹೆಣ್ಣಿನ ಮೇಲೆ ದೌರ್ಜನ್ಯದ ಘಟನೆ ನಡೆದಾಗ ಅವಳು ತೊಡುವ ಬಟ್ಟೆ, ಅವಳು ಮಾಡಿಕೊಳ್ಳುವ ಶೃಂಗಾರ, ಸಮಯವಲ್ಲದ ಸಮಯದಲ್ಲಿ ಆಕೆ ಮನೆಯಿಂದ ಹೊರಗಿದ್ದರೆ, (ಇಲ್ಲಿ ಸಮಯವಲ್ಲದ ಸಮಯ ಎನ್ನುವುದು ಹೆಣ್ಣಿಗೆ ಮಾತ್ರವೇ?) ಹೀಗೆ ಅನೇಕ ಕಾರಣಗಳನ್ನು ಹೇಳಿ ಹೆಣ್ಣನ್ನೇ ಎಲ್ಲರೂ ದೂಷಿಸುವರು. ಆದರೆ ಇವೆಲ್ಲದರ ಹೊರತಾಗಿಯೂ ತನ್ನ ಮನೆ ಹಾಗೂ ಕುಟುಂಬವೂ ಅವಳಿಗೆ ಸುರಕ್ಷಿತವಲ್ಲ ಎನ್ನುವುದು ಅನೇಕ ಘಟನೆಗಳಿಂದ ಸಾಬೀತಾಗಿದೆ. ಹಾಗಾದರೆ ಹೆಣ್ಣು ನಿಜಕ್ಕೂ ಹೇಗೆ ಮತ್ತು ಎಲ್ಲಿ ಬದುಕಬೇಕು? ಎಲ್ಲಾ ವಯೋಮಾನದ ಹೆಣ್ಣು ಜೀವದ ಬಗ್ಗೆ ಬರೀ ಲೈಂಗಿಕತೆಯ ಭಾವನೆಯೊಂದೇ ಗಂಡಿಗೆ ಇರುವುದೇಕೆ? ಹೆಣ್ಣು ಮಕ್ಕಳ ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುವವರಲ್ಲಿ ಒಂದು ಪ್ರಶ್ನೆ. ನೀವು ಹಸು, ಕುರಿ, ನಾಯಿ ಮುಂತಾದ ಪ್ರಾಣಿಗಳಿಗೂ ಬಟ್ಟೆ ತೊಟ್ಟು ಓಡಾಡಲು ಹೇಳುತ್ತೀರಾ? ಮನುಷ್ಯನೆಂಬ ಗಂಡು ಪ್ರಾಣಿಯಿಂದ ಇತರೇ ಹೆಣ್ಣು ಪ್ರಾಣಿಗಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ! ಈ ಅಮಾನವೀಯ ಕೃತ್ಯವನ್ನು ತಡೆಯಲು ಪ್ರಾಣಿಗಳಿಗೂ ವಸ್ತ್ರ ಸಂಹಿತೆ ಕಂಡುಹಿಡಿಯಬೇಕಾಗಿದೆಯೇ?  ಬಟ್ಟೆ ತೊಡುವ ವಿಚಾರದಲ್ಲಿ ಬಂದರೆ ಮೈತುಂಬಾ ಬಟ್ಟೆ ತೊಟ್ಟವರೇ ಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಹಾಗೂ ಒಳಗಾಗುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಾಗೂ ವಯೋವೃದ್ಧರಿಂದ ಗಂಡಸರು ಉತ್ತೇಜನಕ್ಕೆ ಒಳಗಾಗುವುದು ಹೇಗೆ? ಅವರ ದೈಹಿಕ ಅವಯವಗಳು ಉತ್ತೇಜಿತಗೊಳಿಸುತ್ತವೆಯೇ? ಇಲ್ಲಾ ಅವರು ಅರೆಬರೆ ಬಟ್ಟೆ ತೊಟ್ಟಿರುತ್ತಾರೆಯೇ? ಅರೆಬರೆ ಬಟ್ಟೆಯ ಮಾತೇ ಏಕೆ, ಮೈ ಮುಚ್ಚುವಷ್ಟು ಬಟ್ಟೆ ತೊಟ್ಟಿದ್ದರೂ ಹೆಚ್ಚಾಗಿ ಪುರುಷರ ನೋಟ ವಸ್ತ್ರವನ್ನೂ ಭೇದಿಸಿ ಹೆಣ್ಣಿನ ವಕ್ಷಸ್ಥಳವನ್ನೇ ನುಂಗುವ ಹಾಗೆ ನೋಡುತ್ತಿರುತ್ತದೆ. ಬಟ್ಟೆ ತೊಟ್ಟರೂ ಕೂಡಾ ಗಂಡಸರ ಕ್ಯಾಮೆರಾ ಕಣ್ಣುಗಳು ಬಟ್ಟೆಯನ್ನೂ ಮೀರಿ ಒಳಹೊಕ್ಕು ಅಳತೆ ಮಾಡುವುದು ಅವರು ಆಡುವ ಅಸಭ್ಯ ಮಾತುಗಳಿಂದ ಹೊರಹೊಮ್ಮುತ್ತದೆ. ಇಲ್ಲಿ ಬದಲಾಗಬೇಕಾಗಿರುವುದು ಹೆಣ್ಣಿನ ವಸ್ತ್ರವಲ್ಲ. ನೋಡುವ ನೋಟ. ಅತ್ಯಾಚಾರ ಮನೋಭಾವವೆಂಬುದು ಒಂದು ಹೀನವಾದ ಸಾಮಾಜಿಕ ಪಿಡುಗು. ಇದನ್ನು ನಿರ್ಮೂಲನೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಎಲ್ಲಿಯೂ ಹೆಣ್ಣಿಗೆ ನೆಮ್ಮದಿಯಿಲ್ಲ. ಎಲ್ಲಿ, ಯಾವಾಗ, ಯಾರಿಂದ ತನಗೆ ತೊಂದರೆಯಾಗುತ್ತದೆಯೋ ಎನ್ನುವ ಭಯದಿಂದ ಅವಳು ಪ್ರತೀ ನಿಮಿಷವೂ ಜೀವಿಸಬೇಕಾಗಿದೆ. ಮನೆಯಲ್ಲಿ, ಶಾಲೆಯಲ್ಲಿ, ಆಸ್ಪತ್ರೆಯಲ್ಲಿ, ಕೆಲಸ ಮಾಡುವ ಕಛೇರಿಗಳಲ್ಲಿ, ಜನರಹಿತ, ಜನನಿಬಿಡ ಪ್ರದೇಶಗಳಲ್ಲಿ, ಚಲಿಸುತ್ತಿರುವ ವಾಹನಗಳಲ್ಲಿ, ಹಗಲಲ್ಲಿ, ಕತ್ತಲಲ್ಲಿ, ಏನೇ ದೌರ್ಜನ್ಯ ನಡೆದರೂ ಅವಳೇಕೆ ಜಾಗ್ರತೆಯಿಂದ ಇರಲಿಲ್ಲ? ಎನ್ನುವ ಪ್ರಶ್ನೆ ಏಳುತ್ತದೆಯೇ ಹೊರತು, ನೀನೇಕೆ ಹೀಗೆ ಎಂದು ಗಂಡಿನ ಬಗ್ಗೆ ಒಂದೇ ಒಂದು ಪ್ರಶ್ನೆ ಏಳುವುದಿಲ್ಲ. ಅಂದರೆ ಎಲ್ಲಾ ಸ್ವಾತಂತ್ರ್ಯ ಗಂಡಿಗೆ ಸದಾ ಇದೆ ಎನ್ನುವುದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಪುರುಷ ಪ್ರಧಾನ ಸಮಾಜ  ಕೊಟ್ಟಂತೆ ತಾನೇ? ಕುಟುಂಬದಿಂದ ಒಳ್ಳೆಯ ನಡತೆ ಮತ್ತು ಸಂಸ್ಕಾರ ಪ್ರಾರಂಭವಾಗಬೇಕು. ಜೊತೆಗೆ ಸಮಾಜ ಕೂಡಾ ಎಲ್ಲರ ಭದ್ರತೆ ಮತ್ತು ಏಳಿಗೆಯೆಡೆಗೆ ಗಮನ ಹರಿಸಬೇಕು. ಕುಟುಂಬದಿಂದ ಸುಧಾರಣೆ ಪ್ರಾರಂಭವಾದರೆ ಸಮಾಜ ಸುಧಾರಣೆ ಖಂಡಿತಾ ಸಾಧ್ಯ. ಏಕೆಂದರೆ ಸಮಾಜದ ಮೂಲ ಘಟಕ ಕುಟುಂಬ. ಪ್ರತಿಯೊಂದು ಕುಟುಂಬದಲ್ಲಿಯೂ ಹೆಣ್ಣಿನ ಬಗ್ಗೆ ಇರುವ ದೃಷ್ಟಿಕೋನ ಬದಲಾಗಬೇಕು. ಪರಸ್ಪರ ಗೌರವ ಭಾವನೆ ಕಾಳಜಿ ಮೂಡಬೇಕು.

ಮನೆಯ ಮತ್ತು ಮಕ್ಕಳ ಜವಾಬ್ದಾರಿ ಕೇವಲ ಹೆಣ್ಣಿನದು ಮಾತ್ರವಲ್ಲ. ಕುಟುಂಬ ನಿರ್ವಹಣೆ ಮತ್ತು ಜವಾಬ್ದಾರಿ ಇಬ್ಬರಿಗೂ ಸೇರಿದ್ದು. ಕುಟುಂಬದಲ್ಲಾಗಲಿ, ಹೊರಗಾಗಲಿ ಸ್ತ್ರೀಯರು ಪುರುಷರು ಹೇಳಿದಂತೆ ನಡೆದುಕೊಳ್ಳಬೇಕು ಎನ್ನುವುದು ನಮ್ಮ ಸಮಾಜದ ಒಂದು ಅಲಿಖಿತ ನಿಯಮ. ಪುರುಷ ಕುಟುಂಬದ ಪ್ರತಿಯೊಂದು ಕಾರ್ಯವನ್ನೂ ನಿರ್ಧರಿಸುತ್ತಾನೆ. ಇದನ್ನೇ ಸಾಮಾನ್ಯವಾಗಿ ಎಲ್ಲಾ ಕುಟುಂಬಗಳೂ ಪರಂಪರೆ ಎನ್ನುವಂತೆ ಮುಂದುವರೆಸುತ್ತಾ ಈವರೆಗೂ ಬಂದಿವೆ. ಪುರುಷ ಮೇಲು, ಹೆಣ್ಣು ಕೀಳು, ಹೆಣ್ಣು ಎರಡನೇ ದರ್ಜೆಯ ಸದಸ್ಯೆ ಎನ್ನುವ ಮನೋಭಾವವನ್ನು ಬುಡದಿಂದಲೇ ಗಟ್ಟಿಗೊಳಿಸುತ್ತಾ ಬಂದಿರುವ ಈ ಸಮಾಜದಲ್ಲಿ ಪುರುಷರಿಂದ ಹೆಣ್ಣಿಗೆ ಶೋಷಣೆಯಾಗದೇ ಇರುವುದೇ? ಯಾವುದೇ ಸಂಬಂಧಗಳಲ್ಲಿ ನೋಡಲಿ ಹೆಣ್ಣಿನ ಮೇಲೆ ತನ್ನ ಹಕ್ಕು ಸ್ವಾಮ್ಯ ಸ್ಥಿರೀಕರಿಸಲು ಪುರುಷ ಹಂಬಲಿಸುತ್ತಾನೆಯೇ ಹೊರತು, ಅವಳೂ ತನ್ನಂತೆಯೇ ಮನುಷ್ಯ ಜೀವಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿ ಈ ಲೋಕದಲ್ಲಿ ಬಾಳಬೇಕು ಎನ್ನುವ ಅರಿವು ಇಲ್ಲ. ತಾಯಿ, ಮಗಳು, ಅಕ್ಕ-ತಂಗಿ, ಮಡದಿ ಎಲ್ಲರೂ ತನ್ನ ಅಡಿಯಾಳುಗಳು. ನಾನು ಅವರ ಸ್ವಾಮಿ ಎನ್ನುವ ಮನೋಭಾವವನ್ನು ಗಂಡು ಮಕ್ಕಳು ಚಿಕ್ಕಂದಿನಿಂದಲೇ ಮನೆಯ ವಾತಾವರಣವನ್ನು ಕಂಡು ಕಲಿಯುತ್ತಾರೆ. ಹೀಗಿರುವಾಗ ಹೊರಗಿನ ಹೆಣ್ಣುಮಕ್ಕಳನ್ನು ಕಂಡರೂ ಇದೇ ಧೋರಣೆ ಮನದಲ್ಲಿ ಮೂಡುವುದು ಸಹಜ ಅಲ್ಲವೇ? ಹೆಣ್ಣು ಮಕ್ಕಳನ್ನು ಅದು-ಇದು ಮಾಡಬೇಡ. ಹಾಗಿರು-ಹೀಗಿರು ಎನ್ನುವ ಕುಟುಂಬ ಮತ್ತು ಸಮಾಜ ಗಂಡು ಮಕ್ಕಳ ತಪ್ಪನ್ನು ತಿದ್ದದೇ ಏಕೆ ಸಮರ್ಥಿಸಿಕೊಂಡು ಅವರ ಪರವಹಿಸಿ ನಿಲ್ಲುತ್ತಿದೆ. ಹೆಣ್ಣನ್ನು ಅಂಕೆಯಲ್ಲಿ ಇಟ್ಟು ಬೆಳೆಸುವ ಕುಟುಂಬ ಗಂಡನ್ನೇಕೆ ಹಾಗೆ ಬೆಳೆಸುವುದಿಲ್ಲ?

ಸ್ತ್ರೀಕುಲ ಸ್ವತಂತ್ರವಾಗಿ ಬದುಕಲು ಬಯಸುತ್ತದೆ ಎನ್ನುವುದೇ ಈ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿರುವ ನಮ್ಮ ದೇಶದ ಹಲವರ ಸಮಸ್ಯೆಯಾಗಿದೆಯೇ? ಹಾಗಾದರೆ ಎಷ್ಟೋ ಕುಟುಂಬಗಳಲ್ಲಿ ಹೆಣ್ಣುಮಕ್ಕಳೇ ದುಡಿದು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುವ ಅನಿವಾರ್ಯತೆ ಇದೆ. ಇಂತಹಾ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಹಂಗಿಸುವವರು ಹಾಗೂ ನಾವೇ ಶ್ರೇಷ್ಠ ಎನ್ನುವವರು ದುಡಿದು ಕೊಟ್ಟು, ಅವರ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರಾ? ಎಷ್ಟೋ ಕುಟುಂಬಗಳು ಗಂಡು ದಿಕ್ಕಿಲ್ಲದೇ ಹೆಣ್ಣಿನ ಸಂಪಾದನೆ ಹಾಗೂ ಜವಾಬ್ದಾರಿಯಲ್ಲಿ ನಡೆಯುತ್ತಿವೆ. ಕೆಲವೊಂದು ಕುಟುಂಬಗಳಲ್ಲಿ ಹೆಣ್ಣು ತಾನು ಸಂಪಾದಿಸಿ ಗಂಡಿನ ಅಗತ್ಯದ ಖರ್ಚುವೆಚ್ಚಗಳನ್ನು ಕೂಡಾ ನಿಭಾಯಿಸುತ್ತಿದ್ದಾಳೆ. ಅಂತಹವರನ್ನು ಕಂಡರೆ ಪುರುಷರು ಮಾತ್ರವಲ್ಲ ಮಹಿಳೆಯರೂ ಕೂಡಾ ಮೂಗು ಮುರಿಯುತ್ತಾರೆ. ಅನಾರೋಗ್ಯ ಹಾಗೂ ಅಪಘಾತದಲ್ಲಿ ತೀರಿಕೊಂಡ ಪುರುಷರ ಕುಟುಂಬಗಳಲ್ಲಿ ಹೆಣ್ಣು ಒಂಟಿಯಾಗಿ ದುಸ್ತರ ಜೀವನ ನಡೆಸುತ್ತಿರುವಾಗ ಈ ಸಮಾಜದ ರೀತಿನೀತಿಗಳೇ ಅವಳನ್ನು ಮತ್ತು ಅವಳ ಮಕ್ಕಳನ್ನು ಬದುಕಲು ಬಿಡದು. ವಿಶೇಷವಾಗಿ ಆಕೆಯ ಮಕ್ಕಳೂ ಹೆಣ್ಣಾಗಿ ಹುಟ್ಟಿದ್ದರೆ. ಹೆಣ್ಣಿಗೆ ಎಲ್ಲಾ ರೀತಿಯ ನಿರ್ಬಂಧ ಹೇರಿರುವುದು ನಮ್ಮ ಈ ಪುರುಷ ಪ್ರಧಾನ ವ್ಯವಸ್ಥೆ. ಎಲ್ಲವನ್ನೂ ಮೀರಿ ತನ್ನನ್ನು ತಾನು ಸಂಭಾಳಿಸಿಕೊಂಡರೆ ಅವಳ ಬಗ್ಗೆ ಅಪವಾದ ಹೊರಿಸುತ್ತದೆ ಸಮಾಜ. ತನ್ನ ಒಳಿತಿಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹೆಣ್ಣು ಪರಿಪೂರ್ಣ ಸಮರ್ಥಳು ಎನ್ನುವ ಸತ್ಯವನ್ನು ಯಾರೂ ಮನಗಾಣುವುದಿಲ್ಲವೇಕೆ? ಹೆಣ್ಣು ಅಬಲೆಯಲ್ಲ ಎನ್ನುವುದನ್ನು ನಿರೂಪಿಸಲು ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿಯೂ ಇವೆ. ಈಗಲೂ ಇವೆ.

ಜೀರ್ಣಿಸಲಾಗದ ಕಹಿ ಸತ್ಯವೆಂದರೆ ಹೆಚ್ಚು ಕಡಿಮೆ ಪ್ರತೀ ಹೆಣ್ಣೂ ತನ್ನ ಅತ್ಯಂತ ಕಿರಿಯ ವಯಸ್ಸಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನ ಕುಟುಂಬದ ಸದಸ್ಯರಿಂದ ಅಥವಾ ನೆರೆಹೊರೆಯವರಿಂದ ಒಮ್ಮೆಯಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ ಎನ್ನುವುದು. ಮನಸ್ಥಿತಿ ಬದಲಾಗಬೇಕಿದೆ. ಹೆಣ್ಣು ಸುರಕ್ಷಿತವಾಗಿ ಬದುಕಬೇಕಾದರೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ನಾವು ನೀವು, ಕುಟುಂಬ, ಸಮಾಜ, ಸರಕಾರ ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪ್ರತಿಯೊಬ್ಬರ ಸುರಕ್ಷಿತ ಜೀವನ ನಿರ್ವಹಣೆಗಾಗಿಯೇ ಸರ್ಕಾರ ಎನ್ನುವ ವ್ಯವಸ್ಥೆ ನಿರ್ಮಾಣವಾಗಿರುವುದು. ಸರ್ಕಾರ ಕಾನೂನನ್ನು ರೂಪಿಸಿರುವುದೇ ದೌರ್ಜನ್ಯ ಹಾಗೂ ಅಪರಾಧಗಳನ್ನು ತಡೆಹಿಡಿಯುವುದಕ್ಕಾಗಿ ಮತ್ತು ಸ್ವಸ್ಥ ಸಮಾಜಕ್ಕಾಗಿ. ಆದರೆ ಕಾನೂನು ಪಾಲಕರೇ ಕೆಲವೊಮ್ಮೆ ಅದಕ್ಕೆ ವಿಪರೀತವಾಗಿ ನಡೆದುಕೊಳ್ಳುವುದು ಎಷ್ಟು ಸಮಂಜಸ? ಬೇಲಿಯೇ ಎದ್ದು ಹೊಲ ಮೇಯ್ದಂತೆ!

ಒಂದು ಲೈಂಗಿಕ ದೌರ್ಜನ್ಯದ ಘಟನೆಯ ಬಗ್ಗೆ ಚರ್ಚಿಸುವಾಗ ನಮ್ಮದೇ ರಾಜ್ಯದ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಒಬ್ಬರು ಆಡಿದ ಮಾತಿದು: “ಹೆಣ್ಣು ಅತ್ಯಾಚಾರದಂತಹ ಸಂದರ್ಭದಲ್ಲಿ ಪ್ರತಿಭಟಿಸುವುದರಿಂದಲೇ ಅವಳ ಮೇಲೆ ಹಲ್ಲೆ ಹಾಗೂ ಕೊಲೆಯ ಪ್ರಯತ್ನ ನಡೆಯುತ್ತದೆ. ಅವಳು ಪ್ರತಿಭಟಿಸದೇ ಸುಮ್ಮನೇ ಶಯಿಸಿ ಆನಂದಿಸಿದರೆ ಅವಳಿಗೆ ಯಾವುದೇ ಹಾನಿಯಾಗದು.” ಇದೆಂತಹಾ ಅಮಾನವೀಯ ಹೇಳಿಕೆ!!! ಈ ಮಾತನ್ನು ಆಲಿಸಿದ ಇನ್ನಿತರರೂ ಸಭೆಯಲ್ಲಿ ಗಹಗಹಿಸಿ ನಗುವುದು!! ಇದೆಂತಹಾ ಸಾಮಾಜಿಕ ಕಾಳಜಿಯುಳ್ಳ ವ್ಯವಸ್ಥೆ? ಇನ್ನೂ ಕೆಲವು ಪ್ರಮುಖ ವ್ಯಕ್ತಿಗಳ ಅಭಿಪ್ರಾಯಗಳು ಹೀಗಿವೆ: “ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ ಅತ್ಯಾಚಾರವನ್ನು ತಡೆಯಿರಿ” “ಹೆಣ್ಣಿನ ಎದೆಯ ಭಾಗವನ್ನು ಅದುಮಿದರೆ ಮತ್ತು ಸಲ್ವಾರ್ ಬಿಚ್ಚಿದರೆ ಅದು ಅತ್ಯಾಚಾರದ ಪ್ರಯತ್ನ ಎಂದು ನಿರ್ಧರಿಸಲು ಸಾಧ್ಯವಿಲ್ಲ” ಎಂಬ ನ್ಯಾಯಾಲಯದ ತೀರ್ಪು. ಇಂತಹಾ ಹೇಳಿಕೆಗಳನ್ನು ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿಯುತ ಹುದ್ದೆಗಳಲ್ಲಿರುವವರು ಆಲೋಚಿಸಿ, ಪರಾಮರ್ಶಿಸಿ ಆಡಿದ ಮಾತುಗಳೇ? ಮಾಡಿದ ತೀರ್ಪು ತೀರ್ಮಾನಗಳೇ? ಇದರಿಂದ ಹೆಣ್ಣುಜೀವಗಳ ಮೇಲೆ ಜರುಗುವ ಅತಿಕ್ರಮ ದೌರ್ಜನ್ಯವನ್ನು ತಡೆದಂತೆ ಆಗುತ್ತದೆಯೇ?

ವ್ಯವಸ್ಥೆ ಬದಲಾಗಬೇಕು. ಅದರ ದೃಷ್ಟಿಕೋನ ಬದಲಾಗಬೇಕು. ಕಾನೂನು ಹೆಣ್ಣಿನ ರಕ್ಷಣೆಗೆ ಸಹಕಾರಿಯಾಗಬೇಕು. ಪುಟ್ಟ ಮಗುವಿನಿಂದ ಹಿಡಿದು ಹಿರಿಯ ಮಹಿಳೆಯರ ತನಕ ನಡೆಯುವ ಅತ್ಯಾಚಾರಕ್ಕೆ ವಿರುದ್ಧವಾಗಿ ಕಠಿಣ ಕಾನೂನು ರೂಪುಗೊಳ್ಳಬೇಕು. ಯಾವುದೇ ಸಮಯದಲ್ಲೂ ಸಂದರ್ಭಗಳಲ್ಲೂ ಯಾವುದೇ ಹೆಣ್ಣುಜೀವದ ಮೇಲೆ ದೌರ್ಜನ್ಯ ನಡೆಯದಂತಹಾ ನೆಮ್ಮದಿಯ ವಾತಾವರಣ ನಮ್ಮ ದೇಶದಲ್ಲಿ ಸೃಷ್ಟಿಯಾಗಬೇಕು. ಪ್ರತಿಯೊಂದಕ್ಕೂ ಹೆಣ್ಣನ್ನೇ ದೂಷಿಸುವ ಮಾನಸಿಕ ಸ್ಥಿತಿ, ದೃಷ್ಟಿಕೋನ ಬದಲಾಗಬೇಕು. ಪ್ರತೀ ಹೆಣ್ಣನ್ನು ನೋಡುವ ಪ್ರತೀ ಗಂಡಿನ ದೃಷ್ಟಿ ಬದಲಾಗಬೇಕು. ಕಾನೂನು ಎಲ್ಲರಿಗೂ ಸಮನಾಗಬೇಕು. ಪ್ರತಿಯೊಂದು ಹೆಣ್ಣೂ ಮನೆಯಲ್ಲಿ ಇರುವಾಗ ಮತ್ತು ಮನೆಯಿಂದ ಹೊರಗೆ ಬಂದಾಗ ಪ್ರತೀ ಹೆಜ್ಜೆಗೂ ನಾನು ಅಸುರಕ್ಷಿತಳು ಎನ್ನುವ ಭಯ ದುಗುಡ ಅವಳ ಮನದಿಂದ ಮಾಯವಾಗಬೇಕು. ಪ್ರತೀ ಮನೆಯೂ ಮನವೂ ಅವಳಿಗೆ ದೇಗುಲವಾಗದಿದ್ದರೂ ನೆಮ್ಮದಿಯಿಂದ ಬದುಕುವ ನೆಲೆಯಾಗಬೇಕು.

“ಸ್ವಸ್ಥ ಕುಟುಂಬ ಸ್ವಸ್ಥ ಸಮಾಜವನ್ನು ನಿರ್ಮಿಸುತ್ತದೆ. ಸ್ವಸ್ಥ ಸಮಾಜದಿಂದ ಸ್ವಸ್ಥ ರಾಷ್ಟ್ರ ನಿರ್ಮಾಣವಾಗುತ್ತದೆ”. ನೆಮ್ಮದಿಯಿಂದ ಬದುಕುವುದು ಎಲ್ಲರ ಜನ್ಮಸಿದ್ಧ ಹಕ್ಕು. ಈ ಹಕ್ಕನ್ನು ಪ್ರಕೃತಿಯು ಸಹವಾಗಿ ಎಲ್ಲಾ ಜೀವಿಗಳಿಗೂ ನೀಡಿದೆ.  ಬುದ್ಧಿಜೀವಿಯಾದ ಮನುಷ್ಯ ಇದನ್ನು ಅರಿತು ವಿವೇಚನೆಯಿಂದ ನಡೆದುಕೊಳ್ಳಬೇಕಿದೆ. ಮುಂದಿನ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗಾಗಿ ಉತ್ತಮ ವಾತಾವರಣವನ್ನು ನಿರ್ಮಿಸಲು ನಮ್ಮನ್ನು ನಾವು ತಿದ್ದಿಕೊಂಡು ಬದಲಾಗಬೇಕಾಗಿದೆ. ಪಿತೃಪ್ರಧಾನ ವ್ಯವಸ್ಥೆಯಾಗಲಿ ಅಥವಾ ಇನ್ಯಾವುದೇ ವ್ಯವಸ್ಥೆಯಾಗಲಿ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ಧ್ಯೇಯವನ್ನು ಹೊಂದಿರಬೇಕಾಗಿದ್ದು ಪ್ರಮುಖವಾಗಿದೆ.

– ರುಕ್ಮಿಣಿ ಎಸ್ ನಾಯರ್, ಹವ್ಯಾಸಿ ಬರಹಗಾರ್ತಿ, ಬೆಂಗಳೂರು

Leave a Reply