ರಾಜ್ಯದ ಮಹಾನ್ ಸಾಧಕರನ್ನೇ ಮರೆತ ಕ್ರಿಕೆಟ್ ಮಂಡಳಿ

3 years ago

#cricketboard #forgot #great #achievers #karnatakastate #grvishwanath, #saiyedkirmani #bschandrashekhar #prasanna #ksnagarajd

ದೇಶದ ಅನೇಕ ಕ್ರೀಡಾಂಗಣಗಳಿಗೆ ಹಲವರ ಹೆಸರುಗಳನ್ನು ಮರುನಾಮಕರಣ ಮಾಡಿದ್ದಾರೆ. ಅದೇ ರೀತಿಯಲ್ಲಿ ಅನೇಕ ಕ್ರೀಡಾಂಗಣಗಳಲ್ಲಿ ಶ್ರೇಷ್ಠ ಕ್ರಿಕೆಟ್ ಪಟುಗಳ ಹೆಸರುಗಳನ್ನು ಗೌರವಿಸುವ ಸಲುವಾಗಿ ಪ್ರಮುಖವಾದಂತಹ ವಿಭಾಗಗಳಿಗೆ ನಾಮಕರಣ ಮಾಡಿದ್ದಾರೆ.

ಆದರೆ ಕರ್ನಾಟಕದ ಕ್ರಿಕೆಟ್ ಮಂಡಳಿ ಮತ್ತು ಭಾರತ ಕ್ರಿಕೆಟ್ ಮಂಡಳಿ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ ಆಕರ್ಷಕ ಆಟಗಾರ ಜಿ.ಆರ್.ವಿಶ್ವನಾಥ್, ವಿಕೆಟ್ ಕೀಪಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಸಯ್ಯದ್ ಕಿರ್ಮಾನಿ, ತಮ್ಮ ಮಾಂತ್ರಿಕ ಬೌಲಿಂಗ್‌ನಿಂದ ಜಗತ್ತಿನ ಗಮನವನ್ನು ಸೆಳೆದ ಚಂದ್ರಶೇಖರ್ ಮತ್ತು ಪ್ರಸನ್ನರವರಂತಹ ಸ್ಪಿನ್ ಬೌಲರ್‌ಗಳು ನೆನಪಿಗೆ ಬಂದಿರುವುದಿಲ್ಲ.

ಇವರುಗಳ ಹೆಸರನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೆವಿಲಿಯನ್‌ಗಳಿಗೆ ಹಾಗೂ ಪ್ರೇಕ್ಷಕರ ಗ್ಯಾಲರಿಗಳಿಗೆ ನಾಮಕರಣ ಮಾಡಲು ಮನಸ್ಸೇ ಮಾಡಿರುವುದಿಲ್ಲ.

ವಿಶ್ವನಾಥ್‌ರವಂತಹ ಶ್ರೇಷ್ಠ ಬ್ಯಾಟ್ಸ್‌ಮನ್, ಪ್ರಸನ್ನ, ಚಂದ್ರಶೇಖರ್‌, ಕಿರ್ಮಾನಿಯಂತಹ ಆಟಗಾರರು ನಮ್ಮ ಕನ್ನಡಿಗರು ಎನ್ನುವ ಅಭಿಮಾನವಿಲ್ಲದೇ ಇರುವುದು ದುರಂತದ ಸಂಗತಿ.

ಈ ರಾಜ್ಯಕ್ಕೆ ಈಗ ಕರ್ನಾಟಕವೆಂದು ನಾಮಕರಣವಾಗಿ ಐವತ್ತು ವರ್ಷವಾಗುತ್ತಿದೆ. ಈ ನೆನಪಿನಲ್ಲದ್ದಾರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇವರ ಹೆಸರುಗಳನ್ನು ವಿವಿಧ ಪ್ರದೇಶಗಳಲ್ಲಿ ನಾಮಕರಣ ಮಾಡಿ ದೊಡ್ಡ ಪ್ರಮಾಣದಲ್ಲಿ ಗೌರವವನ್ನು ಅರ್ಪಿಸಿದರೆ ಕನ್ನಡಿಗರಿಗೂ ಸಂತೋಷವಾಗುತ್ತದೆ. ಅಂತಹ ಶ್ರೇಷ್ಠ ಆಟಗಾರರ ಸಾಧನೆಗೆ ಗೌರವವು ಸಲ್ಲಿಸಿದ್ದಂತಾಗುತ್ತದೆ.

ಉತ್ತರ ಭಾರತೀಯ ಆಟಗಾರರು ಅಲ್ಲಿನ ಕ್ರೀಡಾಂಗಣಗಳಲ್ಲಿ ಸಾಧನೆಗಿಂತ ಮೊದಲೇ ತಮ್ಮ ಹೆಸರುಗಳನ್ನು ಉಳಿಯುವಂತೆ ಮಾಡಿಕೊಳ್ಳುವಂತಹ ಕಲೆಗಾರಿಕೆಯನ್ನು ಪಡೆದಿದ್ದಾರೆ. ಆದರೆ ಕರ್ನಾಟಕದಲ್ಲಿನ ಮಹಾನ್ ಸಾಧಕರ ಪರವಾಗಿ ದೇಶದ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸಿದವರೂ ಸಹ ನೆನಪಿಸಿಕೊಳ್ಳದೇ ಹೋಗಿರುವುದು ದುರಂತದ ಸಂಗತಿ.

ರಾಜ್ಯ ಸರ್ಕಾರ ಕೂಡಲೇ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ ಈ ನಾಲ್ಕು ಜನರ ಹೆಸರುಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಉಳಿಯುವಂತೆ ಈ ಯೋಜನೆಯನ್ನು ರೂಪಿಸಲು ಆಸಕ್ತಿಯನ್ನು ವಹಿಸಬೇಕೆಂದು ಕ್ರಿಕೆಟ್ ಆಟವನ್ನು ಹೆಚ್ಚು ಪ್ರೀತಿಸುವ ಮಾನ್ಯ ಮುಖ್ಯಮಂತ್ರಿಗಳೇ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಬೇಕೆಂದು ಕೋರುತ್ತೇನೆ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply