ಮಾಜಿ ಕಾನೂನು, ಸಂಸದೀಯ ಸಚಿವ ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ, ಉಪಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ನಲ್ಲಿ ಕಳುಹಿಸಿರುವ ಪತ್ರವನ್ನು ಆಧಾರವನ್ನಾಗಿ ಮಾಡಿಕೊಂಡು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಕಾನೂನು ಮತ್ತು ಸಂಸದೀಯ ಸಚಿವರಾಗಿ ಕೆಲಸ ಮಾಡಿದ್ದ ಎಸ್ ಸುರೇಶ್ ಕುಮಾರ್ ಈ ಮಟ್ಟಿಗಿನ ಸಂವಿಧಾನ ಮತ್ತು ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಅನಕ್ಷರಸ್ಥರಾಗಿದ್ದರೇ ?
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಭಾರತದ ಸಂವಿಧಾನದ Article 178 ಪ್ರಕಾರ ರಾಜ್ಯ ವಿಧಾನಸಭೆ ತನ್ನ ಸದಸ್ಯರಲ್ಲಿಯೇ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ ಹಾಗೂ ಇನ್ನೊಬ್ಬರನ್ನು ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ. Article 182 ಇದೇ ರೀತಿಯಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯ ಆಯ್ಕೆಯನ್ನು ನಿರ್ದಿಷ್ಟಪಡಿಸುತ್ತದೆ.
ಗಮನಿಸಬೇಕಾದ ವಿಷಯವೆಂದರೆ, ಸಭಾಧ್ಯಕ್ಷರನ್ನು ರಾಜ್ಯಪಾಲರು ಅಥವಾ ನ್ಯಾಯಾಂಗ/ಚೀಫ್ ಜಸ್ಡಿಸ್ ನೇಮಿಸುವುದಿಲ್ಲ. ಅವರು ಸದನದ ಸದಸ್ಯರಾಗಿರುವ ಶಾಸಕರ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಹೀಗಾಗಿ, ಬಹುಮತ ಹೊಂದಿರುವ ಪಕ್ಷ ಅಥವಾ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಮುಂಚಿತವಾಗಿ ನಿರ್ಧರಿಸುವುದು ಸಂಸದೀಯ ಪದ್ಧತಿಯ ನಿಯಮವಾಗಿದೆ.
ಯಾವುದೇ ರಾಜಕೀಯ ಪಕ್ಷವು ತನ್ನ ಅಭ್ಯರ್ಥಿಯನ್ನು ಆಂತರಿಕವಾಗಿ ಆಯ್ಕೆ ಮಾಡಿಕೊಳ್ಳುವುದು ಪಕ್ಷದ ಸ್ವಾಯತ್ತತೆ ಮತ್ತು ರಾಜಕೀಯ ಪ್ರಕ್ರಿಯೆಯ ಭಾಗವಾಗಿದೆ. ಆ ಅಭ್ಯರ್ಥಿಯ ಹೆಸರು ಪಕ್ಷದ ಲೆಟರ್‌ಹೆಡ್‌ನಲ್ಲಿ ಪ್ರಕಟವಾದ ಮಾತ್ರಕ್ಕೆ ಅವರು ಸಭಾಧ್ಯಕ್ಷರಾಗುವುದಿಲ್ಲ. ಸದನದಲ್ಲಿ ಚುನಾವಣೆ ನಡೆದು ಸದಸ್ಯರು ಆಯ್ಕೆ ಮಾಡಿದ ಬಳಿಕವೇ ಅವರು ಆ ಹುದ್ದೆಯನ್ನು ಅಲಂಕರಿಸುತ್ತಾರೆ. ಹೀಗಾಗಿ, ಪಕ್ಷವು ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿರುವುದನ್ನೇ “ಸಾಂವಿಧಾನಿಕ ಹುದ್ದೆಯ ದುರುಪಯೋಗ” ಎಂದು ಕರೆಯುವುದು ಕಾನೂನುಬದ್ಧವಾಗಿ ಸಮರ್ಥನೀಯವಾದ ವಾದವಲ್ಲ.

ಇದು ಕಾಂಗ್ರೆಸ್ ಆರಂಭಿಸಿರುವ ಹೊಸ ಸಂಪ್ರದಾಯವಲ್ಲ.
ಬಿಜೆಪಿ ಆಡಳಿತದಲ್ಲಿಯೂ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಪರಿಷತ್ ಸಭಾಪತಿಗಳು ಸೇರಿದಂತೆ ವಿವಿಧ ಸಾಂವಿಧಾನಿಕ ಮತ್ತು ರಾಜಕೀಯ ಹುದ್ದೆಗಳ ಬಗ್ಗೆ ಪಕ್ಷದ ಸಂಸದೀಯ ಮಂಡಳಿ, ಕೇಂದ್ರ ನಾಯಕತ್ವ ಹಾಗೂ ಹೈಕಮಾಂಡ್ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡ ಅನೇಕ ಉದಾಹರಣೆಗಳಿವೆ. “ಮುಖ್ಯಮಂತ್ರಿ ಆಯ್ಕೆಗಾಗಿ ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ವೀಕ್ಷಕರ ಸಭೆಗಳು, ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಿಂದ ಅನುಮೋದನೆ, ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷ/ಸಭಾಪತಿ ಅಭ್ಯರ್ಥಿಗಳ ಬಗ್ಗೆ ಪಕ್ಷದ ನಿರ್ಧಾರ” ಎಂಬ ಸುದ್ದಿಗಳು ಬಿಜೆಪಿ ಸರ್ಕಾರದ ಕಾಲದಲ್ಲಿ ಪ್ರಕಟವಾಗಿದ್ದು ನಿಮಗೆ ನೆನಪಿರಬಹುದು. ಆದ್ದರಿಂದ, ಕಾಂಗ್ರೆಸ್ ಮಾತ್ರ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೆಸರು ಕಳುಹಿಸಿದೆ ಎಂಬ ವಾದ ಸರಿಯಲ್ಲ.
ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ನಿಷ್ಪಕ್ಷಪಾತವಾಗಿ ವರ್ತಿಸಬೇಕೆಂಬುದು ಸಂಸದೀಯ ಸಂಪ್ರದಾಯ. ಆದರೆ, ಅದಕ್ಕೂ ಮೊದಲು ಅವರು ಒಂದು ರಾಜಕೀಯ ಪಕ್ಷದ ಶಾಸಕರಾಗಿಯೇ ಇರುತ್ತಾರೆ. ಹೀಗಾಗಿ, ಆಯ್ಕೆಗೆ ಮುನ್ನ ಪಕ್ಷವು ತನ್ನ ಅಭ್ಯರ್ಥಿಯನ್ನು ಘೋಷಿಸುವುದರಿಂದ ಅವರ ಭವಿಷ್ಯದ ನಿಷ್ಪಕ್ಷಪಾತತೆಯು ಸ್ವಯಂಚಾಲಿತವಾಗಿ ಹಾಳಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಸಭಾಧ್ಯಕ್ಷರ ಹೆಸರನ್ನು ಪಾರ್ಟಿ ಲೆಟರ್‌ಹೆಡ್‌ನಲ್ಲಿ ಹೆಸರು ಪ್ರಕಟಿಸುವುದು ಕಾನೂನುಬಾಹಿರವೇ? ಸಂವಿಧಾನದಲ್ಲಾಗಲಿ, ವಿಧಾನಸಭೆಯ ಕಾರ್ಯವಿಧಾನ ನಿಯಮಗಳಲ್ಲಾಗಲಿ ಅಥವಾ ಯಾವುದೇ ಕಾನೂನಲ್ಲಾಗಲಿ ರಾಜಕೀಯ ಪಕ್ಷವು ತನ್ನ ಅಭ್ಯರ್ಥಿಗಳ ಹೆಸರನ್ನು ಲೆಟರ್‌ಹೆಡ್‌ನಲ್ಲಿ ಪ್ರಕಟಿಸಬಾರದು ಎಂಬ ನಿರ್ಬಂಧವಿಲ್ಲ. ಈ ಪತ್ರವು ಸರ್ಕಾರದ ಆದೇಶ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ನಿರ್ಧಾರವನ್ನು ತಿಳಿಸುವ ಪತ್ರವಾಗಿದೆ. ಅಂತಿಮ ಅಧಿಕಾರ ಸದನದ ಚುನಾವಣೆಯಲ್ಲಿಯೇ ಇದೆ. ಹೀಗೆ ಆಯ್ಕೆಯಾದ ನಂತರ ಸಭಾಧ್ಯಕ್ಷರು ಅಥವಾ ಸಭಾಪತಿಗಳು ಸಂವಿಧಾನ ಮತ್ತು ಸದನದ ನಿಯಮಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತವಾಗಿ ವರ್ತಿಸುತ್ತಾರೆಯೇ ಎಂಬುದೇ ಪ್ರಜಾಪ್ರಭುತ್ವದ ದೃಷ್ಟಿಯಿಂದ ಮುಖ್ಯ ಪ್ರಶ್ನೆ.
ಹಾಗಾಗಿ ಎಸ್. ಸುರೇಶ್ ಕುಮಾರ್ ಅವರ ಹೇಳಿಕೆ ರಾಜಕೀಯ ಟೀಕೆಯಾಗಿ ಇರಬಹುದು. ಆದರೆ ಸಂವಿಧಾನ, ಸಂಸದೀಯ ಸಂಪ್ರದಾಯ ಮತ್ತು ಭಾರತದ ರಾಜಕೀಯ ವ್ಯವಸ್ಥೆಯನ್ನು ಪರಿಶೀಲಿಸಿದರೆ, ಆಡಳಿತ ಪಕ್ಷವು ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳಿಗೆ ತನ್ನ ಅಭ್ಯರ್ಥಿಗಳನ್ನು ಮುಂಚಿತವಾಗಿ ನಿರ್ಧರಿಸುವುದು ಹೊಸ ಸಂಗತಿಯಲ್ಲ. ಬಿಜೆಪಿ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರೀಯ ಪಕ್ಷಗಳು ಇದೇ ಪದ್ಧತಿಯನ್ನು ಅನುಸರಿಸಿವೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವುದನ್ನು ಮಾತ್ರ ಆಧಾರವನ್ನಾಗಿ ಮಾಡಿಕೊಂಡು ಅದನ್ನು “ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ” ಅಥವಾ “ಹೊಸ ಕೆಟ್ಟ ಸಂಪ್ರದಾಯ” ಎಂದು ಹೇಳುವುದು ಕಾನೂನು ಹಾಗೂ ಸಂಸದೀಯ ದೃಷ್ಟಿಯಿಂದ ಮಾಜಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ವಾದ ಸರಿಯಾದುದಲ್ಲ.
– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು




