ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ 891 ನೇ ಜಯಂತಿಯ ಶುಭಾಶಯಗಳು….
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮದೇವಾ
– ಬಸವಣ್ಣ
ನಾವು ಸಾಮಾನ್ಯವಾಗಿ ನಮ್ಮ ಸುತ್ತಲಿನ ಲೋಕದ ಡೊಂಕುಗಳ ಕಡೆಗೆ ಬೊಟ್ಟುಮಾಡಿ ತೋರಿಸುತ್ತೇವೆಯೇ ಹೊರತು ನಮ್ಮದೇ ಡೊಂಕುಗಳ ಕಡೆಗೆ ನೋಡುವ ಪ್ರಯತ್ನ ಮಾಡುವುದಿಲ್ಲ. ಲೋಕದ ಡೊಂಕುಗಳನ್ನು ಹೆಚ್ಚಿಸುವುದರಲ್ಲಿ ಅಥವಾ ಈಗಿರುವ ಡೊಂಕುಗಳು ಸುಧಾರಣೆಯಾಗದಿರುವುದರಲ್ಲಿ ನಾವೆಷ್ಟು ಪಾಲುದಾರರೆಂಬುದನ್ನು ಕುರಿತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದನ್ನು ಮರೆತೇಬಿಡುತ್ತೇವೆ. ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಮಾತ್ರ ನಮ್ಮ ಡೊಂಕುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇವೆ. ಇಲ್ಲದ ಹೊರತು ಲೋಕದ ಡೊಂಕನ್ನು ತಿದ್ದಲು ಹೊರಡುವುದು ವ್ಯರ್ಥ ಸಾಹಸವಾದೀತು.

ನಮ್ಮ ಡೊಂಕನ್ನು ನಾವೇ ತಿದ್ದಿಕೊಂಡು ತನು ಮನ ಸಂತೈಸಿಕೊಂಡ ಬಳಿಕವಷ್ಟೇ ಲೋಕದ ಡೊಂಕನ್ನು ತಿದ್ದಲು ಸಮರ್ಥರಾಗುತ್ತೇವೆ. ಈ ಲೋಕದಲ್ಲಿ ಸದಾಕಾಲವೂ ಡೊಂಕುಗಳು (ದೋಷಗಳು) ಸೇರ್ಪಡೆಯಾಗುತ್ತಲೇ ಹೋಗುತ್ತವೆ. ಇಂತಹ ಡೊಂಕುಗಳನ್ನು ಸರಿಪಡಿಸುವ ಮೂಲಕವೇ ಲೋಕವನ್ನು ಉತ್ತಮಗೊಳಿಸಬೇಕಾದ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಈ ಸಮಾಜಕ್ಕೆ ನಾವು ವೈಯಕ್ತಿಕವಾಗಿ ಯಾವುದೇ ಡೊಂಕುಗಳನ್ನು ಸೇರಿಸದಂತೆ ಎಚ್ಚರವಹಿಸಬೇಕು.
ನೆರೆಯವರ ದುಃಖಕ್ಕೆ ನಮ್ಮದೇ ಡೊಂಕು ಕಾರಣವಾಗಿರಬಹುದು ಅಥವಾ ನಮ್ಮಂತಹ ಕೆಲವರ ಡೊಂಕಿನಿಂದ ಉಂಟಾದದ್ದೂ ಇರಬಹುದು. ಆದುದರಿಂದ ಮೊದಲು ನಾವು ನಮ್ಮ ಡೊಂಕನ್ನು ಸರಿಪಡಿಸಿಕೊಂಡು ಸಮಾಜದ ಡೊಂಕನ್ನು ತಿದ್ದುವ ನೈತಿಕತೆ ಪಡೆದುಕೊಳ್ಳುವುದು ಒಳ್ಳೆಯದೆಂಬುದು ಬಸವಣ್ಣನವರ ಆಶಯ.
“ಪರಚಿಂತೆ ಎಮಗೇಕಯ್ಯ.
ನಮ್ಮ ಚಿಂತೆ ಎಮಗೆ ಸಾಲದೆ?” ಎಂಬ ವಚನವಾಕ್ಯದಲ್ಲಿ ಕೂಡಾ ಪರದ ಚಿಂತೆ ಮಾಡುವ ಮೊದಲು ನಾವು ನಮ್ಮ ಬಗ್ಗೆಯೇ ಚಿಂತಿಸಬೇಕೆಂಬ ಅಂತರಾರ್ಥ ವ್ಯಕ್ತವಾಗುತ್ತದೆ. ನಾವು ನಮ್ಮ ತನುವ ಸಂತೈಸಿಕೊಳ್ಳುವ ಹಾಗೂ ಮನವ ಸಂತೈಸಿಕೊಳ್ಳುವ ಪ್ರಯತ್ನದಲ್ಲಿ ತನುವಿನ ಡೊಂಕೇನು ಮತ್ತು ಮನದ ಡೊಂಕೇನು ಎಂಬುದನ್ನು ಕಂಡುಕೊಳ್ಳಬೇಕು.
“ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು” ಎಂದಿದ್ದಾರೆ ಬಸವಣ್ಣ. ಎದುರಾಳಿಯ ಮೂರ್ತರೂಪದ ತನುವಿನ ಮೇಲೆ (ದೇಹದ ವಿರುದ್ಧ) ಕೋಪಗೊಂಡು ಅನ್ಯಾಕ್ರಮಣ ನಡೆಸುವುದು ನಮ್ಮ ಹಿರಿತನಕ್ಕೆ ಕುರೂಪವಾಗುತ್ತದೆ. ಮನದಲ್ಲಿ ಹುಟ್ಟುವ ಅಮೂರ್ತವಾದ ಕೋಪ ನಮ್ಮ ಅರಿವಿಗೆ ಕೇಡಾಗಿ ಒದಗುತ್ತದೆ. ಇಂತಹ ಕೋಪ ಪ್ರಜ್ಞಾ ಶೂನ್ಯತೆಗೂ ಕಾರಣಮಾಡಿಕೊಡುತ್ತದೆ.
ಆಸೆಯನ್ನು ನೀಗಿಕೊಳ್ಳದಿರುವುದು ರೋಷದಿಂದ ಮುಕ್ತವಾಗದಿರುವುದು (ಆಸೆ ಹರಿಯದು ರೋಷ ಬಿಡದು) ನಮ್ಮ ಮನದ ಡೊಂಕು. ನಾವು ಒಳ್ಳೆಯ ಮಾತಾಡಿದರಷ್ಟೇ ಸಾಲದು ನಮಗೆ ಒಳ್ಳೆಯ ಮನವೂ ಇರಬೇಕು. ಮಾತಿನಂತೆ ಮನವಿಲ್ಲದ (ಮಾತಿನಂದದಿ ಮನವಿಲ್ಲದ) ಹೊರತು ಲೋಕದ ಡೊಂಕನ್ನು ತಿದ್ದುವ ನಮ್ಮ ಪ್ರಯತ್ನಗಳೆಲ್ಲವೂ ಕೇವಲ ಕಸರತ್ತುಗಳಾಗುತ್ತವೆ.
ನಾವು ಬಾಹ್ಯದ ಡೊಂಕುಗಳನ್ನು ತಿದ್ದಬೇಕೆಂದರೆ ಅಂತರಂಗದ ಕೇಡುಗಳನ್ನು ಮೊದಲು ನೀಗಿಕೊಳ್ಳಬೇಕು. ನಮ್ಮ ಅಂತರಂಗವನ್ನು ಕೇಡುಗಳು ಆಳಲು ನಾವು ಬಿಡಬಾರದು. ಅಂತರಂಗದಲ್ಲಿ ಕೇಡು ತುಂಬಿದ ಮನುಷ್ಯ ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ. ತನ್ನಂತರಂಗದ ಕೇಡನ್ನು ತಾನೇ ಗುರುತಿಸಿಕೊಂಡು ಸರಿಪಡಿಸಿಕೊಳ್ಳಲು ನಾವು ಮೊದಲ ಆದ್ಯತೆ ನೀಡಬೇಕು.
ಹಾಗೆಯೇ ತಮ್ಮ ಮನೆಯ ದುಃಖ ನಿವಾರಣೆಗೆ ತಾವೇ ಮೊದಲು ಉತ್ತರ ಶೋಧಿಸಿಕೊಳ್ಳಬೇಕು. ಇಲ್ಲದಿದ್ದರೆ ನೆರೆಮನೆಯ ದುಃಖಕ್ಕೆ ಅತ್ತು ಯಾವುದೇ ಪ್ರಯೋಜನವಿಲ್ಲ. ತಮ್ಮ ಮನೆಯ ದುಃಖವನ್ನು ನಿವಾರಿಸಿಕೊಳ್ಳದೇ ನೆರೆಮನೆಯ ದುಃಖಕ್ಕಾಗಿ ಅಳುವುದನ್ನು ಕೂಡಲಸಂಗಮ ದೇವ ಮೆಚ್ಚಲಾರನು.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




