ಕರ್ನಾಟಕದ ರಕ್ಷಣಾ ವೇದಿಕೆ ವತಿಯಿಂದ
‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ”
ಕರ್ನಾಟಕದ ಸಾಧ್ಯತೆಗಳು- ಸವಾಲುಗಳು
ಒಂದು ದಿನದ ದುಂಡು ಮೇಜಿನ ಸಭೆ
ಪ್ರಸ್ತಾವನೆ
ಪ್ರಿಯರೆ,
• ಭಾಷೆ ಎಂಬುದು ಮನುಕುಲವನ್ನು ಇತರೆಲ್ಲಾ ಜೀವಿಗಳಿಂದ ಭಿನ್ನವಾಗಿಸಿದ ಒಂದು ಸಾಧನ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಅದರೊಂದಿಗೆ ಅದು ಲೋಕಜ್ಞಾನದ ವಾಹಕವೂ ಹೌದು. ಹುಟ್ಟಿದ ಮಗುವೊಂದು ತನ್ನ ಪರಿಸರದ ಭಾಷೆಯಿಂದಲೇ ಲೋಕವನ್ನು ಅರಿಯತೊಡಗುತ್ತದೆ. ಯಾವುದೇ ಭಾಷೆಯೊಂದಿಗೆ ಆ ಭಾಷಿಕ ಪರಿಸರದ ಸಂಸ್ಕೃತಿ, ಇತಿಹಾಸ, ಪರಂಪರೆ ಎಲ್ಲವೂ ಜೀವಂತ ಇರುತ್ತವೆ. ಭಾಷೆಯೊಂದು ಅಳಿದರೆ ಅದರೊಂದಿಗೆ ಆ ಭಾಷೆ ತನ್ನ ಪದಪುಂಜಗಳಲ್ಲಿ, ನುಡಿಗಟ್ಟುಗಳಲ್ಲಿ ಹಿಡಿದಿಟ್ಟುಕೊಂಡು ಬಂದ ಜ್ಞಾನಸಂಪತ್ತೆಲ್ಲವೂ ಅಳಿಯುತ್ತದೆ. ನಮ್ಮ ಉಪಖಂಡ ಭಾರತವು ಇಂತಹ ಸಾವಿರಾರು ಭಾಷೆಗಳನ್ನು ಹೊಂದಿದ ವೈವಿಧ್ಯಮಯ ನೆಲವಾಗಿದೆ. ಹಲವು ದಿಕ್ಕಿನ ಸಂಸ್ಕೃತಿಗಳು ಇಲ್ಲಿ ಮೇಳವಿಸಿವೆ. ಈಗ್ಗೆ 4,500 ವರ್ಷಗಳ ಹಿಂದೆ ಪ್ರೊಟೊ ದ್ರಾವಿಡ ಭಾಷಾ ಕುಟುಂಬದಿಂದ ಟಿಸಿಲೊಡೆದ ಕನ್ನಡ ಭಾಷೆ ಇಂದು ಒಂದು ಪ್ರಾಚೀನ ಲಿಪಿಯೊಂದಿಗೆ ಸುಮಾರು 6 ರಿಂದ 7 ಕೋಟಿ ಜನರು ಆಡುವ ಭಾಷೆಯಾಗಿದೆ. ಆದರೆ, ಇದು ಇನ್ನು ಮುಂದಿನ ನಾಲೈದು ದಶಕಗಳಲ್ಲಿ ಹೀಗೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಭಾಷೆಯ ಬಳಕೆಯೇ ಅದರ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಭಾಷೆಯೊಂದು ಉಳಿದುಕೊಂಡು ಬೆಳೆಯಬೇಕಾದರೆ ಅದು ಶಿಕ್ಷಣ, ಉದ್ಯೋಗ, ಆಡಳಿತ, ನ್ಯಾಯಾಂಗ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಾ, ಉಪಯುಕ್ತತೆ ಹೊಂದುತ್ತಾ ತನ್ನ ಪ್ರಸ್ತುತತೆ ಉಳಿಸಿಕೊಳ್ಳಬೇಕಾಗುತ್ತದೆ. ಕನ್ನಡ ಭಾಷೆಯ ವಿಷಯದಲ್ಲಿ ಹೀಗೆ ಆಗುತ್ತಿದೆ ಎಂದು ಧೈರ್ಯವಾಗಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ಕರ್ನಾಟಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಎಂಬುದು ಹಲವಾರು ಕಾರಣಗಳಿಂದ ಸ್ಥಗಿತತೆ ತಲುಪಿ ಹಿಮ್ಮುಖ ಚಲನೆಯತ್ತ ಹೊರಟಿದೆ. ಹಳ್ಳಿಗಾಡಿನ ಜನಸಾಮಾನ್ಯರು, ಕೃಷಿಕರು ಸಾವಿರಾರು ವರ್ಷಗಳಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಆಧುನಿಕ ಜಗತ್ತು ಅತ್ಯಂತ ತೀವ್ರಗತಿಯಲ್ಲಿ ನಿತ್ಯ ಬದುಕಿನಲ್ಲಿ ತರುತ್ತಿರುವ ಬದಲಾವಣೆಗಳು ಕನ್ನಡದ ಭವಿಷ್ಯವನ್ನು ಮಸುಕಾಗಿಸಿವೆ. ಈ ಹೊತ್ತಿನಲ್ಲಿ ನಮ್ಮೆಲ್ಲರ ಪ್ರಜ್ಞಾಪೂರ್ವಕ ಮಧ್ಯಪ್ರವೇಶದ ಉಪಕ್ರಮಗಳು ಅನಿವಾರ್ಯವಾಗಿವೆ. ಒಂದು ಪ್ರದೇಶದಲ್ಲಿ ಆಡುವ ಭಾಷೆಯ ಉಳಿವು ಅಳಿವು ಅದರ ಉಪಯಕ್ತತೆ ಮೇಲೆ ನಿಂತಿರುತ್ತದೆ ಎಂದು ಒಪ್ಪುವುದಾದರೆ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಕನ್ನಡ ಭಾಷೆಯ ಬಳಕೆಯ ಉಪಯುಕ್ತತೆ ಎಷ್ಟು? ಎಲ್ಲಿ? ಅದನ್ನು ಬಳಸುವವರು ಯಾರು? ಇತ್ಯಾದಿ ಗಂಭೀರ ಪ್ರಶ್ನೆಗಳು ಎದುರಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಅಪ್ರಸ್ತುತ ಎಂಬ ಮನೋಭಾವನೆ ಗಾಢವಾಗಿದೆ. ಕರ್ನಾಟಕದಲ್ಲಿ ವೈದ್ಯಕೀಯ, ತಂತ್ರಜ್ಞಾನ, ಉನ್ನತ ಹಂತದ ಆಡಳಿತ, ನ್ಯಾಯಾಲಯ ಇತ್ಯಾದಿ ಕಡೆಗಳಲ್ಲಿ ಕನ್ನಡದ ಬಳಕೆ ಇಂದಿಗೂ ಮರೀಚಿಕೆಯಾಗಿದೆ. ಜನರಾಡುವ ಕನ್ನಡಗಳು ಮತ್ತು ಗ್ರಾಂಥಿಕ, ಸಾಹಿತ್ಯಕ, ಪಾರಿಭಾಷಿಕ ಕನ್ನಡಗಳ ನಡುವೆ ಅಗಾಧವಾದ ಅಂತರವಾಗಿದೆ.
• ಒಂದು ಭಾಷೆ ಇಂತಹ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವುದಕ್ಕೆ ಮುಖ್ಯ ಕಾರಣ ಆ ಭಾಷೆಗೆ ಅತ್ಯಗತ್ಯವಾಗ ಸಮಗ್ರ ಭಾಷಾ ನೀತಿ ಮತ್ತು ಭಾಷಾ ಯೋಜನೆಯ ಕೊರತೆಯೇ ವಿನಃ ಬೇರೇನಲ್ಲ. ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಹಲವಾರು ದೇಶಗಳಲ್ಲಿ ಕನ್ನಡದ ಕಾಲು ಭಾಗದಷ್ಟೂ ಮಾತಾಡುವವರು ಇಲ್ಲ. ಆದರೂ ಈ ದೇಶಗಳು ತಮ್ಮ ತಮ್ಮ ಭಾಷೆಗಳನ್ನೇ ಪ್ರತಿಯೊಂದಕ್ಕೂ ಬಳಸಿಕೊಂಡು, ಬೆಳೆಸಿಕೊಂಡು 21-22 ಶತಮಾನಗಳಿಗೂ ಪ್ರಸ್ತುತತೆ ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಕಾರಣ ಅಲ್ಲಿನ ಭಾಷಾ ನೀತಿ ಮತ್ತು ಭಾಷಾ ಯೋಜನೆಗಳೇ ಆಗಿವೆ. ಆದರೆ, ಭಾರತದಲ್ಲಿ, ಕರ್ನಾಟಕದಲ್ಲಿ ಹೀಗೆಂದರೆ ಏನು ಎಂಬುದೇ ಆಡಳಿತ ನಡೆಸುವವರಿಗೆ ಅರಿವಿಲ್ಲವಾಗಿದೆ.
ನಮ್ಮ ರಾಜ್ಯದಲ್ಲಿ ಭಾಷೆಗೆ ಸಂಬಂಧಿಸಿದ ಪ್ರಾಧಿಕಾರಗಳು ಕಾಲಕಾಲಕ್ಕೆ ಹಲವಾರು ಆದೇಶಗಳನ್ನು ಹೊರಡಿಸಿವೆ. ಶಿಕ್ಷಣ ನೀತಿ ಆಯೋಗಗಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾಷಾ ಕಲಿಕೆ, ರೆಪಾಸಿಟರಿ, ಭಾಷಾಂತರ ಇತ್ಯಾದಿಗಳ ಕುರಿತು ಶಿಫಾರಸುಗಳನ್ನು ಮಾಡಿರುವುದನ್ನು ಕಾಣಬಹುದು.
• ಆದರೆ, ಆರಂಭದಲ್ಲಿ ಹೇಳಿದ ಕನ್ನಡ ಭಾಷೆಯ ಸಮಸ್ಯೆಗಳು ಈ ತತ್ಕಾಲಿಕ ಅಥವಾ ತಾತ್ಕಾಲಿಕ ಶಿಫಾರಸು, ಆದೇಶಗಳು ಅಥವಾ ಸುತ್ತೋಲೆಗಳನ್ನು ಮೀರಿದ ಸಮಗ್ರ ನೀತಿ ನಿರೂಪಣೆ ಮತ್ತು ಭಾಷಾ ಯೋಜನೆಯನ್ನು ಕೇಳುತ್ತಿವೆ ಎಂಬುದನ್ನು ಈಗಲಾದರೂ ನಾವು ಅರ್ಥ ಮಾಡಿಕೊಳ್ಳಬೇಕಿದೆ.
• ಕರ್ನಾಟಕದ ರಕ್ಷಣಾ ವೇದಿಕೆಯು ಕಳೆದ ನಾಲ್ಕು ದಶಕಗಳಿಂದ ಕನ್ನಡ ನಾಡು ನುಡಿ ಗಡಿ ಮತ್ತು ಕನ್ನಡಿಗರ ಬದುಕಿನ ಸಮಸ್ಯೆಗಳ ವಿಷಯದಲ್ಲಿ ಕಂಕಣಬದ್ಧವಾಗಿ ರಾಜ್ಯದಾದ್ಯಂತ ಕನ್ನಡ ಕಟ್ಟಾಳುಗಳ ಪಡೆಯನ್ನು ಕಟ್ಟಿಕೊಂಡು ಟಿ.ಎ.ನಾರಾಯಣ ಗೌಡರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ. ಇದುವರೆಗೆ ನೂರಾರು ಯಶಸ್ವಿ ಹೋರಾಟಗಳನ್ನು ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಒಂದು ಸಮಗ್ರ ಭಾಷಾ ನೀತಿ ಮತ್ತು ಭಾಷಾ ಯೋಜನೆಯ ಮಹತ್ವವನ್ನು ಮನಗಂಡು ಇದಕ್ಕಾಗಿ ನಾಡಿನ ಪ್ರಜ್ಞಾವಂತ ಸಹೃದಯಿ ಮನಸುಗಳೊಂಡಿಗೆ ಹೆಜ್ಜೆಯಿಡಲು ನಿರ್ಧರಿಸಿದೆ. ಇದರ ಮೊದಲ ಹೆಜ್ಜೆಯಾಗಿ ನಾಡಿನ ವಿವಿಧ ಕ್ಷೇತ್ರಗಳ ತಜ್ಞರು, ಸಾಹಿತಿ- ಗಣ್ಯರು, ಬುದ್ದಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಒಂದೆಡೆ ಸೇರಿ ಒಂದು ದುಂಡು ಮೇಜಿನ ಸಭೆಯನ್ನು ನಡೆಸಿಕೊಂಡು ಮುಂದಿನ ದಾರಿಯನ್ನು ಚರ್ಚಿಸಲು ಉದ್ದೇಶಿಸಲಾಗಿದೆ.
• ದಿನಾಂಕ 14-06-2026ರಂದು ನಡೆಸಲು ಉದ್ದೇಶಿಸಲಾಗಿರುವ ಒಂದು ದಿನದ ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಲು ಕೆಲವು ಸಲಹೆಗಳು ಹೀಗಿವೆ:
• ಒಂದು ಭಾಷಾ ನೀತಿ ಎಂದರೆ ಏನು? ಭಾಷಾ ಯೋಜನೆ ಎಂದರೆ ಏನು? ಕನ್ನಡಕ್ಕೆ ಭಾಷಾ ನೀತಿ ಹಾಗೂ ಭಾಷಾ ಯೋಜನೆಗಳ ಅಗತ್ಯವಿದೆಯೆ? ಇದರಿಂದ ಆಗಬಹುದಾದ ಪ್ರಯೋಜನಗಳು ಏನು? ಆಗದಿದ್ದರೆ ಭಾಷೆಗೆ ಆಗುವ ತೊಂದರೆ ಅಥವಾ ನಷ್ಟವೇನು? ಉದ್ಯೋಗಗಳಲ್ಲಿ ಕನ್ನಡಿಗರಿಗೆ ಅವಕಾಶ (ಸರೋಜಿನಿ ಮಹಿಷಿ ವರದಿ ಆಧಾರದಲ್ಲಿ). ಮುಖ್ಯವಾಗಿ ಲಭ್ಯ ಇರುವ ದತ್ತಾಂಶಗಳು ಕರ್ನಾಟಕದಲ್ಲಿ ಉದ್ಯೋಗಗಳ ಕುರಿತು ನೀಡುವ ಗ್ರಹಿಕೆ ಏನು? ಇರುವ ಉದ್ಯೋಗಗಳಲ್ಲಿ ಎಷ್ಟು ಕನ್ನಡ ಭಾಷೆಯವು? ಒಂದು ವರ್ಷಕ್ಕೆ ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಎಷ್ಟು? ಅವುಗಳಲ್ಲಿ ಕನ್ನಡದ ಉದ್ಯೋಗಗಳು ಎಷ್ಟು? ಅನ್ಯ ಭಾಷೆಗಳ ಮೂಲಕ ಎಷ್ಟು ಉದ್ಯೋಗಗಳು ಎಲ್ಲೆಲ್ಲಿ ಸೃಷ್ಟಿಯಾಗಿವೆ? ಇವುಗಳಲ್ಲಿ ಎಷ್ಟನ್ನು ಕನ್ನಡದ ಮೂಲಕ ಸೃಷ್ಟಿಸಲು ಸಾಧ್ಯವಿದೆ? ಅನ್ಯ ಭಾಷಿಕರು ಯಾವ ಡೊಮೇನ್ ಗಳಲ್ಲಿ ಕನ್ನಡಿಗರ ಉದ್ಯೋಗ ಕಸಿಯುತ್ತಿದ್ದಾರೆ? ಇತ್ಯಾದಿ.
• ಕನ್ನಡದ ಮೂಲಕ ಉದ್ಯೋಗಾವಕಾಶಗಳ ಸೃಷ್ಟಿ (ಮುಖ್ಯವಾಗಿ ಐಟಿ, ವೈದ್ಯಕೀಯ, ನ್ಯಾಯಾಲಯಗಳು) ಹೇಗೆ? ಇನ್ನು ಎಲ್ಲಿಯವರೆಗೆ ಇಂಗ್ಲಿಷ್ ಭಾಷೆಗೇ ಜೋತು ಬೀಳುವುದು? ಈಗ ಇರುವ ಪ್ರವೃತ್ತಿ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ಕನ್ನಡ ಅಪ್ರಸ್ತುತ ಎನಿಸುವುದಿಲ್ಲವೆ? ಇದೀಗ ಸರ್ಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳನ್ನು ಕಡೆಗಣಿಸಿ ಮ್ಯಾಗ್ನೆಟ್ ಶಾಲೆಗಳನ್ನು ಉತ್ತೇಜಿಸಲು ಉಂಟಾಗಿರುವ ಒತ್ತಡ ಒತ್ತಾಸೆ ಏನು? ಎಲ್ಲಾ ಬಗೆಯ ಉದ್ಯೋಗಗಳಲ್ಲಿ ಕನ್ನಡ ಬಳಕೆ ಜಾರಿಗೊಳಿಸುವ ಬಗೆ ಏನು?
ಇಂದು ಕನ್ನಡ ಮಾಧ್ಯಮ ಎಂದು ಹೇಳಲಾಗುತ್ತಿರುವ ಶಿಕ್ಷಣ ಮಾಧ್ಯಮವು ಅಪ್ರಿಯವಾಗುತ್ತಿರುವುದು ಏಕೆ? ಕೇವಲ ಇತರ ಭಾಷೆಗಳ ಮೇಲಿನ ಸೆಳೆತವೇ? ಕನ್ನಡ ಮಾಧ್ಯಮ ಶಿಕ್ಷಣದಲ್ಲಿಯೇ ‘ಅಪ್ರಯೋಜಕ’ ಎನಿಸುವ ಅಥವಾ ಕಲಿಕೆಗೆ ತೊಂದರೆಯಾಗುವ ಸಮಸ್ಯೆಗಳಿವೆಯೆ?
• ಶಿಕ್ಷಣದಲ್ಲಿ ಕನ್ನಡ (ಮಾಧ್ಯಮ, ಭಾಷಾ ಕಲಿಕೆ, ದ್ವಿಭಾಷಾ ನೀತಿ, ಹೊರಗಿನವರಿಗೆ ಕನ್ನಡ ಕಲಿಸುವುದು, ಇತ್ಯಾದಿ). ಶಿಕ್ಷಣದ ಪ್ರತಿ ಹಂತದಲ್ಲಿ ಅಂದರೆ ನರ್ಸರಿ, ಎಲ್ ಕೆ ಜಿ, ಯುಕೆಜಿ/ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ, ಪದವಿ, ವೃತ್ತಿಪರ ಶಿಕ್ಷಣ, ಮೆಡಿಕಲ್, ಎಂಜಿನಿಯರಿಂಗ್, ಉನ್ನತ ಶಿಕ್ಷಣ ಹೀಗೆ ಪ್ರತಿ ಹಂತದಲ್ಲಿ ಕನ್ನಡವನ್ನು ಮುಂದಿನ ಐದು-ಹತ್ತು-ಇಪ್ಪತ್ತು ವರ್ಷಗಳಲ್ಲಿ ಬಳಸುವುದು ಮತ್ತು ಬೆಳೆಸುವುದು ಹೇಗೆ ಎಂಬ ಕುರಿತು ನೀತಿ.
* ಕನ್ನಡ ಭಾಷೆಯ ಪ್ರಮಾಣೀಕರಣದಲ್ಲಿ (standardization) ಆಗಿರುವ ಸಮಸ್ಯೆಗಳೇನು? ಕರ್ನಾಟಕದ ಒಳನುಡಿಗಳಿಗೆ ಅಂದರೆ ಉದಾಹರಣೆಗೆ, ಧಾರವಾಡ ಕನ್ನಡ, ಚಾಮರಾಜ ನಗರ ಕನ್ನಡ, ಕೋಲಾರ ಕನ್ನಡ, ಅರೆಭಾಷೆ ಕನ್ನಡ, ಹವ್ಯಕ ಕನ್ನಡ, ದೀವರು ಕನ್ನಡ, ಕುಂದಾಪ್ರ ಕನ್ನಡ, ಹಾಲಕ್ಕಿ ಕನ್ನಡ, ಮಂಡ್ಯ ಕನ್ನಡ, ಬೀದರ್ ಕನ್ನಡ, ಕಾರವಾರ ಕನ್ನಡ ಮುಂತಾಗಿರುವ ಬಹುಬಗೆ ಕನ್ನಡಗಳಿಗೆ ಪ್ರಾಮುಖ್ಯತೆ ನೀಡುವ ಬಗೆ ಏನು? ಶಿಕ್ಷಣ, ಎಐ (ಕೃತಕ ಬುದ್ಧಿಮತ್ತೆ ಸಾಧನೆಗಳು) ಮತ್ತಿತರ ಕಡೆಗಳಲ್ಲಿ ಇವುಗಳ ಒಳಗೊಳ್ಳುವಿಕೆ ಹೇಗೆ?
• ಕನ್ನಡ ಲಿಪಿಯಲ್ಲಿ ಸುಧಾರಣೆಯ ಅಗತ್ಯ ಇದೆಯೇ? ಈ ಕುರಿತು ಎದ್ದಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಕನ್ನಡದ ಹಿತದೃಷ್ಟಿಯಿಂದ ತಳೆಯಬೇಕಾದ ನಿಲುವು ಏನು? ಕರ್ನಾಟಕದಲ್ಲಿರುವ ಕನ್ನಡದ ಸಹಭಾಷೆಗಳ ಕುರಿತು ತಳೆಯಬೇಕಾದ ನಿಲುವು ಯಾವುದು? ಉದಾಹರಣೆಗೆ, ತುಳು, ಕೊಡವ, ಕೊರಗ, ಕೊರಚ, ಬ್ಯಾರಿ, ಮಲಾಮೆ, ಸೋಲಿಗ, ಎರವ ಇತ್ಯಾದಿ.
ಗಡಿನಾಡಿನ ಭಾಗಗಳಲ್ಲಿ ಕನ್ನಡ ಉತ್ತೇಜನ, ಹೊರ ಭಾಷೆಗಳ ಪ್ರಭಾವ ಪ್ರಾಬಲ್ಯ (ಉದಾಹರಣೆಗೆ ಬೆಳಗಾವಿಯಂತ ಕಡೆ) ತಗ್ಗಿಸಲು ಏನು ಮಾಡಬೇಕು?
ಇತರ ಭಾಷೆಗಳಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇತರ ಭಾಷೆಗಳಿಗೆ ಆಗಬೇಕಾದ ಅನುವಾದಗಳ ಕುರಿತು.
ಇಲ್ಲಿ ಉಲ್ಲೇಖಿಸಿದ ವಿಷಯಗಳೊಂದಿಗೆ ಭಾಷೆಯ ದೃಷ್ಟಿಯಿಂದ ಮುಖ್ಯವಾಗುವ ಮತ್ತಷ್ಟು ವಿಷಯಗಳನ್ನು ಮುಕ್ತವಾಗಿ ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಿಕೊಂಡು ಮುಂದಿನ ಹಂತದಲ್ಲಿ ಈ ಕುರಿತು ಒಂದು ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸುವುದು. ಇದರ ಭಾಗವಾಗಿ ಜುಲೈ – ಆಗಸ್ಟ್ ವೇಳೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಸಹಯೋಗದೊಂದಿಗೆ ಮೂರು ದಿನಗಳ ಕಮ್ಮಟವೊಂದನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಕಮ್ಮಟದ ಕುರಿತಾಗಿಯೂ ದುಂಡು ಮೇಜಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಕರ್ನಾಟಕ ರಕ್ಷಣಾ ವೇದಿಕೆ ಪರವಾಗಿ ಸಂಯೋಜಕರು
ಹರ್ಷಕುಮಾರ್ ಕುಗ್ವೆ (ಮೊ: 90084 01873)
ದಿನೇಶ್ ಕುಮಾರ್ ಎಸ್.ಸಿ. (ಮೊ: 99455 36888)
( : 96200 04443)
(: 99021 22029/94815 22929)
(: 94834 21989)
( : 97410 22882)
(: 99003 58358)




