ಜುಲೈ 19ರಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಆಯೋಜನೆ
ಬೆಂಗಳೂರು: ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಹಾಗೂ ಸಾಮಾಜಿಕ ಹೋರಾಟದ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ, ಬರವಣಿಗೆಯ ಧೀಮಂತ ಚೇತನ ನ್ಯಾಮತಿ ಸೊಂಡೂರು ಶಂಕರ್ (ಎನ್.ಎಸ್. ಶಂಕರ್) ಅವರ ‘ಸ್ಮರಣೆ’ ಕಾರ್ಯಕ್ರಮವನ್ನು ಜುಲೈ 19ರ ಭಾನುವಾರದಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅವರ ಸಹಯೋಗದೊಂದಿಗೆ ‘ಶಂಕರ್ ಸ್ನೇಹಿತರ ಬಳಗ’ ಈ ಸ್ಮರಣಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದೆ.
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
- ಸಂಗೀತ ಬಾರ್ & ರೆಸ್ಟೋರೆಂಟ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿ
- ಅನರ್ಹ ಕಂಪನಿಗೆ ಕಸದ ಟೆಂಡರ್: ಆರ್.ಅಶೋಕ
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕಾರ್ಯಕ್ರಮದ ವಿವರಗಳು:
ದಿನಾಂಕ: 19-07-2026, ಭಾನುವಾರ
ಸಮಯ: ಬೆಳಿಗ್ಗೆ 10:30ಕ್ಕೆ
ಸ್ಥಳ: ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್, ಬೆಂಗಳೂರು
ಉದ್ಘಾಟನೆ ಮತ್ತು ಮುಖ್ಯ ಅತಿಥಿಗಳು:
ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಹಿರಿಯ ಚಿಂತಕ ಜಿ. ರಾಮಕೃಷ್ಣ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಸಿನಿಮಾ ಮತ್ತು ಮಾಧ್ಯಮ ಕ್ಷೇತ್ರದ ಪ್ರಮುಖ ಗಣ್ಯರಾದ: ಹಿರಿಯ ಚಿಂತಕರಾದ ಅಗ್ರಹಾರ ಕೃಷ್ಣಮೂರ್ತಿ, ಸಿನಿಮಾ ನಟ ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ವಿ. ಮನೋಹರ್, ಕರ್ನಾಟಕ ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ. ಕೃಷ್ಣ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ಪತ್ರಕರ್ತರೆ ಆರ್.ಪೂರ್ಣಿಮಾ, ಹಿರಿಯ ಸಾಮಾಜಿಕ ಹೋರಾಟಗಾರ ಬಿ.ಶ್ರೀಪಾದ ಭಟ್, ಹಿರಿಯ ನಟಿ ಸುಷ್ಮಾ ವೀರ್, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ದಿನೇಶ್ ಅಮಿನ್ ಮಟ್ಟು, ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ನಿರ್ದೇಶಕ ಯೋಗರಾಜ್ ಭಟ್, ಅನುವಾದ ಇಲಾಖೆಯ ನಿರ್ದೇಶಕ ಅರದೇಶಹಳ್ಳಿ ವೆಂಕಟೇಶ್, ನಿರ್ದೇಶಕಿ ಕವಿತಾ ಲಂಕೇಶ್, ಸಾಮಾಜಿಕ ಹೋರಾಟಗಾರ ವಿ.ಎಲ್. ನರಸಿಂಹಮೂರ್ತಿ, ಎನ್.ಎಸ್.ಶಂಕರ್ ಅವರ ಪುತ್ರ ರಾಹುಲ್ ಶಂಕರ್ ನುಡಿನಮನ ಸಲ್ಲಿಸಲಿದ್ದಾರೆ.
ಅಲ್ಲದೆ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳತಂಗಡಿ ಮತ್ತು ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅವರ ಉಪಸ್ಥಿತಿ ಇರಲಿದ್ದು, ಮಂಜುನಾಥ ಅದ್ದೆ ಅವರು ವಂದನಾರ್ಪಣೆ ನೆರವೇರಿಸಲಿದ್ದಾರೆ.
ಕಣ್ಮರೆಯಾದ ಬಹುಮುಖ ಪ್ರತಿಭೆ:
ನ್ಯಾಮತಿ ಸೊಂಡೂರ್ ಶಂಕರ್ (ಎನ್.ಎಸ್. ಶಂಕರ್). ನಮ್ಮ ನಡುವಿನ ಅತ್ಯಂತ ಪ್ರಖರ ಸಾಮಾಜಿಕ ಪ್ರಜ್ಞೆಯುಳ್ಳ, ಬದುಕು ಮತ್ತು ಬರಹವನ್ನು ಒಂದೇ ನಾಣ್ಯದ ಎರಡು ಮುಖಗಳಾಗಿಸಿಕೊಂಡಿದ್ದ ಅಪರೂಪದ ಸಮಕಾಲೀನ ಚೇತನ. ಪತ್ರಕರ್ತ, ಕಥೆಗಾರ, ರಾಜಕೀಯ ಚಿಂತಕ, ಚಲನಚಿತ್ರ-ಸಾಕ್ಷ್ಯಚಿತ್ರ ನಿರ್ದೇಶಕ, ವ್ಯಂಗ್ಯಚಿತ್ರಕಾರ… ಹೀಗೆ ಕೈಹಾಕಿದ ಪ್ರತಿ ಕ್ಷೇತ್ರದಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಧೀಮಂತ ಗೆಳೆಯ ಇಂದು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ದಂಪತಿಯ ಮಗನಾಗಿ ಸೊರಬದಲ್ಲಿ ಹುಟ್ಟಿ, ನ್ಯಾಮತಿ, ಪಾಂಡವಪುರ, ಮೈಸೂರು, ಬೆಂಗಳೂರುಗಳಲ್ಲಿ ಬೆಳೆದ ಶಂಕರ್ ಅವರ ಉಸಿರಲ್ಲೇ ಸಾಮಾಜಿಕ ನ್ಯಾಯದ ತುಡಿತವಿತ್ತು. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿ ಬಿ.ಎಸ್ಸಿ ಪದವಿ ಪಡೆದು ಬರಹದತ್ತ ತುಡಿದ ಅವರು ಪತ್ರಿಕೋದ್ಯಮ ಪದವಿಯನ್ನು ಅರ್ಧಕ್ಕೇ ತೊರೆದು ತುಮಕೂರು ಟೈಂಸ್, ಸಿಟಿ ಟೈಂಸ್, ಜನವಾಣಿ ಪತ್ರಿಕೆಗಳಿಂದ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿ ‘ಪ್ರಜಾವಾಣಿ’ಗೆ ತಲುಪಿದರು. ಅಲ್ಲಿಂದ ‘ಮುಂಗಾರು’ ಮತ್ತು ‘ಸುದ್ದಿ ಸಂಗಾತಿ’ಯ ಸ್ಥಾಪಕರಾಗಿ ಬಳಿಕ ‘ಲಂಕೇಶ್ ಪತ್ರಿಕೆ’ ಸೇರಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅವರು ನಡೆಸಿದ ಪತ್ರಿಕೋದ್ಯಮದ ಪಯಣ ಸದಾ ಆದರ್ಶಪ್ರಾಯವಾದದ್ದು. ಟಿವಿ ಮಾಧ್ಯಮದಲ್ಲೂ ಅವರು ತಂದ ಸೃಜನಶೀಲ ಬದಲಾವಣೆಗಳು ಸಂಚಲನ ಮೂಡಿಸಿದವು.
ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮದ ಕಡೆಗೆ ತಿರುಗಿದಾಗಲೂ ಅವರೊಳಗಿನ ಸಮಾಜಮುಖಿ ಬರಹಗಾರ ಜಾಗೃತನಾಗಿಯೇ ಇದ್ದ. ಲಂಕೇಶರ ಕಥೆ ಆಧಾರಿತ ‘ಮುಟ್ಟಿಸಿಕೊಂಡವರು’ ಚಿತ್ರದ ಮೂಲಕ ಆರಂಭವಾದ ಅವರ ಸಿನಿಮಾ ಪಯಣವು ಅಪಾರ ಜನಪ್ರಿಯತೆ ಪಡೆದ ನಾಲ್ಕು ಟಿವಿ ಧಾರಾವಾಹಿಗಳಲ್ಲಿ (ಬದುಕು ಜಟಕಾಬಂಡಿ, ಶೋಧ, ಪರಿಸರ, ಕ್ಷಮಯಾ ಧರಿತ್ರಿ) ಮುಂದುವರೆಯಿತು. ಮುಂದೆ ರಾಜ್ಯ ಪ್ರಶಸ್ತಿ ವಿಜೇತ ‘ಉಲ್ಟಾಪಲ್ಟಾ’, ‘ರಾಂಗ್ ನಂಬರ್’, ‘ಜೂಟಾಟ’ ಚಲನಚಿತ್ರಗಳ ಮೂಲಕ ಅವರ ದೃಶ್ಯ ಪ್ರಯೋಗಗಳು ಕನ್ನಡಿಗರ ಮನ ಗೆದ್ದವು. ಗ್ರಾಮೀಣ ಬಿಕ್ಕಟ್ಟು ಹಾಗೂ ರೈತರ ಆತ್ಮಹತ್ಯೆಯ ಕುರಿತು ಅವರು ಸಿದ್ಧಪಡಿಸಿದ 23 ಭಾಗಗಳ ‘ರೈತಬಲಿ’ ಸಾಕ್ಷ್ಯಚಿತ್ರ ಸರಣಿ ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿತ್ತು. ಅವರು ರೂಪಿಸಿದ ‘ಬಾಪೂ’ ಬಹುಮಾಧ್ಯಮ ರಂಗಪ್ರಸ್ತುತಿ ಮತ್ತು ‘ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆಗಳು’ ಸಾಕ್ಷ್ಯಚಿತ್ರಗಳು ಅವರ ವೈಚಾರಿಕತೆಗೆ ಸಾಕ್ಷಿಯಾಗಿದ್ದವು.
ಪತ್ರಿಕೋದ್ಯಮ, ದೃಶ್ಯ ಮಾಧ್ಯಮದ ಜೊತೆಯಲ್ಲಿ ದಲಿತ ಚಳವಳಿಗಳ ಜೊತೆ ಗುರುತಿಸಿಕೊಂಡ ಶಂಕರ್ ತಮ್ಮ ಸಾಮಾಜಿಕ-ರಾಜಕೀಯ ಕ್ಷೇತ್ರದ ಗಂಭೀರ ಚಿಂತನೆಗಳನ್ನು ‘ಮೇಲೋಗರ’, ‘ಹುಡುಕಾಟ’, ‘ಉಸಾಬರಿ’ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅಂಬೇಡ್ಕರ್ ಅವರ ವೈಚಾರಿಕ ಬರಹ-ಕೃತಿಗಳನ್ನು ಕನ್ನಡಕ್ಕೆ ತಂದ ಶಂಕರ್ ಅನುವಾದಕ್ಕೊಂದು ಹೊಸ ಆಯಾಮ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪುರಸ್ಕಾರ, ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಶಂಕರ್ ಅವರನ್ನು ಅರಸಿಬಂದವು. ಕತೆ, ಸಿನೆಮಾಬರಹ, ರಾಜಕೀಯ, ವೈಚಾರಿಕ ಬರಹ, ಜೀವನಚರಿತ್ರೆಗಳು, ಅನುವಾದಗಳೂ ಸೇರಿದಂತೆ ಅವರ ಇಪ್ಪತ್ತೆರಡು ಕೃತಿಗಳು ಪ್ರಕಟವಾಗಿವೆ. ಕೃತಿರೂಪದಲ್ಲಿ ಸಂಕಲನವಾಗಬೇಕಾದ ನೂರಾರು ಬಿಡಿ ಬರಹಗಳೂ ಇವೆ. ಇಷ್ಟೆಲ್ಲಾ ಸಾಧನೆಗಳ ಶಿಖರದಲ್ಲಿದ್ದರೂ ಶಂಕರ್ ಎಂದಿಗೂ ಸರಳತೆ ಬಿಟ್ಟವರಲ್ಲ. ತಮ್ಮ ಪ್ರಖರ ಚಿಂತನೆಯಿಂದ ಯುವ ಸಮೂಹವನ್ನು ಆಕರ್ಷಿಸಿದ್ದರು. ಸದಾ ಪ್ರಯೋಗಶೀಲರಾಗಿದ್ದ ಅವರು ಸಮೂಹ ಬಂಡವಾಳದ ‘ಈಗʼ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾಗಲೇ ಕಾಲದ ಕರೆಗೆ ಓಗೊಟ್ಟು ನಡೆದೇ ಬಿಟ್ಟರು. ಅಕ್ಷರ, ದೃಶ್ಯ ಮತ್ತು ಸಾಮಾಜಿಕ ಹೋರಾಟದ ಮೂಲಕ ಅವರು ಬಿಟ್ಟುಹೋಗಿರುವ ಶೂನ್ಯವನ್ನು ತುಂಬುವುದು ಕಷ್ಟ.
ಶಂಕರ್ ಅವರ ದೈಹಿಕ ಅನುಪಸ್ಥಿತಿಯಲ್ಲೂ ಅವರು ಬಿತ್ತಿದ ವಿಚಾರಗಳು, ಸೃಜಿಸಿದ ಕೃತಿಗಳು ಮತ್ತು ನಿಷ್ಕಲ್ಮಶ ಸ್ನೇಹದ ನೆನಪುಗಳು ನಮ್ಮಲ್ಲಿ ಸದಾ ಜೀವಂತ. ಅಗಲಿದ ಗೆಳೆಯನಿಗೆ ವಿದಾಯ ಹೇಳಲು ಜೊತೆಯಾಗೋಣ,
– ಶಂಕರ್ ಸ್ನೇಹ ಬಳಗ






