ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಸಂತ ಶ್ರೀ ಸೇವಾಲಾಲ್: ಖಂಡೂ ಬಂಜಾರ

1 year ago

ಸಂತ ಶ್ರೀ ಸೇವಾಲಾಲ್ ಜಯಂತಿ

ಚಿತ್ರದುರ್ಗ: ಭೂಮಿಯ ಮೇಲಿರುವ ಸಕಲ ಜೀವರಾಶಿಗಳಿಗೂ ಒಳ್ಳೆಯದನ್ನೇ ಬಯಸಿದವರು ಸಂತ ಶ್ರೀ ಸೇವಾಲಾಲ್ ಎಂದು ಕೊಳಹಾಳ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಾಗೂ ಸಾಹಿತಿ ಖಂಡೂ ಬಂಜಾರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಇರುವವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಲೇಸನ್ನು ಬಯಸಿದ ಸಂತ ಸೇವಾಲಾಲ್ ಅವರು, ಮರ ಕಡೆದು ಜೀವ ಇಲ್ಲದಿರುವ ಒಣಗಿದ ಬಡ್ಡೆಯೂ ಸಹ ಚಿಗುರೊಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಏಕೈಕ ವ್ಯಕ್ತಿ ಎಂದರು.

ನಮ್ಮ ದೇಹದಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಸುಟ್ಟು ಹಾಕಬೇಕು.  ಸತ್ಯ ಮತ್ತು ಧರ್ಮವನ್ನು ಮುನ್ನಡೆಸಬೇಕು. ಜೊತೆಗೆ ನಿಮಗೆ ಕೈಲಾದರೆ ಹಸಿದವರಿಗೆ ಅನ್ನ, ನೀರು ಕೊಡಿ ಎಂಬ ಸಂದೇಶವನ್ನು ಸಂತ ಸೇವಾಲಾಲ್ ಅವರು ಸಾರಿದ್ದಾರೆ ಎಂದರು.

ಸಂತ ಶ್ರೀ ಸೇವಾಲಾಲ್ ಅವರ ತತ್ವಾದರ್ಶ, ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಿಲು ನಾವೆಲ್ಲರೂ ಶ್ರಮಿಸೋಣ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಬಂಜಾರ ಎಂಬುವುದು ಒಂದು ಜಾತಿ ಅಲ್ಲ. ಅದೊಂದು ಸಂಸ್ಕೃತಿ. ಅವರ ಕರಕುಶಲತೆ ವಿಭಿನ್ನ ಹಾಗೂ ವಿಶಿಷ್ಟ, ಸೃಜನಶೀಲತೆಯಿಂದ ಕೂಡಿದೆ ಎಂದರು.

ಬಂಜಾರ ಸಮುದಾಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಮ್ಮ ದುಡಿಮೆಯ ಜೊತೆಗೆ ಸರ್ಕಾರದ ಮೀಸಲಾತಿ, ಸೌಲಭ್ಯ ಸದ್ಭಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಮಾರ್ಪಾಡು ಸಾಧ್ಯ ಎಂದರು.

ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಮಾತನಾಡಿ, ಸಮುದಾಯ ಹಾಗೂ ಇತಿಹಾಸದ ಉಳಿವಿಗಾಗಿ ಸಂಘಟನೆ ಅವಶ್ಯಕವಾಗಿದೆ. ಸಂಸ್ಕೃತಿ, ಸಂಸ್ಕಾರ ಉಳಿಸಿಕೊಂಡು ಮುಂದಿನ ಪೀಳಿಗೆ ಕೊಂಡ್ಯೊಯುವ ಕೆಲಸವಾಗಬೇಕು ಎಂದರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಾರ್ಶನಿಕರು, ಸಮಾಜ ಸೇವಕರು, ಪವಾಡ ಪುರುಷರು, ಗೋಪಾಲಕರು, ಸಂತರು, ಶ್ರೇಷ್ಟರೂ ಎನಿಸಿಕೊಂಡಿರುವ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದರು.

ಎಲ್ಲ ಜನಾಂಗದಲ್ಲಿಯೂ ಶ್ರೇಷ್ಟ ದಾರ್ಶನಿಕರು ಹುಟ್ಟಿ ತಮ್ಮ ಜ್ಞಾನವನ್ನು ಜನಾಂಗಕ್ಕೆ ಹಾಗೂ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಸಂತ ಶ್ರೀ ಸೇವಾಲಾಲ್ ಅವರು ಮಹಾಜ್ಞಾನಿಯೂ ಹಾಗೂ ತ್ರಿಕಾಲ ಜ್ಞಾನಿ ಎಂತಲೂ ಕರೆಯುತ್ತೇವೆ ಎಂದರು.

ನಮ್ಮ ಬಂಜಾರ ಭಾಷೆ ಇಡೀ ವಿಶ್ವದಲ್ಲಿಯೇ ಒಂದು ತರನಾಗಿದೆ. ಅನೇಕ ಲಾವಣಿ ಪದಗಳು, ಲಂಬಾಣಿ ನೃತ್ಯಗಳು, ಭಜನೆ ಹೀಗೆ ಅನೇಕ ಬಂಜಾರ ಸಂಸ್ಕೃತಿಯ ಮೂಲಕ ಸಂತ ಶ್ರೀ ಸೇವಾಲಾಲ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ ಮಾತನಾಡಿ, ಮೂರು ಶತಮಾನಗಳ ಹಿಂದೆಯೇ ಸಮಾಜವನ್ನು ಸಂಘಟಿಸಿರುವಂತಹ ಮಹಾನ್ ಗುರುಗಳಾದ ಸೇವಾಲಾಲ್ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದರು.

ಸರ್ಕಾರದ ಸವಲತ್ತು ಪಡೆಯಲು ಸಹ ನಾವು ಸಂಘಟನೆಯಾಗಬೇಕು. ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಕೊಟ್ಟಾಗ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ, ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಕೊಡುವ ಕೆಲಸ ಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,  ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಗೌರವಾಧ್ಯಕ್ಷ ಜಿ.ರಾಜನಾಯ್ಕ, ಮುಖಂಡರಾದ ಮಾಧವ ನಾಯ್ಕ್, ಪ್ರಕಾಶ್ ರಮಾನಾಯ್ಕ್, ವಸಂತ್ ನಾಯ್ಕ್, ರಮೇಶ್ ನಾಯ್ಕ್, ದುರ್ಗ ನಾಯ್ಕ್, ರಮೇಶ್ ನಾಯ್ಕ್, ಸುಮೀತ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಹೊಸದುರ್ಗ ತಾಲ್ಲೂಕು ಪೀಲಾಪುರ ಗ್ರಾಮದ ಕಂಠೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Leave a Reply