ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು

1 day ago

ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು

ಹಿಂದಿ ಮೂಲ: ರಾಮ್ ಪುನಿಯಾನಿ ಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿ

ಈ ವರ್ಷ ಜೂನ್ 10ರಂದು ಮೋದಿ ಅವರು ಭಾರತವನ್ನು ಸತತವಾಗಿ ಆಳಿದ ಪ್ರಧಾನಿಯಾದರು. ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಕೆಲವು ವಾರಗಳ ಮುನ್ನವಷ್ಟೇ ಮೋದಿ ಅವರು ತಮ್ಮ ಆಡಳಿತದ 12 ವರ್ಷಗಳನ್ನು ಪೂರೈಸಿದ್ದರು. ಈ ಎರಡೂ ಸಂದರ್ಭಗಳನ್ನು ಬಿಜೆಪಿ ಪ್ರಚಾರ ವ್ಯವಸ್ಥೆ ಮೋದಿ ಅವರ ವರ್ಚಸ್ಸನ್ನು ತಮಗೆ ಬೇಕಾದ ರೀತಿಯಲ್ಲಿ ಮತ್ತಷ್ಟು ಹೆಚ್ಚಿಸಲು ಬಳಸಿಕೊಳ್ಳುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಂತೂ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತುಗಳನ್ನು ನೀಡಿ ಮೋದಿ ಅವರ ‘ದೊಡ್ಡ’ ಸಾಧನೆಗಳನ್ನು ಕೊಂಡಾಡುತ್ತಿದ್ದಾರೆ.

ಈ ಸಾಧನೆಗಳಲ್ಲಿ ದೇಶದ 81 ಕೋಟಿ ಬಡವರಿಗೆ ಪ್ರತಿ ತಿಂಗಳು ಪಡಿತರ, 4 ಕೋಟಿ ಪಿಎಂ ಆವಾಸ್ ಮನೆಗಳು, 10.5 ಕೋಟಿ ಉಜ್ವಲ ಎಲ್‌ಪಿಜಿ ಸಂಪರ್ಕಗಳು ಮತ್ತು 12 ಕೋಟಿ ಶೌಚಾಲಯಗಳ ನಿರ್ಮಾಣದಂತಹ ಲೇಕ್ಕಾಚಾರಗಳನ್ನು ಪ್ರಮುಖವಾಗಿ ಮುಂಚೂಣಿಗೆ ತರಲಾಗಿದೆ. ಇವುಗಳ ಜೊತೆಗೆ ಜನಧನ್ ಖಾತೆಗಳು, ಮೆಟ್ರೋ ನೆಟ್‌ವರ್ಕ್, ಯುವಕರಿಗೆ ಕೌಶಲ್ಯ ತರಬೇತಿ, ಆಯುಷ್ಮಾನ್ ಭಾರತ್ ಮುಖಾಂತರ ಉಚಿತ ಚಿಕಿತ್ಸೆ, ರಕ್ಷಣಾ ರಫ್ತು (ಡಿಫೆನ್ಸ್ ಎಕ್ಸ್‌ಪೋರ್ಟ್) ಹಾಗೂ ರೈತರು ಮತ್ತು ಮಧ್ಯಮ ವರ್ಗದ ಕಲ್ಯಾಣದ ಬಗ್ಗೆಯೂ ಚರ್ಚಿಸಲಾಗುತ್ತಿದೆ.

ಆದರೆ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್, ಕೇದರನಾಥ ಧಾಮ ಮತ್ತು ಉಜ್ಜಯಿನಿಯ ಮಹಾಕಾಲ ಧಾಮದಂತಹ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯನ್ನು ವಿಶೇಷವಾಗಿ ಹೈಲೈಟ್ ಮಾಡಲಾಗುತ್ತಿದೆ. ಉತ್ತರಾಖಂಡದ ಮುಖ್ಯಮಂತ್ರಿಗಳಂತೂ ಈ ನಿಟ್ಟಿನಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ಜಿಲ್ಲೆಯಲ್ಲೂ ಸಂಸ್ಕೃತ ಶಾಲೆಗಳನ್ನು ತೆರೆಯುವುದು, ದೂನ್ ವಿಶ್ವವಿದ್ಯಾಲಯದಲ್ಲಿ ಹಿಂದೂ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವುದು, ಶಾಲಾ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸೇರಿಸುವುದು ಮತ್ತು ಹಿಂದೂ ಹಾಗೂ ಸಿಖ್ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದನ್ನು ತಮ್ಮ ಸಾಧನೆಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ.

ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಈ 12 ವರ್ಷಗಳ ಅವಧಿಯಲ್ಲಿ ಪ್ರಜಾಪ್ರಭುತ್ವದ ಆ ಅಡಿಪಾಯಗಳನ್ನು ನಿರಂತರವಾಗಿ ದುರ್ಬಲಗೊಳಿಸಲಾಗಿದೆ, ಯಾವುದನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣದ ಹಂಗು ತೊರೆದು ಕಟ್ಟಿದ್ದರೋ ಮತ್ತು ನೆಹರೂ ಅವರು ಪೋಷಿಸಿದ್ದರೋ ಅವುಗಳನ್ನು ಹಾನಿ ಮಾಡಲಾಗಿದೆ. ಉದಾಹರಣೆಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಜಾಗತಿಕ ಸೂಚ್ಯಂಕದಲ್ಲಿ (ಗ್ಲೋಬಲ್ ಇಂಡೆಕ್ಸ್) ಭಾರತ ವೇಗವಾಗಿ ಕುಸಿದು ಬೀಳುತ್ತಿದೆ ಮತ್ತು ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತವನ್ನು ‘ಜನರಿಂದ ಆಯ್ಕೆಯಾದ ಸರ್ವಾಧಿಕಾರ’ (ಇಲೆಕ್ಟೆಡ್ ಆಟೋಕ್ರಸಿ) ಎಂದು ಕರೆಯುತ್ತಿವೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳೂ ಸಹ ಒಟ್ಟೊಟ್ಟಿಗೆ ದುರ್ಬಲಗೊಳ್ಳುತ್ತಿವೆ. ಈ ಕುಸಿಯುತ್ತಿರುವ ಮಾನದಂಡಗಳ ಕಡೆಗೆ ಪ್ರಸ್ತುತ ಮೂಲೆಗುಂಪು ಮಾಡಲಾಗಿರುವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರೂ ಸಹ ಗಮನ ಸೆಳೆದಿದ್ದರು; ಮೋದಿ ಸರ್ಕಾರದ ಅವಧಿಯಲ್ಲಿ ಘೋಷಿತವಲ್ಲದ ತುರ್ತು ಪರಿಸ್ಥಿತಿಯಂತಹ ವಾತಾವರಣವಿದೆ ಎಂದು ಅವರು ಹೇಳಿದ್ದರು.

ಇಡಿ, ಆದಾಯ ತೆರಿಗೆ ಇಲಾಖೆ (ಐಟಿ), ಸಿಬಿಐನಂತಹ ಸ್ವತಂತ್ರ ಸಂಸ್ಥೆಗಳು ಸಂಪೂರ್ಣವಾಗಿ ಆಡಳಿತ ಸರ್ಕಾರದ ಕೈಗೊಂಬೆಗಳಾಗಿವೆ. ನ್ಯಾಯಾಂಗವೂ ಸಹ ಸರ್ಕಾರದ ನಿರ್ಧಾರಗಳ ಮುಂದೆ ಮಂಡಿಯೂರುವಂತೆ ಒತ್ತಡ ಹೇರಲಾದಂತೆ ಕಾಣುತ್ತಿದೆ. ನ್ಯಾಯಾಂಗದಲ್ಲಿ ನ್ಯಾಯಾಧೀಶರು ತೀರ್ಪು ನೀಡುವಾಗ ಭಾರತದ ಸಂವಿಧಾನದ ಬದಲು ಮನುಸ್ಮೃತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರ ಪರಾಕಾಷ್ಠೆ ಎಂಬಂತೆ, ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರು ತಮ್ಮ ಕನಸಿನಲ್ಲಿ ದೇವರು ಬಂದು ನಿರ್ದಿಷ್ಟ ನಿರ್ದೇಶನ ನೀಡಿದ ಮೇಲೆಯೇ ತಾವು ಬಾಬರಿ ಮಸೀದಿ ತೀರ್ಪನ್ನು ಬರೆದಿದ್ದಾಗಿ ಹೇಳಿಕೊಂಡಿದ್ದರು.

ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯಾದವರು ಸಂಪುಟದಲ್ಲಿ ‘ಸಮಾನರಲ್ಲಿ ಮೊದಲನೆಯವರು’ (ಫರ್ಸ್ಟ್ ಅಮಾಂಗ್ ದಿ ಈಕ್ವಲ್ಸ್) ಆಗಿರುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ನಿರ್ಧಾರಗಳು ಪ್ರಧಾನಿಯವರಿಂದಲೇ ನೇರವಾಗಿ ಬರುತ್ತಿವೆ. ಅವರು ತಮ್ಮನ್ನು ತಾವು ‘ನಾಗರಿಕ ಜೈವಿಕ ಪ್ರಕ್ರಿಯೆಗೆ ಒಳಪಡದವರು’ (ನಾನ್-ಬಯೋಲಾಜಿಕಲ್) ಎಂದು ಕರೆದುಕೊಳ್ಳುವ ಮೂಲಕ ತಮ್ಮನ್ನು ದೈವಿಕ ಮಟ್ಟಕ್ಕೆ ಏರಿಸಿಕೊಂಡಿದ್ದಾರೆ.

ಅವರ ಅಧಿಕಾರಾವಧಿಯಲ್ಲಿ 2020ರ ದೆಹಲಿ ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ದೊಡ್ಡ ಕೋಮು ದಂಗೆಗಳು ನಡೆಯದಿದ್ದರೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲು ಮತ್ತು ಅವರ ನಾಗರಿಕ ಹಕ್ಕುಗಳನ್ನು ದುರ್ಬಲಗೊಳಿಸಲು ಅವರು ಯಾವುದೇ ಅವಕಾಶವನ್ನು ಬಿಟ್ಟಿಲ್ಲ. ಎಲ್ಲೆಡೆ ಹಿಂದುತ್ವ ರಾಜಕಾರಣದ ಮೇಲುಗೈ ಇದೆ. ದೊಡ್ಡ ಪ್ರಮಾಣದ ನರಮೇಧಗಳ ಬದಲಾಗಿ, ಈಗ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಸಣ್ಣಪುಟ್ಟ ದಾಳಿಗಳು ಸಾಮಾನ್ಯ ಸಂಗತಿಯಾಗಿವೆ.

ಕೊರೊನಾ ಲಾಕ್‌ಡೌನ್, ನೋಟು ನಿಷೇಧ (ಡಿಮಾನಿಟೈಸೇಶನ್) ಮತ್ತು ಜಿಎಸ್‌ಟಿ ಜಾರಿಗೊಳಿಸುವಿಕೆಯಂತಹ ಅವರ ಪ್ರಮುಖ ನಿರ್ಧಾರಗಳು ಸಾಮಾನ್ಯ ಜನರ ಬೆನ್ನೆಲುಬನ್ನು ಮುರಿದಿವೆ. ಭಯೋತ್ಪಾದನೆ ಮತ್ತು ಕಪ್ಪುಹಣದಂತಹ ಸಮಸ್ಯೆಗಳನ್ನು ಕೊನೆಗೊಳಿಸಲು ‘ರಾಮಬಾಣ’ ಎಂದು ಬಿಂಬಿಸಲಾಗಿದ್ದ ನೋಟು ನಿಷೇಧ, ನಮ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವನ್ನು ನಾಶಪಡಿಸಿತು ಹಾಗೂ ಲಕ್ಷಾಂತರ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿತು; ಆದರೆ ಶೇ. 99.3ರಷ್ಟು ನಗದು ಮತ್ತೆ ಚಲಾವಣೆಗೆ ಮರಳಿದೆ. ಯಾವುದೇ ಮುನ್ಸೂಚನೆ ಅಥವಾ ಸಮಯ ನೀಡದೆ ಇದ್ದಕ್ಕಿದ್ದಂತೆ ಹೇರಲಾದ ಕೊರೊನಾ ಲಾಕ್‌ಡೌನ್ ಸಮಾಜದ ಬಡವರು ಮತ್ತು ವಂಚಿತ ಜನರಿಗೆ ಅಸಂಖ್ಯಾತ ಕಷ್ಟಗಳನ್ನು ತಂದೊಡ್ಡಿತು.

ಶಾಲಾ ಬಾಲಕಿಯೊಬ್ಬಳು ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಸುಮಾರು ಒಂದು ಸಾವಿರ ಕಿಲೋಮೀಟರ್ ದೂರದ ತನ್ನ ಮನೆಗೆ ಕರೆದೊಯ್ದ ಘಟನೆ ಈ ಇಡೀ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಈ ಸಮಯದಲ್ಲಿ ಲಸಿಕೆ ತಯಾರಿಸುವ ಕಂಪನಿಗಳು ಭಾರಿ ಲಾಭ ಗಳಿಸಿದವು ಮತ್ತು ಬಾಬಾ ಒಬ್ಬರು ಔಷಧಗಳನ್ನು ಮಾರುಕಟ್ಟೆಗೆ ತಂದು ಕೋಟ್ಯಂತರ ರೂಪಾಯಿ ಗಳಿಸಿದರು; ಈ ಔಷಧಗಳನ್ನು ಇಬ್ಬರು ಕೇಂದ್ರ ಸಚಿವರು ಸ್ವತಃ ಜನರ ಮುಂದೆ ಪ್ರಸ್ತುತಪಡಿಸಿದ್ದರು.

ನೋಟು ಅಮಾನ್ಯೀಕರಣದಿಂದ ಈಗಾಗಲೇ ಸಂಕಷ್ಟದಲ್ಲಿದ್ದ ಅನೌಪಚಾರಿಕ ವಲಯ ಮತ್ತು ಸಣ್ಣ ಕೈಗಾರಿಕೆಗಳು, ಜಿಎಸ್‌ಟಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿದ್ದರಿಂದ ಮತ್ತಷ್ಟು ನೆಲಕಚ್ಚಿದವು. ಹಲವು ಯೋಜನೆಗಳ ದೊಡ್ಡ ದೊಡ್ಡ ಹಕ್ಕುಗಳ ಹೊರತಾಗಿಯೂ, ಯುವಕರು ನಡೆಸುತ್ತಿರುವ ‘ಪೊಲಿಟಿಕಲ್ ಸಟೈರ್’ (ರಾಜಕೀಯ ವ್ಯಂಗ್ಯ) ಗ್ರೂಪ್‌ಗಳ ಬೆಳವಣಿಗೆಯ ಕುರಿತಾದ ರಾಯಿಟರ್ಸ್‌ನ ಇತ್ತೀಚಿನ ವರದಿ, ನಿರುದ್ಯೋಗ ಮತ್ತು ಆರ್ಥಿಕ ಅಭದ್ರತೆಯ ಬಗ್ಗೆ ಭಾರತದ ಯುವಜನರಲ್ಲಿ ಹೆಚ್ಚುತ್ತಿರುವ ಆಕ್ರೋಶವನ್ನು ಬಹಿರಂಗಪಡಿಸಿದೆ. ಯುವಕರಲ್ಲಿ ಉದ್ಯೋಗಗಳು ಮತ್ತು ಭವಿಷ್ಯದ ಬಗ್ಗೆ ತೀವ್ರ ಆತಂಕವಿದೆ ಎಂದು ವರದಿಯಲ್ಲಿನ ಸಮೀಕ್ಷೆಗಳು ತೋರಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, 15-29 ವರ್ಷದ ಭಾರತೀಯರಲ್ಲಿ ನಿರುದ್ಯೋಗ ದರ ಸುಮಾರು ಶೇ. 9.9 ರಷ್ಟಿದೆ ಹಾಗೂ ಹಣದುಬ್ಬರ ಮತ್ತು ಅವಕಾಶಗಳ ಕೊರತೆಯ ಬಗ್ಗೆ ಯುವಕರ ಆತಂಕಗಳು ನಿರಂತರವಾಗಿ ಹೆಚ್ಚುತ್ತಿವೆ.

ಆರೋಗ್ಯದ ವಿಷಯಕ್ಕೆ ಬಂದರೆ, ಸರ್ಕಾರ ಉತ್ತಮ ಆರೋಗ್ಯ ಸೌಲಭ್ಯಗಳ ಬಗ್ಗೆ ಏನೆಲ್ಲ ಸಾಧಿಸಿದ್ದೇನೆ ಎಂದರೂ, ಬಡವರು ಮತ್ತು ಸಾಮಾನ್ಯ ಜನರಿಗೆ ಸೂಕ್ತ ವೈದ್ಯಕೀಯ ಸೇವೆಗಳನ್ನು ಪಡೆಯುವುದು ಇಂದಿಗೂ ಅತ್ಯಂತ ಕಷ್ಟದ ಕೆಲಸವಾಗಿದೆ. ಶಿಕ್ಷಣದ ಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ. ಒಂದು ಕಡೆ ಹೊಸ ಶಿಕ್ಷಣ ನೀತಿಯು (NEP) ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಇದು ಶಿಕ್ಷಣವನ್ನು ಕೋಮುವಾದೀಕರಣಗೊಳಿಸುತ್ತಿದೆ, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಬೀಜಗಳನ್ನು ಬಿತ್ತುತ್ತಿದೆ ಮತ್ತು ಮನುಸ್ಮೃತಿಯಂತಹ ಗ್ರಂಥಗಳಲ್ಲಿನ ಮೌಲ್ಯಗಳನ್ನು ಉತ್ತೇಜಿಸುತ್ತಿದೆ.

ಶಿಕ್ಷಣವನ್ನು ಹೇಗೆ ‘ಹಿಂದೂ ರಾಷ್ಟ್ರ’ದ ಗುರಿಯತ್ತ ತಿರುಗಿಸಲಾಗುತ್ತಿದೆ ಎಂಬುದಕ್ಕೆ ಉತ್ತರಾಖಂಡವೇ ಅತ್ಯುತ್ತಮ ಉದಾಹರಣೆ. ಸಂಸ್ಕೃತದಂತಹ ಭಾಷೆ ಮುಖ್ಯವೇ, ಆದರೆ ಇಂದಿನ ಪರಿಸ್ಥಿತಿಯು ಉದ್ಯೋಗಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಬಯಸುತ್ತಿದೆ. ಉದ್ಯೋಗಾವಕಾಶಗಳು, ಕೃಷಿ ಬಿಕ್ಕಟ್ಟು, ಆರೋಗ್ಯ ರಕ್ಷಣೆಯ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ ಮತ್ತು ಆದಾಯದ ಅಸಮಾನತೆಯಂತಹ ಸಮಸ್ಯೆಗಳು ಸಮಾಜದ ಮುಂದೆ ದೊಡ್ಡ ಸವಾಲುಗಳಾಗಿ ನಿಂತಿವೆ.

ಸಣ್ಣ ಉದ್ಯಮಗಳು ಬದುಕುಳಿಯಲು ಹೋರಾಡುತ್ತಿರುವಾಗ, ಸರ್ಕಾರ ಕೇವಲ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಲ್ಲುತ್ತಿದೆ ಎಂದು ವಿಪಕ್ಷದ ನಾಯಕರು ಮತ್ತು ಸ್ವತಂತ್ರ ವಿಶ್ಲೇಷಕರು ಪದೇ ಪದೇ ಆರೋಪಿಸುತ್ತಿದ್ದಾರೆ. ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟಗಳು, ಹಣದುಬ್ಬರದ ಭೀತಿ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಜನರ ಆತಂಕಗಳ ಕುರಿತು ‘ಫೈನಾನ್ಷಿಯಲ್ ಟೈಮ್ಸ್’ ಇತ್ತೀಚೆಗೆ ವರದಿ ಮಾಡಿದೆ. ಆರ್ಥಿಕ ಅಭಿವೃದ್ಧಿಯ ಅಬ್ಬರದ ಪ್ರಚಾರದ ನಡುವೆಯೂ, ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ.

ಯುವಕರ ಆತಂಕಗಳ ಕುರಿತಾದ ರಾಯಿಟರ್ಸ್ ವರದಿಯಲ್ಲಿ ಹಣದುಬ್ಬರವನ್ನು ಭಾರತದ ಯುವ ಪೀಳಿಗೆಯ ಅತಿ ದೊಡ್ಡ ಚಿಂತೆಗಳಲ್ಲಿ ಒಂದು ಎಂದು ಹೆಸರಿಸಲಾಗಿದೆ ಮತ್ತು ಪ್ರಸ್ತುತ ಬಿಕ್ಕಟ್ಟು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ.

ಪ್ರಸ್ತುತ ಆಡಳಿತವು ಅತ್ಯಂತ ಗಂಭೀರವಾಗಿ ಪ್ರಜಾಪ್ರಭುತ್ವದ ಮುಕ್ತ ಅವಕಾಶಗಳನ್ನು ಹತ್ತಿಕ್ಕುವಲ್ಲಿ ತೊಡಗಿದೆ. ಇದುವರೆಗೆ ಕೇವಲ ಮತಗಳ ಕಳ್ಳತನ ಮತ್ತು ಇವಿಎಂ ಯಂತ್ರಗಳ ದುರುಪಯೋಗದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು, ಇದರಿಂದಾಗಿ ಆಡಳಿತ ಪಕ್ಷಕ್ಕೆ ಅನುಕೂಲಕರ ಫಲಿತಾಂಶಗಳು ಬರುತ್ತಿದ್ದವು. ಈಗ ಎಸ್‌ಐಆರ್ (SIR) ಜಾರಿಗೊಳಿಸುವುದರೊಂದಿಗೆ, ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ ಎಂದು ಶಂಕಿಸಲಾದ ಮತದಾರರ ಹೆಸರನ್ನು ಸಾಮೂಹಿಕವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಪಶ್ಚಿಮ ಬಂಗಾಳವೊಂದರಲ್ಲೇ ಇಂತಹ 91 ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಮತ್ತು 27 ಲಕ್ಷ ಜನರು ತಮ್ಮ ಮೇಲ್ಮನವಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅಸಹಾಯಕ ನ್ಯಾಯಾಲಯಗಳು “ನೀವು ಮುಂದಿನ ಬಾರಿ ಮತದಾನ ಮಾಡಬಹುದು” ಎಂದು ಸರಳವಾಗಿ ಹೇಳಿ ಕೈತೊಳೆದುಕೊಳ್ಳುತ್ತಿವೆ.

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವ ಮೋದಿ ಅವರ ಭರವಸೆಗಳು ಕೇವಲ ಕಾರ್ಪೊರೇಟ್ ಜಗತ್ತಿಗೆ ಸೀಮಿತವಾದ ಹುಸಿಗಳಾಗಿವೆ. ಆದರೆ ಅವರ ಆಪ್ತ ಕಾರ್ಪೊರೇಟ್ ವಲಯದ ಕೆಲವು ಜನ ದೇಶದ ಎಲ್ಲಾ ಸಂಪನ್ಮೂಲಗಳನ್ನು ಸುಲಭವಾಗಿ ಪಡೆದುಕೊಂಡು ಅದರ ಪೂರ್ಣ ಲಾಭವನ್ನು ಅನುಭವಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಹೀಗೆಯೇ ದುರ್ಬಲಗೊಳ್ಳುತ್ತಾ ಹೋದರೆ ಆರ್ಥಿಕ ಪರಿಸ್ಥಿತಿ ಇಂದಿನಂತೆಯೇ ಶೋಚನೀಯವಾಗಿ ಮುಂದುವರಿಯುತ್ತವೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಖಚಿತವಾಗುತ್ತದೆ.

Leave a Reply