ಬೆಂಗಳೂರು ಪೊಲೀಸ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಒಟ್ಟಾರೆ ಚಿತ್ರಣ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಬದಲಾಯಿಸಲು ಗೃಹ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇಲಾಖೆಯ ಕಾರ್ಯವೈಖರಿ ಸುಧಾರಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ಕ್ರಾಂತಿಕಾರಿ ಹಾಗೂ ಖಡಕ್ ನಿರ್ದೇಶನಗಳನ್ನು ನೀಡಿದ್ದಾರೆ.
ವಿಶೇಷವಾಗಿ ಮಹಿಳಾ ಸುರಕ್ಷತೆ, ಮಾದಕ ವಸ್ತುಗಳ ವಿರುದ್ಧ ಶೂನ್ಯ-ಸಹಿಷ್ಣುತೆ (Zero-Tolerance), ಮಾನವ ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಅಪರಾಧ ತಡೆಗೆ ಸಚಿವರು ಅತ್ಯಂತ ಪ್ರಮುಖ ಆದ್ಯತೆ ನೀಡಿದ್ದಾರೆ.
1. ಟ್ರಾಫಿಕ್ ಕಂಟ್ರೋಲ್ಗೆ ಸಚಿವರ ಮಾಸ್ಟರ್ ಪ್ಲಾನ್: ‘ಬೆಂಗಳೂರು ಅರ್ಬನ್ mobility ಮಿಷನ್’
ಬೆಂಗಳೂರಿನ ಅತಿ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಗೆ ಕೇವಲ ರಸ್ತೆ, ಮೇಲ್ಸೇತುವೆಗಳಂತಹ ಮೂಲಸೌಕರ್ಯ ಬದಲಾವಣೆಯಿಂದ ಮಾತ್ರ ಪರಿಹಾರ ಸಿಗಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ವ್ಯವಸ್ಥಿತ ಲೋಪದೋಷಗಳನ್ನು ಸರಿಪಡಿಸಲು ಬಿಎಂಟಿಸಿ (BMTC), ಬಿಎಂಆರ್ಸಿಎಲ್ (BMRCL) ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ‘ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್’ ಎಂಬ ವಿಶೇಷ ತಂಡವನ್ನು ರಚಿಸಲು ಸಚಿವರು ನಿರ್ಧರಿಸಿದ್ದಾರೆ. ಇದರ ಸಂಪೂರ್ಣ ನೀಲಿ ನಕ್ಷೆ (Blueprint) ಮುಂದಿನ 2-3 ದಿನಗಳಲ್ಲಿ ಪ್ರಕಟವಾಗಲಿದೆ.
2. ರೌಡಿಗಳ ಜೊತೆ ಸೆಲ್ಫಿ, ಊಟ ಸವಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಇನ್ಮುಂದೆ ‘ವಿಶೇಷ ರೌಡಿ ನಿಗ್ರಹ ಪಡೆ’ ರಚಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದೇ ವೇಳೆ ಕೆಳಹಂತದ ಪೊಲೀಸ್ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಅವರು ನೇರ ಎಚ್ಚರಿಕೆ ನೀಡಿದ್ದಾರೆ:
“ಯಾವುದೇ ಪೊಲೀಸ್ ಅಧಿಕಾರಿಗಳು ರೌಡಿಗಳ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಭಾಗವಹಿಸುವುದು, ಅವರೊಂದಿಗೆ ಊಟ ಮಾಡುವುದು ಅಥವಾ ಸೆಲ್ಫಿ ತೆಗೆದುಕೊಳ್ಳುವಂತಹ ಕೃತ್ಯಗಳಲ್ಲಿ ತೊಡಗುವಂತಿಲ್ಲ. ಇಂತಹ ಲೋಪಗಳು ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು.”
3. ಸೈಬರ್ ಕ್ರೈಂಗೆ ಬ್ರೇಕ್: ಐಟಿ ಸಂಸ್ಥೆಗಳೊಂದಿಗೆ ಸಚಿವರ ಹೈ-ಲೆವೆಲ್ ಮೀಟಿಂಗ್: ವಿಶ್ವದ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿರುವ ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಇದನ್ನು ಮಟ್ಟಹಾಕಲು ಗೃಹ ಇಲಾಖೆ, ಐಟಿ-ಬಿಟಿ ಮತ್ತು ಇ-ಆಡಳಿತ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರ ನೀತಿಯನ್ನು ತರಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಮುಂದಿನ ವಾರ ಖಾಸಗಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಚಿವರು ಸಭೆ ನಡೆಸಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ‘ಸೇಫ್ಟಿ ಗಾರ್ಡ್ ರೈಲ್ಸ್’ ಅಳವಡಿಸಲು ಕ್ರಮ ಕೈಗೊಳ್ಳಲಿದ್ದಾರೆ.
4. ಡ್ರಗ್ಸ್ ನೆಟ್ವರ್ಕ್ ವಿರುದ್ಧ ಸಚಿವರ ಸಮರ: ಗಡಿಯಲ್ಲಿ ಹೈಟೆಕ್ ಟೆಸ್ಟಿಂಗ್ ಕಿಟ್ಸ್: ಮಾದಕ ದ್ರವ್ಯ ಜಾಲದ ವಿರುದ್ಧ ನಮ್ಮ ಸರ್ಕಾರ ಸಂಪೂರ್ಣ ಸಮರ ಸಾರಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ: ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಕದ್ದುಮುಚ್ಚಿ ಬರುವ ಮಾತ್ರೆಗಳು ಹಾಗೂ ಸೈಕೋಟ್ರೋಪಿಕ್ ಪದಾರ್ಥಗಳನ್ನು ಪತ್ತೆಹಚ್ಚಲು ಗಡಿಭಾಗಗಳಲ್ಲಿ ಹೆಚ್ಚಿನ ಟೆಸ್ಟಿಂಗ್ ಕಿಟ್ಗಳನ್ನು ಒದಗಿಸಲು ಸಚಿವರು ಆದೇಶಿಸಿದ್ದಾರೆ.
ವಿದೇಶಿ ಪ್ರಜೆಗಳ ಕಾನೂನುಬಾಹಿರ ವಾಸ್ತವ್ಯಕ್ಕೆ ಬ್ರೇಕ್ ಹಾಕಲು ಹಾಗೂ ಅವರ ಗಡಿಪಾರು (Deportation) ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಈ ಇಡೀ ನಿಯಂತ್ರಣ ಪ್ರಕ್ರಿಯೆಗೆ ಜಾಗತಿಕ ಮಟ್ಟದ ಅತ್ಯುತ್ತಮ ಮಾದರಿಗಳನ್ನು ಅಧ್ಯಯನ ಮಾಡಿ, ಮುಂದಿನ ಎರಡು ವಾರಗಳಲ್ಲಿ ಸಮಗ್ರ ಆಕ್ಷನ್ ಪ್ಲಾನ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
5. ಚಾರ್ಜ್ಶೀಟ್ ವಿಳಂಬ, ತಾರತಮ್ಯ ಮಾಡುವ ಅಧಿಕಾರಿಗಳಿಗೆ ಗಂಡಾಂತರ: ಸಾರ್ವಜನಿಕರಿಂದ ದೂರುಗಳು ಬಂದಾಗ, ಪ್ರಕರಣ ದಾಖಲಾದ ನಂತರ ಚಾರ್ಜ್ಶೀಟ್ ಸಲ್ಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಅಥವಾ ಪ್ರಾಸಿಕ್ಯೂಷನ್ನಲ್ಲಿ ತಾರತಮ್ಯ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ದ್ವೇಷ ಭಾಷಣ (Hate Speech) ಮತ್ತು ನಕಲಿ ಸುದ್ದಿ (Fake News) ಗಳ ವಿರುದ್ಧವೂ ಕಟ್ಟುನಿಟ್ಟಿನ ಜಾಗರೂಕತೆ ವಹಿಸಲು ಸಚಿವರು ನಿರ್ದೇಶಿಸಿದ್ದಾರೆ.
ಸುರಕ್ಷಿತ ಮತ್ತು ಸ್ಮಾರ್ಟ್ ಸಿಟಿಯು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವುದಲ್ಲದೆ, ರಾಜ್ಯದ ಆರ್ಥಿಕ ಬೆಳವಣಿಗೆಗೂ ವೇಗ ನೀಡುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಭವಿಷ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಲಾಖೆಯಲ್ಲಿನ ಎಲ್ಲಾ ನ್ಯೂನ್ಯತೆಗಳನ್ನು ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಸರಿಪಡಿಸಲಾಗುವುದು ಎಂದರು.













