ಜಂಗಮ ವೀರಶೈವ, ಲಿಂಗಾಯತರು ಪರಿಶಿಷ್ಟರಲ್ಲ: ಎಂ.ಪಿ.ಕುಮಾರಸ್ವಾಮಿ

4 years ago

ಪ್ರಬಲರು ಎಸ್.ಸಿ., ಎಸ್.ಟಿ ಮೀಸಲಾತಿ ಕೇಳುವುದು ಹೊಸ ರೂಪಾಂತರಿ ಅಟ್ರಾಸಿಟಿ ಪ್ರಕರಣ

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಗುರು ಸ್ಥಾನದಲ್ಲಿರುವ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಅವರಿಗೆ ಎಸ್.ಸಿ ಸರ್ಟಿಫಿಕೇಟ್ ಅನ್ನು ರಾಜ್ಯ ಸರ್ಕಾರ ನೀಡಬಾರದು ಎಂದು ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಎಸ್.ಸಿ., ಎಸ್.ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಸಾಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲ್ವರ್ಗಗಳು ನಮ್ಮನ್ನು ಎಸ್.ಸಿ., ಎಸ್.ಟಿಗೆ ಸೇರಿಸಿ ಎಂದು ಒತ್ತಡ ಹಾಕುವುದು ಪ್ರಬಲರು ದುರ್ಬಲರ ಮೇಲೆ ನಡೆಸುವ ದೌರ್ಜನ್ಯವಷ್ಟೆ ಅಲ್ಲ . ಎಸ್.ಸಿ., ಎಸ್.ಟಿ ಗಳ ಮೇಲೆ ಎಸಗುವ ಹೊಸ ಮಾದರಿಯ ರೂಪಾಂತರಿ ಅಟ್ರಾಸಿಟಿ ಪ್ರಕರಣ ಎಂದು ವ್ಯಾಖ್ಯಾನ ಮಾಡಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯ ಅನಾದಿಕಾಲದಿಂದಲೂ ಸಮಾಜಕ್ಕೆ ನ್ಯಾಯ ನೀತಿ ಧರ್ಮ ಬೋಧಿಸುವುದರ ಜತೆಗೆ ದೀನದಲಿತರ ಮತ್ತು ಬಡವರ ಮಕ್ಕಳಿಗೆ ಉಚಿತ ಅನ್ನ ದಾಸೋಹ ಮತ್ತು ವಿದ್ಯಾದಾನ ಮಾಡುತ್ತಿರುವ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸಮುದಾಯದಲ್ಲಿ ಮೇಲಿನ ಗುರು ಸ್ಥಾನದಲ್ಲಿರುವ ಜಂಗಮರು ಎನ್ನುವ ಉಪ ಜಾತಿಯ ಕೆಲವು ವ್ಯಕ್ತಿಗಳು ಎಸ್.ಸಿ ಬೇಡ ಜಂಗಮ ಎಂಬ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಆ ಜನರ ಅನ್ನ ಕಸಿದುಕೊಳ್ಳುತ್ತಿರುವುದು ಮಹಾಪಾಪವಾಗಿದೆ ಎಂದಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದಲ್ಲಿ ಗುರುಗಳ ಸ್ಥಾದಲ್ಲಿರುವ ಜಂಗಮರು ಎಸ್.ಸಿ.ಗಳಾಗಲು ಸಾಧ್ಯವೇ? ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಗಳ‌ ಪಟ್ಟಿಯಲ್ಲಿನ 101 ಜಾತಿಗಳ 19ನೇ ಕ್ರಮ ಸಂಖ್ಯೆಯಲ್ಲಿ ಬೇಡ ಜಂಗಮ ಅಥವಾ ಬುಡ್ಗ ಜಂಗಮ ಅಥವಾ ಮೂಲ ಜಂಗಮ್ ಎಂಬ ಹೆಸರಿನ ಜಾತಿಯಿದೆ. ಈ ಜಾತಿಯನ್ನು ಎಸ್.ಸಿ ಜಾತಿ ಪಟ್ಟಿಗೆ ಸೇರಿಸುವ ಮುನ್ನ ಕುಲ ಶಾಸ್ತ್ರ, ಸಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗಿದೆ ಎಂದಿದ್ದಾರೆ.

ಬೇಡ ಜಂಗಮರು ಆಂಧ್ರ ಪ್ರದೇಶ ಮೂಲದವರು. ಇವರ ಮಾತೃ ಭಾಷೆ ತೆಲುಗು ಆಗಿದ್ದು. ಮಾಂಸಾಹಾರಿಗಳು, ಹೊಟ್ಟೆ ಪಾಡಿಗಾಗಿ ವೇಷಧಾರಿಗಳಾಗಿ ಊರೂರು ಸುತ್ತಿ ಭಿಕ್ಷೆ ಬೇಡುವುದು ಇವರ ಕಾಯಕವಾಗಿದೆ. ಇವರಲ್ಲಿ ವಿದ್ಯಾವಂತರ ಸಂಖ್ಯೆ ಶೇ 1% ಆಗಿದೆ. ಈ ಜನಾಂಗದ ಗುಣ ಲಕ್ಷಣಗಳಲ್ಲಿ ಶೇ. 1 ಭಾಗವನ್ನೂ ಹೊಂದಿರದ ವೀರಶೈವ ಲಿಂಗಾಯತ ಜನಾಂಗದವರು ಜಂಗಮ್ ಎಂಬ ಪದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Leave a Reply