ಸಾಬರ ಇಕ್ಬಾಲ್ ಮತ್ತು ಹಿಂದೂ ಹಾವು

1 year ago

ನಮ್ಮಜ್ಜಿ ಅವರಸದಲ್ಲಿ ನೆರಿಕೆಯ ಬಚ್ಚಲಿನೊಳಕ್ಕೆ ತೆರಳುವ ಧಾವಂತದಲ್ಲಿದ್ದಳು. ಅಷ್ಟೇ ಆತುರದಲ್ಲಿ ಓಡೋಡಿ ಬಂದ ಇಕ್ಬಾಲ “ಅಜ್ಜಿ ಒಳಗೆ ಹೋಗ್ಬೇಡಿ, ಈಗಷ್ಟೆ ನಿಮ್ಮ ಬಚ್ಚಲಿನ ನೆರಿಕೆಯೊಳಕ್ಕೆ ದೊಡ್ಡ ಹಾವು ಹೋಗ್ತಾ ಇರೋದನ್ನ ನೋಡಿದೆ” ಎಂದು ಚೀರಿದ.

ಅಜ್ಜಿ ಹೌಹಾರಿ ಅಂದಳು, “ಹೇ ದರಿದ್ರವೇ ನಮ್ಮ ಅಂಗಳಕ್ಕ್ಯಾಕೊ ಬಂದೆ. ತೊಲಗು ಮೊದ್ಲು”. ಆಕೆ ಹೌಹಾರಿದ್ದು ಹಾವಿಗಾಗಿ ಅಲ್ಲ, ಸಾಬರ ಇಕ್ಬಾಲ್ ಅಂಗಳಕ್ಕೆ ಬಂದಿದ್ದಕ್ಕಾಗಿ!

ಅಮ್ಮ ಒಳಗಿಂದ ಓಡೋಡಿ ಬರುವಷ್ಟರಲ್ಲಿ ಅಜ್ಜಿ ಬಚ್ಚಲು ಹೊಕ್ಕುವ ತಯಾರಿಯಲ್ಲಿದ್ದಳು. “ಅಯ್ಯೋ ಅತ್ತೆ, ಒಳಕ್ಕೆ ಹಾವು ಹೋಗಿದ್ಯಂತೆ.. ಹೋಗ್ಬೇಡಿ ಇರಿ. ಅನಾಹುತ ಆದೀತು” ಗಾಬರಿಯಿಂದ ನುಡಿದಳು ಅಮ್ಮ.

“ಹೇ… ಹೋಗಿ ಹೋಗಿ ಆ ಸಾಬರ ಹುಡುಗ ಹೇಳೋದನ್ನ ನಂಬ್ತೀಯಲ್ಲಾ ನೀನು” ಅಜ್ಜಿ ಉದಾಸೀನದಲಿ ನುಡಿದಳು.

“ಸಾಬರಾದರೇನಂತೆ ಅತ್ತೆ. ಹಾವು ಹೋಗಿರೋದನ್ನ ನೋಡಿದೀನಿ ಅಂತ ಹೇಳ್ತಾ ಇದಾನಲ್ವಾ?” ಅಮ್ಮ ಮರುನುಡಿದಳು.

“ಆ ಸಾಬರ ಹುಡುಗನಿಗೆ ನಮ್ಮ ಜಾತಿ ಮನೆ ಬಚ್ಚಲು ಮೇಲೆ ಯಾಕೆ ನಿಗಾ ಅಂತೆ? ಮೊದ್ಲು ಅದನ್ನ ಕೇಳು. ನನಿಗೆಲ್ಲ ಗೊತ್ತು, ನನ್ನ ಧರ್ಮದ ನೇಮ ಕೆಡಿಸ್ಬೇಕು ಅಂತ ಹೀಗೆಲ್ಲ ಪುಕಾರು ಹಬ್ಬಿಸ್ತಿದಾನೆ ಈ ಸಾಬರ ಹುಡುಗ” ಅಜ್ಜಿ ವಾದ ಮುಂದುವರೆಸಿದಳು.

“ಅಯ್ಯೋ ಅತ್ತೆ… ಇದ್ರಲ್ಲಿ ಧರ್ಮದ ನೇಮ ಏನಿದೆ?” ಅಮ್ಮ ಚಿಂತೆಯಲಿ ಕೇಳಿದಳು.

“ನಿನಿಗೆ ಗೊತ್ತಿಲ್ವಾ? ಇವತ್ತು ಮಂಗಳವಾರ. ನಾನು ಸ್ನಾನ ಮಾಡಿ ದೇವ್ರಿಗೆ ದೀಪ ಹಚ್ಚಲಿಲ್ಲ ಅಂದ್ರೆ ನನ್ನ ನೇಮ ಕೆಡಲ್ವಾ! ಅದೇ ಈ ಸಾಬರ ಹುಡುಗನ ಹುನ್ನಾರ” ಅಜ್ಜಿ ಹೊಸ ವಾದ ಮುಂದಿಟ್ಟಳು.

“ಅಜ್ಜಿ ನಿನ್ನ ನೇಮ ಗೀಮ ಏನೂ ನಂಗೆ ಗೊತ್ತಿಲ್ಲ. ಆದ್ರೆ ಬಚ್ಚಲು ಒಳಗೆ ಹೋಗ್ಬೇಡ. ಹಾವು ಹೋಗಿರೋದು ಮಾತ್ರ ಸತ್ಯ. ಅದೂ ದೊಡ್ಡ ಹಾವು” ಇಕ್ಬಾಲ ಮತ್ತೆ ಗೋಗರೆದ.

ಅಜ್ಜಿ ಈಗ ಜೋರು ದನಿಯಲ್ಲಿ ರೇಗಿದಳು, “ಹೇ ತೊಲಗೊ ದರಿದ್ರವೆ. ಇಲ್ನೋಡು ಒಂದುವೇಳೆ ಹಾವು ಹೋಗಿದ್ದು ನಿಜವೇ ಆಗಿದ್ದರೆ, ಅದು ನಮ್ಮ ಬಚ್ಚಲಿಗೆ ಹೋಗಿರೋದ್ರಿಂದ ನಮ್ಮ ಜಾತಿ, ಧರ್ಮದ ಹಾವೇ ಆಗಿರುತ್ತೆ. ಹಂಗಾಗಿ ಅದು ನನಿಗೆ ಏನೂ ಮಾಡಲ್ಲ. ಹೋಗೊ ಇಲ್ಲಿಂದ” ಎಂದವಳೆ, ನಮ್ಮ ಯಾರ ಮನವಿಗೂ ಕಿವಿಗೊಡದೆ ಬಚ್ಚಲು ಹೊಕ್ಕು ನೆರಿಕೆಯ ತಡಿಕೆ ಮುಚ್ಚಿಕೊಂಡಳು.

ಕೆಲವೇ ಕ್ಷಣ ಅಜ್ಜಿ ಚಿಟ್ಟನೆ ಚೀರಿದ ಸದ್ದು. ಅನಾಹುತದ ನಿರೀಕ್ಷೆಯಲ್ಲಿದ್ದ ನಾವೆಲ್ಲ ಗಾಬರಿಯಿಂದ ಒಳಹೋಗಿ ನೋಡಿದೆವು. ಅಜ್ಜಿ ಅಂಗಾತ ಬಿದ್ದು ಒದ್ದಾಡುತ್ತಿದ್ದಳು. ದೊಡ್ಡ ಹಾವಿನ ಬಲವಾದ ಬಾಲದ ತುದಿ, ನೆರಿಕೆಯ ಅಂಚಿನಿಂದ ಕಣ್ಮರೆಯಾಗುತ್ತಿರೋದು ಗೋಚರಿಸಿತು. ನಾವೆಲ್ಲ ಗೋಳಾಡುತ್ತಿದ್ದರೆ, ಇಕ್ಬಾಲ ಹೌಹಾರಿ ನಿಂತಿದ್ದ!

– ಮಾಚಯ್ಯ ಎಂ ಹಿಪ್ಪರಗಿ

Leave a Reply