ಕಾವೇರಿ ವಿಚಾರವಾಗಿ ವಿಪಕ್ಷಗಳ ನಾಯಕ ವಿಶ್ವಾಸದ  ಬಳಿಕ ಮುಂದಿನ ತೀರ್ಮಾನ: ಡಿ.ಕೆ.ಶಿವಕುಮಾರ್

3 days ago

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಕಾವೇರಿ ನೀರಿನ ವಿಚಾರವಾಗಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ 2016, 2017, 2018, 2023ರ ಸಂಕಷ್ಟ ಕಾಲದಲ್ಲೂ ಇಂತಹ ಆದೇಶಗಳು ಬಂದಿದ್ದವು ಎಂದರು.

ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿರುವ ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರನ್ನು ಹರಿಸಲು ನೀಡಿರುವ ಆದೇಶದ ವಿರುದ್ಧ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿದ್ದ ಸಲಹೆಗಾರರನ್ನೇ ನಾವು ಮುಂದುವರಿಸಿದ್ದು, ಅವರು ಸಭೆಯಲ್ಲಿ ಭಾಗವಹಿಸಿ ವಾದ ಮಂಡಿಸಿದ್ದಾರೆ. ನಮ್ಮ ಅಡ್ವೋಕೇಟ್ ಜನರಲ್ ಹಾಗೂ ಎಸಿಎಸ್ ಅವರು ನೀರು ಹರಿಸುವ ಪ್ರಮಾಣ ಕಡಿಮೆ ಮಾಡಿ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ತಮಿಳುನಾಡು ತಮಗೆ ಹೆಚ್ಚಿನ ನೀರು ಬಿಡಬೇಕು ಎಂದು ವಾದಿಸಿತು. ಪ್ರಾಧಿಕಾರ ನಮ್ಮ ರಾಜ್ಯದಲ್ಲಿ ಒಳಹರಿವು ಹೆಚ್ಚು ಇರುವುದರಿಂದ ಈ ನೀರು ಕಡಿಮೆ ಪ್ರಮಾಣದ್ದು ಎಂದು ಹೇಳಿದೆ ಎಂದರು.

ಕಳೆದ 3 ವರ್ಷಗಳಲ್ಲಿ ಉತ್ತಮ ಮಳೆಯಾಗಿರುವ ಕಾರಣಕ್ಕೆ, ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು ಮತ್ತು 177 ಟಿಎಂಸಿ ಬದಲಾಗಿ 400ಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ಸಮುದ್ರ ಸೇರಿತ್ತು. ಪ್ರಸ್ತುತ ನಮ್ಮ ಜಲಾಶಯಗಳ ನೀರು ಶೇಖರಣೆಯ ಮಾಹಿತಿ ಮುಚ್ಚಿಡಲು ಸಾಧ್ಯವಿಲ್ಲ ಎಂದರು.

ಹಾರಂಗಿಯಲ್ಲಿ 95%, ಕಬಿನಿಯಲ್ಲಿ 83%, ಹೇಮಾವತಿಯಲ್ಲಿ 67% ಹಾಗೂ ಕೆಆರ್‌ಎಸ್‌ನಲ್ಲಿ 36% ನೀರಿದೆ.‌ ನಮ್ಮ ಅಣೆಕಟ್ಟುಗಳ ಒಳಹರಿವು 25,000 ಕ್ಯೂಸೆಕ್‌ನಷ್ಟಿದ್ದು, ಅದರಲ್ಲಿ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ನಂತೆ 15 ದಿನಕ್ಕೆ 4.5 ಟಿಎಂಸಿ ನೀರು ಹರಿಸಲು ಸೂಚಿಸಲಾಗಿದೆ. ಒಳಹರಿವು ಚೇತರಿಸಿಕೊಂಡಿರುವುದು ಸಮಾಧಾನಕರ ವಿಚಾರ. ಆದರೂ ರೈತರ ಹಾಗೂ ಕುಡಿಯುವ ನೀರಿನ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಬಂಗಾರಪ್ಪನವರ ಕಾಲದಿಂದಲೂ ಕಾಂಗ್ರೆಸ್ ಸರ್ಕಾರಗಳು ರಾಜ್ಯದ ಹಿತಕ್ಕೆ ಬದ್ಧವಾಗಿವೆ ಎಂದರು.

ಮೇಲ್ಮನವಿ ಸಲ್ಲಿಸುವ ಮುನ್ನವೇ 3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರ ಸರ್ವಪಕ್ಷ ಸಭೆ ನಡೆಸಲಾಗಿತ್ತು. ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಮೇಲ್ಮನವಿ ಪ್ರತಿ ಕಳುಹಿಸಿಕೊಡಲಾಗಿದ್ದು, ಅವರು ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದರು.

ತಮಿಳುನಾಡಿನವರು 9.94 ಟಿಎಂಸಿ ನೀರು ಕೇಳಿದ್ದರೂ ಸಮಿತಿ ಅದರ ಅರ್ಧದಷ್ಟು ಸೂಚಿಸಿದೆ. ಈ ಎಲ್ಲಾ ವಿಚಾರಗಳನ್ನು ಚರ್ಚಿಸಲು ಭಾನುವಾರ ಎಲ್ಲಾ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಭಾಗದ ಶಾಸಕರು ಮತ್ತು ಸಂಸದರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಅದಕ್ಕೂ ಮುನ್ನ ನಮ್ಮ ಕಾನೂನು ತಂಡ, ಡಾ. ಜಿ. ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.

ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ ಹರಿಸಿರುವುದು ಕೇವಲ 0.6 ಟಿಎಂಸಿ ನೀರು ಮಾತ್ರ. ಇದು ಕಳೆದ 100 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ. ಇದು ಅಣೆಕಟ್ಟುಗಳಿಂದ ಬಿಟ್ಟ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆಯ ನೀರು ಎಂದರು.

ಆಗಸ್ಟ್ 13ರ ಬಂದ್ ಕರೆಗೆ ಸಂಬಂಧಿಸಿದಂತೆ, ಸರ್ಕಾರವೇ ನಿಮ್ಮ ಪರವಾಗಿರುವುದರಿಂದ ಬಂದ್ ಮಾಡುವ ಅಗತ್ಯವಿಲ್ಲ ಮತ್ತು ಬಂದ್‌ನಿಂದ ಪರಿಹಾರ ಸಿಗುವುದಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ನ್ಯಾಯಾಲಯದ ತೀರ್ಮಾನಗಳ ಹಿನ್ನೆಲೆಯಲ್ಲಿ ನಮ್ರತೆಯಿಂದ ಮನವಿ ಮಾಡಿದರು.

ತಮಿಳುನಾಡು ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ಬಂದಿದ್ದು, ಅವರು ತಂಡದೊಂದಿಗೆ ಆಗಸ್ಟ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಈಗಿನ ವಾತಾವರಣ ಸರಿ ಇಲ್ಲದಿರುವುದರಿಂದ ಈ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡಲು ಮನವಿ ಮಾಡುತ್ತೇನೆ. ಪರಿಸ್ಥಿತಿ ತಿಳಿಯಾದ ಬಳಿಕ ಸೌಹಾರ್ದತೆ ಮತ್ತು ಗೌರವಪೂರ್ವಕವಾಗಿ ಆತಿಥ್ಯ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಚರ್ಚಿಸಲಾಗುವುದು ಎಂದರು.

ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸಿಎಂ ಜೊತೆ ಸಭೆ ನಡೆಸಲಾಗಿದ್ದು, ತುಂಗಭದ್ರಾ ಅಣೆಕಟ್ಟಿನ ಹೂಳಿನಿಂದಾಗುವ 33 ಟಿಎಂಸಿ ನೀರು ನಷ್ಟ ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಒಮ್ಮತದ ತೀರ್ಮಾನವಾಗಿದೆ. ಇದನ್ನು 90:10 ಅನುಪಾತದಲ್ಲಿ ಕೇಂದ್ರ ಧನಸಹಾಯದೊಂದಿಗೆ ‘ರಾಷ್ಟ್ರೀಯ ಯೋಜನೆ’ಯಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಬಿಜೆಪಿ ಸ್ನೇಹಿತರು ಹೋರಾಟ ಮಾಡುತ್ತಿದ್ದಾರೆ. ಹೋರಾಟ ತಪ್ಪಲ್ಲ, ಆದರೆ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸರ್ವಪಕ್ಷ ಸಭೆ ಕರೆದಿರುವಾಗ ಇಂದು ಬಿಜೆಪಿ ನಾಯಕರು ಹೋರಾಟ ಮಾಡುವ ಅಗತ್ಯವಿರಲಿಲ್ಲ ಎಂದರು.

66 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಯ ನೀರನ್ನು ಕೇವಲ ನೀರಾವರಿಗೆ ಬಳಸದೆ, 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿಗೆ ಬಳಸಲಾಗುವುದು. ಸುಪ್ರೀಂ ಕೋರ್ಟ್ ತೀರ್ಪಿನಂತೆ 177 ಟಿಎಂಸಿ ನೀರು ಹರಿಸಲು ನಮಗೆ ಅಭ್ಯಂತರವಿಲ್ಲ ಮತ್ತು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವಿದೆ ಎಂದು ಕೇಂದ್ರ ಸಚಿವರೂ ತಿಳಿಸಿದ್ದಾರೆ. ಮೇಕೆದಾಟು ಡಿಪಿಆರ್ ತಿರಸ್ಕಾರವಾಗಿಲ್ಲ, ಕೇಳಿರುವ ಸ್ಪಷ್ಟನೆಗಳನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದರು.

ನಮಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಕುಡಿಯುವ ನೀರಿಗೆ 40 ಟಿಎಂಸಿ (36 ಟಿಎಂಸಿ ಬಳಕೆ + 4 ಟಿಎಂಸಿ ಆವಿಯಾಗುವಿಕೆ) ಅಗತ್ಯವಿದ್ದು, ಉಳಿದ ಹೆಚ್ಚುವರಿ ನೀರನ್ನು ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹಂಚಿಕೆ ಸೂತ್ರದ ಆಧಾರದ ಮೇಲೆ ನಿರ್ವಹಿಸಲಾಗುವುದು ಎಂದರು.

Leave a Reply