ಮರೆಯಾಗುತ್ತಿರುವ ದೇಸಿ ತಳಿಗಳ ಮರುಪರಿಚಯ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ
ಪುಟ್ಟಣ್ಣಯ್ಯ ಫೌಂಡೇಶನ್, ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ (ಪಾಂಡವಪುರ) ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗ
ಮಂಡ್ಯ: ದೇಸೀ ಅಕ್ಕಿ ತಳಿಗಳ ಮರುಪರಿಯಚಯದ ಉದ್ದೇಶದಿಂದ ಪಾಂಡವಪುರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ದೇಸೀ ಅಕ್ಕಿ ಮೇಳವನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ನಾಯಕಿ ಸುನೀತಾ ಪುಟ್ಟಣ್ಣಯ್ಯ ಅವರು, ಪಾಂಡವಪುರದಲ್ಲಿ ಸಾವಯವ ಸಂತೆಯನ್ನು ಆಯೋಜಿಸಲಾಗಿದೆ. ಸರ್ಕಾರದ ವತಿಯಿಂದ ಮೇಲುಕೋಟೆಯನ್ನು ಸಾವಯವ ಕೃಷಿ ತಾಲೂಕು ಎಂದು ಘೋಷಿಸಲಾಗಿದೆ. ಇಲ್ಲಿ ಸುಮಾರು 20ಕ್ಕೂ ಹೆಚ್ಚು ಸಾವಯವ ಅಕ್ಕಿ ಮಾದರಿಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಇದರೊಂದಿಗೆ ನವಣೆ ಸೇರಿದಂತೆ ವಿವಿಧ ಪದಾರ್ಥಗಳು ಮತ್ತು ತರಕಾರಿ, ಸೊಪ್ಪುಗಳನ್ನು ಕೂಡ ಮಾರಾಟಕ್ಕೆ ಇಡಲಾಗಿದೆ. ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ಸಾವಯವ ಸಂತೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ ಅವರು, ದೇಸೀ ಅಕ್ಕಿಮೇಳಕ್ಕೆ ಪ್ರಾಯೋಗಿಕವಾಗಿ ಇಂದು ಚಾಲನೆ ನೀಡಲಾಗಿದೆ. ಈಗಾಗಲೇ 15 ದಿನಗಳಿಗೆ ಒಮ್ಮೆ ಸಾವಯವ ಸಂತೆಯನ್ನು ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ದೇಸೀ ಅಕ್ಕಿಮೇಳವನ್ನು ಕೂಡ ಆಯೋಜಿಸಲಾಗಿದೆ. ದೇಸೀ ಅಕ್ಕಿ ಮತ್ತು ದೇಸೀ ಬೀಜಗಳನ್ನು ಉತ್ತೇಜಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ ದೃಷ್ಟಿಯಿಂದ ಇಂತಹ ಮೇಳಗಳು ಮಹತ್ವವನ್ನು ಪಡೆದುಕೊಂಡಿವೆ ಎಂದರು.
ಪುಟ್ಟಣ್ಣಯ್ಯ ಫೌಂಡೇಶನ್, ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ (ಪಾಂಡವಪುರ) ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಇದರಿಂದ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಿರುವುದರ ಹಂತವನ್ನು ವಿಸ್ತರಿಸಲು ಇದೊಂದು ಸಣ್ಣ ಪ್ರಯತ್ನ. ಎಲ್ಲ ನಾಗರಿಕರೂ ಸಂತೆಯಲ್ಲಿ ಭಾಗವಹಿಸಿ. ಇದರಿಂದ ಸಾವಯವ ಕೃಷಿಯನ್ನು ಬೆಂಬಲಿಸಿದಂತಾಗುತ್ತದೆ ಎಂದರು.
ಮೇಳದಲ್ಲಿ ಲಭ್ಯವಿದ್ದ ದೇಸಿ ಅಕ್ಕಿಯ ತಳಿಗಳು
• ಸ್ಥಳೀಯ ಮತ್ತು ಜನಪ್ರಿಯ ತಳಿಗಳು: ಮೇಲುಕೋಟೆಯ ಪುಟ್ಟಭತ್ತ, ಯಳಂದೂರಿನ ರತ್ನಚೂಡಿ, ಪಿರಿಯಾಪಟ್ಟಣದ ರಾಜಭೋಗ, ಹೊಳೆನರಸೀಪುರದ ರಾಜಮುಡಿ, ನಂಜನಗೂಡಿನ ಆನೆಕೊಂಬಿನ ಭತ್ತ, ಕನಕಪುರದ ಮುಂಡುಗ, ನಾಗರಹೊಳೆ ಕಾಡಿನ ಹಾಲು ದೊಡ್ಡಿ, ತುಮಕೂರಿನ ಹಾಲುಬ್ಬಲು, ಮಲೆನಾಡಿನ ಗಂಧಸಾಲೆ, ಜೀರಿಗೆ ಸಣ್ಣ, ಸಿದ್ಧ ಸಣ್ಣ, ಅಂಬೆಮೊಹರ್, ಸೇಲಂ ಸಣ್ಣ, ಹೆಚ್.ಎಂ.ಟಿ, ಕೆಂಪು ಸಣ್ಣ, ಬರ್ಮಾಬ್ಲಾಕ್, ಸಿಂಧೂರ ಮಧುಸಾಲೆ, ಅಂದನೂರು ಸಣ್ಣ, ದೊಡ್ಡ ಬೈರ ನೆಲ್ಲು, ಗೌರಿ ಸಣ್ಣ ಹಾಗೂ ಕೆಂಪು ಮುಂಡಗ.
• ಔಷಧೀಯ ಹಾಗೂ ವಿಶಿಷ್ಟ ತಳಿಗಳು: ಕರಿಗಜವಲಿ, ನವರ, ರಕ್ತಸಾಲಿ, ಕೆಂಪಕ್ಕಿ ಮತ್ತು ಕಪ್ಪು ಅಕ್ಕಿ.
ಈ ಬೃಹತ್ ಮೇಳದಲ್ಲಿ ದೇಶದಾದ್ಯಂತ ಸಂಗ್ರಹಿಸಿದ 200ಕ್ಕೂ ಹೆಚ್ಚಿನ ಭತ್ತದ ತಳಿಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಜೊತೆಗೆ ತಾಜಾ ಸಾವಯವ ತರಕಾರಿ, ಸೊಪ್ಪು, ಹಣ್ಣು, ಬೆಲ್ಲ, ಗಾಣದ ಎಣ್ಣೆ ಮತ್ತು ವಿವಿಧ ಅಡುಗೆ ಪದಾರ್ಥಗಳು ಖರೀದಿಗೆ ಲಭ್ಯವಿದ್ದವು. ಈ ಕಾರ್ಯಕ್ರಮವನ್ನು ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಪುಟ್ಟಣ್ಣಯ್ಯ ಪ್ರತಿಷ್ಠಾನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ (ಪಾಂಡವಪುರ) ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.








