ನಿಜ ಶ್ರೀಮಂತಿಕೆಯ ಗುರುತಿಸಲಾಗದೆ ಹೋದೆ

2 years ago

ಹಲವಾರು ತಿಂಗಳುಗಳ ಆರೈಕೆಯ ನಂತರ ಪುಟ್ಟಮ್ಮನವರು ಹಾಸಿಗೆಯಿಂದ ಎದ್ದು ಓಡಾಡುವಂಥಾಯಿತು. ಅತ್ತೆ  ಓಡಾಡುವಂತಹ ಮಟ್ಟಿಗೆ ಸುಧಾರಣೆಯಾಗಿರುವುದರಿಂದ ಲಕ್ಷ್ಮೀದೇವಿ ಅತ್ತೆಗೆ, ತಾವು ಬೇಕಾದರೆ ದೊಡ್ಡ ಸೊಸೆಯ ಮನೆಗೆ ಹೋಗಿ ಎಂದು ಹೇಳಿದಳು.

ಅಲ್ಲಮ್ಮ ಲಕ್ಷ್ಮಿ, ನಿನಗೆ ನಾನು ಇಲ್ಲಿ ಇರುವುದು ತೊಂದರೆ ಆಗುತ್ತಿದೆಯೇ ಎಂದು ಪುಟ್ಟಮ್ಮನವರು ಸೊಸೆಯನ್ನ ಕೇಳಿದರು. ಹಾಗಲ್ಲ, ನಮ್ಮ ಮನೆ ತುಂಬಾ ಚಿಕ್ಕದು. ಆದರೆ ಸರಸ್ವತಿಯ ಮನೆ ದೊಡ್ಡದಾಗಿದೆ. ಮೊದಲಿನಿಂದಲೂ ನೀವು ಆ ಮನೆಯಲ್ಲಿ ಇದ್ದವರು. ನಮ್ಮ ಮನೆಯಲ್ಲಿ ಆ ಮನೆಯ ಮಟ್ಟಿಗೆ ಸೌಕರ್ಯ ಸೌಲಭ್ಯಗಳಿಲ್ಲ. ಅದಕ್ಕಾಗಿ ಕೇಳಿದೆ ಅಷ್ಟೇ ಎಂದು ಉತ್ತರಿಸಿದಳು.

ಅವಳ ಮನೆಯಲ್ಲಿರುವ ಸೌಕರ್ಯ, ಸೌಲಭ್ಯ ಯಾವುದು ನನಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಅನುಕೂಲಕ್ಕೆ ಬರಲಿಲ್ಲ. ನಿನ್ನ ಮನೆಯ ಪ್ರೀತಿ ತುಂಬಿದ ಸೌಕರ್ಯ ಸೌಲಭ್ಯಗಳೆ ನನಗೆ ಹೆಚ್ಚು ಸಂತೋಷವನ್ನು ತಂದು ಕೊಟ್ಟಿದೆ ಎಂದು ಹೇಳುವ ಸಂದರ್ಭದಲ್ಲಿ ಪುಟ್ಟಮ್ಮನವರ ಮುಖದಲ್ಲಿ ನೋವು ತುಂಬಿತ್ತು.

ನೀವು ಇಷ್ಟಪಟ್ಟು ನಮ್ಮ ಮನೆಯಲ್ಲಿ ಇರುವುದಾದರೆ ನನ್ನದೇನು ಅಭ್ಯಂತರವಿಲ್ಲ. ಹಾಗೆ ನಿಮ್ಮ ಮಗ ಸಹ ಯಾವುದೇ ರೀತಿಯ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಆದರೆ ನೀವು ಮೊದಲಿನಿಂದಲೂ ಅವರ ಮನೆಯಲ್ಲಿ ಚೆನ್ನಾಗಿ ಬಾಳಿ ಬದುಕಿದವರು. ನಮ್ಮ ಮನೆ ವ್ಯವಸ್ಥೆ ನಿಮಗೆ ಸರಿ ಹೊಂದುತ್ತದೆಯೋ ಇಲ್ಲವೋ ಎನ್ನುವ ಆತಂಕ ನನಗೆ ಅಷ್ಟೇ ಎಂದು ಲಕ್ಷ್ಮಿ ಹೇಳಿದಳು.

ನಾನು ಈಗ ನಿರ್ಧರಿಸಿದ್ದೇನೆ. ಮುಂದೆ ನಾನು ನಿಮ್ಮ ಮನೆಯಲ್ಲಿಯೇ ಇರುತ್ತೇನೆ ಎಂದು ಹೇಳಿದ ಅವಳ ಮಾತಿನಲ್ಲಿ  ನಿರ್ಧಾರವಾಗಿ ಹೇಳಿದಂತಿತ್ತು.

ಲಕ್ಷ್ಮಿ ಏನನ್ನು ಮಾತನಾಡದೆ ನಗುತ್ತಲೇ ಅಲ್ಲಿಂದ ಹೋಗಿ ತನ್ನ ಕೆಲಸದ ಕಡೆ ಗಮನಹರಿಸಿದಳು.

ಪುಟ್ಟಮ್ಮ ಮತ್ತು ಪುಟ್ಟಪ್ಪ ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಆನಂದ ಇನ್ನೊಬ್ಬ ಸಂತೋಷ. ಸಂತೋಷ ಚೆನ್ನಾಗಿ ಓದಿದ, ಒಳ್ಳೆಯ ಕೆಲಸಕ್ಕೂ ಸೇರಿದ, ಅದೇ ರೀತಿಯಲ್ಲಿ ಅವನಷ್ಟೇ ಓದಿದ ಶ್ರೀಮಂತ ಮನೆತನದ ಹುಡುಗಿಯನ್ನು ಮದುವೆಯಾದ. ಮುಂದೆ ಒಳ್ಳೆಯ ಮನೆಯನ್ನ ಕಟ್ಟಿಸಿ ಸಾಕಷ್ಟು ಶ್ರೀಮಂತಿಕೆಯ ಜೀವನವನ್ನೇ ನಡೆಸುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಆನಂದ ಪಿಯುಸಿ ಫೇಲಾಗಿ ಆಟೋರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾನೆ. ಅವನಿಗೆ ಸ್ವಜಾತಿಯಲ್ಲಿ ಹೆಣ್ಣು ಸಿಗಲಿಲ್ಲ. ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮನೆಯ ವಿರೋಧದ ನಡುವೆ ಮದುವೆಯಾದ. ಪ್ರತಿದಿನವೂ ದುಡಿದು ಬದುಕುವಂತಹ ಸಾಧಾರಣವಾದ ಜೀವನ ನಡೆಸುತ್ತಿದ್ದಾನೆ.

ಪುಟ್ಟಪ್ಪ ಸತ್ತ ನಂತರ ಪುಟ್ಟಮ್ಮ ದೊಡ್ಡ ಮಗನ ಮನೆಯಲ್ಲಿಯೇ ಅಂದರೆ ಸಂತೋಷನ ಮನೆಯಲ್ಲಿ ಜೊತೆಯಲ್ಲಿದ್ದಾರೆ. ಅಲ್ಲಿ ಸಾಕಷ್ಟು ಸೌಲಭ್ಯ, ಸೌಕರ್ಯವಿದೆ ಓಡಾಡಲು ಕಾರಿದೆ, ಹೀಗೆ ಜೀವನ ಸರಿಯಾದ ರೀತಿಯಲ್ಲಿ ನಡೆಯುತ್ತಿತ್ತು.

ಪುಟ್ಟಮ್ಮ ಆನಂದ ಅನ್ಯ ಜಾತಿಯ ಬಡವರ ಮನೆಯ ಅಷ್ಟು ರೂಪವಂತಳಲ್ಲದ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ತಾತ್ಸಾರದಿಂದ ನೋಡತೊಡಗಿದಳು. ಸಭೆ ಸಮಾರಂಭಗಳಲ್ಲಿ ಬಂಧುಗಳ ಮುಂದೆ ದೊಡ್ಡ ಸೊಸೆಯನ್ನ ಎಲ್ಲರಿಗೂ ಪರಿಚಯವನ್ನು ಮಾಡಿಕೊಡುತ್ತಾ, ಅವಳನ್ನು ಹಾಡಿ ಹೊಗಳುತ್ತಿದ್ದಳು. ಇದೇ ಸಂದರ್ಭದಲ್ಲಿ ಲಕ್ಷ್ಮಿಯನ್ನ ತಿರಸ್ಕಾರದಿಂದ ನೋಡುತ್ತಿದ್ದಳು.

ಕೆಲವು ತಿಂಗಳ ಹಿಂದೆ ಬಚ್ಚಲು ಮನೆಯಲ್ಲಿ ಸ್ನಾನ ಮಾಡುವಾಗ ಪುಟ್ಟಮ್ಮ ಜಾರಿ ಬಿದ್ದಳು. ಸೊಂಟದ ಮೂಳೆ ಮುರಿದುಹೋಯಿತು. ಆಸ್ಪತ್ರೆಗೆ ಸೇರಿಸಿದ ಸಂತೋಷ ಮತ್ತು ಅವನ ಹೆಂಡತಿ ಸರಸ್ವತಿ ಅಷ್ಟಾಗಿ ಗಮನವನ್ನು ಕೊಡಲಿಲ್ಲ. ಹಣವನ್ನು ಮಾತ್ರ ಪಾವತಿಸಿದರು. ಆಸ್ಪತ್ರೆಯಲ್ಲಿ ಲಕ್ಷ್ಮಿ , ಪುಟ್ಟಮ್ಮನ ವಿಚಾರದಲ್ಲಿ ಇದ್ದಂತಹ ಬೇಸರವನ್ನು ಮರೆತು ಹಲವಾರು ದಿನಗಳ ಕಾಲ ಇದ್ದು ಸೇವೆಯನ್ನು ಮಾಡಿ, ಕಾಲಕಾಲಕ್ಕೆ ಔಷಧಿ ಕೊಟ್ಟು ಪುಟ್ಟಮ್ಮನ ಮಲಮೂತ್ರ ಬಾಚಿ ಚೆನ್ನಾಗಿ ನೋಡಿಕೊಂಡಳು. ಆನಂದ ಸಹ ಯಾವಾಗಲೂ ಆಸ್ಪತ್ರೆಯಲ್ಲಿಯೇ ತಾಯಿಯನ್ನು ನೋಡಿಕೊಂಡು ಇರುತ್ತಿದ್ದ. ಸಂತೋಷ ಮತ್ತು ಸರಸ್ವತಿ ಆಗೊಮ್ಮೆ, ಈಗೊಮ್ಮೆ ಬಂದು, ದೂರದಲ್ಲಿ ನಿಂತು ಮಾತನಾಡಿಸಿ ಹೋಗುತ್ತಿದ್ದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ತಾಯಿಯನ್ನ ಮನೆಗೆ ಕರೆದುಕೊಂಡು ಹೋಗಲು ಸಂತೋಷ ಇಷ್ಟ ಪಡಲಿಲ್ಲ. ಕಾರಣ ತಾಯಿಗೆ ಮಲಗಿದ ಜಾಗದಲ್ಲಿ ಎಲ್ಲವೂ ಆಗಬೇಕು. ಮನೆಯಲ್ಲಿ ಸೇವೆ ಮಾಡಲು ಯಾರು ಇಲ್ಲ ಎಂದು ಹೇಳಿ ಆನಂದನೆ ಮನೆಗೆ ಕರೆದುಕೊಂಡು ಹೋಗಲಿ, ಅಮ್ಮ ಚೇತರಿಸಿಕೊಂಡ ಮೇಲೆ ಮನೆಗೆ ಕರೆದುಕೊಂಡು ಹೋಗುತ್ತೇನೆ. ಆನಂದನ ಮನೆಯಲ್ಲಿ ಅಮ್ಮ ಇರುವಷ್ಟು ದಿನ ಅವಳ ಔಷಧಿ ಇತರೆ ಖರ್ಚಿಗೆ ಹಣವನ್ನು ಕೊಡುತ್ತೇನೆ ಎಂದು ಹೇಳಿದ.

ಅಮ್ಮನ ಔಷಧಿ ಮತ್ತು ಇತರೆ ಖರ್ಚುಗಳನ್ನು ನೋಡಿಕೊಳ್ಳಲಾಗದಷ್ಟು ನಮಗೆ ಬಡತನ ಇಲ್ಲ, ನಮಗೂ ಸಹ ಅವರ ಸೇವೆ ಮಾಡುವ ಜವಾಬ್ದಾರಿ ಇದೆ. ತಾವು ಒಪ್ಪಿದರೆ ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇವೆ. ಮೊದಲು ಅಮ್ಮ ಬರುತ್ತಾರಾ ಕೇಳಿ ಎಂದು ಲಕ್ಷ್ಮಿ ಹೇಳಿದಳು.

ಸಂತೋಷ ನೇರವಾಗಿ ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡದ ಮೇಲೆ ಬೇರೆ ದಾರಿಯೇ ಇಲ್ಲದೆ ಪುಟ್ಟಮ್ಮ ಆನಂದನ ಮನೆಗೆ ಬರಲು ಒಪ್ಪಿಕೊಂಡಳು.

ಆನಂದನ ಮನೆಯಲ್ಲಿ ಅಚ್ಚುಕಟ್ಟಾಗಿ ಎಲ್ಲವನ್ನು ವ್ಯವಸ್ಥೆ ಮಾಡಿ ಲಕ್ಷ್ಮಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾಳೆ, ಕಾಲಕಾಲಕ್ಕೆ ಔಷಧಿಯನ್ನು ಕೊಡುವುದು, ಹಾಸಿಗೆ ಮೇಲೆ ಮಲಗಿರುವ ಪುಟ್ಟಮ್ಮನ ದೇಹ ಸ್ವಚ್ಛ ಮಾಡುವುದು ಎಲ್ಲವನ್ನು ಮಾಡಿ ಪುಟ್ಟಮ್ಮ ಬೇಗ ಸುಧಾರಿಸಿಕೊಳ್ಳಲು ಶ್ರದ್ಧೆಯಿಂದ ಸೇವೆಯನ್ನ ಮಾಡುತ್ತಿದ್ದಾಳೆ.

ಲಕ್ಷ್ಮಿ ವಿಚಾರದಲ್ಲಿ ತಾನು ನಡೆದುಕೊಂಡ ರೀತಿ ಅವಳನ್ನು ಕಡೆಗಣಿಸಿದ್ದು ಎಲ್ಲವೂ ಪುಟ್ಟಮ್ಮನಿಗೆ ಈಗ ಒಂದೊಂದೇ ಕಣ್ಮುಂದೆ ಬಂದು ನಾಚಿಕೆಯಾಗುತ್ತಿದೆ. ಬಡವರ ಮನೆಯ ಹುಡುಗಿ ಓದಿಲ್ಲ ಅಷ್ಟು ಸುಂದರವೂ ಇಲ್ಲ ಎಂದು ಎಷ್ಟು ಅವಮಾನವನ್ನು ಮಾಡಿದೆ. ಎಷ್ಟೊಂದು ಕಡೆಗಣಿಸಿದೆ ದೊಡ್ಡ ಸೊಸೆಯನ್ನ ಎಲ್ಲರ ಮುಂದೆ ಹಾಡಿ ಹೊಗಳಿದೆ. ಆದರೆ ನೆಲಕ್ಕೆ ಬಿದ್ದು ಹಾಸಿಗೆ ಹಿಡಿದಾಗ ಸರಸ್ವತಿ ಸೇವೆ ಮಾಡಲು ಮನಸ್ಸು ಮಾಡಲಿಲ್ಲ. ಲಕ್ಷ್ಮಿ ಪ್ರೀತಿಯಿಂದ ಯಾವುದೇ ರೀತಿಯ ಬೇಸರವೂ ಇಲ್ಲದೆ, ಸೇವೆ ಮಾಡಿ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾಳೆ. ನಾನು ಸರಸ್ವತಿಯ ವಿದ್ಯೆ ಶ್ರೀಮಂತಿಕೆ ರೂಪ ಇದನ್ನು ಮಾತ್ರ ನೋಡಿದೆ. ಆದರೆ ಲಕ್ಷ್ಮಿಯಲ್ಲಿರುವ ಹೃದಯ ಶ್ರೀಮಂತಿಕೆಯನ್ನ ಒಳ್ಳೆಯ ಮನಸ್ಸನ್ನು ಗಮನಿಸಲೇ ಇಲ್ಲ. ಈಗ ನನ್ನ ಈ ಪರಿಸ್ಥಿತಿ ನನ್ನ ತಪ್ಪನ್ನು ನನಗೆ ಎತ್ತಿ ತೋರಿಸಿದೆ, ಜೊತೆಗೆ ಶ್ರೀಮಂತಿಕೆ ಎಂದರೆ ಯಾವುದು ಎನ್ನುವುದನ್ನು  ಸಂದರ್ಭದ ತಿಳಿಸಿಕೊಟ್ಟಿದೆ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಲಕ್ಷ್ಮಿಯ ಬಳಿಯಲ್ಲಿ ತಾನು ಕ್ಷಮೆ ಕೇಳಬೇಕೆಂದು ಬಯಸಿದಳು.

ಒಂದು ದಿನ ಲಕ್ಷ್ಮಿಯನ್ನು ಹತ್ತಿರಕ್ಕೆ ಕರೆದು ಅವಳ ಕೈಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ದಯವಿಟ್ಟು ನನ್ನನ್ನು ಕ್ಷಮಿಸಿಬಿಡು, ನಿನ್ನ ವಿಚಾರದಲ್ಲಿ ನಾನು ತುಂಬಾ ಕೆಟ್ಟದಾಗಿ ನಡೆದುಕೊಂಡೆ ಎಂದು ಕಣ್ಣೀರು ಸುರಿಸಿದರು.

ಅಮ್ಮ , ಇವೆಲ್ಲ ಏನು. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನೀವು ಯಾವುದೋ ಹಳೆಯದನ್ನ ನೆನಪಿಸಿಕೊಂಡು ಬೇಸರ ಮಾಡಿಕೊಳ್ಳಬೇಡಿ. ನಾನು ಯಾವುದನ್ನು ನೆನಪಿನಲ್ಲಿ ಇಟ್ಟುಕೊಂಡಿಲ್ಲ ಎಂದು ನಗುತ್ತಲೇ ಹೇಳಿದಳು.

ವಿಷಯವನ್ನ ಬೇರೆ ಕಡೆಯಲ್ಲಿ ತೆಗೆದುಕೊಂಡು ಹೋಗುವ ಹಿನ್ನೆಲೆಯಲ್ಲಿ ಅಮ್ಮ ನನಗೆ ಸ್ವಲ್ಪ ಕೆಲಸ ಇದೆ ಬರುತ್ತೇನೆ ಎಂದು ಅಲ್ಲಿ ನಿಲ್ಲದೆ ಹೊರಟಳು.

ಒಂದು ದಿನ ಸಂತೋಷ ಮತ್ತು ಸರಸ್ವತಿ ಆನಂದನಮನೆಗೆ ಬಂದರು. ಪುಟ್ಟಮ್ಮನನ್ನು ಮನೆಗೆ ಬಾ ಎಂದು ಕರೆದರು. ಅದಕ್ಕೆ ಪುಟ್ಟಮ್ಮ ನಾನು ಇನ್ನು ಮುಂದೆ ಆನಂದನ ಮನೆಯಲ್ಲಿ ಇರುತ್ತೇನೆ ಎಂದು ನೇರವಾಗಿ ಹೇಳಿದಳು. ಅದಕ್ಕೆ ಸಂತೋಷ ಇಲ್ಲಿ ಬೇಡ ಅಮ್ಮ, ನಮ್ಮ ಮನೆಯಲ್ಲಿ ನಿನಗೆ ಸಾಕಷ್ಟು ಸೌಲಭ್ಯ, ಸೌಕರ್ಯ ಅನುಕೂಲತೆಗಳಿವೆ. ಅಲ್ಲಿ ಬಂದು ಇರು. ಹೇಗಿದ್ದರೂ ನೀನು ಓಡಾಡಿಕೊಂಡಿರುವ ಸ್ಥಿತಿಗೆ ಸುಧಾರಿಸಿಕೊಂಡಿರುವೆ. ನಿನ್ನ ಕೆಲಸವನ್ನು ನೀನೆ ಮಾಡಿಕೊಳ್ಳುವಷ್ಟು ಆರೋಗ್ಯ ಸುಧಾರಣೆಯಾಗಿದೆ ಎಂದು ಹೇಳಿದ.

ಆನಂದನ ಮನೆಯಲ್ಲಿ ಇರುವ ಸೌಲಭ್ಯ ಸೌಕರ್ಯ ನನ್ನ ಮನಸ್ಸಿಗೆ ಹೆಚ್ಚು ಸಂತೋಷವನ್ನು ಕೊಟ್ಟಿದೆ. ಜೊತೆಗೆ ಲಕ್ಷ್ಮಿ ಅಂತಹ ಸೊಸೆಯನ್ನು ನಾನು ಬಿಟ್ಟು ಬರಲು ಸಾಧ್ಯವಿಲ್ಲ. ಚೆನ್ನಾಗಿದ್ದಾಗ ನನ್ನನ್ನು ನೋಡಿಕೊಂಡವರಿಗಿಂತ ನೆಲಕ್ಕೆ ಬಿದ್ದಾಗ ನನ್ನನ್ನು ಆರೈಕೆ ಮಾಡಿದ ಆನಂದ, ಲಕ್ಷ್ಮಿಯ ಮನೆಯ ನನಗೆ ಅಂದದ ಅರಮನೆ ಎಂದು ಸ್ವಲ್ಪ ಕಠಿಣವಾದ ಧಾಟಿಯಲ್ಲಿ ಹೇಳಿದಳು.

ಸಂತೋಷ ಮತ್ತು ಸರಸ್ವತಿಗೆ ತಾಯಿ ಯಾವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾಳೆ ಎನ್ನುವುದು ತಿಳಿಯಿತು. ಆಸ್ಪತ್ರೆಯಲ್ಲಿದ್ದಾಗ ತಾವು ಸರಿಯಾಗಿ ಗಮನ ಹರಿಸದೆ ಇರುವುದು ಮತ್ತು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗದೆ ಆನಂದನ ಮನೆಗೆ ಹೋಗುವಂತೆ ಹೇಳಿದ್ದು ಇವಳ ಮನಸ್ಸಿಗೆ ಸಿಟ್ಟು ತರಿಸಿದೆ ಎಂಬುದು ತಿಳಿಯಿತು.

ನಿನಗೆ ಎಲ್ಲಿ ಸಂತೋಷವಿದೆಯೋ ಅಲ್ಲಿಯೇ ಇರು ಎಂದು ಹೇಳಿ ಸಂತೋಷ ಮತ್ತು ಸರಸ್ವತಿ ನಿರ್ಗಮಿಸಿದರು. ಪುಟ್ಟಮ್ಮ ಮತ್ತೊಮ್ಮೆ ಆನಂದ ಮತ್ತು ಲಕ್ಷ್ಮಿಯನ್ನು ಹತ್ತಿರಕ್ಕೆ ಕರೆದು ಅವರ ಕೈಗಳನ್ನು ತೆಗೆದುಕೊಂಡು ತನ್ನ ಕಣ್ಣಿಗೆ ಒತ್ತಿಕೊಂಡಳು ಆನಂದ, ಲಕ್ಷ್ಮಿ, ತಾಯಿಯ ಬೆನ್ನು ಸವರಿದರು ಪುಟ್ಟಮ್ಮನ ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಹರಿದು ಬಂದಿತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply