ಮಲಿನಗೊಂಡ ಮನಸ್ಸುಗಳೆ ಅಸ್ಪೃಶ್ಯರು

12 months ago

ವಿಶ್ವಾಸ ಉನ್ನತ ವ್ಯಾಸಂಗ ಪಡೆದು ಸರ್ಕಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ದೊಡ್ಡ ಅಧಿಕಾರಿಯಾಗಿ ಆಯ್ಕೆಯಾದ ವಿಚಾರ ಪತ್ರಿಕೆಗಳಲ್ಲಿ ಬರುತ್ತಿದ್ದಂತೆ ಇವರ ಮನೆಗೆ ಈತನ ಹೆಂಡತಿ ವಿಶಾಲಕ್ಷಿಯ ತಮ್ಮ ಮತ್ತು ತಂಗಿ ಹಾಗೂ ಅವರ ಮಕ್ಕಳೆಲ್ಲರೂ ಬಂದು ಶುಭವನ್ನ ಕೋರಿದರು.

ಹಲವು ವರ್ಷಗಳ ಹಿಂದೆ ವಿಶಾಲಾಕ್ಷಿ ಸರ್ಕಾರಿ ಉದ್ಯೋಗಿಗಾಗಿದ್ದು, ತನ್ನ ಸಂಬಳದಿಂದ ತಮ್ಮನನ್ನು ಮತ್ತು ತಂಗಿಯನ್ನು ಚೆನ್ನಾಗಿ ಓದಿಸಿ ಅವರುಗಳಿಗೆ ಮದುವೆಯನ್ನು ಮಾಡಿದಳು. ವಿಶಾಲಾಕ್ಷಿಗೆ ಸಾಕಷ್ಟು ವರ್ಷವಾದರೂ ಮದುವೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಇವರ ಕಚೇರಿಯಲ್ಲಿ ಇವರೊಂದಿಗೆ ಕೆಲಸ ಮಾಡುತ್ತಿದ್ದ ವಿಶ್ವಾಸ್ ತಾನೇ ಆಸೆಪಟ್ಟು ಇವಳನ್ನು ಮದುವೆಯಾಗಲು ಬೇಡಿಕೆಯಲ್ಲಿಟ್ಟ. ಆರಂಭದಲ್ಲಿ ಹಿಂದೇಟು ಹಾಕಿದ ವಿಶಾಲಾಕ್ಷಿ ವಿಶ್ವಾಸನ ನಳವಳಿಕೆ ಗುಣಗಳನ್ನು ಇವನು ಯೋಗ್ಯ ಎಂದು ತೀರ್ಮಾನಿಸಿ ವಿವಾಹವಾಗಲು ಒಪ್ಪಿಕೊಂಡಳು.

ಈ ವಿಚಾರವನ್ನು ತಮ್ಮ ಮತ್ತು ತಂಗಿಗೆ ಮತ್ತು ಅವರ ಕುಟುಂಬದವರಿಗೆಲ್ಲ ತಿಳಿಸಿದಳು. ಅವರು ಸಹ ಮೊದಲು ಸಂತೋಷಪಟ್ಟರು. ಯಾವಾಗ ವಿಶ್ವಾಸ್ ಅನ್ಯಜಾತಿಯವನು ಎಂದು ತಿಳಿಯಿತೋ ಆಗ ಮದುವೆ ಬಗ್ಗೆ ಯೋಚಿಸಲು ಸಲಹೆ ನೀಡಿದರು.

ವಿಶ್ವಾಸ್ ಅನ್ಯ ಜಾತಿ. ಅವನೊಂದಿಗೆ ಮದುವೆಯಾದರೆ ನಮ್ಮ ಕುಟುಂಬದ ಗೌರವ ಹಾಳಾಗುತ್ತದೆ, ಇದು ಬೇಡ ಎಂದು ನೇರವಾಗಿ ಹೇಳಿದರು. ವಿಶಾಲಾಕ್ಷಿಗೆ ಇವರ ಮಾತುಗಳನ್ನು ಕೇಳಿ ದುಃಖವಾಯಿತು. ಬದುಕಿನಲ್ಲಿ ಎಷ್ಟೆಲ್ಲ ಇವರಿಗಾಗಿ ಸಹಾಯ ಮಾಡಿರುತ್ತೇನೆ. ಆದರೂ ಇವರಿಗೆ ನನಗಿಂತ ಜಾತಿಯೇ ಮುಖ್ಯವಾಯಿತು ಎಂದು ಬೇಸರವಾಯಿತು.

ಇವರ ಮಾತುಗಳನ್ನ ಲೆಕ್ಕಿಸದೆ ವಿಶಾಲಾಕ್ಷಿ ಮತ್ತು ವಿಶ್ವಾಸ್ ಮದುವೆಯಾದರು. ಮದುವೆಗೆ ಇವರ ಮನೆಯವರು ಯಾರೂ ಬರಲಿಲ್ಲ. ಮದುವೆಯ ನಂತರವೂ ಸಹ ಒಂದು ದಿನವೂ ಕರೆದು ಒಂದು ಲೋಟ ಕಾಫಿ ಸಹ ಕೊಡಲಿಲ್ಲ.

ಹೀಗೆ ವರುಷಗಳು ಕಳೆಯಿತು ವಿಶ್ವಾಸ್ ತನ್ನ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾಗಿ ಗೌರವಯುತ ಹೆಮ್ಮೆಯ ಬದುಕಿನ ಕಡೆಗೆ ಸಾಗಿದ. ವಿಶ್ವಾಸ್ ಉನ್ನತ ಮಟ್ಟದ ಅಧಿಕಾರಕ್ಕೆ ಬಂದದ್ದು ತಿಳಿದಂತಹ ವಿಶಾಲಾಕ್ಷಿಯ ತಮ್ಮ ಮತ್ತು ತಂಗಿ ಅಭಿನಂದಿಸುವ ನೆನಪದಲ್ಲಿ ಮನೆಗೆ ಬಂದು ಮತ್ತೆ ಬಾಂಧವ್ಯವನ್ನು ಬೆಸೆದುಕೊಳ್ಳಲು ಪ್ರಯತ್ನಿಸಿದರು.

ಇವರು ಮನೆಗೆ ಬಂದಾಗ ಯಾವುದೇ ರೀತಿಯ ಕೋಪವನ್ನು ವ್ಯಕ್ತಪಡಿಸದೆ ಅಸಹನೆ ತೋರದೆ ಪ್ರೀತಿಯಿಂದ ಅವರನ್ನು ಬರಮಾಡಿಕೊಂಡು ಗೌರವದಿಂದ ನಡೆಸಿಕೊಂಡಳು. ಈ ಸಂದರ್ಭದಲ್ಲಿ ಇವಳ ತಮ್ಮ ಮತ್ತು ತಂಗಿಯ ಕುಟುಂಬದವರು ವಿಶ್ವಾಸ್ ಗಾಗಿ ತಂದಿದ್ದ ಸಿಹಿ ತಿಂಡಿ ಹಣ್ಣಿನ ಬುಟ್ಟಿ ಎಲ್ಲವನ್ನು ಸ್ವೀಕರಿಸಿ ವಿಶಾಲಾಕ್ಷಿ ಇವರ ಮುಂದೆ ಅದನ್ನು ತೆಗೆದುಕೊಂಡು  ಪಕ್ಕಕ್ಕೆ ಇಟ್ಟಳು.

ಯಾಕೆ ಅಕ್ಕ ನಾವು ಪ್ರೀತಿಯಿಂದ ತಂದಂತಹ ಇವುಗಳನ್ನು ಈ ರೀತಿಯಲ್ಲಿ ತಿರಸ್ಕರಿಸಿ ಅವಮಾನ ಮಾಡುತ್ತಿದ್ದೀಯಾ ಎಂದು ಕೇಳಿದರು. ಈ ಮಧ್ಯೆ ಇವರ ಸ್ನೇಹಿತರು ತಂದುಕೊಟ್ಟ ಸಿಹಿ ತಿಂಡಿಯನ್ನು ಎಲ್ಲರ ಮುಂದೆ ಗಂಡ ಹೆಂಡತಿ ಇಬ್ಬರೂ ಸ್ವೀಕರಿಸಿ ತಾವು ತಿಂದು ಎಲ್ಲರಿಗೂ ಹಂಚಿದರು.

ಇದೇ ವೇಳೆಯಲ್ಲಿ ತಂಗಿ ಮತ್ತು ತಮ್ಮ ತಂದ ವಸ್ತುಗಳನ್ನು ನಿರ್ಲಕ್ಷಿಸಿದಳು. ಮತ್ತೆ ಇವರು ಈ ರೀತಿಯ ನಡವಳಿಕೆಗೆ ಕಾರಣವೇನೆಂದು ಸ್ವಲ್ಪ ಸಿಟ್ಟಿನಿಂದಲೇ ಕೇಳಿದರು. ವಿಶಾಲಾಕ್ಷಿ ನಗುತ್ತ ನೀವು ತಂದದ್ದು ನಮಗೆ ಕಹಿಯಾಯಿತು, ಅದೇ ನಮ್ಮ ಸ್ನೇಹಿತರು ತಂದದ್ದು ನಮಗೆ ಪ್ರಸಾದವಾಯಿತು ಎಂದಳು.

ಮತ್ತೆ ಮಾತು ಮುಂದುವರಿಸಿ ಮಲಿನಗೊಂಡ ಮನಸ್ಸುಗಳು ಮೈಲಿಗೆಯಿಂದ ತುಂಬಿರುತ್ತದೆ. ಅಂತಹ ಮನಸ್ಸಿನ ಜನ ತರುವ ಸಿಹಿಯು ವಿಷವಾಗುತ್ತದೆ ಎಂಬ ನಮ್ಮ ಭಾವನೆ ನನಗೆ, ನನ್ನ ಮದುವೆಯ ಸಂದರ್ಭದಲ್ಲಿ ನಿಮ್ಮ ನಡವಳಿಕೆ, ನಿಮ್ಮ ಸಂಸ್ಕಾರ ತೋರಿಸಿಕೊಟ್ಟಿದೆ. ಮನೆಗೆ ಬಂದಿದ್ದೀರಿ ನನ್ನ ಗಂಡನನ್ನು ಅಭಿನಂದಿಸಿದ್ದೀರಿ ತಾವೆಲ್ಲೂ ಹೊರಡಬಹುದು. ಹೆಚ್ಚು ಹೊತ್ತು ಇದ್ದರೆ ನನ್ನ ಗಂಡನ ಜಾತಿಯ ಕಾರಣಕ್ಕೆ ನಿಮಗೆ ಮೈಲಿಗೆ ಆಗಬಹುದು. ನಿಮ್ಮ ಕುಟುಂಬಕ್ಕೆಲ್ಲ ಅವಮಾನವಾಗಬಹುದು ಎಂದು ವ್ಯಂಗ್ಯದಿಂದ ಹೇಳಿದಳು.

ವಿಶಾಲಾಕ್ಷಿ ತಮ್ಮ ಮತ್ತು ತಂಗಿಯ ಕುಟುಂಬದವರನ್ನು ಕಾಳಜಿ ಮಾಡುವುದಕ್ಕಿಂತ ಬಂದ ಬೇರೆ ಜನರ  ಬಗ್ಗೆ ಆಸಕ್ತಿಯನ್ನು ತೋರಿದಳು. ಇನ್ನು ಇಲ್ಲಿ ಹೆಚ್ಚು ಹೊತ್ತು ಇರುವುದರಲ್ಲಿ ಅರ್ಥವಿಲ್ಲವೆಂದು ಇವಳ ತಮ್ಮ ಮತ್ತು ತಂಗಿಯ ಕುಟುಂಬದವರು ಅಲ್ಲಿಂದ ನಿರ್ಗಮಿಸಿದರು.

ವಿಶಾಲಾಕ್ಷಿ ನೀನು ನಿಮ್ಮ ಕುಟುಂಬದವರ ಜೊತೆಯಲ್ಲಿ ನಡೆದುಕೊಂಡದ್ದು ಅತಿ ಆಯಿತು ಎನಿಸುತ್ತದೆ ಎಂದು ವಿಶ್ವಾಸ್ ಕೇಳಿದ. ಇಲ್ಲ ನಾನು ಸರಿಯಾಗಿಯೇ ನಡೆದುಕೊಂಡಿದ್ದೇನೆ. ಇವರಿಗೆ, ಜಾತಿಯೇ ದೊಡ್ಡದು. ಜಾತಿಯ ಕಸ ತುಂಬಿರುವ ಮನಸ್ಸುಗಳುಳ್ಳ ಇವರು ನನಗೆ ಎಂದಿಗೂ ಆಪ್ತರಾಗುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಅವಳ ಕಣ್ಣಿನಲ್ಲಿ ಒಂದೆರಡು ಹನಿಗಳು ಕಂಡವು ಮುಖದಲ್ಲಿ ನೋವು ತುಂಬಿತ್ತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply