ಉಂಡು ಮಿಕ್ಕುಳಿದ ಆಹಾರ ಪದಾರ್ಥಗಳನ್ನು ಮರು ಬಳಕೆ ತಿನಿಸುಗಳನ್ನಾಗಿ ಮಾಡುವ ಕಲೆ

1 year ago

ಉಂಡು ಮಿಕ್ಕುಳಿದ ಆಹಾರ ಪದಾರ್ಥಗಳನ್ನು ಮರು ಬಳಕೆ ತಿನಿಸುಗಳನ್ನಾಗಿ ಬಳಸುವ ಮೂಲಕ ನಮ್ಮ ಹಸಿವೆಯನ್ನು ಹಿಂಗಿಸುತ್ತಿದ್ದ ವಿಷಯದಲ್ಲಿ ನನ್ನ ಅಜ್ಜಿ ಸಣ್ಣಹನುಮಕ್ಕ ಮತ್ತು ಜಾನಪದ ಹಾಡುಗಾರ್ತಿಯಾದ ನನ್ನ ಅಮ್ಮ ವಡ್ಡಗೆರೆ ಕದರಮ್ಮ ಸದಾಕಾಲವೂ ಮಾದರಿ ವ್ಯಕ್ತಿತ್ವಗಳಾಗಿ ನನಗೆ ಕಾಣಿಸುತ್ತಾರೆ. ಈ ವಿಷಯದಲ್ಲಿ ನನ್ನ ಫ್ರೆಂಡತಿ Rama Shakya ಕೂಡಾ ಸ್ವಲ್ಪ ಗಿಲೀಟು.

ಮಿಕ್ಕುಳಿದ ರಾಗಿಮುದ್ದೆ ತಂಗಳ್ಹಿಟ್ಟಿನಿಂದ ಮಿದ್ದಿಟ್ಟು ಮಾಡಿಯೋ ಅಥವಾ ಕೆನೆ ಮೊಸರಿನಲ್ಲಿಯೋ‌ ನನಗೆ ತಿನ್ನಲು ನೀಡುತ್ತಾರೆ. ಅನ್ನ ಮಿಕ್ಕುಳಿದಿದ್ದರೆ ಚಿತ್ರಾನ್ನವಾಗಿಯೋ ಅಥವಾ ಮೊಸರನ್ನವಾಗಿಯೋ ರೂಪಾಂತರವಾಗಿ ನನ್ನ ತಟ್ಟೆಗೆ ಬರುತ್ತದೆ. ಇದನ್ನು ನಾನು ಗುರುವೇ ನಿನ್ನ ಕರುಣೆಯ ಪ್ರಸಾದ ಇದು ಎಂದು ಕಣ್ಣಿಗೊತ್ತಿಕೊಂಡು ಹೊಟ್ಟೆಗೆ ನುಂಗುತ್ತೇನೆ.

ನನ್ನ ಬಾಲ್ಯಕಾಲದ ಆಗಿನ ಆಹಾರದ ಬೆಳೆಗಳು ಈಗಿನಂತೆ ಭೂಮಿಯ ಒಡಲಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಮುಂತಾದ ಒಳಸುರಿಗಳನ್ನು ಸುರಿದು ರಸಕೃಷಿ ಎಂಬ ಹೆಸರಿನಲ್ಲಿ ವಿಷಕೃಷಿ ಮಾಡಿ ಬೆಳೆದ ಹೈಬ್ರೀಡ್ ತಳಿಗಳ ಬೆಳೆಗಳಾಗಿರದೆ, ನಾವು ತಿನ್ನುವ ಆಹಾರ ಹೆಚ್ಚಾಗಿ ಸಾವಯವ ಪದಾರ್ಥಗಳೇ ಆಗಿರುತ್ತಿದ್ದವು. ತಿಪ್ಪೆ ಗೊಬ್ಬರ, ಕೆಬ್ಬೆಮಣ್ಣು, ಕೆಮ್ಮಣ್ಣು, ಕೆರೆಗೋಡು, ಹಸಿರೆಲೆ ಗೊಬ್ಬರಗಳ ಬನಿಯುಂಡು ಬೆಳೆದ ಅವು ಸ್ವಾದಿಷ್ಟಭರಿತ ಸಾವಯವ  ಪೌಷ್ಟಿಕಾಹಾರಗಳಾಗಿದ್ದುದರಿಂದ ಬಹುಬೇಗ ಹಳಸುತ್ತಿರಲಿಲ್ಲ. ರಾಗಿಮುದ್ದೆ ಹೊರಗೆ ಒಣಗಿ ಪೊರೆಗಟ್ಟಿದ್ದರೂ ಒಳಗೆ ಮೇಣದಂತಹ ಹದವಾದ ಮುದ್ದೆಯು ಕೆನೆಮೊಸರಿನೊಂದಿಗೆ ನಮ್ಮ ಹೊಟ್ಟೆ ಸೇರಲು ತವಕಪಡುತ್ತಾ ಕುಳಿತಿರುತ್ತಿತ್ತು.

ಆಧುನಿಕ ಸಂಕರ ತಳಿಗಳ ಈಗಿನ ಆಹಾರ ಪದಾರ್ಥಗಳು ಬೇಯಿಸಿದ ನಾಲ್ಕೈದು ಗಂಟೆಗಳೊಳಗೆ ಹಳಸಿ ನೀರೊಡೆದಿರುತ್ತವೆ. ಹಂದಿ ನಾಯಿಗಳು ಕೂಡಾ ಮೂಸಿ ನೋಡುವುದಿಲ್ಲ. ಅನ್ನವಾಗಲೀ ರಾಗಿಮುದ್ದೆಯಾಗಲೀ ತಿನ್ನಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಿದ ಬಳಿಕವೇ ಅವುಗಳನ್ನು ತಾಜಾ ಅಡುಗೆಗಳಂತೆಯೇ ರೂಪಾಂತರಿಸುವ ಕಲೆ ನನ್ನ ಫ್ರೆಂಡತಿಗೆ ಸಿದ್ಧಿಸಿದೆ.

ಹೀಗೆ ಉಂಡು ಮಿಕ್ಕುಳಿಸಿದ ಅಡುಗೆ ಪದಾರ್ಥಗಳನ್ನು ರೂಪಾಂತರಿಸುವ ಕಲೆಯಲ್ಲಿ ನನ್ನ ಅಜ್ಜಿ ಮತ್ತು ಅಮ್ಮ ತುಂಬಾ ನಿಷ್ಣಾತರಾದವರು. ಆರಕ – ಭತ್ತ- ನವಣೆ – ಕೊರಲೆ – ಸಾವೆ – ಹೆಜ್ಜಾವೆ ಮುಂತಾದ ಧಾನ್ಯಗಳ ಅಕ್ಕಿಯ  ತಂಗಳನ್ನ ಅಥವಾ ರಾಗಿ, ಜೋಳ, ಮುಸುಕಿನ ಜೋಳದ ತಂಗಳ ಮುದ್ದೆಯ ಜೊತೆಯಲ್ಲಿ ಕೆನೆಮೊಸರು ಸುರಿದು ನಮಗೆ ಉಣಲಿಕ್ಕುತ್ತಿದ್ದರು. ಇಂತಹ ಅನ್ನ – ಮುದ್ದೆಯನ್ನು ರಾಗಿಮುದ್ದೆ ಬೇಯಿಸುವಾಗ ಮರುಬಳಕೆ ಮಾಡುತ್ತಿದ್ದರು.

ನನ್ನ ಅಪ್ಪನು ಮಿಕ್ಕುಳಿದ ಆಹಾರ ಪದಾರ್ಥಗಳನ್ನು ನಮ್ಮ ಮನೆಯಲ್ಲಿದ್ದ ದನಕರು ಕುರಿ ಮೇಕೆ ಕೋಳಿಗಳ ಬಾಯಿಗೆ ಹಾಕಲು ಆಸಕ್ತಿ ತೋರಿಸಿದರೆ, ನನ್ನ ಅಜ್ಜಿ ಮತ್ತು ಅಮ್ಮ ಮಾತ್ರ ಮಕ್ಕಳ ಹೊಟ್ಟೆಗಳಿಗೆ ಸೇರಿಸಲು ಮುತುವರ್ಜಿ ವಹಿಸುತ್ತಿದ್ದರು.

ಯಾರದ್ದಾದರೂ ಮದುವೆ ಶೋಬನದ ಮನೆಗಳಿಂದ ನೀಡಿಸಿಕೊಂಡು ತಂದ ಹೆಚ್ಚಿನ ಪ್ರಮಾಣದ ಅನ್ನ ಸಾರು ಅಥವಾ ನಮ್ಮ ಮನೆಗಳಲ್ಲಿ ಹಬ್ಬ ಜಾತ್ರೆ ನಡೆದಾಗ ಉಂಡು ಹೆಚ್ಚಾಗಿ ಉಳಿದ ಮುದ್ದೆ ಅನ್ನ ಸಾರು ಮುಂತಾದ ಪದಾರ್ಥಗಳನ್ನು ಅತ್ಯಂತ ಜೋಪಾನವಾಗಿ ಮರುಬಳಕೆ ಮಾಡಿ ನಮ್ಮ ಹಸಿವಿಂಗಿಸುತ್ತಿದ್ದರು. 

ಮರುಬಳಕೆಯ ಪಾರಂಪರಿಕ ಜ್ಞಾನವನ್ನು ಬಲ್ಲವರಾಗಿದ್ದ ನನ್ನ ಅಜ್ಜಿ ಮತ್ತು ಅಮ್ಮ ಇಬ್ಬರೂ ಅನ್ನ ಅಥವಾ ರಾಗಿಮುದ್ದೆಯನ್ನು ಸಣ್ಣಸಣ್ಣ ಚೂರುಗಳಾಗಿ ಮುರಿದು ಈಚಲು ಚಾಪೆಗಳ ಮೇಲೆ ಹರಡಿ ಬಿಸಿಲಿನಲ್ಲಿ ಝಣ ಝಣಗುಡುವಂತೆ  ಗರಿಗರಿಯಾಗಿ ಒಣಗಿಸಿ ಮಡಕೆಗಳಲ್ಲಿ ತುಂಬಿರಿಸುತ್ತಿದ್ದರು. ಇದನ್ನು ರಾಗಿಮುದ್ದೆ ತಯಾರಿಸಲು ಕುದೆಸರು ಇಡುವಾಗಲೇ ಶುದ್ಧ ನೀರಿನಲ್ಲಿ ಅದ್ದಿ ತೆಗೆದು ಹಸಿಟ್ಟಿನೊಂದಿಗೆ ನಾದಿ ಮರುಬಳಕೆ ಮಾಡುತ್ತಿದ್ದರು.‌

ನಾವು ನೋಡನೋಡುತ್ತಲೇ ನನ್ನ ಅಜ್ಜಿ ಅಥವಾ ಅಮ್ಮನ ಕೈಗಳಿಂದ ಹೊಗೆಯಾಡುವ ತಾಜಾ ಬಿಸಿ ಮುದ್ದೆ ನಮ್ಮ ಊಟದ ತಾಟಿಗೆ ಬಂದು ನಗುತ್ತಿರುತ್ತಿತ್ತು! ಮಿಕ್ಕುಳಿದ ತರಕಾರಿ ಸಾರು ಬೆಂಕಿಕೆಂಡ ತುಂಬಿದ ಒಲೆಯ ಮೇಲಿರಿಸಿದ್ದ ಮಡಕೆಯಲ್ಲಿ ಕುದಿದು ಕುದಿದೂ ಒಣಗಿದ ರೊಟ್ಟಿಯಾಗಿಬಿಡುತ್ತಿತ್ತು. ಇಂತಹ ಒಣಸಾರಿನ ಗರಣಿಯನ್ನು ರಾಗಿ ರೊಟ್ಟಿಯೊಂದಿಗೆ ನಾವು ನಮ್ಮ ದವಡೆಗಳಲ್ಲಿ ಕಟುಮ್ಮನೆ ಕುರಕಾಡಿಕೊಂಡು ಸವಿಯುತ್ತಿದ್ದೆವು. ನಮ್ಮ ಹಸಿವಿಗೆ ಅನ್ನವನ್ನಿಕ್ಕಿ ಸಲಹಿದ ಆಹಾರ ಸಂಸ್ಕರಣೆಯ ಪಾರಂಪರಿಕ ಅರಿವಿಗರೇ ನಿಮ್ಮ ಅರಿವಿಗೆ ಶರಣು ಶರಣಾರ್ಥಿಗಳು.

– ಡಾ. ವಡ್ಡಗೆರೆ ನಾಗರಾಜಯ್ಯ, 8722724174, ಹಿರಿಯ ಸಾಹಿತಿ

Leave a Reply