ಮಂಗಳೂರು: ಆದಷ್ಟು ಶೀಘ್ರದಲ್ಲಿ ಕನಿಷ್ಠ ಕೂಲಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಭಾರೀ ಹೋರಾಟವನ್ನು ಎದುರಿಸಬೇಕಾದೀತು ಎಂದು ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರ ಜೆ ಬಾಲಕೃಷ್ಣ ಶೆಟ್ಟಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
- ಕಾವೇರಿ ವಿಚಾರವಾಗಿ ವಿಪಕ್ಷಗಳ ನಾಯಕ ವಿಶ್ವಾಸದ ಬಳಿಕ ಮುಂದಿನ ತೀರ್ಮಾನ: ಡಿ.ಕೆ.ಶಿವಕುಮಾರ್
- ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು: ಡಾ.ಎಚ್.ಸಿ.ಮಹದೇವಪ್ಪ
- ನೀಟ್ NEET ಹೋರಾಟದ ನಡುವೆ ವೈರಲ್ ಆದ ರಾಹುಲ್ ಗಾಂಧಿ, ದೀಪ್ಕೆ, ಗ್ರೆಟಾ, ಸೊರೊಸ್ ಫೋಟೋ!
- ಸಾವಯವ ರೈತರನ್ನು ಬೆಂಬಲಿಸಲು ಸಾವಯವ ಸಂತೆಯಲ್ಲಿ ಪಾಲ್ಗೊಳ್ಳಿ: ದರ್ಶನ್ ಪುಟ್ಟಣ್ಣಯ್ಯ
- ಕನಿಷ್ಠ ವೇತನ ಕೂಡಲೇ ಜಾರಿಗೊಳಿಸದಿದ್ದರೆ ತೀವ್ರ ಪ್ರತಿರೋಧ: ಜೆ ಬಾಲಕೃಷ್ಣ ಶೆಟ್ಟಿ
ಗುರುಪುರ ಕೈಕಂಬದ ಮಾತಾಕೃಪಾ ಹಾಲ್ ನಲ್ಲಿ CITU ನೇತೃತ್ವದಲ್ಲಿ ಜರುಗಿದ ಗುರುಪುರ ವಲಯ ಮಟ್ಟದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕನ ಶ್ರಮದ ಮೌಲ್ಯವೇ ಪ್ರಧಾನವಾಗಿದ್ದು, ಅದರ ಅಧಾರದಲ್ಲಿಯೇ ಆರ್ಥಿಕ ಚಕ್ರ ತಿರುಗಲು ಸಾಧ್ಯವಾಗುತ್ತದೆ. ಆದರೆ ಆಳುವ ವರ್ಗಗಳು ಕಾರ್ಮಿಕ ವರ್ಗದ ಶ್ರಮಕ್ಕೆ ಎಳ್ಳಷ್ಟೂ ಪ್ರಾಮುಖ್ಯತೆ ನೀಡದೆ ತಮ್ಮ ಲಾಭಕೋರತನದ ಹೆಚ್ಚಳಕ್ಕೆ ಜೋತು ಬಿದ್ದಿದೆ. ಇದರಿಂದಾಗಿ ಕನಿಷ್ಠ ವೇತನ ಎಂಬುದು ಮರೀಚಿಕೆಯಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ವೇತನಕ್ಕೆ ಸಂಬಂಧಿಸಿ ಕಳೆದ ಹಲವು ದಶಕಗಳಿಂದ ಸಮರಶೀಲ ಹೋರಾಟ ನಡೆಸಿದ್ದರ ಪ್ರತಿಫಲವಾಗಿ ರಾಜ್ಯ ಸರಕಾರ ಮೇ 22ರಂದು ಕನಿಷ್ಠ ಕೂಲಿಯನ್ನು ಘೋಷಣೆ ಮಾಡಿದ್ದರೂ ಇಂದಿನವರೆಗೂ ಜಾರಿಗೊಳಿಸಿಲ್ಲ. ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಭಾರೀ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಸಮಾವೇಶಕ್ಕೆ ಶುಭಕೋರಿ ಮಾತನಾಡಿದ ಜಿಲ್ಲೆಯ ರೈತ ಕಾರ್ಮಿಕ ಮುಖಂಡ ಸದಾಶಿವದಾಸ್, ಜಿಲ್ಲೆಯ ಕಾರ್ಮಿಕ ಚಳುವಳಿಯ ಚರಿತ್ರೆಯನ್ನು ವಿವರಿಸಿದರು. ದೇಶದ ಕಾರ್ಮಿಕ ಚಳುವಳಿಯನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ಸಮಾರೋಪ ಭಾಷಣ ಮಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದೇಶದ ಕಾರ್ಮಿಕ ಚಳುವಳಿಯಲ್ಲಿ ಧ್ರುವತಾರೆಯಾಗಿ ಮಿನುಗುತ್ತಿರುವ CITU ಕಾರ್ಮಿಕ ವರ್ಗದ ಪಕ್ಷಪಾತಿಯಾಗಿದ್ದುಕೊಂಡು ಕಾರ್ಮಿಕರ ಪ್ರತಿಯೊಂದು ಪ್ರಶ್ನೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಪಾದಿಸುವ ಏಕೈಕ ಕಾರ್ಮಿಕ ಸಂಘಟನೆಯಾಗಿದೆ. ಎಲ್ಲಾ ವಿಭಾಗದ ಕಾರ್ಮಿಕರು ತಮ್ಮ ಹಕ್ಕುಭಾಧ್ಯತೆಗಳಿಗಾಗಿ CITU ಜೊತೆ ಸೇರಿಕೊಂಡು ವಿಶಾಲ ತಳಹದಿಯಲ್ಲಿ ಜಿಲ್ಲೆಯಲ್ಲಿ ಕಾರ್ಮಿಕ ಚಳುವಳಿಯನ್ನು ಬೆಳೆಸಬೇಕಾಗಿದೆ ಎಂದರು.
CITU ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡ ಮಾತನಾಡಿ, ಕಳೆದ 4 ವರ್ಷಗಳ ಕಾಲಾವಧಿಯಲ್ಲಿ ನಡೆದ ಚಟುವಟಿಕೆಗಳ ಹಾಗೂ ಸಂಘಟನಾ ಪರಿಸ್ಥಿತಿಗಳ ಬಗ್ಗೆ ಕರಡು ವರದಿಯನ್ನು ಮಂಡಿಸಿದರು. ಬಳಿಕ ಚರ್ಚೆಗಳು ನಡೆದು, ಕಾರ್ಮಿಕ ವರ್ಗದ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಸಮಾವೇಶ ಅಂಗೀಕರಿಸಿತು. ಬಳಿಕ ಮುಂದಿನ ಅವಧಿಗೆ 25 ಮಂದಿಯನ್ನೊಳಗೊಂಡ CITU ಗುರುಪುರ ವಲಯ ಸಮನ್ವಯ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ CITU ಜಿಲ್ಲಾ ನಾಯಕರಾದ ವಸಂತಿ ಕುಪ್ಪೆಪದವು, ಭವ್ಯಾ ಮುಚ್ಚೂರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು CITU ಗುರುಪುರ ವಲಯಾಧ್ಯಕ್ಷ ಬಾಬು ಪೂಜಾರಿ ವಹಿಸಿಕೊಂಡಿದ್ದರು.




