ಬದಲಾಯಿಸಿದ್ದು ಕೇವಲ ಗಾಂಧಿಯವರ ಹೆಸರನ್ನಲ್ಲ

4 months ago

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2005ರಲ್ಲಿ ಡಾ. ಮನಮೋಹನ್ ಸಿಂಗ್ ರವರ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅತ್ಯಂತ ಜನಪರವಾದ ಗ್ರಾಮೀಣ ಜನರ ಬದುಕನ್ನು ಬದಲಾಯಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಈಗ ಕೇವಲ ಗಾಂಧಿಯ ಹೆಸರನ್ನು ಮಾತ್ರ ಕಿತ್ತುಹಾಕಿ ಮತ್ತೊಂದು ಹೆಸರನ್ನು ಇಟ್ಟಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ವಿಚಾರಗಳು ಬೇರೆ ಇದೆ.

ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆಗೆ ಮಹಾತ್ಮ ಗಾಂಧೀಜಿರವರ ಹೆಸರನ್ನು ಇಡಲು ಸ್ಪಷ್ಟವಾದ ಕಾರಣವಿತ್ತು. ಮಹಾತ್ಮ ಗಾಂಧೀಜಿ ಗ್ರಾಮೀಣ ಜನರ ಬದುಕನ್ನು ಸುಧಾರಿಸುವಂತಹ ಕನಸನ್ನು ಕಂಡಿದ್ದರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡಬೇಕು ಎನ್ನುವುದು ಅವರ ದೊಡ್ಡ ಆಸೆಯಾಗಿತ್ತು. ಅದಕ್ಕಾಗಿ ಈ ಯೋಜನೆಗೆ ಮಹಾತ್ಮ ಗಾಂಧೀಜಿರವರ ಹೆಸರನ್ನು ನಾಮಕರಣ ಮಾಡಲಾಗಿತ್ತು.

ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಕೂಲಿ ಕಾರ್ಮಿಕರಿಗೆ ಪ್ರತಿ ವರ್ಷ ಕನಿಷ್ಠ ನೂರು ದಿನಗಳ ಕಾಲ ಉದ್ಯೋಗ ನೀಡಲೇಬೇಕು ಮತ್ತು ಅದಕ್ಕೆ ಹಣವನ್ನು ಪಾವತಿಸಬೇಕು ಒಂದು ವೇಳೆ. 100 ದಿನ ಉದ್ಯೋಗವನ್ನು ಕೊಡದಿದ್ದರೆ ಹಣವನ್ನು ನೀಡಬೇಕು ಹಾಗೂ ಅವರಿಗೆ ಆಹಾರ ಪದಾರ್ಥಗಳನ್ನು ನೀಡಬೇಕು ಎನ್ನುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.

ಈ ಯೋಜನೆಯನ್ನು ಜಾರಿಗೊಳಿಸಿದ ನಂತರ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ಕಡ್ಡಾಯವಾಗಿ ಉದ್ಯೋಗಗಳು ದೊರೆಯಿತು. ಇದರಿಂದಾಗಿ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವ ಪ್ರಮಾಣವು ಕಡಿಮೆಯಾಯಿತು.

ಈ ಯೋಜನೆಗೆ ಕೇಂದ್ರ ಸರ್ಕಾರ ಅಂದು ಒಟ್ಟು ಯೋಜನೆಯ ವೆಚ್ಚದ 90ರಷ್ಟು ಭಾಗವನ್ನ ನೀಡುತ್ತಿತ್ತು. ಶೇಕಡ ಹತ್ತರಷ್ಟು ಪಾಲನ್ನು  ರಾಜ್ಯ ಸರ್ಕಾರ ಭರಿಸಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರ ಕೇವಲ ಶೇಕಡ 60ರಷ್ಟು ಪಾಲನ್ನು ಮಾತ್ರ ನೀಡುತ್ತದೆ. ಉಳಿದ 40 ಪಾಲನ್ನು ರಾಜ್ಯ ಸರ್ಕಾರಗಳು ಭರಿಸಬೇಕಿದೆ.

ಯುಪಿಎ ಸರ್ಕಾರ ಜಾರಿಗೆ ತಂದಾಗ ಇಲ್ಲಿ ಉದ್ಯೋಗವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವ ಕಾಮಗಾರಿಗಳಿಗೆ ಆಧುನಿಕ ಯಂತ್ರಗಳನ್ನು ಬಳಸುವಂತಿರಲಿಲ್ಲ. ಮಾನವ ಶಕ್ತಿಯನ್ನು ಮಾತ್ರ ಬಳಕೆ ಮಾಡಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರ ಆಧುನಿಕ ಯಂತ್ರಗಳನ್ನು ಬಳಸಿ ಕಾಮಗಾರಿಯನ್ನು ಮಾಡಲು ಅವಕಾಶವನ್ನು ನೀಡಿರುವುದರಿಂದ ಮಾನವ ಶಕ್ತಿ ಬಳಕೆ ಕಡಿಮೆಯಾಗುತ್ತದೆ ಇದರಿಂದಾಗಿ ಉದ್ಯೋಗಗಳು ದೊರೆಯುವುದಿಲ್ಲ.

ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆಯ ಹಿನ್ನೆಲೆಯಲ್ಲಿ ಯಾವ ಕೆಲಸವನ್ನು ಮಾಡಬೇಕು ಎನ್ನುವ ನಿರ್ಧಾರವನ್ನು ಆಯಾ ಪಂಚಾಯ್ತಿ ಮಟ್ಟದಲ್ಲಿಯೇ ನಿರ್ಧರಿಸಬೇಕಾಗಿತ್ತು ಆದರೆ ಈಗ ಕೆಲಸವನ್ನು ನಿರ್ಧಾರ ಮಾಡುವ ವಿಚಾರದಲ್ಲೂ ಅಧಿಕಾರ ಕೇಂದ್ರವೇ ಹೊಂದಿರುತ್ತದೆ.

ಈ ಹಿಂದೆ ಯುಪಿಎ ಸರ್ಕಾರ ಯೋಜನೆಯನ್ನು ರೂಪಿಸಿದಾಗ ವರ್ಷದ 365 ದಿನಗಳಲ್ಲೂ ಯಾವಾಗ ಬೇಕಾದರೂ 100 ದಿನಗಳ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿ ಪಡೆದುಕೊಳ್ಳಬಹುದಾಗಿತ್ತು ,ಆದರೆ ಈಗ ಹೊಸದಾಗಿ ಮಾಡಿರುವ ಕಾನೂನಿನಲ್ಲಿ ಕೃಷಿ ಚಟುವಟಿಕೆಗಳು ನಡೆಯುವ ಸಂದರ್ಭದಲ್ಲಿ  ಉದ್ಯೋಗ ನೀಡುವಂತೆ ಇಲ್ಲ, ಇದರಿಂದಾಗಿ ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಹೊಟ್ಟೆಯನ್ನ ತುಂಬಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಶ್ರೀಮಂತರ ಹೊಲಗದ್ದೆಗಳಲ್ಲಿ ಕಡಿಮೆ ಕೂಲಿಗೆ ಹೋಗಬೇಕಾಗುತ್ತದೆ.

ಬಿಜೆಪಿ ಸರ್ಕಾರ ಕಳೆದ 11 ವರ್ಷದಲ್ಲಿ ನರೇಗಾ ಯೋಜನೆಯನ್ನು ಹಳ್ಳ ಹಿಡಿಸುವ ಸಲುವಾಗಿ ಅನುದಾನವನ್ನ ಕೊಡದೆ ಯೋಜನೆಯನ್ನು ಹಾಳು ಮಾಡಿರುತ್ತಾರೆ, ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡವರಿಗೆ ಬದುಕು ಕಷ್ಟಕರವಾಗಿದೆ ಹೊಸದಾಗಿ ಕಾನೂನನ್ನು ರೂಪಿಸಿ ಆ ಗಾಯಗಳಿಗೆ ಉಪ್ಪನ್ನು ಸವರಿದ್ದಾರೆ.

ಈ ಹಿಂದೆ ಶೇಕಡಾ 90ರಷ್ಟು ಅನುದಾನವನ್ನು ಯೋಜನೆಗೆ ಕೇಂದ್ರ ನೀಡುತ್ತಿದ್ದ ಕಾರಣದಿಂದ ರಾಜ್ಯ ಸರ್ಕಾರಗಳಿಗೆ ಹೊರೆ ಆಗುತ್ತಿರಲಿಲ್ಲ ಆದರೆ ಈಗ ಶೇಕಡ 40ರಷ್ಟು ಪಾಲನ್ನು ರಾಜ್ಯ ಸರ್ಕಾರಗಳು ತುಂಬಿಕೊಡಬೇಕಾಗಿರುವುದರಿಂದ ಈಗಾಗಲೇ ಕೇಂದ್ರ ಸರ್ಕಾರದ ಅನುದಾನದ ಕೊರತೆಯಿಂದ ಬಳಲುತ್ತಿರುವ ರಾಜ್ಯ ಸರ್ಕಾರಗಳು ಈ ಯೋಜನೆಗೆ ಬೇಕಾದ ಸಂಪನ್ಮೂಲವನ್ನು ಹೊಂದಿಸುವಲ್ಲಿ ಸಾಧ್ಯವಾಗುವುದಿಲ್ಲ ,ಇದರಿಂದಾಗಿ ಯೋಜನೆ ಪ್ರಗತಿಯ ಹಾದಿಯಲ್ಲಿ ಸಾಗುವುದಿಲ್ಲ.

ಕೇಂದ್ರ ಸರ್ಕಾರ ಕೇವಲ ಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಲಿಲ್ಲ. ಬದಲಿಗೆ ಈ ಯೋಜನೆಯ ಸಂಪೂರ್ಣವಾಗಿ ಹಾಳು ಮಾಡಬೇಕು ಎನ್ನುವ ಉದ್ದೇಶದಿಂದಲೇ ಹಲವಾರು ರೀತಿಯ ಹೊಸ ಮಾನದಂಡಗಳನ್ನು ಹಾಕಿರುತ್ತಾರೆ. ಕಾರಣ ಇಷ್ಟೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ವಿಚಾರದಲ್ಲಿ ವಿಶ್ವಸಂಸ್ಥೆ ಅಭಿಮಾನದ ಮಾತುಗಳನ್ನ ಹಲವಾರು ಸಂದರ್ಭದಲ್ಲಿ ಹೇಳಿದ್ದು, ಜೊತೆಗೆ ಕರೋನಾ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರ ಬದುಕಿಗೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗದಂತೆ ಈ ಯೋಜನೆ ನೆರವು ನೀಡಿತ್ತು. ಇವುಗಳಿಂದಾಗಿ ಈ ಯೋಜನೆಯ ಬಗ್ಗೆ ಜನರಲ್ಲಿ ಪ್ರೀತಿ ಮತ್ತು ಭರವಸೆ ಇತ್ತು . ಇದರ ಯಶಸ್ಸಿನ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತಿತ್ತು .ಇದನ್ನು ಸಹಿಸಿಕೊಳ್ಳದ ಬಿಜೆಪಿ ಯೋಜನೆ  ದಿಕ್ಕು ತಪ್ಪಿಸುವುದರ ಮೂಲಕ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಮೆರೆದಿರುತ್ತಾರೆ.

ಗಾಂಧಿ ಹೆಸರನ್ನು ಯೋಜನೆಗೆ ತೆಗೆದು ಹಾಕಿದ ಮಾತ್ರಕ್ಕೆ ಸಾಧನೆಯನ್ನ ಮಾಡಿದ್ದೇವೆ ಎಂದು ಬೀಗಬೇಡಿ ,ಭಾರತವನ್ನು ಗಾಂಧೀಜಿಯವರನ್ನು ಹೊರತುಪಡಿಸಿ ಪ್ರಪಂಚದ ಯಾವ ದೇಶವು ಗುರುತಿಸಲು ಸಾಧ್ಯವೇ ಇಲ್ಲ. ಬರುವ ವಿದೇಶಿ ಪ್ರತಿನಿಧಿಗಳು ಕೇಳುವುದು ಗಾಂದಿ ಸಮಾಧಿಯನ್ನೇ ಹೊರತು, ನೀವು ಆರಾಧಿಸುವ ನೀವು ವೈಭವಿಕರಿಸುವ ಯಾವ ವ್ಯಕ್ತಿಗಳ ಸಮಾಧಿಯನ್ನು ಯಾರು ತಿರುಗಿ ನೋಡುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply