ಚುನಾಯಿತ ಪ್ರತಿನಿಧಿಗಳಿಗೆ ಬಿಪಿಎಲ್ ಕಾರ್ಡ್ ಕೊಡಿ!

4 months ago

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಸೇವೆ ಮಾಡಲು ನಮ್ಮಿಂದ ಚುನಾಯಿತರಾದ ಪ್ರತಿನಿಧಿಗಳು ತಮ್ಮ ಆರೋಗ್ಯದ ಚಿಕಿತ್ಸೆಗಳಿಗಾಗಿ ಖಾಸಗಿ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಪಡೆದುಕೊಂಡಿರುವಂತಹ ಮೊತ್ತವನ್ನು ಗಮನಿಸಿದಾಗ ಇವರು ಕಡುಬಡವರಾಗಿದ್ದಾರೆ. ಇವರಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸ್ವಂತ ಹಣವಿಲ್ಲ. ಆದ್ದರಿಂದ ಇವರಿಗೆ ಬಿಪಿಎಲ್ ಕಾರ್ಡ್ ಕೊಟ್ಟು ಸಹಾಯವನ್ನು ಮಾಡಬೇಕು.

ಜನಸಾಮಾನ್ಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೊತ್ತವನ್ನ ಪಡೆಯಬೇಕಾದರೆ ಬಿಪಿಎಲ್ ಕಾರ್ಡ್ ಹೊಂದಿರುವವರು ಆಗಿರಬೇಕು. ಇಲ್ಲದಿದ್ದರೆ ತಿಂಗಳಿಗೆ 3000 ಗಳ ಆದಾಯದ 36,000ಗಳ ವಾರ್ಷಿಕ ವರಮಾನದ ಸುಳ್ಳು ದಾಖಲೆ ಪತ್ರವನ್ನು ಕೊಡಬೇಕು. ಇಲ್ಲದಿದ್ದರೆ, ಕ್ಯಾನ್ಸರ್ ಮತ್ತು ನರಗಳ ಕಾಯಿಲೆ ಹಾಗೂ ಮೂತ್ರಪಿಂಡದ ಕಾಯಿಲೆಗಳಿಗೆ ಗುರಿಯಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮನೆಗಳನ್ನು ಮಾರಿಕೊಂಡು ಸಾಲದ ಸುಳಿಯಲ್ಲಿ ಸೊರಗುವ ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಬಿಡಿಗಾಸು ದೊರೆಯುವುದಿಲ್ಲ.

ಆದರೆ ನಮ್ಮಿಂದ ಆಯ್ಕೆಯಾಗಿ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸುವ ಪ್ರಮಾಣಪತ್ರದಲ್ಲಿ ನೂರಾರು ಕೋಟಿ ರೂಪಾಯಿಗಳ ಆಸ್ತಿಯ ಮಾಲೀಕರುಗಳು ಎಂದು ಘೋಷಿಸಿಕೊಂಡ ಇವರುಗಳು ಹಲ್ಲಿನ ಚಿಕಿತ್ಸೆಗೆ, ಕಣ್ಣಿನ ಚಿಕಿತ್ಸೆಗೆ, ಸಣ್ಣಪುಟ್ಟ ರೋಗಗಳಿಗೆ, ಜೊತೆಗೆ ಮರಣಾಂತಿಕ ಕಾಯಿಲೆಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದೆ, ಸರಕಾರಿ ಆಸ್ಪತ್ರೆಗಳ ಕಡೆಗೆ ಸುಳಿಯದೆ, ಪ್ರತಿಷ್ಠಿತ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿಗಳ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಇವರು ಹಣವನ್ನು ಸರ್ಕಾರದಿಂದ ಪಡೆದುಕೊಳ್ಳುತ್ತಾರೆ. ಇವರು ಜನಸಾಮಾನ್ಯರ ರೀತಿಯಲ್ಲಿ ಬಿಪಿಎಲ್ ಕಾಡುದಾರರು ಅಲ್ಲ ಅಥವಾ ವಾರ್ಷಿಕ 36,000ಗಳ ವರಮಾನದ ಸಾಮಾನ್ಯರು ಅಲ್ಲ, ಆದರೂ ಇವರಿಗೆ ಈ ಸೌಲಭ್ಯಗಳು ದೊರೆಯುತ್ತದೆ.

ನಮ್ಮ ಪ್ರತಿನಿಧಿಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಸರ್ಕಾರಿ ವೈದ್ಯರ ಮೇಲೆ ನಂಬಿಕೆ ಇಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ಮೇಲೆ ಮೊದಲೇ ನಂಬಿಕೆ ಇಲ್ಲ, ಆದುದರಿಂದ ಸಣ್ಣಪುಟ್ಟ ಕಾಯಿಲೆಗಳಿಗೂ ಅವರಿಗೆ ಅಷ್ಟೇ ಅಲ್ಲ, ಅವರ ಕುಟುಂಬದ ಸದಸ್ಯರಿಗೆ ಜೊತೆಗೆ ಅವರ ಮನೆಯ ಶ್ವಾನಗಳಿಗೂ ಸಹ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆಯನ್ನು ಕೊಡಿಸುತ್ತಾರೆ ಮತ್ತು ಪಡೆದುಕೊಳ್ಳುತ್ತಾರೆ. ಆದರೆ ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗೆ ಮಾತ್ರವೇ ಹೋಗಿ ಚಿಕಿತ್ಸೆಯನ್ನ ಪಡೆಯಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸರ್ಕಾರ ಯಾವುದೇ ರೀತಿಯ ನೆರವನ್ನು ನೀಡುವುದಿಲ್ಲ ಎಂದು ಹೇಳುತ್ತಾರೆ. ಸರ್ಕಾರ ನಡೆಸುವವರಿಗೆ ಸರ್ಕಾರಿ ಆಸ್ಪತ್ರೆಯ ಮೇಲೆ ನಂಬಿಕೆ ಇಲ್ಲದಿದ್ದರೆ, ಜನಸಾಮಾನ್ಯರು ಹೇಗೆ ತಾನೇ ನಂಬುತ್ತಾರೆ.

ಆಡಳಿತ ಸುಧಾರಣ ಆಯೋಗ ವರದಿಗಳನ್ನು ಪದೇಪದೇ ನೀಡುತ್ತಾರೆ. ದಯಮಾಡಿ ಸರ್ಕಾರದ ಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಸರ್ಕಾರದ ಬೊಕ್ಕಸದಿಂದ ಹಣವನ್ನು ನೀಡಿ, ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಂಡರೆ ಅವರ ಸ್ವಂತ ಹಣದಲ್ಲಿ ಅವರು ಬಿಲ್ ಗಳನ್ನು ಪಾವತಿಸುವಂತೆ ಮೊದಲು ಆದೇಶವನ್ನು ಹೊರಡಿಸಿ. ಇಲ್ಲದಿದ್ದರೆ ಜನಸಾಮಾನ್ಯರಿಗೆ ಜನಪ್ರತಿನಿಧಿಗಳು ತಮ್ಮ ಖಾಯಿಲೆಗಳಿಗೆ ಲಕ್ಷಾಂತರ ರೂಪಾಯಿಗಳನ್ನ ಖಜಾನೆಯಿಂದ ಪಡೆದುಕೊಳ್ಳುವುದನ್ನು ಕಂಡರೆ ಆಕ್ರೋಶ ಉಂಟಾಗುತ್ತದೆ.

ರಾಮ್ ಮನೋಹರ ಲೋಹಿಯಾ ಇವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಎಲ್ಲ ರೀತಿಯ ಅವಕಾಶಗಳಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಜನಸಾಮಾನ್ಯರಿಗೆ ದೊರೆಯುವ ಸೌಲಭ್ಯಗಳು ಮಾತ್ರವೇ ನನಗೂ ದೊರೆಯಬೇಕು ಎಂದು ಪ್ರತಿಪಾದಿಸಿದರು. ಅದೇ ರೀತಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸಂದರ್ಭದಲ್ಲಿಯೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಇಂತಹ ಉದಾಹರಣೆಗಳು ಸಾಕಷ್ಟು ಇದೆ. ಆದರೆ ಇತ್ತೀಚಿನ ಜನಪ್ರತಿನಿಧಿಗಳಿಗೆ ಓಡಾಡಲು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಾಹನಗಳು ಇದೆ. ವಾಸಿಸಲು ದೊಡ್ಡ ದೊಡ್ಡ ಅರಮನೆಗಳಂತಹ ಮನೆಗಳಿದೆ.  ನೂರಾರು ಕೋಟಿ ರೂಪಾಯಿಗಳ ಆಸ್ತಿ ಮತ್ತು ನಗದು ಹಣ, ಚಿನ್ನ, ಬೆಳ್ಳಿ ಇದೆ. ಹೀಗಿದ್ದರೂ ಚಿಕಿತ್ಸೆ ಗಳಿಗೆ ಬಡವರ ರೀತಿಯಲ್ಲಿ ಸರ್ಕಾರದ ಹಣವನ್ನು ಪಡೆದುಕೊಳ್ಳಬೇಕಾದರೆ ಏನು ಅನಿಸುವುದಿಲ್ಲವೇ?

ಸರ್ಕಾರಿ ನೌಕರರಿಗೆ ಸಂಬಳ ದೊರೆಯುತ್ತದೆ, ಇಲ್ಲವೇ ಪಿಂಚಣಿ ದೊರೆಯುತ್ತದೆ. ಚುನಾಯಿತ ಪ್ರತಿನಿಧಿಗಳಿಗೆ ಸಂಬಳ ಬರುತ್ತದೆ. ನಿವೃತ್ತಿಯ ನಂತರ ಪಿಂಚಣಿ ಬರುತ್ತದೆ. ಆದರೆ ಅಂದೇ ದುಡಿದು ತಿನ್ನುವ ಮಧ್ಯಮ ವರ್ಗದ ಜನರಿಗೆ ಯಾವುದೇ ರೀತಿಯ ಆದಾಯವಿರುವುದಿಲ್ಲ. ನಿರ್ದಿಷ್ಟ ರೂಪದಲ್ಲಿ ಅವುಗಳು ದೊರೆಯುವುದಿಲ್ಲ .ಆದರೆ ಇವರಿಗೆ ಮಾತ್ರ ಯಾವ ಸೌಕರ್ಯ, ಸೌಲಭ್ಯಗಳು ಸರ್ಕಾರಿ ವ್ಯವಸ್ಥೆಯಲ್ಲಿ ಇಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply