ಬೆಂಗಳೂರಿನಲ್ಲಿ ಪ್ರಮುಖವಾದಂತಹ ಒಂದು ರಸ್ತೆಗೆ ಮಹಾತ್ಮ ಗಾಂಧೀಜಿರವರ ಹೆಸರನ್ನು ಇಟ್ಟಿರುವುದು ಸರಿಯಷ್ಟೇ. ಆದರೆ ಮಹಾತ್ಮ ಗಾಂಧೀಜಿರವರು ಪ್ರತಿಪಾದಿಸಿದಂತಹ ವಿಚಾರಗಳು, ಅವರು ಬದುಕಿದ ರೀತಿ, ಅವರ ಆಶಯಗಳು ಈ ರಸ್ತೆಯಲ್ಲಿ ನಡೆಯುತ್ತಿರುವಂತಹ ಯಾವ ಚಟುವಟಿಕೆಗಳಿಗೂ ಸಹ ಸಂಬಂಧವೇ ಇರುವುದಿಲ್ಲ.
ಮಹಾತ್ಮ ಗಾಂಧೀಜಿಯವರ ಹೆಸರಿಟ್ಟಿರುವಂಥ ಈ ರಸ್ತೆಯಲ್ಲಿ ಪ್ರತಿದಿನವೂ ನಡೆಯುವುದು ವಿದೇಶಿ ಸಂಸ್ಕೃತಿಯ ಅಬ್ಬರದ- ಆರ್ಭಟದ ಆಚರಣೆಗಳು. ಅದರಲ್ಲಿ ವಿಶೇಷವಾಗಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರಿನ ರಸ್ತೆಯಲ್ಲಿ ನಡೆದಂತಹ ಅನೇಕ ಘಟನಾವಳಿಗಳನ್ನು ಗಮನಿಸಿದಾಗ ಮಹಾತ್ಮ ಗಾಂಧೀಜಿರವರ ಹೆಸರಿನಲ್ಲಿ ದಿನವೂ ಅವರ ಹೆಸರಿಗೆ ನಾವು ಮಾಡುತ್ತಿರುವ ಅಪಮಾನ, ಅವಮಾನ ಮತ್ತು ಅಸಹ್ಯದ ನಡವಳಿಕೆ ಆಗಿರುತ್ತದೆ.
ಆದುದರಿಂದ ರಾಜ್ಯ ಸರ್ಕಾರ ಕೂಡಲೇ ಈ ರಸ್ತೆಗೆ ಅವರ ಹೆಸರನ್ನು ತೆಗೆದುಹಾಕಿ ಆ ರಸ್ತೆಗೆ ವಿದೇಶಿ ಸಂಸ್ಕೃತಿಯ ಹೆದ್ದಾರಿ ಎಂದು ನಾಮಕರಣವನ್ನು ಮಾಡಿ ಮಹಾತ್ಮ ಗಾಂಧೀಜಿರವರ ಹೆಸರನ್ನು ಯಾವುದಾದರೂ ಒಂದು ಯೋಗ್ಯವಾದಂತಹ, ಅವರ ವಿಚಾರಧಾರೆಗಳಿಗೆ ಪೂರಕವಾದ ಚಟುವಟಿಕೆಗಳು ನಡೆಯುವಂತಹ ರಸ್ತೆಗೆ ಅಥವಾ ಬಡಾವಣೆಗೆ ಹೆಸರನ್ನಿಟ್ಟರೆ ಅವರಿಗೆ ನಾವು ಸಲ್ಲಿಸುವಂತಹ ಗೌರವವಾಗುತ್ತದೆ.
ಇಲ್ಲದಿದ್ದರೆ ವಿದೇಶದಲ್ಲಿ ನೆಲೆಸಿರುವಂತಹ ಜನ, ಮುಂದಿನ ಪೀಳಿಗೆಯ ಜನ ಮಹಾತ್ಮ ಗಾಂಧಿ ಎಂದರೆ ಇದೇ ಸಂಸ್ಕೃತಿಯ ಪ್ರತಿಪಾದಕರು ಅಂತ ಅನುಮಾನವೂ ಬರುತ್ತದೆ. ಕುಹಕ ಮನಸ್ಸಿನ ವ್ಯಕ್ತಿತ್ವಗಳು ಮತ್ತು ವ್ಯಕ್ತಿಗಳು ಇದೇ ಗಾಂಧಿ ಅವರ ಸಂಸ್ಕೃತಿಯೆಂದು ಮುಂದೊಂದು ದಿನ ಚರಿತ್ರೆಯನ್ನು ಬರೆದರೂ ಹೆಚ್ಚಲ್ಲ.
– ಕೆ.ಎಸ್.ನಾಗರಾಜ್, ಬೆಂಗಳೂರು




