ಕವಿಗೆ ವಯಸ್ಸಾಯಿತೆಂದು
ಅಣಕಿಸದಿರು ಗೆಳೆಯ?
ಹುಣಿಸೆ ಮರಕ್ಕೆ ಮುಪ್ಪಾದರೆ
ಹುಳಿಗೆ ಮುಪ್ಪುಂಟೆ?
ಕವಿಗೆ ವಯಸ್ಸಾಯಿತೆಂದು
ಅಣಕಿಸದಿರು ಗೆಳೆಯ?
ಋತುಮಾನದ ಗತಿಚಕ್ರಕೆ
ಏರಿಳಿತಗಳುಂಟು
ವಯೋಮಾನದ ಮತಿಚಕ್ರಕು
ಋತುಗಾನಗಳುಂಟು
ಇರುವವರೆಗೆ ಇಹದ ನಂಟು
ಮೂಡು ಮುಳುಗು ಉಂಟು
ಕಣ್ಣು ಹೋದ ಮಿಲ್ಟನ್ ಕವಿಗೆ
ಕಾವ್ಯ ಬತ್ತಿತೇನು?
ಮೊಮ್ಮಕ್ಕಳ ಬಾಲಲೀಲೆಗೆ
ದನಿಗೊಡದೇ ಕವಿತೆ?
ಅಜ್ಜಿ ಹಾಡಿನ ಹುಡುಕಾಟಕೆ
ಅಡಗಿ ಹುಡುಕವೆ ಮಕ್ಕಳು?
ನಿದ್ದೆ ಬರದ ಇರುಳಿನಲ್ಲಿ
ವದ್ದೆ ನೆನಪು ಕಾಡಿದಂತೆ
ವಕ್ರಗತಿಯ ಅಕ್ಷರದಲು
ಕವಿತೆ ಗೆಜ್ಜೆ ಕಟ್ಟಲುಂಟು
ಕಬ್ಬು ಡೊಂಕಾದರೇನು
ಅದರ ಸಿಹಿಯು ಡೊಂಕೆ?
ಕಾಯಕ್ಕೆ ಮುಪ್ಪಾದಡೇನು
ಕವಿತೆಗೆ ಮುಪ್ಪುಂಟೆ?
– ಎಸ್ ಜಿ ಸಿದ್ಧರಾಮಯ್ಯ




