ಕನಸಿನ ದೀಪದ ಬೆಳಕು

2 years ago

ಕನಸಿನ ದೀಪದ ಬೆಳಕು

ಕನಸಿನ ದೀಪದ ಬೆಳಕು ನನ್ನವಳು
ಸದಾ ಉರಿವ ನನ್ನ ಸಹಿಸಿ ಪೊರೆದು ತಾನು ಕರಗಿದಳು
ದುಂಡುಮಲ್ಲಿಗೆಯ ಘಮಕ್ಕೆ ಮರುಳಾದ ನನ್ನ
ಮೊಸರನ್ನ ತಿನ್ನಿಸಿ ಎಚ್ಚರಿಸಿದಳು ಮನುಷ್ಯನಾಗಿಸಿದಳು

ಕಲ್ಲಿನೂರ ಹುಡುಗ  ಬೆಲ್ಲದೂರ ಹುಡುಗಿ
ಬೆಸಗೊಂಡಾಗ ಹುಳುಗಳಿಗೆಲ್ಲ ಹಬ್ಬವಾಗಿತ್ತು
ಎದೆಯ ತೆರೆದು ಹೃದಯದ ರಕ್ತ ಬಸಿದೆವು
ತಿಂದು ತೇಗಿದ ಅವು ಈಗಲೂ ಹಸಿದಿವೆ
ಕ್ರಿಮಿಗಳ ಹಸಿವು ನೀಗದು
ನಮ್ಮೆದೆಯ ರಕ್ತವೂ ಅಷ್ಟು ಸುಲಭಕ್ಕೆ ತೀರದು

ಬರಿಗೈಯ ಫಕೀರ ಖಾಲಿ ಹೊಟ್ಟೆಯ ಇರುವೆ
ಜೇಬಿಲ್ಲದ ದಾಸ ನಾನು
ಉರಿಬಿಸಿಲ ರಸ್ತೆಯಲ್ಲಿ ಬರಿಪಾದದಲಿ ನಡೆದವನು ನಾನು
ಬೊಗಸೆ ತುಂಬ ಪ್ರೀತಿ ಎದೆಯ ತುಂಬಾ ಸಮೃದ್ಧಿ
ಮನದ ತುಂಬಾ ಒಲವು
ಕರುಣಾಲಂಕಾರ ಭೂಷಿತೆ ಅವಳು
ಹಾದಿಗಳೇ ಇಲ್ಲದ ಕಾಡಿನಲ್ಲಿ ಸಿಕ್ಕಿದ್ದೆಲ್ಲ ಹಾದಿಯೇ
ಎಂದು ನಡೆದವನು ನಾನು
ತುಟಿಮುತ್ತಿನಲಿ ಬೇಹೋಷ್ ಮಾಡಿ ಗಾಯಗಳ ಹೊಲೆದು
ಮಾಯುವವರೆಗೂ ದೇಖರೇಖಿ ಮಾಡಿ ನನಗಾಗಿ ಬದುಕಿದವಳು ಅವಳು

ಉರಿವ ಪಾದಗಳು
ಹೃದಯದ ಗೋಡೆಗಳ ತುಂಬ ಪರಿಚಿದ ಗಾಯ
ಪರಂಪಾರಗತ ಅವಮಾನಗಳ ಮೂಟೆ ಹೊತ್ತು
ದಿಕ್ಕಿಲ್ಲದ ದಾರಿಯಲ್ಲಿ ನಡೆಯುವಾಗ
ಮೃದುಮಳೆಯ ಹನಿಸಿ ಭಾರಗಳ ಇಳಿಸಿ
ಕನಸಿನೂರು ಬಾಡಿಗೆ ತಂದು ಮನಸಿನ ಮನೆಯಲ್ಲಿ
ಇನ್ನೂ ನನ್ನ ಸಾಕುತ್ತಿರುವಳು ಅವಳು ಅಂತಃಕರುಣಿ

ಹಸಿರು ಮರುಭೂಮಿಯ ಹುಡುಗ ನಾನು
ಕಡು ಕಷ್ಟಗಳ ಕಡಲ ಕಂಡಿಲ್ಲದವಳು ಅವಳು
ಉಕ್ಕಿ ಹರಿವ ನದಿ ಬದುಕ ದೋಣಿಯ ಬುಟ್ಟಿ ಹು್ಟ್ಟುಗಳಿಲ್ಲದ ಬವಣೆ
ನಾವೇಕೆ ನೋಯೋಣ
ಅನುಕ್ಷಣ ಖುಷಿಪಟ್ಟು ಸಾಕಷ್ಟು ಕಣ್ಣಹನಿ ಹರಿಸಿ
ನಿತ್ಯ ನೂತನವಾಗಿ ಪ್ರೇಮಿಸುವ ಪುಟ್ಟ ಪಕ್ಷಿಗಳು ನಾವು
ಆಕಾಶವೇನು ನಾವು ಕೊಂಡುಕೊಂಡಿಲ್ಲ
ಭೂಮಿಯ ಮೇಲೂ ಇರಲು ಬಿಡಲಿಲ್ಲವೆಂದರೆ ನಾವೇ ಸುಮ್ಮನಿರೋಣ
ನೀವು ನಮ್ಮ ಕುತ್ತಿಗೆಗಳ ಹಿಡಿಯಿರಿ ನಾವು ನಿಮ್ಮ ಕೈಗಳಿಗೆ ಮುತ್ತುಕೊಡುತ್ತೇವೆ
ನೀವು ನಮ್ಮನ್ನ ಇಲ್ಲವಾಗಿಸಿ ನಾವು ನಿಮ್ಮ ಹಾದಿಗೆ ನಮ್ಮುಸಿರ ಚಲ್ಲುತ್ತೇವೆ
ನಮ್ಮ ಸಜ್ಜೆಯ ಮನೆಯಲ್ಲೇಕೆ ನಿಮ್ಮ ಆಸಕ್ತಿ
ನಮ್ಮ ಪ್ರೇಮಪದ್ಯಗಳ ಮನಸಿಟ್ಟು ಓದಿಕೊಳ್ಳಿ
ನಿಮ್ಮ ಬರಡಾದ ಎದೆಯೊಳಗೂ ಏನಾದರೂ ಚಿಗುರಬಹುದು

ನಾನು ಆಕಾಶ ಅವಳು ಭೂಮಿ ನಮ್ಮ ನಡುವೆ ಒಂದು ಚುಕ್ಕಿಯಿದೆ
ಹುಳುವಿಗೆ ಇಲ್ಲೇನು ಕೆಲಸ
ನಾವು ಬಂದಂತೆ ಬದುಕುತ್ತೇವೆ
ನೀವು ಬದುಕಿರುವುದಕ್ಕೆ ಸಾಕ್ಷಿಯಿಲ್ಲ ನಮ್ಮ ಹತ್ತಿರ
ಸಂಧಾನಕ್ಕೆ ರಾಯಭಾರಿಗಳ ಕಳುಹಿಸಬೇಡಿ
ಹರಿದ ಹಾದಿಗೂ ನಾವು ಒಲುಮೆಯ ಹರಿಸುತ್ತೇವೆ
ನೀವೂ ದೂರದಲ್ಲೇ ಇರಿ
ನಾವು ಅಪ್ಪಿಮುದ್ದಿಸುವಾಗ
ನಮ್ಮ ನಡುವೆ ಸುಳಿವ ಗಾಳಿಗೂ ಜಾಗವಿರುವುದಿಲ್ಲ

ಆಟ ಕೆಡಿಸಲೆಂದೇ ಬದುಕಿನ ತುಂಬಾ ಆಟ ಆಡಿ
ನಮ್ಮಾಟ ಸರಿಯಿಲ್ಲವೆನ್ನುವ ಹುಳುವೇ
ನೀನು ಆಟವನ್ನೇ ಆಡಿಲ್ಲವೆಂದರೆ ನಂಬೋಣವೇ
ಬುಸು ಬುಸು ಹಾವುಗಳೇ ನೀವು ಬುಸುಗುಟ್ಟುತ್ತಲೇ ಇರಿ
ಅನಾಮಿಕ ಹೆಸರಿನ ನಿಮ್ಮ ಬಲೆಗಳ ಲೆಕ್ಕ ಬೇಟಗಳ ಲೆಕ್ಕ
ಸಾರ್ವಕಾಲಿಕ ದಾಖಲೆಯ ಒಂದು ಪುಸ್ತಕ
ನಮ್ಮ ಬಳಿಯೂ ಇದೆ

ಬಿಡು ಚಿಂತೆ ನನ್ನ ಮುದ್ದು ಇಂದು ನಿನ್ನ ಜನುಮದಿನ
ಕಲ್ಲಿನ ತೋಟದ ಚಿಟ್ಟೆ ನಾನು
ಸಾವಿರ ಹೂದೋಟದ ಪರಿಮಳ ನೀನು
ಬೆಸಗೊಳ್ಳೋದು ನಮ್ಮ ಧರ್ಮ ಕರ್ಮ
ಉಳಿದವರಿಗೇಕೆ ನಮ್ಮ ಉಸಾಬರಿ
ಉರಿದುಕೊಳ್ಳುವವರ ಉರಿ ಹೆಚ್ಚಲಿ
ನಮ್ಮೊಡಲ ಒಲುಮೆಯ ಕಡಲು ಹೊಸ ಹೊಸದಾಗಿ ಉಕ್ಕಲಿ

ನಾನು ನೀನು ಬೇರು ಮರ
ನಮಗೆ ಭೂಮಿ ಆಗಸಗಳೇ ತಂದೆ ತಾಯಿ
ಸಾವಿರ ವರುಷ ಇಲ್ಲಾರಿದ್ದಾರು
ಪ್ರತಿ ನಿತ್ಯ ಹೊಸಹೊಸದಾಗಿ ಮುದ್ದಾಡುವ ನಾವೇ ಗೆದ್ದವರು

– ವೀರಣ್ಣ ಮಡಿವಾಳರ

Leave a Reply