ನಮಗೊಂದು ಹೆಣದ ವಿಳಾಸ ಬೇಕು

2 years ago

ಪೌಷ್ಟಿಕಾಂಶದ ಕೊರತೆಯಿಂದ ಉಸಿರು ನಿಲ್ಲಿಸಿದ ಕಂದಮ್ಮಗಳ ದೇಹಗಳು ನಮಗೆ ಬೇಡ

ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲಾಗದೆ ಆರ್ಥಿಕ ಸಂಕಷ್ಟದಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗಿ ನರಳಿ ನರಳಿ ಸತ್ತ ರೋಗಿಗಳ ಹೆಣಗಳು ನಮಗೆ ಬೇಡ

ಸಾಲದ ಸುಳಿಗೆ ಸಿಲುಕಿ ಸಾಮೂಹಿಕವಾಗಿ ಆತ್ಮಹತ್ಯೆಯ ಮಾಡಿಕೊಂಡ ಕುಟುಂಬದ ರಾಶಿ ರಾಶಿ ಶವಗಳು ನಮಗೆ ಬೇಡ

ಉದ್ಯೋಗ ದೊರೆಯದೆ ಹತಾಶಗೊಂಡು ವಿಶ್ವಾಸವನ್ನ ಕಳೆದುಕೊಂಡು ಪ್ರಾಣವನ್ನು ಕಳೆದುಕೊಂಡ ಯುವ ಜನರ ಹೆಣಗಳು ನಮಗೆ ಬೇಡ

ಪ್ರಕೃತಿಯ ವಿಕೋಪದಿಂದಾಗಿ ಬೆಳೆಯನ್ನ ಕಳೆದುಕೊಂಡ ಅನ್ನದಾತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯನ್ನು ಮಾಡಿಕೊಂಡ ಅನ್ನದಾತರ ಹೆಣಗಳು ನಮಗೆ ಬೇಡ

ಊಟವಿಲ್ಲದೆ ನಿತ್ರಾಣದೊಂಡ ಹಸಿವಿನಿಂದ ನರಳಿ ನರಳಿ ಸತ್ತ ಹೆಣಗಳು ನಮಗೆ ಬೇಡ

ದುರುಳ ಜನರ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲಾಗದೆ ಅತ್ಯಾಚಾರಗಳಿಗೆ ಗುರಿಯಾಗಿ ರಕ್ಕಸದಿಂದ ಕೊಲ್ಲಲ್ಪಟ್ಟ ಹೆಣಗಳು ನಮಗೆ ಬೇಡ

ವರ್ಗ ಸಂಘರ್ಷದಲ್ಲಿ ನಡು ರಸ್ತೆಯಲ್ಲಿ ಬೆತ್ತಲು ಗೊಳಿಸಿ ಅತ್ಯಾಚಾರಗಳ ಮಾಡಿ ಕೊಂದು ಹಾಕಿರುವ ಮಣಿಪುರದ ಮುಗ್ಧ ಮಹಿಳೆಯರ ಹೆಣಗಳು ನಮಗೆ ಬೇಡ

ಮರ್ಯಾದ ಹತ್ಯ ಹೆಸರಿನಲ್ಲಿ ಮೇಲುಕೀಳೆಂಬ ಭಾವನೆಯಲ್ಲಿ ಪ್ರೀತಿಸಿದ ತಮ್ಮ ಕರುಳ ಕುಡಿಗಳ ಕೊಂದು ಹಾಕಿರುವ ಹೆಣಗಳು ನಮಗೆ ಬೇಡ

ಧರ್ಮ ಧರ್ಮಗಳ ನಡುವೆ ಸಂಘರ್ಷವಾಗಿ ಪ್ರಾಣ ಕಳೆದುಕೊಂಡ ಹೆಣಗಳು ಮತ್ತು ಅವರ ಮನೆಯ ವಿಳಾಸಗಳು ನಮಗಷ್ಟೇ ಬೇಕು. ಅದರಲ್ಲೂ ಕೊಂದವರು ಕೊಂದವರ ಕೈಗಳು ಅನ್ಯ ಕೋಮಿನವರದಾಗಿರಬೇಕು, ಪ್ರಾಣ ಕಳೆದುಕೊಂಡವರು ನಮ್ಮವರಾಗಿರಬೇಕು

ಸಾಕಿಷ್ಟು ನಮಗೆ ಭಾಷಣಕ್ಕೆ ಸರಕಾಯಿತು, ಪ್ರಚಾರಕ್ಕೆ ವಸ್ತುವಾಗಿತ್ತು, ಪ್ರಚೋದಿಸಲು ಜನರ ಸೂಕ್ತ ಸುದ್ದಿ ಆಯಿತು

-ಕೆ. ಎಸ್ ನಾಗರಾಜ್

Leave a Reply