ಕಾಳ್ಗಿಚ್ಚಿನಿಂದ ಮನೆದೀಪ ಬೆಳಗುವುದೇ?

2 years ago

ಮುಸ್ಸಂಜೆಯ 
ಮಬ್ಬಗತ್ತಲನ್ನು
ಮುಂಜಾವಿನ
ಮುಂಬೆಳಕೆಂದು
ಭ್ರಮಿಸಬಹುದೇ?

ಸಾವಿಗೆ ಮುಂಚಿನ
ಸುಟ್ಟ ನೋವಿನ
ಅರಿವಳಿಕೆಯನ್ನು 
ಆರೈಕೆಯೆಂದು
ಭ್ರಮಿಸಬಹುದೇ?

ಪೂರ್ಣಾಂಕಗಳು
ಶೂನ್ಯದೊಡನೆ
ಸೆಣಸಿಗಳಿಸುವ
ಸೊನ್ನೆಗಳನ್ನು
ಪರಿಹಾರವೆನ್ನಬಹುದೇ?

ಸರಿಯುತ್ತಿರುವ
ನೆಲದೊಳಗೆ
ಕುಸಿಯುತ್ತಿರುವ
ಮರಕುದುರೆಯ
ಪತನವನ್ನು
ನಾಗಾಲೋಟವೆಂದು
ಬಣ್ಣಿಸಬಹುದೇ?

ತೂತುಲೋಟದೊಳಗೆ
ತುಂಬಿಟ್ಟ ನೀರು 
ಬಾಯಾರಿದಾಗ
ದಕ್ಕಬಹುದೇ?

-ಶಿವಸುಂದರ್, ಹಿರಿಯ ಕವಿಗಳು

Leave a Reply