ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯ, ನೀರು ನಿಲ್ಲುವ ಪ್ರದೇಶಗಳು ಹಾಗೂ ಖಾಲಿ ನಿವೇಶನಗಳ ನಿರ್ವಹಣೆಯಲ್ಲಿ ಪಾಲಿಕೆಯ ಆಡಳಿತ ವಿಫಲವಾಗಿರುವುದು ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲು ಕಾರಣವಾಗಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಆರೋಪಿಸಿದೆ.
- ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಗೆ ಬಹಿಷ್ಕಾರ: ಆರ್.ಅಶೋಕ
- ಮಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಿ: ಸಿಪಿಐ(ಎಂ)
- ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ನಾಟಕೋತ್ಸವ
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಚುನಾಯಿತ ಆಡಳಿತ ಇಲ್ಲದಿರುವುದು ನಗರಾಡಳಿತದ ಮೇಲಿನ ಪ್ರಜಾಪ್ರಭುತ್ವದ ನಿಯಂತ್ರಣವನ್ನು ದುರ್ಬಲಗೊಳಿಸಿದೆ. ಇದರ ಪರಿಣಾಮವಾಗಿ ಜನರ ಮೂಲಭೂತ ನಾಗರಿಕ ಸಮಸ್ಯೆಗಳಾದ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರಗಳಲ್ಲಿಯೂ ನಿರ್ಲಕ್ಷ್ಯ ಹೆಚ್ಚುತ್ತಿದೆ. ಅಧಿಕಾರಿಗಳು ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ ಎಂದಿದೆ.
ಈ ಹಿಂದೆ ಆರೋಗ್ಯ ಸಂಬಂಧಿತ ವಿಚಾರಗಳಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ತೀರಾ ನಿರ್ಲಕ್ಷ್ಯ ತೋರಿದ್ದ ಹಿಂದಿನ ಕಮಿಷನರ್ ರವಿಚಂದ್ರ ನಾಯಕ್ ಅವರ ಆಡಳಿತಾತ್ಮಕ ನಡೆ ಖಂಡನೀಯವಾಗಿದೆ ಎಂದಿದೆ.
ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರೋಗಗಳು ವ್ಯಾಪಕವಾಗಿ ಹರಡಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಮುನ್ನೆಚ್ಚರಿಕಾ ಕ್ರಮಗಳ ಮೂಲಕ ರೋಗಗಳ ಹರಡುವಿಕೆಯನ್ನು ತಡೆಯುವುದು ಪಾಲಿಕೆಯ ಆರೋಗ್ಯ ವಿಭಾಗದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಆದರೆ ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಹಿಂದೆ ನಡೆಯುತ್ತಿದ್ದ ನಿಯಮಿತ ಫಾಗಿಂಗ್, ಲಾರ್ವಾ ನಿಯಂತ್ರಣ, ನೀರು ನಿಲ್ಲುವ ಪ್ರದೇಶಗಳ ಪರಿಶೀಲನೆ, ಸಾರ್ವಜನಿಕ ಜಾಗೃತಿ ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ನಡೆಸುತ್ತಿದ್ದ ಮುಂಜಾಗ್ರತಾ ಕಾರ್ಯಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ ಎಂದು ಹೇಳಿದೆ.
ಸೊಳ್ಳೆಗಳ ನಿಯಂತ್ರಣವೂ ಜನರ ಆರೋಗ್ಯದ ಹಕ್ಕಿನ ಭಾಗವಾಗಿದೆ. ನಗರವನ್ನು ಸ್ವಚ್ಛವಾಗಿಡುವುದು ಕೇವಲ ನಾಗರಿಕರ ಜವಾಬ್ದಾರಿ ಮಾತ್ರವಲ್ಲ ಮಹಾನಗರ ಪಾಲಿಕೆ ಮತ್ತು ಸರ್ಕಾರದ ಮೂಲಭೂತ ಕರ್ತವ್ಯವೂ ಆಗಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು, ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಸುವುದು, ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳುವುದು ಮತ್ತು ಸೊಳ್ಳೆ ನಿಯಂತ್ರಣ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುವುದು ಅಗತ್ಯವಾಗಿದೆ ಎಂದಿದೆ.
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಗರದಾದ್ಯಂತ ವಿಶೇಷ ಸೊಳ್ಳೆ ನಿಯಂತ್ರಣ ಅಭಿಯಾನ ನಡೆಸಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವುದು, ಫಾಗಿಂಗ್ ಹಾಗೂ ಲಾರ್ವಾ ನಿಯಂತ್ರಣ ಕ್ರಮಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳುವುದು, ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದೆ.
ಸಾರ್ವಜನಿಕ ಆರೋಗ್ಯವನ್ನು ಜನರ ಹಕ್ಕಾಗಿ ಪರಿಗಣಿಸಬೇಕು, ಮತ್ತು ಅಗತ್ಯ ಮಾನವ ಸಂಪನ್ಮೂಲ ಮತ್ತು ಹಣಕಾಸು ಸಂಪನ್ಮೂಲಗಳನ್ನು ಒದಗಿಸಿ, ಪರಿಣಾಮಕಾರಿಯಾಗಿ ಸೊಳ್ಳೆ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾರ್ಯಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಆಗ್ರಹಿಸಿದೆ.




