ಸತ್ತ ಕವಿಯ ಸುತ್ತ

2 years ago

ಸತ್ತ ಕವಿಯ ಸುತ್ತ

ದಶಕಗಳ ಕಾಲ ಕವಿತೆಗಳ ಹೆತ್ತು ಹೊತ್ತು
ಸುಸ್ತಾದ ಕವಿ ಸತ್ತ ಮಾರನೆಯ ದಿನ
ಎಲ್ಲೆಲ್ಲೂ ಅದೇ ಸುದ್ದಿ ಸಮಾಚಾರ
ಮಳೆ ನಿಂತ ಮೇಲೂ ಹನಿಗಳು ಸಾವಿರ

ಆತನ ಸಾಧನೆ ಸಂವೇದನೆಗಳ ಮರೆತು
ಬರೀ ಕುಡಿತ ಅಶಿಸ್ತು ಅರಾಜಕತೆಯ ಕುರಿತು
ಮಾಡಿದ ಸಾಲ ಸುಳ್ಳಿನ ಜಾಲ
ನಿರಂತರ ಸೋಲು ಛಿದ್ರವಾದ ಬಾಳು
ನಕಾರ ನುಡಿಗಳ ಹೊರತು
ಯಾರೂ ಏನೂ ಮಾತಾಡಲಿಲ್ಲ
ಸಮರ್ಥನೆ ಕೊಡಲು ಕವಿಗೆ ಉಸಿರಿಲ್ಲ

ಕವಿಯ ತುಡಿತ ಬಾಳ ಬಂಡಿಯ ಏರಿಳಿತ
ಬೇಕಿಲ್ಲ ಯಾರಿಗೂ ತಲ್ಲಣಗಳ ಹಿಂದಿನ ಕಾರಣ
ಎಷ್ಟೊಂದು ಅವಮಾನ ಕಡುಕಷ್ಟದ ಜೀವನ
ಬಾಳೆಂಬ ತೂತು ದೋಣಿಯ ಪಯಣ
ದಡ ಸೇರಲಿಲ್ಲ ಗುರಿ ಮುಟ್ಟಲಿಲ್ಲ
ನಟ್ಟ ನಡುವೆ ನಾವು ಮುಳುಗಿದರೆ
ದೂರುವವರ ನಡುವೆ ಮೇಲೆತ್ತುವವರಿಲ್ಲ

ಸತ್ತ ಕವಿಯ ಕತ್ತಲ ಬದುಕಿನ ಸುತ್ತ
ಕಥೆ ಸುತ್ತಿ ಬೆತ್ತಲಾಗಿಸುವ ಸಜ್ಜನರಿಗೆ
ಕವಿ ಗೊತ್ತಿದ್ದರೂ ಆತನ ಕವಿತೆ ಗೊತ್ತಿಲ್ಲ
ಕಾವ್ಯ ಕಡಲಿನ ಆಳ ಅಗಲದೊಳಗೆ
ಮಡುಗಟ್ಟಿದ ಸೋಲು ಸಂಕಟ ಹತಾಶೆಗಳೆಲ್ಲ
ಅರ್ಥವಾಗದ ವ್ಯರ್ಥ ಆಲಾಪ ಅರಸಿಕರಿಗೆ

ಹುಚ್ಚು ಕವಿಯ ಬೆಚ್ಚಿಬೀಳಿಸುವ ಬೆಂಕಿ ಕವಿತೆ
ಮೆಚ್ಚಿದವರಿಗೂ ಬೆಳಕ ಬೆನ್ನಿನ ಕತ್ತಲೆಯ ಚಿಂತೆ
ಕಾವ್ಯದ ತುಡಿತ ಬಿಟ್ಟು ಕುಡಿತದ ಗುಟ್ಟು
ಬಿಡಿಸುವುದರಲ್ಲಿ ನಿರತವಾಗಿದೆ ಜನರ ಸಂತೆ

ಕವಿತೆಯ ದೀಪ ಹದವಾಗಿ ಬೆಳಗಿದರೇನು
ಕವಿಯ ಬಾಳ ಬತ್ತಿ ನಿತ್ಯ ಉರಿದುರಿದು ಆರಿದಾಗ
ಬೆಳಕಿನ ಅಂದ ಚೆಂದ ಬಂಧಗಳ ಬದಿಗಿಟ್ಟು
ಹಣತೆಗೆ ಹಾಕಿದ್ದು ಎಣ್ಣೆಯೋ ಹೆಂಡವೋ
ಎನ್ನುವ ಕುಹಕದ ಮಾತು ಅತಿಯಾಗಿ
ಕವಿತೆಗಳೆಲ್ಲ ಕುರುಡು ಕವಿ ನಿರ್ಜೀವ ಕೊರಡು

– ಶಶಿಕಾಂತ ಯಡಹಳ್ಳಿ
22-05-2024

(ಯುವ ಕವಿಮಿತ್ರ ಲಕ್ಕೂರು ಆನಂದನ ಅಕಾಲಿಕ ಅಂತ್ಯದ ನಂತರ ಆತನ ಕಾವ್ಯ ಬಿಟ್ಟು ಕುಡಿತದ ಕುರಿತು ಮಾತುಕತೆ ಅತಿಯಾದಾಗ ಹುಟ್ಟಿದ್ದು ಈ ಕವಿತೆ)

Leave a Reply