ಇಂದು ಇಂಗ್ಲೀಷ್ ಮಾಧ್ಯಮ ಬೇಡ ಅದಕ್ಕೆ ಬದಲಾಗಿ ನಮಗೆ ಕನ್ನಡ ಮಾಧ್ಯಮ ಮಾತ್ರ ಬೇಕು ಎನ್ನುವ ವಾದದ ಮೂಲಕ ಇಲ್ಲಿನ ವಿದ್ವಾಂಸರು ಇಡೀ ಚರ್ಚೆಯನ್ನು ಕನ್ನಡ-ಇಂಗ್ಲೀಷ್ ಭಾಷಾ ಜಗಳದ ಸ್ತರಕ್ಕೆ ಸೀಮಿತಗೊಳಿಸಿದ್ದಾರೆ. ಅದರಾಚೆ ಇಂಗ್ಲೀಷ್ ಮಾಧ್ಯಮ ಎನ್ನುವ ಆಯ್ಕೆಯು ವರ್ಗ ಸಂಘರ್ಷ, ಜಾತಿ ಸಂಘರ್ಷ, ಲಿಂಗ ತಾರತಮ್ಯ, ಜನಾಂಗೀಯ ಘರ್ಷಣೆಗಳಂತಹ ಸಮಾಜಶಾಸ್ತ್ರೀಯ ವಾಸ್ತವ ಬದುಕಿನ ವಿಮೋಚನೆ ಕಾರಣಕ್ಕಾಗಿನ ಆಯ್ಕೆಯೂ ಅಗಿರುತ್ತದೆ ಎನ್ನುವುದು ಈ ವಿದ್ವಾಂಸರಿಗೆ ಮನವರಿಕೆ ಆಗಲಿಲ್ಲ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ದುರಂತವೆಂದರೆ ಇಲ್ಲಿನ ಬ್ರಾಹ್ಮಣಶಾಹಿಯು ಅಂಚಿನಲ್ಲಿರುವ ತಳಸಮುದಾಯಗಳಿಗೆ ‘ಕನ್ನಡ ಮಾದ್ಯಮದಲ್ಲಿ ಕಲಿಯುವುದರ ಮೂಲಕ ನೀವು ತಾಯ್ನುಡಿ ಉಳಿಸಿಕೊಳ್ಳಬೇಕು’ ಎನ್ನುವ ಜವಬ್ದಾರಿ ವಹಿಸಿದೆ. ಈ ಮೇಲ್ಜಾತಿಗಳು ತಾವು ಇಂಗ್ಲೀಷ್‌ಗೆ ವಲಸೆ ಹೋಗಿ ಶೋಷಿತ ಸಮುದಾಯಗಳಿಗೆ ಪ್ರಾದೇಶಿಕ ನುಡಿಗಳನ್ನು ರಕ್ಷಿಸಲು ಕನ್ನಡದಲ್ಲಿ ಜೀವಿಸುವಂತೆ ತಾಕೀತು ಮಾಡುತ್ತಿರುವುದು ದೊಡ್ಡ ವೈರುದ್ಯವಾಗಿದೆ. ಇಲ್ಲಿ ಇಂಗ್ಲೀಷ್ ಮಾಧ್ಯಮ ಮಾತ್ರವಲ್ಲ ಅದರ ಉಚ್ಚಾರಣೆಯನ್ನು ಸಹ ಪಾವಿತ್ರೀಕರಿಸಿ ದೊಡ್ಡ ತಾರತಮ್ಯವನ್ನು ಸೃಷ್ಟಿಸಿದ್ದಾರೆ.
ಇಂಗ್ಲೀಷ್ ಮಾಧ್ಯಮದ ಶಿಕ್ಷಣವು ಆರ್ಥಿಕ ಅನುಕೂಲತೆ ತಂದುಕೊಡುತ್ತದೆ ಎನ್ನುವ ನಂಬಿಕೆಯನ್ನು ಮಿಥ್ಯೆಯೆಂದು ತಳ್ಳಿ ಹಾಕುವುದು ಬೇಜವ್ದಾರಿತನವಾಗುತ್ತದೆ. ಇಂದಿನ ನವಉದಾರೀಕರಣ ಮಾರುಕಟ್ಟೆಯ ಅವಕಾಶವಾದಿ ತಂತ್ರಗಳು ಮತ್ತು ಆ ಮೂಲಕ ಹುಟ್ಟಿಕೊಂಡ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನು ಆಳವಾಗಿ ಅರಿತು, ಸ್ಪಂದಿಸಿ ಈ ತಾಯ್ನುಡಿಯ ಶಿಕ್ಷಣ ರೂಪಿಸಬೇಕಾಗಿದೆ. ಶೈಕ್ಷಣಿಕ ವಲಯದ ಮೇಲೆ ಈ ಖಾಸಗೀಕರಣ, ಜಾಗತೀಕರಣದ ಪ್ರಬಾವವನ್ನು ನಿರ್ಲಕ್ಷಿಸಿ ಕೇವಲ ಭಾವುಕ ನೆಲೆಯಲ್ಲಿ ತಾಯ್ನುಡಿ ಮಾಧ್ಯಮದ ಪರವಾಗಿ ಹೋರಾಟ ಮಾಡಿದರೆ ಅದು ಕತ್ತಲ ದಾರಿಯನ್ನು ತುಳಿವ ವ್ಯರ್ಥ ಪ್ರಯತ್ನವಾಗುತ್ತದೆ.
ಕನ್ನಡದ ಅಭಿವೃದ್ಧಿ ಕುರಿತು ಮಾತನಾಡುವವರು ಇಲ್ಲಿನ ಸಮಾಜೋ-ಆರ್ಥಿಕತೆ ಕುರಿತು, ಶಾಲಾ ಶಿಕ್ಷಣದ ಸಂಕೀರ್ಣತೆಯನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ‘ನಾನು ತುಳಿದಿದ್ದೇ ಹಾದಿ’ ಎಂಬಂತೆ ವರ್ತಿಸುವುದು ಏನನ್ನೂ ಸಾಧಿಸಿದಂತಾಗುವುದಿಲ್ಲ
– ಬಿ. ಶ್ರೀಪಾದ ಭಟ್ ಸಾಮಾಜಿಕ ಹೋರಾಟಗಾರರು




