ದ್ವೇಷದ ರಾಜಕೀಯ ಮತ್ತು ಒಳಗೊಳ್ಳುವಿಕೆಯ ಮುಖವಾಡ

1 month ago

ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಮೋಹನ್ ಭಾಗವತ್

ದ್ವೇಷದ ರಾಜಕೀಯ ಮತ್ತು ಒಳಗೊಳ್ಳುವಿಕೆಯ ಮುಖವಾಡ

ಇಂಗ್ಲಿಷ್‌ ಮೂಲ: ರಾಮ್ ಪುನಿಯಾನಿ | ಕನ್ನಡಕ್ಕೆ: ಡಾ.ಪ್ರದೀಪ್‌ ಮಾಲ್ಗುಡಿ

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮೂರು ವಿದೇಶಿ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸರಣಿಯಲ್ಲಿ ಮೊದಲನೆಯದು ಅಮೆರಿಕ. ಅಲ್ಲಿನ ಇತರ ಕೆಲ ಕಾರ್ಯಕ್ರಮಗಳ ಜೊತೆಗೆ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡುವುದು ಅವರ ಪ್ರಮುಖ ಕಾರ್ಯಕ್ರಮವಾಗಿತ್ತು. ಇದರಲ್ಲಿ 5,000ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆರ್‌ಎಸ್‌ಎಸ್ ಬಗೆಗಿನ ತಪ್ಪು ಕಲ್ಪನೆಗಳನ್ನು ನಿವಾರಿಸುವುದು, ಸಂವಾದ ನಡೆಸುವುದು ಮತ್ತು ‘ವಿಶ್ವ ಭ್ರಾತೃತ್ವ’ದ ಸಂದೇಶವನ್ನು ಸಾರುವುದು ಈ ಭೇಟಿಯ ಅಧಿಕೃತ ಉದ್ದೇಶವಾಗಿತ್ತು.

ಆದರೆ, ನಿಗದಿತ ಸಭೆಗೆ ಮುನ್ನವೇ ಭಾರಿ ಪ್ರತಿಭಟನೆಗಳು ನಡೆದವು. ಸುಮಾರು 61 ಮಾನವ ಹಕ್ಕುಗಳ ಸಂಘಟನೆಗಳು ಒಗ್ಗೂಡಿ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ದ್ವೇಷದ ರಾಜಕೀಯವನ್ನು ಬಯಲಿಗೆಳೆದವು. ಯಹೂದಿಗಳ ನರಮೇಧಕ್ಕಾಗಿ ಹಿಟ್ಲರನನ್ನು ಹೊಗಳಿದ ಮತ್ತು ಹಿಂದೂ ರಾಷ್ಟ್ರೀಯವಾದಿಗಳಿಗೆ ಅದೇ ರೀತಿಯ ರಾಷ್ಟ್ರ ನಿರ್ಮಾಣ ಪದ್ಧತಿಯನ್ನು ಶಿಫಾರಸು ಮಾಡಿದ ಆರ್‌ಎಸ್‌ಎಸ್‌ನ ಹಳೆಯ ಬರಹಗಳನ್ನು ಪ್ರತಿಭಟನಾಕಾರರು ಪ್ರಮುಖವಾಗಿ ಎತ್ತಿ ತೋರಿಸಿದರು. ಮಹಾತ್ಮ ಗಾಂಧಿಯನ್ನು ಕೊಂದಿದ್ದು ಆರ್‌ಎಸ್‌ಎಸ್ ಎಂಬ ಫಲಕಗಳನ್ನೂ ಪ್ರತಿಭಟನಾಕಾರರು ಹಿಡಿದಿದ್ದರು. ಭಾರತೀಯ ಮೂಲದ ನ್ಯೂಯಾರ್ಕ್‌ನ ಮೇಯರ್ ಜೊಹ್ರಾನ್ ಮಮ್ದಾನಿ ಕೂಡ ಆರ್‌ಎಸ್‌ಎಸ್ ಅನ್ನು ಟೀಕಿಸಿದರು. ಈ ಕಾರ್ಯಕ್ರಮವನ್ನು ತಡೆಯಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಲೇ, ತಮ್ಮ ಅಸಮಾಧಾನವನ್ನು ಹೊರಹಾಕಿದರು. “ನಾನು ಬೆಳೆದ ಭಾರತ (ಅವರು ಭಾರತೀಯ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಮಗ) ವೈವಿಧ್ಯತೆಯನ್ನು ಗೌರವಿಸುತ್ತಿತ್ತು, ಆದರೆ ಇಂದಿನ ಭಾರತ ಅಸಹಿಷ್ಣುತೆಯ ದೇಶವಾಗಿ ಬದಲಾಗಿದೆ” ಎಂದರು. ಭಾಗವತ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವ ಹಲವು ಹಿಂದೂ ಸಂಘಟನೆಗಳು ಹಾಗೂ ಇತರರು ಭಾಗವಹಿಸಿದ್ದರು.

ಮುಖ್ಯವಾಗಿ ಅಸ್ಮಿತೆಯ ವಿಷಯಗಳಿಗಾಗಿ ಕೆಲಸ ಮಾಡುವ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಭಾಗವತ್ ಅವರ ಸಭೆಯನ್ನು ಆಯೋಜಿಸಿದ್ದವು. ಈ ಸಭೆಯಲ್ಲಿ ಭಾಗವತ್ ತಮ್ಮ ಬಹಿಷ್ಕರಿಸುವ ರಾಜಕೀಯವನ್ನು ಮರೆಮಾಚಿ, ಉದಾರವಾದಿಯಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿದರು. “ವೈವಿಧ್ಯತೆ ನಮ್ಮ ಅಂತರ್ಗತ ಏಕತೆಯ ಒಂದು ಆಭರಣವಷ್ಟೇ; ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದು ಬಯಸುವ ಹಿಂದೂಗಳು ನಿಜವಾದ ಹಿಂದೂಗಳಾಗಿ ಉಳಿಯುವುದಿಲ್ಲ” ಎಂದರು. ಎಂತಹ ಉದಾತ್ತ ಮಾತುಗಳು! ಆದರೆ ಒಬ್ಬ ವ್ಯಕ್ತಿಯನ್ನು ಅಥವಾ ಸಂಘಟನೆಯನ್ನು ನಾವು ಹೇಗೆ ಅಳೆಯಬೇಕು? ಅವರ ಮಾತುಗಳಿಂದಲೋ ಅಥವಾ ಅವರ ಕೃತಿಗಳಿಂದಲೋ?

ಧರ್ಮದ ಹಂಗಿಲ್ಲದೆ ಜನರಲ್ಲಿರುವ ಭಾವೈಕ್ಯತೆ, ಸಮನ್ವಯತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಇತಿಹಾಸದ ಹೆಗ್ಗುರುತಾಗಿದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ, ಭಗತ್ ಸಿಂಗ್ ಅವರ ಆದರ್ಶಗಳು, ಅಂಬೇಡ್ಕರ್ ಅವರ ಮೌಲ್ಯಗಳು ಮತ್ತು ಗಾಂಧೀಜಿಯವರ ಸೌಹಾರ್ದತೆಯೊಂದಿಗೆ ಜನ ಬ್ರಿಟಿಷರ ದಾಸ್ಯದ ವಿರುದ್ಧ ಹೋರಾಡಿದರು. ಆದರೆ ಒಂದು ಕಡೆ ಆರ್‌ಎಸ್‌ಎಸ್-ಹಿಂದೂ ಮಹಾಸಭಾ ಮತ್ತು ಇನ್ನೊಂದು ಕಡೆ ಮುಸ್ಲಿಂ ಲೀಗ್ ಈ ಸಮಗ್ರ ದೇಶ ಕಟ್ಟುವ ಪ್ರಕ್ರಿಯೆಯಿಂದ ದೂರವೇ ಉಳಿದವು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆಯೇ ಸ್ವಾತಂತ್ರ್ಯದ ರಾಷ್ಟ್ರೀಯ ಚಳವಳಿ ರೂಪುಗೊಂಡಿತ್ತು.

ಆ ಸಮಯದಲ್ಲಿ ಆರ್‌ಎಸ್‌ಎಸ್ ಭಾರತವೆಂಬ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಿಂದ ದೂರ ಉಳಿದದ್ದು ಮಾತ್ರವಲ್ಲದೆ, ಮುಸ್ಲಿಮರ ವಿರುದ್ಧ (ನಂತರ ಕ್ರಿಶ್ಚಿಯನ್ನರ ವಿರುದ್ಧವೂ) ದ್ವೇಷ ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತು ಮತ್ತು ಬ್ರಿಟಿಷ್ ಆಡಳಿತಗಾರರಿಗೆ ಹಲವು ವಿಧಗಳಲ್ಲಿ ನೆರವಾಯಿತು. ತನ್ನ ಶಾಖೆಗಳು, ಶಾಲೆಗಳು, ಮಾಧ್ಯಮಗಳು ಮತ್ತು ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದು ಹರಡಿದ ದ್ವೇಷ ಕೋಮು ಗಲಭೆಗಳಿಗೆ ಕಾರಣವಾಯಿತು; ಇದರಲ್ಲಿ ಮುಸ್ಲಿಮರೇ ಪ್ರಮುಖ ಬಲಿಪಶುಗಳಾದರು. ಬ್ರಿಟಿಷರ ಆಳ್ವಿಕೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಕೋಮುವಾದಗಳು ಪರಸ್ಪರ ಸ್ಪರ್ಧಿಸುತ್ತಿದ್ದವು. ಆದರೆ ಸ್ವಾತಂತ್ರ್ಯದ ನಂತರ ಆರ್‌ಎಸ್‌ಎಸ್‌ನ ಕೋಮುವಾದವೇ ಮುಂಚೂಣಿಗೆ ಬಂದು ಎರಡು ಪ್ರಮುಖ ಸಮುದಾಯಗಳ ನಡುವೆ ತೀವ್ರ ಕಂದಕ ಸೃಷ್ಟಿಸಿತು. ಇದೇ ದ್ವೇಷ 1993ರ ಮುಂಬೈ, 2002ರ ಗುಜರಾತ್, 2013ರ ಮುಜಫರ್‌ನಗರ ಮತ್ತು 2019ರ ದೆಹಲಿ ಗಲಭೆಗಳಲ್ಲಿ ಮುಸ್ಲಿಮರ ಮೇಲಿನ ಮಾರಣಹೋಮಕ್ಕೆ ಕಾರಣವಾಯಿತು.

ಗುಜರಾತ್ ಗಲಭೆ ಅದರ ರಾಜಕೀಯದ ನೈಜ ಮುಖವನ್ನು ತೋರಿಸಿಕೊಟ್ಟಿತು; ಇದಕ್ಕೆ ಬಿಲ್ಕಿಸ್ ಬಾನೊ ಪ್ರಕರಣವೊಂದೇ ಸಾಕ್ಷಿಯಾಗಿದೆ. ಗರ್ಭಿಣಿ ಮುಸ್ಲಿಂ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು ಮತ್ತು ಅಪರಾಧಿಗಳು ಸ್ವಲ್ಪ ಕಾಲ ಜೈಲಿನಲ್ಲಿದ್ದು ನಂತರ ಬಿಡುಗಡೆಯಾದರು! ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ಇಷ್ಟೇ! ಇನ್ನು ಗೋವಿನ ಪವಿತ್ರತೆಯ ಹೆಸರಿನಲ್ಲಿ ಅಖ್ಲಾಕ್, ರಕ್ಬರ್ ಖಾನ್ ಸೇರಿದಂತೆ ಅನೇಕ ಮುಸ್ಲಿಮರು ಮತ್ತು ದಲಿತರ ಮೇಲೆ ಗುಂಪು ಹತ್ಯೆಗಳು ನಡೆದವು. ಉನ್ನಾವೊದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ದಲಿತರ ಬಗ್ಗೆ ಆರ್‌ಎಸ್‌ಎಸ್‌ಗೆ ಇರುವ ಮನಸ್ಥಿತಿಯನ್ನು ನೆನಪಿಸುತ್ತದೆ.

1980ರ ದಶಕದಿಂದ ಕ್ರಿಶ್ಚಿಯನ್ನರೂ ಇವರ ನೇರ ಗುರಿಯಾದರು. ಆಸ್ಟ್ರೇಲಿಯಾದ ಪಾದ್ರಿ ಸ್ಟೇನ್ಸ್ ಅವರನ್ನು ಅವರ ಇಬ್ಬರು ಅಪ್ರಾಪ್ತ ಗಂಡು ಮಕ್ಕಳೊಂದಿಗೆ ಜೀವಂತವಾಗಿ ಸುಟ್ಟುಹಾಕಿದ ಕೃತ್ಯವನ್ನು ಅಂದಿನ ಭಾರತದ ರಾಷ್ಟ್ರಪತಿ ಡಾ. ಕೆ.ಆರ್.ನಾರಾಯಣನ್ ಅವರು “ಮಾನವಕುಲದ ಕರಾಳ ಕೃತ್ಯಗಳ ಪಟ್ಟಿಗೆ ಸೇರಿದ್ದು” ಎಂದು ಸರಿಯಾಗಿಯೇ ಬಣ್ಣಿಸಿದ್ದರು. ನಂತರದ ಕಂಧಮಾಲ್ ಹಿಂಸಾಚಾರ ‘ಕ್ರಿಶ್ಚಿಯನ್ ಧರ್ಮ ಒಂದು ವಿದೇಶಿ ಧರ್ಮ’ ಎಂಬ ಕಲ್ಪನೆಯನ್ನು ವ್ಯವಸ್ಥಿತವಾಗಿ ಬಿತ್ತಿರುವುದಕ್ಕೆ ಸಾಕ್ಷಿಯಾಯಿತು. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಅದರ ರಾಜಕೀಯ ಮುಖವಾಣಿಯೇ ಅಧಿಕಾರದಲ್ಲಿರುವುದರಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧದ ಈ ದ್ವೇಷದ ಸಂದೇಶ ಇನ್ನಷ್ಟು ತೀವ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರಾರ್ಥನಾ ಕೂಟಗಳ ಮೇಲಿನ ದಾಳಿಗಳ ತೀವ್ರತೆ ಹೆಚ್ಚಾಗಿದೆ. ಒಂದು ಕಡೆ ಮುಸ್ಲಿಮರನ್ನು ಸಂಪೂರ್ಣವಾಗಿ ಅಂಚಿಗೆ ತಳ್ಳಲಾಗಿದೆ. ಮತ್ತೊಂದೆಡೆ, ಅದರ ರಾಜಕೀಯ ಅಂಗವಾದ ಬಿಜೆಪಿ ಇಂದು ಒಟ್ಟಾರೆಯಾಗಿ 1000ಕ್ಕೂ ಹೆಚ್ಚು ಸಂಸದರು ಮತ್ತು ಶಾಸಕರನ್ನು ಹೊಂದಿದ್ದರೂ, ಅವರಲ್ಲಿ ಒಬ್ಬರೂ ಮುಸ್ಲಿಮರಿಲ್ಲ ಎಂಬುದು ಗಮನಾರ್ಹ. ಭಾರತದಲ್ಲಿ ಮುಸ್ಲಿಮರನ್ನು ಭಾಗವತ್ ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

2025ರಲ್ಲಿ, ವಿದೇಶಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯವನ್ನು ಗಮನಿಸಿ ಅಮೆರಿಕ ಸರ್ಕಾರಕ್ಕೆ ಶಿಫಾರಸುಗಳನ್ನು ನೀಡಲು ಯುಎಸ್ ಕಾಂಗ್ರೆಸ್ ಸ್ಥಾಪಿಸಿದ ಸ್ವತಂತ್ರ ಆಯೋಗವಾದ ‘ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ’ (USCIRF), ಭಾರತವನ್ನು “ವಿಶೇಷ ಕಳವಳಕಾರಿ ದೇಶ” ಎಂದು ಘೋಷಿಸಲು ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಷ್ಟೇ ಅಲ್ಲದೆ, ಆರ್‌ಎಸ್‌ಎಸ್ ಸೇರಿದಂತೆ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ದೇಶ ಪ್ರವೇಶಿಸುವುದನ್ನು ನಿರ್ಬಂಧಿಸುವುದು ಸೇರಿದಂತೆ ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸಲು USCIRF ಶಿಫಾರಸು ಮಾಡಿದೆ. ಇತ್ತೀಚೆಗೆ USCIRF ಅಧಿಕಾರಿಗಳು ಭಾಗವತ್ ಮತ್ತು ಇತರ ಆರ್‌ಎಸ್‌ಎಸ್ ನಾಯಕರಿಗೆ ಉನ್ನತ ಮಟ್ಟದ ಸಭೆಗಳು ಹಾಗೂ ರಾಜತಾಂತ್ರಿಕ ಸವಲತ್ತುಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ. ಹಲವು ಮಾನವ ಹಕ್ಕುಗಳ ಸಂಸ್ಥೆಗಳು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ ಭಾಗವತ್ ಅವರ ಅಮೆರಿಕನ್ ವೀಸಾವನ್ನು ನಿರಾಕರಿಸುವಂತೆ ಅಥವಾ ರದ್ದುಗೊಳಿಸುವಂತೆ ಒತ್ತಾಯಿಸಿವೆ.

ತಮ್ಮ ಕೃತಿಗಳು ವೈವಿಧ್ಯತೆಯನ್ನು ಗೌರವಿಸುವ ತಮ್ಮ ಹೇಳಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿದ್ದರೂ, ತಮ್ಮ ನಿಜವಾದ ಮುಖವನ್ನು ಮರೆಮಾಚುವಲ್ಲಿ ಭಾಗವತ್ ಎಷ್ಟು ಜಾಣರು ಎಂಬುದನ್ನು ಇದು ತೋರಿಸುತ್ತದೆ. ವೈವಿಧ್ಯತೆಯ ಈ ಮುಖವಾಡ ಜಗತ್ತನ್ನು ದಾರಿ ತಪ್ಪಿಸಲು ಹೂಡಿದ ತಂತ್ರವಷ್ಟೇ. ಆದರೆ ಇಂಟರ್ನೆಟ್ ಯುಗದಲ್ಲಿ, ಮಾನವ ಹಕ್ಕುಗಳ ಪರ ಧ್ವನಿಗಳು ಪ್ರಬಲವಾಗಿರುವ ಕಾಲದಲ್ಲಿ ಜಗತ್ತು ದಿಕ್ಕು ತಪ್ಪಲು ಸಾಧ್ಯವೇ? ‘ದಿ ಕಾರವಾನ್’ ಪತ್ರಿಕೆಯ ಇತ್ತೀಚಿನ ಅಧ್ಯಯನದ ಪ್ರಕಾರ ಆರ್‌ಎಸ್‌ಎಸ್‌ಗೆ ವಿದೇಶಗಳಲ್ಲಿ 2500ಕ್ಕೂ ಹೆಚ್ಚು ಸಂಯೋಜಿತ ಸಂಸ್ಥೆಗಳಿದ್ದರೂ, ಭಾರತದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಮಹಿಳೆಯರು, ಆದಿವಾಸಿಗಳು ಮತ್ತು ಕಾರ್ಮಿಕರ ನೈಜ ಪರಿಸ್ಥಿತಿಯ ಸತ್ಯವನ್ನು ಜಗತ್ತಿಗೆ ಸಾರುತ್ತಿರುವ ಅಂತರರಾಷ್ಟ್ರೀಯ ವಿದ್ವಾಂಸರು ಮತ್ತು ಹೋರಾಟಗಾರರೂ ಇದ್ದಾರೆ.

ಭಾಗವತ್ ಅವರ ಮುಖ್ಯ ಉದ್ದೇಶ ‘ವಿಶ್ವ ಭ್ರಾತೃತ್ವ’ವನ್ನು ಸಾರುವುದಲ್ಲ, ಬದಲಾಗಿ ಭಾರತದಲ್ಲಿ ನಡೆಯುತ್ತಿರುವ ತಮ್ಮ ಭೀಕರ ಕೃತ್ಯಗಳಿಗೆ ಬಿಳಿಯ ಬಣ್ಣ ಬಳಿಯುವುದಷ್ಟೇ ಆಗಿದೆ. ಹಿಂದೂ ರಾಷ್ಟ್ರೀಯತಾವಾದಿ ರಾಜಕೀಯದ ನೇರ ಪರಿಣಾಮವಾಗಿರುವ ದ್ವೇಷದ ರಾಜಕೀಯವನ್ನು ಮರೆಮಾಚುವ ತಮ್ಮ ‘ಜಾಣ್ಮೆ’ಗಾಗಿ ಭಾಗವತ್ ಅವರನ್ನು ಮೆಚ್ಚಲೇಬೇಕು! ಇದೇ ಕಾರಣದಿಂದ ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಹಸಿವು ಸೂಚ್ಯಂಕ ಮತ್ತು ಸಂತೋಷ ಸೂಚ್ಯಂಕದ ಅಂತರರಾಷ್ಟ್ರೀಯ ಪಟ್ಟಿಗಳಲ್ಲಿ ಭಾರತದ ಶ್ರೇಯಾಂಕ ಕುಸಿಯುತ್ತಿರುವುದು ಆರ್‌ಎಸ್‌ಎಸ್-ಬಿಜೆಪಿ ಆಡಳಿತದ ಬೆಳವಣಿಗೆಯ ಜೊತೆಜೊತೆಯಾಗಿಯೇ ಸಾಗುತ್ತಿದೆ.

ತಾವು ಸುಲಭವಾಗಿ ಧರಿಸಿದ್ದೇನೆ ಎಂದು ಭಾವಿಸಿರುವ ವೈವಿಧ್ಯತೆಯ ಮುಖವಾಡದ ಮೂಲಕ ಅಮೆರಿಕ ಮತ್ತು ವಿದೇಶಗಳಲ್ಲಿ ‘ಹಿಂದೂ ಲಾಬಿ’ಯನ್ನು ಬಲಪಡಿಸುವುದು ಕೂಡ ಅವರ ಉದ್ದೇಶವಾಗಿರಬಹುದು. ಭಾರತದಲ್ಲಿ ಶಾಂತಿ ನೆಲೆಸಬೇಕಾದರೆ, ಆರ್‌ಎಸ್‌ಎಸ್ ಒಕ್ಕೂಟ ವಿರೋಧಿಸುವ ಭಾರತೀಯ ಸಂವಿಧಾನವನ್ನು ನಾವು ಪಾಲಿಸಬೇಕಿದೆ. ಜಾಗತಿಕ ಏಕತೆಗಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸನ್ನದೇ (UN Charter of Human Rights) ಅತ್ಯುತ್ತಮ ಆಯ್ಕೆಯಾಗಿದೆ. ಈ ಜಾಗತಿಕ ಹಳ್ಳಿಯ ಕಾಲಘಟ್ಟದಲ್ಲಿ ಧರ್ಮಗ್ರಂಥಗಳನ್ನು ಉಲ್ಲೇಖಿಸುವುದು ಅಪ್ರಸ್ತುತವಷ್ಟೇ ಅಲ್ಲ, ಅದು ‘ಹಿಂದೂ ಶ್ರೇಷ್ಠತೆ’ಯನ್ನು ಹೇರುವ ಅವರ ನೈಜ ಉದ್ದೇಶವನ್ನಷ್ಟೇ ತೋರಿಸುತ್ತದೆ.

Leave a Reply