ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡ ಮಾತನಾಡುವಂತೆ ಜಾಗೃತಿ ಮೂಡಿಸಬೇಕು

2 years ago

ನಗರದ ಯಾವುದೇ ಉದ್ಯಾನವನದಲ್ಲಿ ಅಲ್ಲಿ ವಾಯು ವಿಹಾರ ಮಾಡುವ ನಾಗರಿಕರು ಒಂದಷ್ಟು ಮಂದಿ ತೆಲುಗು ಭಾಷೆಯಲ್ಲಿ ಮಾತನಾಡುತ್ತಿರುತ್ತಾರೆ. ಮತ್ತಷ್ಟು ಮಂದಿ ಉತ್ತರ ಭಾರತದವರು ಹಿಂದಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಇನ್ನು ನಮ್ಮ ಕನ್ನಡಿಗರು ಒಂದಷ್ಟು ಮಂದಿಗೆ ಇಂಗ್ಲಿಷ್ ವ್ಯಾಮೋಹವಿದ್ದು, ಪರಸ್ಪರ ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡುತ್ತಿರುತ್ತಾರೆ. ಬಹಳಷ್ಟು ಉದ್ಯಾನವನಗಳಲ್ಲಿ ಕನ್ನಡ ಮಾತನಾಡುವವರು ದೊರೆತರೆ ಅಥವಾ ಕನ್ನಡದ ಮಾತಿನ ಪದಗಳು ನಮ್ಮ ಕಿವಿಗೆ ಬಿದ್ದರೆ ಸಂತೋಷವಾಗುತ್ತದೆ.

ಇದೇ ರೀತಿಯಲ್ಲಿ ವಾಣಿಜ್ಯ ಸಂಕೀರ್ಣಗಳಲ್ಲೂ ಸಹ ವ್ಯಾಪಾರಸ್ಥರು ಮತ್ತು ಗ್ರಾಹಕರು ಹಿಂದಿ ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿಯೇ ಸಂಭಾಷಣೆಗಳನ್ನು ನಡೆಸುತ್ತಿರುತ್ತಾರೆ. ಇಲ್ಲಿಯೂ ಸಹ ಕನ್ನಡ ಭಾಷೆಯ ಬಳಕೆ ತುಂಬಾ ಕಡಿಮೆಯಾಗುತ್ತಿದೆ. ಒಟ್ಟಾರೆಯಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಅದು ಉದ್ಯಾನವನವಿರಬಹುದು ಅಥವಾ ವಾಣಿಜ್ಯ ಮಳಿಗೆಗಳಿರಬಹುದು ವೈಯಕ್ತಿಕವಾದ ಕುಟುಂಬಗಳ ಕಾರ್ಯಕ್ರಮಗಳೇ ಇರಬಹುದು, ಇಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉದ್ಯಾನವನಗಳು ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಕನ್ನಡದಲ್ಲಿಯೇ ಮಾತನಾಡಿ, ಕನ್ನಡದಲ್ಲಿಯೇ ವ್ಯವಹರಿಸಿ, ಮಾರುಕಟ್ಟೆ ಭಾಷೆ ಮತ್ತು ವ್ಯವಹಾರಿಕ ಭಾಷೆ ಕನ್ನಡವಾಗಿರಲಿ, ಎಂಬ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಬೇಕಾಗಿದೆ. ಈ ರೀತಿಯ ಜಾಗೃತಿ ಆಗದಿದ್ದರೆ ಬೆಂಗಳೂರು ನಗರದಲ್ಲೂ ಸಹ ಕನ್ನಡ ಪದಗಳು ಕಿವಿಗೆ ಬೀಳದಂತಾಗುತ್ತದೆ. ಈಗಾಗಲೇ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದ್ದು, ಮನೆಮನೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಮಕ್ಕಳನ್ನು ಮಾತನಾಡಿಸುವುದರಲ್ಲಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂವಾದ ಮಾಡುವುದರಲ್ಲಿ ಹೆಚ್ಚು ಸಂತೋಷದಿಂದಿದ್ದಾರೆ.

ಬಹಳಷ್ಟು ಮಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರೆ ಅಥವಾ ಇಂಗ್ಲೀಷ್ ಭಾಷೆಯನ್ನು ನಾವು ಕಲಿತರೆ ದೊಡ್ಡ ಮನುಷ್ಯರು ಬುದ್ಧಿವಂತರು ಮೇಧಾವಿಗಳು ಎನ್ನುವ ಭ್ರಮೆಯು ಇದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇವಲ ನಾಮಫಲಕಗಳಲ್ಲಿ ಕನ್ನಡ ಕಾಣಿಸಿಕೊಂಡರೆ ಸಾಲದು; ಮಾರುಕಟ್ಟೆ ಭಾಷೆ, ಮನೆಯ ಭಾಷೆ, ಮನಸ್ಸಿನ ಭಾಷೆ ಕನ್ನಡವಾಗುವ ನಿಟ್ಟಿನಲ್ಲಿ ಅರಿವನ್ನ ಮೂಡಿಸುವಂತಹ ಕಾರ್ಯಕ್ರಮಗಳು – ವಿಶೇಷವಾಗಿ ಬೀದಿ ನಾಟಕಗಳು, ಜಾಗೃತಿ ಸಭೆಗಳನ್ನು ಏರ್ಪಡಿಸಿದರೆ ಭಾಷೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ.

ಇದೇ ಪರಿಸ್ಥಿತಿ ಮುಂದುವರೆದರೆ ಸಾರ್ವಜನಿಕ ವಲಯದಲ್ಲಿ ಕನ್ನಡ ಭಾಷೆ ಮಾತನಾಡುವವರೇ ಕ್ಷೀಣಿಸುತ್ತ ಹೋಗುತ್ತಾರೆ. ಶಿಕ್ಷಣದಲ್ಲಿ ಕನ್ನಡ ಮಾಯವಾಗುತ್ತಿದೆ. ಇದರ ಜೊತೆ ಇಂತಹ ಪರಿಸ್ಥಿತಿಯು ನಿರ್ಮಾಣವಾದರೆ ಕನ್ನಡ ಭಾಷೆಯ ಬೆಳವಣಿಗೆಗೆ ನಗರ ಪ್ರದೇಶಗಳು ಮಾರಕವಾಗುತ್ತದೆ.

ಮನೆಯಲ್ಲಿ ಯಾವ ಭಾಷೆಯನ್ನಾದರೂ ಮಾತನಾಡಿ, ಆದರೆ ಉದ್ಯಾನವನಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಎನ್ನುವ ಅರಿವನ್ನು ಮೂಡಿಸುವಂತಹ ಕೆಲಸ ಬಹಳ ಜರೂರಾಗಿ ಆಗಬೇಕಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಇಂತಹ ನಿಟ್ಟಿನಲ್ಲಿ ಆಲೋಚಿಸಲಿ.

ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನದ ವಿಚಾರದಲ್ಲಿ ಕೇವಲ ಆದೇಶಗಳನ್ನು ಹೊರಡಿಸಿದರೆ ಅನುಷ್ಠಾನವಾಗುವುದಿಲ್ಲ. ಕಚೇರಿಗಳಿಗೆ ಮೇಲಿಂದ ಮೇಲೆ ಭೇಟಿಕೊಟ್ಟು ಪರಿಶೀಲಿಸಿ ಕನ್ನಡ ಇತರ ಭಾಷೆಗಳಲ್ಲಿ ಟಿಪ್ಪಣಿ ಬರೆಯುವವರಿಗೆ ಕಡತಗಳನ್ನು ಸಿದ್ಧಪಡಿಸುವವರಿಗೆ ದಂಡ ವಿಧಿಸುವಂತಹ ಕೆಲಸ ಆಗಲೇ ಬೇಕಾಗಿದೆ.

ಈಗಲೂ ಸಹ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ ಮುಂತಾದಂತಹ ಇಲಾಖೆಗಳಲ್ಲಿ ತಾಂತ್ರಿಕತೆಯ ನೆಪವನ್ನು ಹೇಳಿಕೊಂಡು ಆಂಗ್ಲ ಭಾಷೆಯಲ್ಲಿ ಆದೇಶಗಳನ್ನ ಹೊರಡಿಸುವುದು, ಕಡತಗಳನ್ನು ಸಿದ್ಧಪಡಿಸುವುದು ನಡೆಯುತ್ತಲೇ ಇದೆ. ಇನ್ನು ಇಂತಹ ಬೆಳವಣಿಗೆಗಳು ಬೇರೆ ಬೇರೆ ಇಲಾಖೆಗಳಲ್ಲೂ ಸಹ ನಿರಂತರವಾಗಿ ಸಾಗಿದೆ. ಸಾರ್ವಜನಿಕರು ಮತ್ತು ಸಾಮಾನ್ಯ ಜನರಿಗೆ ಅರ್ಥವಾಗದ ರೀತಿಯಲ್ಲಿ ಆಂಗ್ಲ ಭಾಷೆಯಲ್ಲಿ ಆದೇಶಗಳನ್ನ ಹೊರಡಿಸಿ ಆಡಳಿತ ಯಂತ್ರ ಸಾಗುತ್ತಲೇ ಇದೆ.

ಶಾಸಕರು, ಲೋಕಸಭಾ, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಮಂತ್ರಿಗಳು ಮತ್ತು ಇತರೆ ಚುನಾಯಿತ ಪ್ರತಿನಿಧಿಗಳು ಕಡ್ಡಾಯವಾಗಿ ತಮ್ಮ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಮತ್ತು ಕನ್ನಡ ಭಾಷೆಯಲ್ಲಿಯೇ ಪತ್ರಗಳನ್ನು ನೀಡಬೇಕು. ಕೇಂದ್ರ ಸರ್ಕಾರಕ್ಕೆ ನೀಡುವ ಸಂದರ್ಭದಲ್ಲಿ ಮಾತ್ರ ಆಂಗ್ಲ ಭಾಷೆಯನ್ನು ಬಳಸಬೇಕು ಎಂಬ ಸೂಚನೆಯನ್ನು ಸಹ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೀಡಬೇಕಾಗಿದೆ.

-ಕೆ ಎಸ್ ನಾಗರಾಜ್, ಬೆಂಗಳೂರು

Leave a Reply