ಇಲ್ಲಗಳ ನಡುವೆಯೇ... ಬಡ ವಿದ್ಯಾರ್ಥಿಗಳ ಭರವಸೆಯ ಭವಿತವ್ಯಕ್ಕಾಗಿ ಟೊಂಕಕಟ್ಟಿ ನಿಂತೇ ಸಾಗಿರುವ ಹೀಗೊಂದು ಸರ್ಕಾರಿ ಕಾಲೇಜಿನ ಯಶೋಗಾಥೆ ..….
ಆತ್ಮೀಯರೆ, ಇಂದು ( 27-06-24 ) ಬೆಂಗಳೂರಿನ ಜಯನಗರದ ಏಳನೇ ಬ್ಲಾಕಿನ, ಎಡೆಯೂರು ಸರ್ಕಲ್ಲಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಇಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ನನಗೆ ಸಂತಸದ ಸಂಗತಿ. ಯಾಕೆಂದರೆ ಈ ಕಾಲೇಜು ಪ್ರಾರಂಭವಾದ ಮೊದಲ ದಿನದಿಂದಲೂ ಮೊದಲ ಖಾಯಂ ಆಧ್ಯಾಪಕನಾಗಿ ನೇಮಕಗೊಂಡು ಇಲ್ಲಿ ಕಾರ್ಯ ನಿರ್ವಹಿಸುವ ಅವಕಾಶ, ಜವಾಬ್ಧಾರಿ ನನ್ನದಾಗಿತ್ತು. ಇಲ್ಲಿ ಸ್ವಂತ ಕಟ್ಟಡವಿರಲಿಲ್ಲ. ಸರ್ಕಾರಿ ಪ್ರೌಡಶಾಲೆಯ ಒಂದೆರಡು ಕೊಠಡಿಗಳಲ್ಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಬೋರ್ಡ್ ನೇತು ಹಾಕಿ ಅಂದಿನ ಡಾ.ವಿದ್ಯಾನಾಯಕ್ ಅವರು ಮೊದಲು ಪ್ರಾಂಶುಪಾಲರಾಗಿ ಕಾಲೇಜು ಪ್ರಾರಂಭಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಖಾಸಗಿ ಹಾಗೂ ಸರ್ಕಾರದ ಅನುದಾನಿತ ಕಾಲೇಜುಗಳಿರುವ ಈ ಜಾಗದಲ್ಲಿ ಸರ್ಕಾರಿ ಪದವಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೆಳೆಯುವುದು ದುಸಾಧ್ಯದ ಸಂಗತಿಯಾಗಿತ್ತು. ದಿನವೂ ಕರಪತ್ರ ಹಿಡಿದು ಮನೆಮನೆಗೆ ಹಂಚಿ ಅಂಗಲಾಚಿ ಬೆರಳೆಣಿಕೆ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಇಲ್ಲಿ ತರಗತಿಗಳನ್ನು ಪ್ರಾರಂಭಿಸಿದೆವು.
ಡಾ.ವಿದ್ಯಾನಾಯಕ್ ಅವರ ಯಜಮಾನರು ಬೆಂಗಳೂರಿನಲ್ಲೆ ಐ.ಪಿ.ಎಸ್ ಆಫೀಸರ್ ಆಗಿದ್ದುದರಿಂದ, ಅಂದಿನ ಶಾಸಕರಾಗಿದ್ದ ಆರ್ ಅಶೋಕ್, ಕಾರ್ಪೊರೇಟರ್ ಆಗಿದ್ದ ಎನ್.ಆರ್.ರಮೇಶ್ ಅವರುಗಳ ಸಹಕಾರ ಬೆಂಬಲ, ಶಿಫಾರಸ್ಸುಗಳಿಂದ ನಮಗೆ ಪೀಠೋಪಕರಣ, ಮೇಜು, ಕುರ್ಚಿ, ಡೆಸ್ಕುಗಳೇನೋ ಇಡಲು ಜಾಗವಿಲ್ಲದಷ್ಟು ಸಿಕ್ಕವು. ಆದರೆ ಕೊಠಡಿಗಳ ಕೊರತೆಯಿಂದ ಅಂದು ಬಿ.ಎ, ಬಿಎಸ್ಸಿ, ಬಿ.ಕಾಂ, ಬಿ.ಬಿ.ಎಂ. ಮಾತ್ರ ಪ್ರಾರಂಭಿಸಿಲಾಯಿತು. ಒಂದೆರಡು ವರ್ಷ ಜಯನಗರದ ನ್ಯಾಷನಲ್ ಕಾಲೇಜಿನ ಪ್ರಯೋಗಾಲಯ ಬಳಸಿಯೇ ನಾವು ಬಿ.ಎಸ್ಸಿ ಪದವಿ ನಡೆಸಿದೆವು. ಕೊನೆಗೆ ವಿದ್ಯಾರ್ಥಿಗಳು ಸೇರದೆ ಬಿಎಸ್ಸಿ ಪದವಿ ಮುಚ್ಚಿ ಹೋಯಿತು. ವಿಜ್ಞಾನ ಬೋಧಿಸುವ ಅಷ್ಟೂ ಜನ ಅಧ್ಯಾಪಕರನ್ನು ಮಹಾರಾಣಿ ಕಾಲೇಜಿಗೆ ಸರ್ಕಾರ ವರ್ಗಾಯಿಸಿಯಿತು.

ಬಿ.ಎ, ಬಿ.ಕಾಂ, ಬಿ.ಬಿ.ಎಂ ಈ ಕೋರ್ಸುಗಳ ಎಲ್ಲಾ ವಿದ್ಯಾರ್ಥಿಗಳೂ ಸೇರಿ ಇನ್ನೂರರ ಗಡಿ ತಲುಪಿದ್ದೇನೋ ಆಯಿತು. ಆದರೆ ಸುಸಜ್ಜಿತ ಗ್ರಂಥಾಲಯ, ಕ್ರೀಡಾಂಗಣ, ಕುಡಿಯುವ ನೀರಿಗಾಗಿ ಒಂದ್ ಕೊಳವೆ ಬಾವಿ, ಶೌಚಾಲಯಗಳ ಕೊರತೆ ಸದಾ ಕಾಡುತಿದ್ದ ಸಮಸ್ಯೆಗಳಾಗಿದ್ದವು. ಸ್ವಂತ ಕಟ್ಟಡದ ನಿವೇಶನಕ್ಕಾಗಿ ಇಲ್ಲಿಯವರೆಗೆ ಅಂದರೆ ಕಾಲೇಜು ಪ್ರಾರಂಭವಾಗಿ ಇಂದಿಗೆ ಹದಿನೇಳು ವರ್ಷಗಳು ಪೂರೈಸಿದರೂ, ಅಂದಿನ ಪ್ರಾಂಶುಪಾಲರುಗಳಾದ ಡಾ.ವಿದ್ಯಾನಾಯಕ್, ಪ್ರೊ.ಸಿದ್ದೇಗೌಡರು, ಗಾಯಿತ್ರಿ ಮಂಡಿ, ಗೋವಿಂದಶೆಟ್ಟಿ, ಈಗಿನ ಡಾ.ವೆಂಕಟೇಶ್ ಹಾಗೂ ನನ್ನನ್ನೂ ಒಳಗೊಂಡ ಹಾಗೆ ಅವರುಗಳೆಲ್ಲ ಸ್ವಂತ ಕಟ್ಟಡದ ನಿವೇಶನದ ಮಂಜೂರಾತಿಗಾಗಿ ಸಚಿವರು ಮತ್ತು ಮಂತ್ರಿಗಳ ಮನೆಬಾಗಿಲಿಗೆ, ಅವರ ಕಛೇರಿಗಳಿಗೆ ಅಲೆದು, ಅಲೆದೂ ನಮ್ಮಗಳ ಚಪ್ಪಲಿಗಳು ಸವೆದವೇ ಹೊರತು ಈವರೆಗೂ ಈ ಕಾಲೇಜಿಗೆ ಒಂದು ಸ್ವಂತ ಕಟ್ಟಡದ ಭಾಗ್ಯ ಲಭ್ಯವಾಗಲಿಲ್ಲ ಎಂಬುದೇ ದುರಂತದ ಸಂಗತಿ . ಆದರೆ ಬಹಳ ಆಶಾದಾಯಕವಾದ ಸಂಗತಿಯೆಂದರೆ, ಇಲ್ಲಿನ ಪ್ರಾಧ್ಯಾಪಕರಾಗಲಿ, ಪ್ರಾಂಶುಪಾಲರಾಗಲಿ ಕೊರತೆಗಳ ಜಂಡಾ ಹಾರಿಸುತ್ತಾ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎಂದೂ ಕರ್ತವ್ಯ ಮರೆತು ಕೂತವರಲ್ಲ.
ಇಲ್ಲಿಗೆ ಕಲಿಯಲೆಂದು ಬರುವ ಮಕ್ಕಳೆಲ್ಲಾ ಅಕ್ಕಪಕ್ಕದ ಸ್ಲಮ್ ಗಳಿಂದ, ದೂರದ ಕನಕಪುರ, ಹಾರೋಹಳ್ಳಿ, ಹಾರಗದ್ದೆ, ಕಗ್ಗಲೀಪುರ, ಗಬ್ಬಾಡಿ, ಕೋಣನಕುಂಟೆ ಇಂತಹ ಹಳ್ಳಿಯ ದಲಿತರ, ಕೃಷಿಕಾರ್ಮಿಕರ ಹಾಗೂ ತಳ್ಳುಗಾಡಿಯಲ್ಲಿ ತರಕಾರಿ ಮಾರುವ, ಜಯನಗರದ ಉಳ್ಳವರ ಮನೆಗಳಲ್ಲಿ ಕಸ ಮುಸುರೆ ಬಳಿಯುವ ತಂದೆ ತಾಯಿಗಳ ಮಕ್ಕಳೇ ಆಗಿರುವುದರಿಂದ, ಪ್ರತಿಷ್ಟಿತ ಖಾಸಗಿ ಕಾಲೇಜುಗಳ ಮಟ್ಟದ ಸೌಕರ್ಯಗಳಲ್ಲಿ ಒಂದಂಶವೂ ಇಲ್ಲಿ ಇಲ್ಲದಿದ್ದರೂ ಅಲ್ಲಿನ ಶಿಕ್ಷಕರಿಗಿಂತ ಹತ್ತು ಪಟ್ಟು ಮಿಗಿಲಾದ ಅರಿತ, ನುರಿತ, ರಾಷ್ಟ್ಟಮಟ್ಟದ ಶಿಕ್ಷಕರ ಆಯ್ಕೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪ್ರಾಧ್ಯಾಪಕರನ್ನು ಸರ್ಕಾರ ಈ ಕಾಲೇಜುಗಳಿಗೆ ನೇಮಿಸಿದೆ.
ಲಕ್ಷಾಂತರ ಮೊತ್ತದ ಯುಜಿಸಿ ವೇತನ ಶ್ರೇಣಿ ಪಡೆಯುವ ಈ ಪ್ರಾಧ್ಯಾಪಕರು ಪಠ್ಯ ಬೋಧನೆಯ ಜೊತೆಗೆ, ಎನ್.ಎಸ್,ಎಸ್, ಎನ್ ಸಿ.ಸಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ, ರೆಡ್ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್ , ವಿದ್ಯಾರ್ಥಿಗಳ ಆಪ್ತಸಲಹೆ, ವಾರ್ಷಿಕ ಸಂಚಿಕೆ, ರಾಷ್ಟ್ರೀಯ ಹಬ್ಬಗಳು, ವಿದ್ಯಾರ್ಥಿ ವೇತನ, ಯ್ಯಾಂಟಿ ರ್ಯಾಗಿಂಗ್ ಸೆಲ್, ಕೆರಿಯರ್ ಗೈಡೆನ್ಸ್ ಸೆಲ್, ಪ್ಲೇಸ್ಮೆಂಟ್ ಸೆಲ್, ವಾರ್ಷಿಕ ಕ್ರೀಡಾ ಕೂಟಗಳು ಇವೆಲ್ಲವನ್ನೂ ಇಲ್ಲಿ ಕಲಿಯಲು ಬರುವ ಬಡ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಇಂದಿನ ಜಾಗತಿಕ ಸವಾಲುಗಳಿಗೆ ಅವರನ್ನು ಸಜ್ಜುಗೊಳಿಸುವ ದೊಡ್ಡ ಹೊಣೆ ಈ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಮೇಲಿರುವುದರಿಂದ ಹಾಗೂ ತಾವು ಖಾಸಗಿ ಕಾಲೇಜುಗಳ ಮೇಷ್ಟ್ರುಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಪಡೆಯುವ ಯು.ಜಿ.ಸಿ ವೇತನದ ಋಣಸಂದಾಯಕ್ಕಾಗಿಯೂ ದುಡಿಯಲೇಬೇಕಿದೆ.
ಹಾಗಂತ ಇಲ್ಲಿನ ವ್ಯವಸ್ಥೆಯಲ್ಲಿ ಎಲ್ಲರೂ ತಾವು ಪಡೆಯುವ ಈ ಮೊತ್ತದ ವೇತನಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಾರೆ ಮತ್ತು ಆತ್ಮಸಾಕ್ಷಿಗೆ ದ್ರೋಹ ಮಾಡದೆ ದುಡಿಯುತ್ತಾರೆ ಎಂದರೆ ಅದೂ ಉತ್ಪ್ರೇಕ್ಷೆಯ ಮಾತು ಅಥವಾ ಆತ್ಮ ವಂಚನೆಯ ಮಾತೇ ಆದೀತು. ಸರ್ಕಾರಿ ಕಾಲೇಜುಗಳಲ್ಲೂ ಎಲ್ಲಾ ಕಡೆ ಇದ್ದ ಹಾಗೆ ಶೇಕಡ ಹತ್ತೋ ಹದಿನೈದರಷ್ಟು ಜನ ಮೈಗಳ್ಳರು ಇದ್ದಾರಷ್ಟೆ, ಇಂತಹವರಿಂದ ಜೀವನವಿಡೀ ವಿದ್ಯಾರ್ಥಿಗಳ ಹಿತಕ್ಕೆಂದೇ ಪ್ರಾಮಾಣಿಕವಾಗಿ ಶ್ರಮಿಸುವ ಶಿಕ್ಷಕರನ್ನೂ ಇಂದು ಗುಮಾನಿಯಿಂದಲೇ ನೋಡುವಂತಾಗಿದೆ. ಇದು ಶಿಕ್ಷಣ ಕ್ಷೇತ್ರ ಮಾತ್ರ ಅಲ್ಲ. ಎಲ್ಲ ರಂಗಗಳಲ್ಲೂ ಇದ್ದದ್ದೆ. ಅದು ಬಿಡಿ.
ಇಂತಹ ಸಂಗತಿಗಳ ಆಚೆಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರುತ್ತಾರೆ ಎಂದರೆ ಅವರ ಈ ಸಾಧನೆಯ ಹಿಂದೆ ಇಲ್ಲಿನ ಅಧ್ಯಾಪಕರ ಪಾತ್ರ ಇದ್ದೇ ಇರುತ್ತದೆ.
ಜಯನಗರದ ಈ ಕಾಲೇಜಿನ ವಿದ್ಯಾರ್ಥಿಗಳೂ ಕ್ರೀಡೆಯಲ್ಲಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಕಾಲೇಜು ಶಿಕ್ಷಣ ಇಲಾಖೆಯ ಘನತೆಯನ್ನು ಮೆರೆದಿದ್ದಾರೆ. ಇಲ್ಲಿನ ಮಕ್ಕಳಿಗೆ ಈಗಿನ ಪ್ರಾಂಶುಪಾಲರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಉಚಿತ ಜನಪದ ಕಲೆಗಳನ್ನು ತರಬೇತಿ ಕೊಡಿಸಿ ಇಂದು ಇವರು ಅನೇಕ ರಾಜ್ಯ ರಾಷ್ಟ್ರ ಮಟ್ಟದ ಕಲಾಮೇಳಗಳಲ್ಲಿ ಕಲಾ ಪ್ರದರ್ಶನ ನೀಡಿ ಕಾಲೇಜಿನ ಕೀರ್ತಿಯನ್ನು ಮೊಳಗಿದ್ದಾರೆ.
ಸ್ಥಳೀಯ ಕಾರ್ಪೊರೇಟರ್ ಎನ್.ಆರ್.ರಮೇಶ್ ಅವರು ಈಗ ಮತ್ತೆ ಐದು ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಈ ವರ್ಷ ಬಿ.ಸಿ.ಎ ಪದವಿ ಪ್ರಾರಂಭವಾಗಿದೆ. ಹೊಸ ಕಂಪ್ಯೂಟರ್ ಲ್ಯಾಬ್ ಸಜ್ಜುಗೊಂಡಿದೆ. ಸರ್ಕಾರಿ ಪ್ರೌಢಶಾಲೆಯ ಶೌಚಾಲಯದ ಕಡೆಗೇ ಸದಾ ದೌಡಾಯಿಸಬೇಕಿದ್ದ ಈ ಕಾಲೇಜಿನ ಇನ್ನೂರಕ್ಕೂ ಮಿಕ್ಕ ಹೆಣ್ಣುಮಕ್ಕಳ ಸಂಕಷ್ಟವನ್ನು ವಿವರಿಸಿ ಪ್ರಾಂಶುಪಾಲ ಡಾ.ವೆಂಕಟೇಶ್ ಅವರು ಸಂಭವ್ ಪೌಂಡೇಶನ್ ವತಿಯಿಂದ ಹೆಣ್ಣುಮಕ್ಕಳಿಗಾಗಿ ನಾಲ್ಕು ಶೌಚಾಲಗಳನ್ನೂ ಈಗ ಕಟ್ಟಿಸಿದ್ದಾರೆ.
ಈಗಿನ ಪ್ರಾಂಶುಪಾಲರಾದ ಡಾ.ವೆಂಕಟೇಶ್ ಕಾಲೇಜಿನಲ್ಲಿರುವ ಎಲ್ಲಾ ಅಧ್ಯಾಪಕರಿಗಿಂತ ಸೇವಾ ಜೇಷ್ಠತೆಯಲ್ಲಿ ಹಿರಿಯರೇನಲ್ಲ. ಇಲ್ಲಿ ಮೂವತ್ತು ವರ್ಷಗಳಷ್ಟು ಇವರಿಗಿಂತ ಹಿರಿಯರಾದ ಪ್ರಾಧ್ಯಾಪಕರು ಇದ್ದರೂ ಇವರ ಶ್ರದ್ಧೆ, ಕಾರ್ಯವೈಖರಿ, ವಿದ್ಯಾರ್ಥಿ ಸ್ನೇಹಿ ಕಾಳಜಿ, ಕೆಲಸದ ಬಗೆಗಿನ ಬದ್ಧತೆ, ಬಡ ವಿದ್ಯಾರ್ಥಿಗಳಿಗೆ ಸದಾ ಏನಾದರೂ ಸಹಾಯ ಮಾಡಲೇಬೇಕೆಂಬ ಕಳಕಳಿ, ತನ್ನ ವಿದ್ಯಾರ್ಥಿಗಳ ಒಳಿತಿಗೆ ಯಾರ ನೆರವನ್ನಾದರೂ ಸರಿ ಕೇಳಿ ಪಡೆಯಬಲ್ಲೇ, ಪ್ರತಿಯೊಂದಕ್ಕೂ ಸರ್ಕಾರಕ್ಕೇ ಕೈಒಡ್ಡಿ ಕೂರಬಾರದು, ಸಾರ್ವಜನಿಕ ಸಹಭಾಗಿತ್ವ ಸರ್ಕಾರಿ ಶಿಕ್ಷಣ ಸಂಸ್ಥೆಯ ಏಳ್ಗೆಗೆ ಅತ್ಯಂತ ಅಗತ್ಯ ಎಂಬುದನ್ನು ಅರಿತಿರುವ ಕಿರಿಯ ಪ್ರಾಯದ ಈ ಇತಿಹಾಸ ಸಹಪ್ರಾಧ್ಯಾಪಕರಿಗೇ ಇಲ್ಲಿನ ಅಧ್ಯಾಪಕ ವೃಂದ ನೀವೇ ಪ್ರಾಂಶುಪಾಲರಾಗಿರಿ, ನಾವು ನಿಮ್ಮೊಂದಿಗಿರುತ್ತೇವೆ ಎಂದು ಸರ್ವಾನುಮತದಿಂದ ಇವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕೂರಿಸಿ ತಾವು ನಿರುಮ್ಮಳರಾಗಿದ್ದಾರೆ. ನೆಮ್ಮದಿಯಾಗಿದ್ದಾರೆ.
ಈ ತೀರ್ಮಾನದ ಫಲಿತ ಈಗ ಈ ಸ್ವಂತ ಕಟ್ಟಡ ಇಲ್ಲದೆಯೂ, ಯು.ಜಿ.ಸಿ ನ್ಯಾಕ್ ಮಾನ್ಯತೆಯ ಕೋಟ್ಯಂತರ ರೂಪಾಯಿಗಳ ಅನುದಾನ ಇಲ್ಲದೆಯೂ ನಾನು ನನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಸೌಲಭ್ಯ ಒದಗಿಸಬಲ್ಲೆ ಎಂಬುದರ ಕಡೆಗೆ ಡಾ.ವೆಂಕಟೇಶ್ ಮುಂದಡಿ ಇಟ್ಟಿದ್ದಾರೆ. ಹಾಗಾಗಿಯೇ ಇದೀಗ ಇವರು ಬನಶಂಕರಿ ಮಹಿಳಾ ಸಮಾಜದ ವತಿಯಿಂದ ಉಚಿತವಾಗಿ ಕೆಲವು ಕಂಪ್ಯೂಟರ್ ಗಳನ್ನು, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ತ್ಯಾಗರಾಜ ನಗರ ಇವರಿಂದ 50 ಡೆಸ್ಕುಗಳನ್ನು, ಅಂಧ ವಿದ್ಯಾರ್ಥಿಗಳಿಗಾಗಿ ಬ್ರೈಲ್ ಲಿಪಿಯ ಕಲಿಕಾ ಸಾಮಾಗ್ರಿಗಳನ್ನು, ಪ್ರತಿಷ್ಟಿತ ಕಂಪೆನಿಗಳ ಮೂಲಕ, ಔದ್ಯೋಗಿಕ ಮೇಳಗಳನ್ನು ನಡೆಸಿದ್ದಾರೆ. ಇಲ್ಲಿನ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗವನ್ನೂ ಗಿಟ್ಟಿಸಿದ್ದಾರೆ.
ಇದಲ್ಲದೆ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಮ್ಮ ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ತರಬೇತಿ, ಅಂತರರಾಷ್ಟ್ರೀಯ ಮಟ್ಟದ ಕಲಾಮೇಳ, ರಾಷ್ಟ್ರ ಮಟ್ಟದ ವಿಚಾರಸಂಕಿರಣ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಅಂಬೇಡ್ಕರ್ ವಿಚಾರಧಾರೆ ಕುರಿತು ವಿಚಾರ ಸಂಕಿರಣ, ಹದಿನೈದು ವರ್ಷಗಳಿಂದ ಪರಾವಲಂಬಿಗಳಾಗಿ ಅಕ್ಕಪಕ್ಕದ ಖಾಸಗಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳೊಂದಿಗೆ ತಗಲಾಕಿಕೊಂಡೇ ಪರೀಕ್ಷೆ ಬರೆಯಬೇಕಿದ್ದ ಇವರು ಇದೀಗ ಅವರ ಹಂಗಿನಿಂದ ಹೊರಬಂದು ತಾವು ಕಲಿಯುತ್ತಿರುವ ಕಟ್ಟಡದಲ್ಲೇ ವಿದ್ಯಾರ್ಥಿಗಳು, ನಿರಾಂತಕವಾಗಿ ಇಂದು ಪರೀಕ್ಷೆ ಬರೆಯುವಂತೆ ಸ್ವಂತ ಪರೀಕ್ಷಾ ಕೇಂದ್ರವನ್ನೂ ಮಂಜೂರು ಮಾಡಿಸಿಕೊಂಡಿದ್ದಾರೆ ಡಾ.ವೆಂಕಟೇಶ್ ಮತ್ತವರ ಸಹೋದ್ಯೋಗಿಗಳು.
ಶೈಕ್ಷಣಿಕ ಪ್ರಗತಿಯಲ್ಲೂ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಹಿಂದಿರದ ಈ ಕಾಲೇಜಿನ ವಿದ್ಯಾರ್ಥಿಗಳಿಗಳ ಬಗ್ಗೆ ಸರ್ಕಾರ ಶೀಘ್ರವಾಗಿ ಗಮನಹರಿಸಿ ಇಲ್ಲಿನ ನಾನೂರಕ್ಕೂ ಮಿಕ್ಕು ಕಲಿಕೆಯಲ್ಲಿ ತೊಡಗಿರುವ ಈ ಬಡ ಮಕ್ಕಳ ತಲೆಗೊಂದು ಸ್ವಂತ ಸೂರಿನ ವ್ಯವಸ್ಥೆಯ ಬಗ್ಗೆ ಸಂಕಲ್ಪ ಬಲದ ಜಾಗರಣೆಯೊಂದಿಗೆ ಯೋಚಿಸಲಿ ಎಂದು ನಾನೂ ಕೂಡಾ ಈ ಕಾಲೇಜಿನ ಒಬ್ಬ ಹಳೆಯ ಮೇಷ್ಟ್ರಾಗಿ ವಿಷಾದಪೂರ್ಣವಾಗಿ ಈ ಭಿನ್ನವತ್ತಳಿಕೆಯನ್ನು ಮಂಡಿಸುವೆ.
ಡಾ.ವೆಂಕಟೇಶ್ ಅವರಂತಹ ಸಂಕಲ್ಪಬಲದ ಪ್ರಾಂಶುಪಾಲರು ಮತ್ತು ಅವರೊಂದಿಗೆ ಒತ್ತಾಸೆಯಾಗಿ ನಿಂತಿರುವ ಅವರ ಎಲ್ಲಾ ಅಧ್ಯಾಪಕ ಮತ್ತು ಆಡಳಿತ ಸಿಬ್ಬಂದಿಯ ದಣಿವರಿಯದ ಶ್ರಮ, ಕಳಕಳಿ ಮತ್ತು ವಿದ್ಯಾರ್ಥಿಗಳ ಬಗೆಗಿನ ಕಳಕಳಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಅನೇಕ ಮಂದಿ ಅಧಿಕಾರಿಗಳ ಮುತುವರ್ಜಿಯಿಂದಲೇ ಇಷ್ಟರ ಮಟ್ಟಿಗಿನ ಹಸನಾದ ಶೈಕ್ಷಣಿಕ ಬದುಕು ಇಲ್ಲಿ ವಿದ್ಯಾರ್ಥಿಗಳಿಗೆ ಈ ಎಲ್ಲ ಇಲ್ಲದುದರ ನಡುವೆಯೇ ಪ್ರಾಪ್ತವಾಗಿರಲು ಸಾಧ್ಯವಾಗಿದೆ. ಅಷ್ಟರ ಮಟ್ಟಿಗೆ ಇವರುಗಳು ಪಡೆಯುತ್ತಿರುವ ಸಾರ್ವಜನಿಕರು ಸದಾ ಉಬ್ಬೇರಿಸಿಯೇ ನೋಡುವ, ಕೇಳುವ ಇವರ ಯು.ಜಿ.ಸಿ ವೇತನ ಶ್ರೇಣಿಗೂ ಸಾರ್ಥಕತೆ ಲಭ್ಯವಾಗಿದೆ. ಅಂತಲೇ ಭಾವಿಸಿ, ಓದುವ ಕೇಳುವ ನೋಡುವ ನಿಮ್ಮೊಡನೆ ಈ ಕಾಲೇಜಿಗೆ ಅಭಿವಂದಿಸುವೆ. ಇಲ್ಲಿಗೆ ಸಮಾಪ್ತಿಯಾದುದು ಸರ್ಕಾರಿ ಕಾಲೇಜು ವಾರ್ಷಿಕೋತ್ಸವ ವರದಿ ಪುರಾಣಂ ….
ಹಾ. ಅಂದ ಹಾಗೆ ಮರೆತಿದ್ದೆ. ಇಂದು ಈ ಕಾಲೇಜಿನ ವಿದ್ಯಾರ್ಥಿ ಜನಪದ ಕಲಾತಂಡ ನೀಡಿದ ಜನಪದ ನೃತ್ಯ ವೈಭವ ಹೃನ್ಮನಗಳನ್ನು ಸೂರೆಗೊಂಡಿತು. ಒಂದು ಜನಪದ ಕಲಾಮೇಳದಲ್ಲಿ ಭಾಗವಹಿಸಿದ ಅನುಭವವೇ ಆಯಿತು .
……ಅಭಿವಂದಯೇ…ಮಹಾಭಗವತಯೇ ..ಮಹಾವೇತನ ಯುಜಿಸಿಯಾಯನಮಃ
– ಪ್ರೊ.ಯಲ್ಲಪ್ಪ ಟಿ., ಪ್ರಾಧ್ಯಾಪಕರು




























