ಬೀಳ್ಕೊಡುವವರು ಇಲ್ಲದವರು

2 years ago

ಒಂದಷ್ಟು ಮನೆಯ ಮಕ್ಕಳು ದೇಶ ವಿದೇಶಗಳಿಗೆ ಅಧ್ಯಯನಕ್ಕಾಗಿ, ಉದ್ಯೋಗಕ್ಕಾಗಿ ಪ್ರಯಾಣಿಸುವ ಸಂದರ್ಭದಲ್ಲಿ ರೈಲು ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣದಲ್ಲಿ ಹೆತ್ತವರು, ಹಿತೈಷಿಗಳು, ಸ್ನೇಹಿತರು ಆನಂದಿಸಿ, ಅಭಿನಂದಿಸಿ, ಜೊತೆಗೆ ಒಂದಷ್ಟು ಎಚ್ಚರಿಕೆಯ ಮಾತುಗಳನ್ನ ಹೇಳಿ ಬೀಳ್ಕೊಡುವ ವೇಳೆಯಲ್ಲಿ ಹೆತ್ತವರ ಕಣ್ಣಿನಲ್ಲಿ ಒಂದಷ್ಟು ಕಣ್ಣೀರ ಹನಿಯೂ ತುಂಬಿರುತ್ತದೆ. ಹೀಗೆ, ಹೊರಡುವವರಿಗೆ ಗುರಿಯು ಇರುತ್ತದೆ, ದಾರಿಯು ಇರುತ್ತದೆ, ಒಂದಷ್ಟು ವ್ಯವಸ್ಥೆಗಳು ಇರುತ್ತದೆ ಬದುಕಿಗೆ ನಿಶ್ಚಿತತೆ ಇರುತ್ತದೆ.

ಹೊಟ್ಟೆ ತುಂಬಿಸಿಕೊಳ್ಳಲು, ಬದುಕು ಕಟ್ಟಿಕೊಳ್ಳಲು, ತಮ್ಮ ಮನೆಯವರಿಗೆ ಒಂದಷ್ಟು ಆರ್ಥಿಕ ನೆರವು ನೀಡಲು, ಗೊತ್ತುಗುರಿಯಿಲ್ಲದೆ ತಮ್ಮ ಊರುಗಳಿಂದ ಹೊರಟ ಸಹಸ್ರಾರು ಮಂದಿ, ನಗರಗಳಲ್ಲಿ ಹೋಟೆಲ್ ಗಳು, ಕ್ಲಬ್ ಗಳು, ಇಲ್ಲಿ ಕ್ಲೀನರ್ ಗಳಾಗಿ, ಸಪ್ಲೈಯರ್ ಗಳಾಗಿ, ಕಾವಲುಗಾರರಾಗಿ, ದುಡಿಯಲು ಬರುವವರನ್ನು ಯಾವ ನಿಲ್ದಾಣದಲ್ಲೂ ಯಾರು  ಬೀಳ್ಕೊಟ್ಟಿರುವುದಿಲ್ಲ. ಇವರು ನೆಲೆಸುವ ಊರಿನಲ್ಲಿ ಇವರ ಭಾಷೆ ಬಲ್ಲವರು ಯಾರು ಇರುವುದಿಲ್ಲ, ಆ ಊರಿನ ಜನರ ಭಾಷೆ ಇವರಿಗೆ ಬರುವುದಿಲ್ಲ. ಕಾಯಿಲೆ ಬಂದಾಗ ಸಂತೈಸಲು ಹೆತ್ತವಳು ಇರುವುದಿಲ್ಲ, ಕಷ್ಟ ಬಂದಾಗ ಬೆನ್ನು ಸವರಿ ಧೈರ್ಯ ಹೇಳಲು ಅಪ್ಪ ಇರುವುದಿಲ್ಲ, ದುಃಖವಾದಾಗ ಕಣ್ಣೀರು ಒರೆಸಲು ಜೊತೆಗಾರರು ಇರುವುದಿಲ್ಲ‌.

ಅಲ್ಲೊಂದು ಇಲ್ಲೊಂದು ತಪ್ಪುಗಳು ಆದಾಗ ಮಾಲೀಕರಿಂದ ಕೆಟ್ಟ ಪದಗಳ ಬೈಗುಳಗಳು, ಕೆಲವೊಮ್ಮೆ ಏಟು ನಿಶ್ಚಿತವಾಗಿರುತ್ತದೆ.

ಬದುಕಿಗಾಗಿ ಊರಿಂದ ಊರಿಗೆ, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ, ಅಲೆಮಾರಿಗಳಾಗಿ ಅಲೆದಾಡುತ್ತಾ ಬದುಕುವ ಸಹಸ್ರಾರು ಮಂದಿ ಪ್ರತಿ ಕ್ಷಣವೂ ಪ್ರತಿ ದಿನವೂ ಗುರಿ ಇಲ್ಲದೆ, ದಾರಿ ಇಲ್ಲದೆ, ಅನಿಶ್ಚಿತತೆಯ ಬದುಕಿನಲ್ಲಿ ಪ್ರಾಣಿಗಳಂತೆ ದುಡಿಯುತ್ತಾ ಬದುಕುತ್ತಲೇ ಇದ್ದಾರೆ, ಇಂಥವರ ಚಿಂತೆ ಯಾರಿಗೂ ಬೇಕಿಲ್ಲ.

–  ಕೆ ಎಸ್ ನಾಗರಾಜ್, ಬೆಂಗಳೂರು

Leave a Reply