ಸಿರಿವಂತರ ಸಾಲ, ಜಿಎಸ್ಟಿ ಮನ್ನಾ ಮತ್ತು ಬಡವರ ಪರ ಭಾಗ್ಯ: ಯಾರು ಯಾರು ಪರ?

1 year ago

ವೈಜ್ಞಾನಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಆದರೆ ಮಾತ್ರವೇ ಬಡತನದ ಅರಿವಾಗುವುದು

ಕಡು ಬಡವರು ಮತ್ತು ಕೂಲಿ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರಗಳು ಕೆಲವು ವಿಶೇಷ ನೆರವುಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅನೇಕರು ಬಿಟ್ಟಿ ಭಾಗ್ಯ ಎಂಬ ವ್ಯಂಗ್ಯದ ಮಾತುಗಳನ್ನಾಡುತ್ತಾ ಇದರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ.

ಬೆಳಿಗ್ಗೆ ಆರಂಭವಾಗಿ ರಾತ್ರಿಯ ತನಕ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಮತ್ತು ದುಬಾರಿ ಬಾರ್ ಗಳಲ್ಲಿ ಮೋಜು ಮಾಡುತ್ತಾ, ಆಟಗಳನ್ನಾಡುತ್ತಾ ಕಾಲ ಕಳೆಯುವ ಮಂದಿ ಭಾರತ ದೇಶದಲ್ಲಿ ಅದೆಷ್ಟು ಕೋಟಿ ಸಂಖ್ಯೆಯಲ್ಲಿದ್ದಾರೋ ಗೊತ್ತಿಲ್ಲ. ಇವರಲ್ಲಿ 25 ವಯಸ್ಸಿನಿಂದ ಹಿಡಿದು 70 ವಯಸ್ಸಿನವರು ಇರುತ್ತಾರೆ. ಇವರು ಯಾರು ಬಿಸಿಲಿನಲ್ಲಿ ಬೆವರು ಸುರಿಸುವುದಿಲ್ಲ, ಮಳೆಗಾಲದಲ್ಲಿ ಹನಿ ನೀರು ಮೈಮೇಲೆ ಸುರಿಸಿಕೊಳ್ಳುವುದಿಲ್ಲ, ಚಳಿಗಾಲದಲ್ಲಿ ಬೆಚ್ಚನೆಯ ಉಡುಪು ಧರಿಸುವುದ ಮರೆತೆ ಇರುವುದಿಲ್ಲ. ದುಬಾರಿ ವಾಹನಗಳಲ್ಲಿ ಇವರ ಓಡಾಟ, ಇವರ ಕುಟುಂಬದ ಸದಸ್ಯರೂ ಸಹ ಆನಂದದ ಸಾಗರದಲ್ಲಿ ತೇಲುತ್ತಿರುತ್ತಾರೆ. ಇಂತಹ ಜನರು ಬೆವರು ಸುರಿಸಿ ಬದುಕುವ ಜನರಿಗೆ ಒಂದಷ್ಟು ಆರ್ಥಿಕ ನೆರವು ಕೊಟ್ಟಾಗ ಹಗುರವಾದ ಮಾತುಗಳಿಂದ ಟೀಕಿಸುತ್ತ ಸಂಭ್ರಮಿಸುತ್ತಾರೆ.

ಬಹಳಷ್ಟು ಜನರು ಉಳ್ಳವರು ಬಯಸುವ ಬಯಕೆಗಳು ಏನೆಂದರೆ, ಇವರ ಹೊಲಗದ್ದೆಗಳಲ್ಲಿ ಬಡವರು ಸಾಯುವ ತನಕ ವಂಶಪರಂಪರ್ಯವಾಗಿ ಕೂಲಿ ಮಾಡಿಕೊಂಡೇ ಬಿದ್ದಿರಬೇಕು, ಇವರ ಮನೆಯ ಪಾತ್ರೆಗಳಿಗೆ ಕಲಾಯಿ ಹಾಕುತ್ತಾ ಒಂದಷ್ಟು ಮಂದಿ ಸಾಯುವ ತನಕ ಬದುಕುತ್ತಲೇ ಇರಬೇಕು, ಇವರ ಮನೆಗಳಲ್ಲಿ ಕೆಲಸ ಮಾಡಿಕೊಂಡು ಮನೆ ಸ್ವಚ್ಛ ಮಾಡಿಕೊಂಡು ಶೌಚಾಲಯಗಳ ಶುಚಿಗೊಳಿಸುತ್ತಾ ಪಾತ್ರೆಗಳ ತೊಳೆದುಕೊಂಡು ಜೊತೆಗೆ ಇವರ ಮಕ್ಕಳ ಮರಿ ಮಕ್ಕಳ ಕುಂಡಿ ತೊಳೆದುಕೊಂಡು ಬಿದ್ದಿರಬೇಕು, ಇವರು ಧರಿಸುವ ಚಪ್ಪಲಿಗಳಿಗೆ ಪಾಲಿಶ್ ಹಾಕುತ್ತಾ ಬದುಕಬೇಕು, ಉಳ್ಳವರು ಕೊಡುವ ಕೂಲಿ ಹಣವನ್ನು ದೇವರ ಪ್ರಸಾದವೆಂದು ಸ್ವೀಕರಿಸಿ ಇವರ ಮನೆಗಳಲ್ಲಿ ಅಳಿದುಳಿದ ತಂಗಳುಗಳನ್ನು ತಿಂದು ಬದುಕುತ್ತಾ ಇವರ ಅಡಿಯಲ್ಲಿ ಬದುಕಿ ಬದುಕನ್ನು ಸಂತೃಪ್ತಗೊಳಿಸಿಕೊಳ್ಳಬೇಕೆಂದು ಬಯಸುವ ಮನಸ್ಸುಗಳಿಗೆ ಕೊರತೆ ಏನಿಲ್ಲ. ಇಂತಹ ಮನಸ್ಥಿತಿಯ ಜನರಿಗೆ ಬಡವರಿಗೆ ಒಂದಷ್ಟು ಸೌಕರ್ಯಗಳನ್ನು ಕೊಟ್ಟರೆ, ಆರ್ಥಿಕತೆಯ ಭದ್ರತೆಯನ್ನು ಒದಗಿಸಿ ಕೊಟ್ಟರೆ ಎಲ್ಲೂ ಇಲ್ಲದ ಅಸಹನೆ ಕಾರಣ, ಇವರಿಗೆ ಬೇಕಾದಾಗ ಇವರ ಸೇವೆಯನ್ನ ಮಾಡಲು ಕೂಲಿ ಮಂದಿ ದೊರೆಯುವುದಿಲ್ಲ ಎನ್ನುವ ಒಂದೇ ಒಂದು ಆತಂಕ.

ಪ್ರತಿದಿನ 500 ರೂಪಾಯಿ ಸಂಪಾದನೆ ಮಾಡಲಾಗದ ಮಂದಿ ಅದೆಷ್ಟು, ಲಕ್ಷಗಳ ಸಂಖ್ಯೆಯಲ್ಲಿದ್ದಾರೆ ಎಂಬುದನ್ನ ಅರಿತುಕೊಳ್ಳಲಿ, ಹಂದಿಗೂಡಿನಂತಹ ಗುಡಿಸಲುಗಳಲ್ಲಿ ಇಂದಿಗೂ ವಾಸ ಮಾಡುತ್ತಿರುವ ಲಕ್ಷಾಂತರ ಕುಟುಂಬದ ಕಷ್ಟಗಳು ತಿಳಿದಿದೆಯೇ, ವಯಸ್ಸಾದರೂ ಶ್ರಮದ ಕೆಲಸವನ್ನ ಮಾಡಲಬೇಕಾದ ಅನಿವಾರ್ಯತೆಯಿಂದ ವಿಶ್ರಾಂತಿ ಇಲ್ಲದೆ ಅನೇಕ ರೋಗಗಳ ನೋವಿನ ನಡುವೆಯೂ ಬದುಕುತ್ತಿರುವ ಕೂಲಿ ಕಾರ್ಮಿಕರ ಸ್ಥಿತಿಗತಿಗಳ ಪರಿಚಯವಿದೆಯೇ, ಊಟಕ್ಕೆ, ವಸ್ತ್ರಕ್ಕೆ, ಔಷಧಿಗೆ, ಮಕ್ಕಳ ಶಾಲೆಯ ಶುಲ್ಕಕ್ಕೆ ಪ್ರತಿದಿನವೂ ಪರಿತಪಿಸುವ ಕುಟುಂಬಗಳ ಸಮಸ್ಯೆಗಳು ಎಂದಾದರೂ ಕೇಳಿದ್ದೀರಾ?

ಪ್ರತಿ ತಿಂಗಳು ನಿಶ್ಚಿತ ಸಂಬಳ ಪಡೆಯುವವರು, ನಿಶ್ಚಿತವಾದ ಆದಾಯವನ್ನ ಹೊಂದಿರುವವರು, ಸಾಕಷ್ಟು ಪ್ರಮಾಣದಲ್ಲಿ ಪಿಂಚಣಿಯನ್ನ ಪಡೆಯುವವರು, ಪಿತ್ರಾರ್ಜಿತ ಆಸ್ತಿಗಳಿಂದ ಹಣವನ್ನು ಗಳಿಸುವವರು, ಸಾಕಷ್ಟು ಸೌಲಭ್ಯ ಸೌಕರ್ಯಗಳನ್ನು ಪಡೆದುಕೊಳ್ಳುವ ಆರ್ಥಿಕತೆಯ ಸಾಮರ್ಥ್ಯ ಉಳ್ಳವರು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಡವರ ಬದುಕಿನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರ ಸುತ್ತಲೂ ಇರುವ ಹೊಟ್ಟೆ ತುಂಬಿದ ಮಂದಿ ಚಪ್ಪಾಳೆ ತಟ್ಟಿ ಇವರನ್ನ ಪ್ರೋತ್ಸಾಹಿಸುತ್ತಾರೆ.

ಶ್ರಮಿಕರು ಸುರಿಸುವ ಬೆವರಿಗೆ ಬೆಲೆಯನ್ನ ಕಟ್ಟಲಾಗದು, ಅವರ ಬೆವರಿಗೆ ಸರ್ಕಾರಗಳು ಕೊಡುವ ಕೂಲಿಯು ಏನೇನು ಅಲ್ಲ, ಸದಾ ಸಂಕಷ್ಟದಲ್ಲಿ ಕಣ್ಣೀರಿಡುವ ಕುಟುಂಬಗಳಿಗೆ ಒಂದಷ್ಟು ನೆರವನ್ನ ನೀಡಿ ಸ್ವಲ್ಪ ಮಟ್ಟಿಗಾದರು ನೆಮ್ಮದಿಯ ಕ್ಷಣಗಳನ್ನು ದಿನದಲ್ಲಿ ಕಳೆಯಲೆಂದು ಸರ್ಕಾರಗಳು ಸೌಕರ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ.

ಈ ದೇಶದಲ್ಲಿ ಪ್ರತಿಯೊಬ್ಬ ನಾಗರೀಕರ ಆರ್ಥಿಕ ಸ್ಥಿತಿಗತಿ ಸಾಮಾಜಿಕ ಸ್ಥಿತಿಗತಿ ಇವುಗಳ ಬಗ್ಗೆ ವೈಜ್ಞಾನಿಕವಾದಂತಹ ಸಮೀಕ್ಷೆಯನ್ನು ನಡೆಸಿ ಆನಂತರ ಬಡವರಿಗೆ ಒಂದಷ್ಟು ವಿಶೇಷ ನೆರವುಗಳನ್ನ ನೀಡಬೇಕು ಬೇಡವೋ ಎಂಬುದನ್ನು ನಿರ್ಧರಿಸಬೇಕಾಗಿದೆ.

ಬಡವರಿಗೆ ವಿಶೇಷ ನೆರವು ನೀಡಿದರೆ ಅವರು ಸೋಮಾರಿಗಳಾಗುತ್ತಾರೆ, ಖಜಾನೆ ಖಾಲಿಯಾಗುತ್ತದೆ, ಪ್ರಗತಿಗೆ ಮಾರಕವಾಗುತ್ತದೆ, ಎಂದು ಹೇಳುವ ಅದೆಷ್ಟು ಮಂದಿ ಬರಗಾಲ ಬಂದಿದೆ ಈ ವರ್ಷ ನಮ್ಮ ಯಾವ ಸೌಕರ್ಯ ಸೌಲಭ್ಯಗಳು ಹೆಚ್ಚಿಸುವುದು ಬೇಡ ಎಂದು ಎಂದಾದರೂ ಹೇಳಿದ್ದೀರಾ, ಬರಗಾಲವಿರಲಿ, ಪ್ರವಾಹಗಳು ಬರಲಿ, ಮಾರಣಾಂತಿಕ ರೋಗಗಳು ಬಂದು ಬದುಕು ಹೈರಾಣವಾಗಲಿ, ಕೆಲವೊಂದುಷ್ಟು ವರ್ಗದ ಮಂದಿ ಎಲ್ಲ ಸೌಕರ್ಯ ಸೌಲಭ್ಯಗಳಲ್ಲಿ ಸಾಸಿವೆ ಕಾಳಿನಷ್ಟು ನಿರಾಕರಿಸುವುದಿಲ್ಲ ಬಿಟ್ಟುಕೊಡುವುದಿಲ್ಲ.

ಅಂದೇ ದುಡಿದು ಅಂದೆ ಬದುಕುವ ಕೋಟಿ ಕೋಟಿ ಮಂದಿಗೆ ಪ್ರಕೃತಿಯ ವಿಕೋಪಗಳು, ಸಾಮಾಜಿಕ ಬದಲಾವಣೆಗಳು ಸಂಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಅವರ ಆರ್ಥಿಕ ಪರಿಸ್ಥಿತಿಗಳು ಅಲ್ಲೋಲಕಲ್ಲೋಲವಾಗುತ್ತದೆ.

ಸರ್ಕಾರದ ಖಜಾನೆಯನ್ನು ಕೇವಲ ಆದಾಯ ತೆರಿಗೆ ಕಟ್ಟುವ ಮಂದಿಯಿಂದ ಮಾತ್ರ ತುಂಬಿಸಿಕೊಳ್ಳುತ್ತಿಲ್ಲ. ಜಿಎಸ್‌ಟಿ ಎಂಬ ತೆರಿಗೆಯ ರೂಪದಲ್ಲೂ ಕಡುಬಡವರಿಂದ ಹಿಡಿದು ಪ್ರತಿಯೊಬ್ಬರು ದೇಶದ ಖಜಾನೆಗೆ ತಮ್ಮ ಪಾಲುಗಳನ್ನು ನೀಡುತ್ತಿದ್ದಾರೆ. ಆದಾಯ ತೆರಿಗೆಯ ಪ್ರಮಾಣಕ್ಕಿಂತ ಜಿ ಎಸ್ ಟಿ ಮೊತ್ತದ ಪ್ರಮಾಣ ಹೆಚ್ಚು ಇರುತ್ತದೆ. ಹೀಗಾಗಿ ದೇಶದ ಖಜಾನೆಯನ್ನ ತುಂಬಿಸುವುದರಲ್ಲಿ ಹರಕಲು ಬಟ್ಟೆಯವರ ಪಾತ್ರವೂ ಇದೆ.

ಸಲಹೆಗಳನ್ನ ನೀಡುವ ಜನರು ಒಂದೆರಡು ದಿನವಾದರೂ ಹಸಿವಿನಿಂದ ಇದ್ದು ಹಸಿವಿನ ಬಾಧೆ ಏನೆಂದು ಅರಿಯಿರಿ, ಗುಡಿಸಲುಗಳಲ್ಲಿ ವಾಸ ಮಾಡಿ ಅಲ್ಲಿನ ಸಂಕಷ್ಟ ಅರಿತುಕೊಳ್ಳಿ, ಸುಡುವ ಬಿಸಿಲಿನಲ್ಲಿ ಬಯಲಿನಲ್ಲಿ ಬೆನ್ನ ಮೇಲೆ ಒಂದಷ್ಟು ಭಾರವನ್ನ ಹೊತ್ತು ಬೆವರು ಹರಿಸಿ, ಹೊಲಗದ್ದೆಗಳಲ್ಲಿ ಕೆಸರಿನಲ್ಲಿ ನಿಂತು ಒಂದಷ್ಟು ಗಂಟೆಗಳ ಕಾಲ ದುಡಿಮೆಯನ್ನು ಮಾಡಿ, ದೇಹವನ್ನ ದಂಡಿಸುವ ಶ್ರಮದ ಕೆಲಸಗಳನ್ನು ಕೆಲವು ತಾಸುಗಳ ಕಾಲ ಮಾಡಿ ಆಗ ಆಯಾಸದ ಪರಿಚಯ ಮಾಡಿಕೊಳ್ಳಿ. ನಿಮ್ಮನ್ನು ನೀವು ಪರೀಕ್ಷೆಗೆ ಗುರಿಪಡಿಸಿಕೊಂಡು ನಂತರ ಇವರುಗಳಿಗೆ ಏನಾದರೂ ಕೊಡಬೇಕು ಅಥವಾ ಬೇಡವೋ ಎನ್ನುವುದನ್ನು ತಿಳಿಸಿ.

ದೇಶದ ಕೆಲವೇ ಕೆಲವು ಸಾವಿರ ಮಂದಿಯ ಉದ್ಯಮಿಪತಿಗಳ ಸಾಲವನ್ನು ಲಕ್ಷಾಂತರ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಮನ್ನಾ ಮಾಡಿದಾಗ ದೇಶದ ಆರ್ಥಿಕ ಪರಿಸ್ಥಿತಿಗೆ ಅಪಾಯವಾಗುವುದಿಲ್ಲ. ಅದೇ ರೀತಿಯಲ್ಲಿ ಕಾರ್ಪೊರೇಟ್ ಉದ್ಯಮಿಗಳ ತೆರಿಗೆಯಲ್ಲಿ ರಿಯಾಯಿತಿಯನ್ನು ನೀಡಿ ನಾಲ್ಕರಿಂದ ಐದು ಲಕ್ಷ ಕೋಟಿ ರೂಪಾಯಿಗಳ ಮೊತ್ತವನ್ನು ಕಡಿಮೆ ಮಾಡಿದಾಗಲೂ ದೇಶದ ಆರ್ಥಿಕ ಸ್ಥಿತಿಗೆ ಅಪಾಯವಾಗುವುದಿಲ್ಲ. ಆದರೆ ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡಿದರೆ ಅಥವಾ ಒಂದು ಸಾವಿರ ರೂಪಾಯಿ ನೀಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಹಾದಿ ತಪ್ಪುತ್ತದೆ ಎನ್ನುವ ಇವರ ಮನಸ್ಥಿತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply