ಮೆಟ್ಟಡಿಯ ಬಟ್ಟೆ ಎಂದರೆ ನಾವು ಹೆಜ್ಜೆಯೂರಿ ನಡೆಯುವ ಪಾದದ ಕೆಳಗಿನ ದಾರಿ

1 year ago

ನಾವು ನಡೆಯುವ ದಾರಿಯನ್ನು ಅವಲೋಕಿಸಿಕೊಳ್ಳಲು, “ಮೆಟ್ಟಡಿಯ ಬಟ್ಟೆಯ ನೋಡಾ” ಎಂದು ವಚನಕಾರ ಮಾದಾರ ಚೆನ್ನಯ್ಯ ಹೇಳಿದ್ದಾನೆ. ಮೆಟ್ಟಡಿಯ ಬಟ್ಟೆ ಎಂದರೆ ನಾವು ಹೆಜ್ಜೆಯೂರಿ ನಡೆಯುವ ಪಾದದ ಕೆಳಗಿನ ದಾರಿ.

ಇದನ್ನೇ ಪಾಶ್ಚಿಮಾತ್ಯ ಆಂಗ್ಲ ನಾಟಕಕಾರ ಕವಿ ಶೇಕ್ಸ್‌ಪಿಯರ್‌ To thine own self be true ಎಂದು ಹೇಳಿದ್ದಾನೆ. ಇಲ್ಲಿ self ಎಂಬುದನ್ನು soul ಎಂದು ಗ್ರಹಿಸಬೇಕಾಗುತ್ತದೆ. ಹೀಗೆಂದರೆ, ನಿನ್ನಾತ್ಮಕ್ಕೆ ನೀನು ಸತ್ಯನಿಷ್ಠವಾಗಿರು. The Merchant of Venice ನಾಟಕದಲ್ಲಿ ಬರುವ ಶೈಲಾಕ್ ಎಂಬ ವಣಿಕನಿಗೆ ಚಮ್ಮಾರನೊಬ್ಬ ಮೆಟ್ಟಿನ ಅಟ್ಟೆಯನ್ನು ಸರಿಪಡಿಸಿ ಕೊಡುತ್ತಾ ‘See thy sole’ (soul) ‘ನಿನ್ನ ಮೆಟ್ಟಿನ ಅಟ್ಟೆಯನ್ನು ನೋಡು’ ಎನ್ನುತ್ತಾನೆ.

ಶೇಕ್ಸ್‌ಪಿಯರ್‌ ನ ನಾಟಕದ ಚಮ್ಮಾರನ ಈ ಮಾತು ನನಗೆ ಮಾದಾರ ಚೆನ್ನಯ್ಯನ ವಚನದ ‘ಮೆಟ್ಟಡಿಯ ಬಟ್ಟೆಯ ನೋಡ… ಅಡಿಗೂಂಟಕ್ಕಡಿಯಾಗಬೇಡ’ ಎಂಬ ವಾಕ್ಯದಂತೆಯೇ ತಟ್ಟಿತು.

ಗಾಂಧೀಜಿಯವರು ಇದನ್ನು Be true to the highest within you ಎಂದಿದ್ದಾರೆ. ಅಂದರೆ, ನಿನ್ನಂತರಂಗಕ್ಕೆ ನೀನು ತೀರಾ ಹೆಚ್ಚು ಸತ್ಯನಿಷ್ಠವಾಗಿರು ಎಂದರ್ಥ.

ನಾವು ನಡೆಯುವ ದಾರಿಯ ಅವಲೋಕನದ ಅಗತ್ಯವನ್ನು ಡಾ.ಅಂಬೇಡ್ಕರ್ ಅವರು ಮತ್ತೊಂದು ರೀತಿಯಲ್ಲಿ He who does not know history can not create history ಎಂದು ಹೇಳಿದ್ದಾರೆ. ಚರಿತ್ರೆಯ ಅರಿವಿಲ್ಲದವನು ಚರಿತ್ರೆಯನ್ನು ನಿರ್ಮಿಸಲಾರ.

ಬಟ್ಟೆಗೆಡಬೇಡ ಹೊಲಬುದಪ್ಪಬೇಡ

“ಬಟ್ಟೆಗೆಡಬೇಡ ಹೊಲಬುದಪ್ಪಬೇಡ” ಎಂಬುವ ನುಡಿ ಪ್ರಯೋಗವನ್ನು ಗಮನಿಸಿದಾಗ ‘ಬಟ್ಟೆ’ ಮತ್ತು ‘ಹೊಲಬು’ ಎಂಬ ಎರಡು ಶಬ್ದಗಳು ನಮ್ಮ ಗಮನ ಸೆಳೆಯುತ್ತವೆ. ಕನ್ನಡ ಶಬ್ದಕೋಶದಲ್ಲಿ ಬಟ್ಟೆ ಎಂದರೆ ದಾರಿ, ಮಾರ್ಗ, ವಸ್ತ್ರ, ಹಾದಿ, ಅರಿವೆ ಮುಂತಾದ ಅರ್ಥಗಳನ್ನು ನೀಡಲಾಗಿದೆ. ಬಟ್ಟೆಗೆಡುವುದು ಎಂದರೆ ದಾರಿ ತಪ್ಪುವುದು ಎಂಬುದು ಸಾಮಾನ್ಯವಾದ ವ್ಯಂಜಿತಾರ್ಥ. ಬಟ್ಟೆಗೆಡಬೇಡ ಎಂದರೆ ದಾರಿತಪ್ಪಬೇಡ ಎಂದರ್ಥ. ಬಟ್ಟೆ ಎಂಬುದನ್ನು ವಸ್ತ್ರ ಅಥವಾ ಅರಿವೆ ಎಂದು ಪರಿಗಣಿಸಿದಾಗ, ನಾವು ಧರಿಸಿರುವ ಅರಿವೆಯನ್ನು ನೀಗಿಕೊಳ್ಳಬಾರದು, ಕಳಚಬಾರದು ಅಥವಾ ಕೆಡಿಸಿಕೊಳ್ಳಬಾರದು ಎಂದರ್ಥ. ಇಲ್ಲೀಗ ಬಟ್ಟೆಗೆಡಬೇಡ ಎಂದರೆ ಧರಿಸಿದ ವಸ್ತ್ರವನ್ನು ಕಳಚಬಾರದು, ಕೆಡಿಸಿಕೊಳ್ಳಬಾರದು, ನೀಗಿಕೊಳ್ಳಬಾರದು, ಕಳೆದುಕೊಳ್ಳಬಾರದು ಎಂಬುದಾಗಿ ಅರ್ಥೈಸಿಕೊಳ್ಳಬಹುದು.

ಅಂತೆಯೇ ಹೊಲಬು ಎಂಬ ಶಬ್ದಕ್ಕೆ ಕನ್ನಡ ಶಬ್ದಕೋಶದಲ್ಲಿ ರೀತಿ, ನೀತಿ, ಕ್ರಮ, ಪದ್ಧತಿ, ಸಂಪ್ರದಾಯ ಮುಂತಾದ ಅರ್ಥಗಳನ್ನು ನೀಡಲಾಗಿದೆ. ಜನಸಾಮಾನ್ಯರ ಆದಾಗ್ಯೂ ರೈತಾಪಿಗಳ ಆಡು ಭಾಷೆಯಲ್ಲಿ ಹೊಲಬು ಎಂದರೆ ಸುತ್ತಮುತ್ತಲ ಎಲ್ಲೆಕಟ್ಟು ಅಥವಾ ಸೀಮೆ ಎಂದರ್ಥ. ‘ಇಂತಹ ಮನುಷ್ಯ ನಮ್ಮ ಸುತ್ತಲ ಹೊಲಬಿನಲ್ಲಿಯೇ ಇಲ್ಲ’, ‘ಈ ಜಾತಿಯ ಮರ ನಮ್ಮ ಹೊಲಬಿನಲ್ಲೆಲ್ಲೂ ಕಾಣಿಸುವುದಿಲ್ಲ’, ‘ಇವನು ನಮ್ಮ ಹೊಲಬಿಗ’ ಇಂತಹ ಮಾತುಗಳನ್ನು ನೀವು ಕೇಳಿರುತ್ತೀರಿ. ಹೊಲಬಿಗನಾಗುವುದು ಎಂದರೆ ತಳವಂದಿಗನಾಗುವುದು ಎಂದರ್ಥ. ಹೊಲ ಎಂದರೆ ನೆಲ. ನೆಲದ ನೆಲೆ ಹೊಂದಿದವನು ಹೊಲಬಿಗನಾಗುತ್ತಾನೆ. ಅವನು ಆ ಸುತ್ತಮುತ್ತಲ ಎಲ್ಲೆಕಟ್ಟು ಅಥವಾ ಸೀಮೆಗೆ ಸೇರಿದವನಾಗುತ್ತಾನೆ. ‘ಹೊಲಬುದಪ್ಪಬೇಡ’ ಎಂದರೆ ರೀತಿನೀತಿ ತಪ್ಪಬೇಡ, ಕ್ರಮ ತಪ್ಪಬೇಡ, ಪದ್ಧತಿ ತಪ್ಪಬೇಡ, ಸುತ್ತಲ ಎಲ್ಲೆಕಟ್ಟು ಅಥವಾ ಸೀಮೆಯನ್ನು ಮೀರಿ ಹೋಗಬೇಡ ಎಂದರ್ಥ. ಇದು ವ್ಯಕ್ತಿಯು ಅಳವಡಿಸಿಕೊಳ್ಳಬೇಕಾದ ಮತ್ತು ನಡೆಯಬೇಕಾದ ರೀತ್ಯಾಫಥ ಹಾಗೂ ದಿಕ್ಕುದಿಸೆಗಳನ್ನು ಸೂಚಿಸುತ್ತದೆ. ಜನಸಾಮಾನ್ಯರು ‘ನಡತೆಗೆಡಬೇಡ – ಮರ್ಯಾದೆಗೆಡಬೇಡ- ರೀತಿ ರಿವಾಜುಗಳನ್ನು ತಪ್ಪಬೇಡ- ನೀತಿ ನಿಜಾಯಿತಿಗಳನ್ನು ತಪ್ಪಬೇಡ – ದಾರಿ ತಪ್ಪಿಸಿಕೊಂಡು ಗಾವಿಲನಾಗಬೇಡ’ ಎಂಬ ಎಚ್ಚರಿಕೆಯನ್ನು ‘ಹೊಲಬುದಪ್ಪಬೇಡ’ ಎಂಬ ನುಡಿ ಪ್ರಯೋಗದಿಂದ ಸೂಚಿಸುತ್ತಾರೆ. ಇದೊಂದು ಹಿತವಚನವೂ ಆಗಿದೆ.

ಮೇಲೆ ವಿವರಿಸಲಾದ ಇಷ್ಟೂ ಅರ್ಥಗಳು ಲೌಕಿಕರ ಬದುಕಿನ ಪಾಡಿನಲ್ಲಿ ವ್ಯಾಪಿಸಿಕೊಂಡಿರುವುದು ಢಾಳಾಗಿ ಕಂಡುಬರುತ್ತದೆ. ಶರಣರು ಮತ್ತು ತತ್ವಪದಕಾರರ ಅಧ್ಯಾತ್ಮಿಕ ಪರಿಭಾಷೆಯಲ್ಲಿ ‘ಬಟ್ಟೆಗೆಡಬೇಡ ಹೊಲಬುದಪ್ಪಬೇಡ’ ಎಂಬ ನುಡಿ ಪ್ರಯೋಗಕ್ಕೆ ವಿಶೇಷವಾದ ಮತ್ತು ವೈವಿಧ್ಯಮಯವಾದ ಅರ್ಥಗಳಿವೆ. ವಚನಕಾರ ಮಾದಾರ ಚೆನ್ನಯ್ಯನ “ಮೆಟ್ಟಡಿಯ ಬಟ್ಟೆಯ ನೋಡಾ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ” ಎಂಬ ವಚನ ವಾಕ್ಯದಲ್ಲಿ, ಚೆನ್ನಯ್ಯನು ಮೆಟ್ಟಡಿಯ ಬಟ್ಟೆ ಎಂದು ಹೇಳಿದ್ದಾನೆ. ಮೆಟ್ಟು ಅಂದರೆ ಪಾದರಕ್ಷೆ, ಅಡಿ ಎಂದರೆ ತಳ ಅಥವಾ ಕೆಳಗೆ. ಮೆಟ್ಟಿನ ತಳದ ಅಥವಾ ಮೆಟ್ಟಿನ ಕೆಳಗಿರುವ ದಾರಿಯನ್ನು ಚೆನ್ನಯ್ಯ ಸೂಚಿಸುತ್ತಾನೆ. ಮೆಟ್ಟಿದ ಬಟ್ಟೆ ಎಂದರೆ ತುಳಿದ ದಾರಿ ಅಥವಾ ನಡೆದ ದಾರಿ. ‘ಮೆಟ್ಟಡಿಯ ಬಟ್ಟೆಯ ನೋಡಾ’ ಎಂದರೆ ನಾವು ಈಗಾಗಲೇ ನಡೆದ ಮತ್ತು ಮುಂದೆ ನಡೆಯಲಿರುವ ದಾರಿಯನ್ನೊಮ್ಮೆ ನೋಡಬೇಕು. ನಾವು ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸಿಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕು. ಆಗಲೇ ನಮ್ಮ ದಾರಿಯ ನಡಿಗೆ ಮತ್ತು ಊರುವ ಹೆಜ್ಜೆ ದೃಢವಾಗಲು ಸಾಧ್ಯ. ಇದನ್ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, “Who does not know history, can not make history’ ಎಂದಿದ್ದಾರೆ.

‘ಮೆಟ್ಟಡಿಯ ಬಟ್ಟೆ’ ಎಂದಾಗ ಮೆಟ್ಟಿನ ತಳದಲ್ಲಿರುವ ದಾರಿ. ನಾವು ದಾರಿ ನಡೆಯುವಾಗ ಮೆಟ್ಟು ಧರಿಸಿಕೊಂಡು ಮೆಟ್ಟಿನ ಮೇಲೆ ಭಾರಹಾಕಿ ನಿಂತಿರುತ್ತೇವೆ. ಮೆಟ್ಟು ನಮ್ಮ ಭಾರವನ್ನು ಹೊತ್ತಿರುತ್ತದೆ. ಮೆಟ್ಟಿನ ಭಾರವನ್ನು ನಾವು ಹೊತ್ತು ಸಾಗುತ್ತಿದ್ದೇವೆಂದು ಭಾವಿಸುವಂತಿಲ್ಲ. ಯಾಕೆಂದರೆ ಮೆಟ್ಟು ನಮಗೆ ಭಾರವಾಗದೆ ನಮ್ಮ ದಾರಿಯ ನಡಿಗೆಯನ್ನು ಹಗುರಾಗಿಸುತ್ತದೆ. ಮೆಟ್ಟಿನ ಭಾರವನ್ನು ಮತ್ತು ಮೆಟ್ಟನ್ನು ಧರಿಸಿಕೊಂಡಿರುವ ನಮ್ಮ ಭಾರವನ್ನು ಮೆಟ್ಟಿನ ತಳದಲ್ಲಿರುವ ದಾರಿ(ಬಟ್ಟೆ)ಯು ಹೊತ್ತುಕೊಂಡಿರುತ್ತದೆ. ಇದು ನೆಲದ ಮೇಲಿರುವ ದಾರಿ. ನಾವು ಈ ನೆಲಕ್ಕೆ ಭಾರವಾಗದಂತೆ ಬದುಕಬೇಕು. ‘ಬಟ್ಟೆಗೆಡಬೇಡ’ ಎಂಬ ನುಡಿಗಟ್ಟು ನಾವು ನೆಲಕ್ಕೆ ಭಾರವಾಗದಂತೆ ಬದುಕಬೇಕೆಂಬ ಅರ್ಥವನ್ನು ವ್ಯಂಜಿಸುತ್ತದೆ. ಹಾಗಾಗಿ ಇದೊಂದು ಚಾರಿತ್ರ್ಯಸಹಿತವಾದ ರೀತ್ಯಾಫಥವಾಗಿರುತ್ತದೆ.

ದೇಸಿ ಗುರುಮಾರ್ಗಗಳಲ್ಲಿ ಅನೇಕ ಕವಲುಗಳಿವೆ. ಅಚಲ, ಅವಧೂತ, ಆರೂಢ, ಕಾಪಾಲಿಕ, ನಾಥ ಮುಂತಾದ ಧಾರೆಗಳಿವೆ. ಅವುಗಳದ್ದೇ ಆದ ಹೊಲಬು ಇಲ್ಲಿದೆ. ಆಯಾ ಧಾರೆಗಳು ಲಾಗಾಯ್ತಿನಿಂದ ಅನುಸರಿಸಿಕೊಂಡು ಬಂದಿರುವ ರೀತಿನೀತಿ, ಕ್ರಮ, ಎಲ್ಲೆಕಟ್ಟು ಅಥವಾ ಸೀಮೆಯನ್ನು ಚಿತ್ತಭ್ರಾಂತಿಯಿಂದ ಮೀರಬಾರದೆಂಬ ಎಚ್ಚರವನ್ನು ‘ಹೊಲಬುದಪ್ಪಬೇಡ’ ಎಂಬ ನುಡಿ ಪ್ರಯೋಗದಿಂದ ಶರಣರು ಮತ್ತು ತತ್ವಪದಕಾರರು ಸೂಚಿಸುತ್ತಾರೆ.

– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ 8722724174

Leave a Reply