ದಲಿತ ಸಮ್ಮೇಳನದಲ್ಲಿ ವಚನಕಾರರ ಗೋಷ್ಠಿ ಇಲ್ಲದ್ದಕ್ಕೆ ಉಪ್ಪಿನ್ ಬೇಸರ

3 years ago

#Uppin #upset #speaker #concert #Dalit #conference

ವಿಜಯಪುರ: ಇಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರ ಒಳಗೊಳ್ಳುವಿಕೆ ಇಲ್ಲದಿರುವುದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಉಪ್ಪಿನ ತಿಳಿಸಿದ್ದಾರೆ.

ಬಸವಾದಿ ಶರಣರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಿಮ್ನ ವರ್ಗಕ್ಕಾಗಿಯೇ ಚಳವಳಿ ರೂಪಿಸಿ ಜೀವ ತೇಯ್ದು, ಪ್ರಾಣವನ್ನೇ ಕೊಟ್ಟವರು. ಕೆಳವರ್ಗದಿಂದ ರೂಪುಗೊಂಡ ಕಲ್ಯಾಣ ಕ್ರಾಂತಿಯ ನೆರಳು ಈ ಸಮ್ಮೇಳನದ ಮಾತು, ಗೋಷ್ಠಿ ಕೊನೆಗೆ ಚರ್ಚೆಯ ಮೂಲಕವಾದರೂ ಬೀಳಬೇಕಿತ್ತು ಎಂದು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿಯವರಿಗೆ ಅವರು ಸಮ್ಮೇಳನದಲ್ಲಿ ಹೇಳಿ, ಪಾತ್ರವನ್ನು ಬರೆದಿದ್ದಾರೆ.

ಬಸವಣ್ಣನವರು ಏನೆಲ್ಲ ಮಾಡಿದರು ಎನ್ನುವುದು ಗೊತ್ತೇ ಇದೆ. ಅವರೊಂದಿಗೆ ಹರಳಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಬಹುತೇಕರು ದಲಿತರೇ ಆಗಿದ್ದಾರೆ. ಅವರೆಲ್ಲ ಎಲ್ಲರಿಗೂ ಮಾತನಾಡಲು ಕೊರಳಾಗಿ ಅನುಭವ ಮಂಟಪಕ್ಕೆ ಕಾರಣರಾದವರು. ಪ್ರಜಾಪ್ರಭುತ್ವ, ಸಂವಿಧಾನದ ಅಂಶಗಳೆಲ್ಲ ವಚನಗಳಲ್ಲಿವೆ ಎಂದು ಒಪ್ಪಿತ ಮಾತಾಗಿದೆ. ಹಾಗಾಗಿ ಮುಂದಿನ ಸಮ್ಮೇಳನದಲ್ಲಾದರೂ ವಚನಗಳು, ಲಿಂಗಾಯತ ಧರ್ಮದ ಚಳವಳಿಯ ಕುರಿತು ವಿಷಯಗಳಿರಲಿ ಎಂದು ಶಿವಕುಮಾರ್ ಉಪ್ಪಿನ ಮನವಿ ಮಾಡಿದ್ದಾರೆ.

ಬುದ್ಧನ ನಂತರ ಬೆಳಗಿದವರು ಬಸವಣ್ಣ. ಆನೆ ಕಾಲಿಗೆ ಕಟ್ಟಿಸಿಕೊಂಡವರು, ಭರ್ಚಿ ಚುಚ್ಚಿಸಿಕೊಂಡು ಸತ್ತವರು, ಗಡಿಪಾರಾದವರು, ವಚನಗಳನ್ನು ಉಳಿಸಿಕೊಳ್ಳಲು ಅಸುನೀಗಿದವರು ಬಸವಾದಿ ಶರಣರು. ಅವರನ್ನು ದಲಿತ ಸಮುದಾಯದವರಾದಿಯಾಗಿ ಯಾರೂ ಮರೆಯುವಂತಿಲ್ಲ. ತುಳಿತಕ್ಕೊಗಾದವರೆಲ್ಲ ದಲಿತರೇ ಆಗಿದ್ದಾರೆ. ಅದಕ್ಕೇ  ಬಸವಣ್ಣ, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ..’ ಎಂದು ತಾನೇ ಕಟ್ಟ ಕಡೆಯ ವ್ಯಕ್ತಿಯಾಗಿ ಮಿಡಿದಿದ್ದಾರೆ ಎಂದು ಶಿವಕುಮಾರ್ ಹಳಹಳಿಕೆ ವ್ಯಕ್ತಪಡಿಸಿದ್ದಾರೆ.

ಹೆಣ್ಣುಮಕ್ಕಳ ಪ್ರಾತಿನಿಧ್ಯದ ಕೊರತೆಯೂ ಸಮ್ಮೇಳನದಲ್ಲಿತ್ತು. ಗೋಷ್ಠಿಗಳಲ್ಲಿ ದಲಿತ ಮಹಿಳೆಯರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಅನೇಕ ಮಹಿಳೆಯರು ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರನ್ನು ಇಂತಹ ಸಮ್ಮೇಳನಗಳು ಗುರುತಿಸಲಿ. ಸತ್ಯಕ್ಯನಂತಹ ಅನೇಕ ವಚನಕಾರ್ತಿಯರನ್ನೂ ನಾವು ಮರೆಯಬಾರದು ಎಂದು ಹೇಳಿದ್ದಾರೆ.

Leave a Reply