ಕನ್ನಡ ಮಾತಾಡುವವರ ಸಂಖ್ಯೆಯಲ್ಲಿನ ಇಳಿಕೆ : ಸರ್ವನಾಶದ ಮುನ್ಸೂಚನೆಯೆ ?

3 years ago

ಬಾಷೆಯೊಂದು ನಿಜವಾಗಿಯೂ ಬದುಕಿದೆಯೊ ಅಥವಾ ಸತ್ತಿದೆಯೋ ಅಥವಾ ಸಾಯುತ್ತಿದೆಯೋ ಎನ್ನುವುದನ್ನು ನಾಲ್ಕು ಮುಖ್ಯ ಚಟುವಟಿಕೆಗಳ ಮೂಲಕ ಗುರುತಿಸಲಾಗುತ್ತದೆ .. LSRW. . ಕೇಳುವಿಕೆ, ಮಾತು , ಬರೆಹ ಮತ್ತು ಓದು ( Listening , Speaking , Reading and writing. )
ಭಾಷೆಯೊಂದನ್ನು ಎಷ್ಟು ಜನ ಮಾತಾಡಲು ಬಳಸುತ್ತಿದ್ದಾರೆ , ಭಾಷೆಯೊಂದು ಎಷ್ಟು ಜನರ ಕಿವಿಗೆ ಬೀಳುತ್ತಿದೆ , ಬರೆಯಬಲ್ಲವರೆಷ್ಟು ಮತ್ತು ಓದಬಲ್ಲವರೆಷ್ಟು ಎಂಬುದರ ಮೇಲೆ ಭಾಷೆಯೊಂದರ ಅಸ್ತಿತ್ವ. ನಿರ್ಧಾರ ವಾಗುತ್ತದೆ ..

2011ರ ಜನಗಣತಿ ಯ ಪ್ರಕಾರ 1971 ಮತ್ತು 2011ರ ಅವಧಿಯಲ್ಲಿ ಶೇ 43.5 ರಷ್ಟು ಹಿಂದಿ ಮಾತಾಡುವವರ ಸಂಖ್ಯೆ ಜಾಸ್ತಿಯಾಗಿದೆ . ಬಂಗಾಳಿ ಬಾಷೆ ಶೇ 14 , ತೆಲುಗು ಶೇ 11 , ತಮಿಳು ಶೆ 9 , ತುಳು ಶೇಕಡಾ 7 ರಷ್ಟು ಜಾಸ್ತಿಯಾಗಿದೆ.

ಆದರೆ ಕನ್ನಡವು ಬಾರತೀಯ ಭಾಷೆಗಳಲ್ಲಿಯೇ ಅತ್ಯಂತ ಕಡಮೆ ಅಂದರೆ ಶೇ 3.25ರಷ್ಟು ಕನಿಷ್ಟ ಪ್ರಮಾಣದ ಬೆಳವಣಿಗೆಯನ್ನು ದಾಖಲಿಸಿ ಅತಂಕ ಹುಟ್ಟಿಸಿದೆ . ಈ ಗಣತಿ ನಡೆದು ಈಗಾಗಲೇ ಹನ್ನೆರಡು ವರ್ಷಗಳಾಗಿವೆ ಎಂಬ ಅಂಶವನ್ನು ಪರಿಗಣಿಸಿದರೆ , ಈಗ ಈ ಅಂಕಿಸಂಖ್ಯೆ ಇನ್ನಷ್ಟು ಕೆಳಕ್ಕಿಳಿದು ಗಂಡಾಂತರಕಾರಿ ಸ್ಥಿತಿ ಮುಟ್ಟಿದೆಯೇನೋ ಎಂಬಂತೆ ಭಾಸವಾಗುತ್ತದೆ

ಮೇಲಿನ ಅಂಕಿ ಸಂಖ್ಯೆ ಯನ್ನು ನೋಡಿದರೆ ಕನ್ನಡ ಮಾತಾಡು ವ ಮತ್ತು ಹೀಗೆ ಆಡಲಾದ ಮಾತಿಗೆ ಕಿವಿಗೊಡುವ ವರ ಸಂಖ್ಯೆ ಮೃತಾವಸ್ಥೆಯತ್ತ ಜಾರುತ್ತಿದೆ ಎನ್ನುವುದು ಗೊತ್ತಾಗುತ್ತದೆ
ಮಾತಾಡುವ ಮತ್ತು ಅದನ್ನು ಕೇಳುವವರ. ಸಂಖ್ಯೆ ಯೇ ಕ್ಷೀಣಿಸುತ್ತಿದೆ ಎಂದರೆ ಅಲ್ಲಿ ಓದು ಮತ್ತು ಬರೆಹದ ಇನ್ನೆರಡು ಕ್ರಿಯೆಗಳಿಗೆ ಬಹುದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದೇ ಅರ್ಥ

ಕನ್ನಡ ಮಾತನಾಡುವವರ ಸಂಖ್ಯೆಯಲ್ಲಿ ಕಾಣಲಾಗುತ್ತಿರುವ ಈ ಅವನತಿಗೂ ಕೆಳಗೆ ಕಾಣಿಸಿರುವ ಹತ್ತನೆ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅಂಕಿ ಅಂಶಗಳಿಗೂ ಗಾಢವಾದ ಸಂಬಂಧವಿದೆ ಅನ್ನಿಸುತ್ತದೆ .. ಯಾಕೆಂದರೆ ಈ ಅಂಕಿಸಂಖ್ಯೆ ಓದು ಮತ್ತು ಬರೆಹದ. ವಿದ್ಯಮಾನಗಳಿಗೆ ಸಂಬಂಧಿಸಿದ ಪ ವಿಚಾರವಾಗಿದೆ.

2003 ರಿಂದ 2022 ರ ವರೆಗಿನ ಇಪ್ಪತ್ತು ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ : 1, 16, 406 ರಿಂದ 3, 22, 009 ರಷ್ಟಾಗಿದೆ .. ಅಂದರೆ ಈ ಸಂಖ್ಯೆ ಹತ್ತಿರ ಹತ್ತಿರ ಮೂರು ಪಟ್ಟಾಗಿದೆ .. ಅದರೆ ಕನ್ನಡ ಮಾಧ್ಯಮದಲ್ಲಿ ಬರೆದ ವಿದ್ಯಾರ್ಥಿಗಳ ಸಂಖ್ಯೆ 2003 ರಲ್ಲಿ 5 ,87 ,914 ಇದ್ದಿದ್ದು , 2022 ರಲ್ಲಿ 5,02,420 ರಷ್ಟು ಕೆಳಕ್ಕಿಳಿದಿದೆ .. ಅಂದರೆ ಇದ್ದಲ್ಲೆ ಇದೆ ಅಥವಾ ಇನ್ನಷ್ಟು ಕಮ್ಮಿಯಾಗಿದೆ..

ಈ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಸರ್ಕಾರಿ ಶಾಲೆಗಳು ಆಘಾತಕಾರಿ ಸಂಖ್ಯೆಯಲ್ಲಿ ಮುಚ್ಚಿಹೋಗುತ್ತಿರುವುದನ್ನೂ , ಇಂಗ್ಲಿಷ್ ಮಾದ್ಯಮದ ಶಾಲೆಗಳು ಬಹು ದೊಡ್ಡ ಸಂಖ್ಯೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನೂ ತೋರುತ್ತದೆ ಎಂಬುದು ಗೊತ್ತಾಗುತ್ತದೆ ಈ ಪತನಕ್ಕೆ ಕನ್ನಡಿಗರೇ , ಕನ್ನಡಿಗರು ಅಯ್ಕೆ ಮಾಡಿದ ಪ್ರಬುತ್ವಗಳೇ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ…

ಕನ್ನಡಿಗರೀಗ ಶೀಘ್ರ ಗತಿಯಲ್ಲಿ ಇಂಗ್ಲಿಷ್ ಮೀಡಿಯಂ ವಾದಿಗಳಾಗಿ ಮತಾಂತರಹೊಂದುತ್ತಿದ್ದಾರೆ ಎನ್ನುವುದೂ ಇದರಿಂದ ಗೊತ್ತಾಗುತ್ತದೆ
ಲೋಹಿಯಾ , ಗಾಂಧಿ , ಅಂಬೇಡ್ಕರ್ ಚಿಂತನೆಗಳನ್ನು ಬಲ್ಲ
‘ಸಾಮಾಜಿಕ ನ್ಯಾಯವಾದಿ’ ಗಳೆಂದು ಗುರುತಿಸಲ್ಪಟ್ಟ ನಮ್ಮ ಹಲವು ಲೇಖಕರು ಮತ್ತು ಬುದ್ಧಿಜೀವಿಗಳೂ ಕೂಡಾ ನಮ್ಮ ಜನರ ನಡುವೆ ಇಂಗ್ಲಿಷ್ ಮಾಧ್ಯಮದ ಪರ ಪ್ರಚಾರಕ್ಕಿಳಿದಿದ್ದಾರೆ
ಇಂಗ್ಲಿಷ್ ದೇವಿಗೆ ಗುಡಿಕಟ್ಟಹೊರಟಿರುವ ಈ ಜನರು , ಇಂಗ್ಲಿಷ್ ನಿಂದಲೆ ಅನ್ನ’ ಎಂಬ ಕನ್ನಡ ವಿರೋದಿ ಅಪ ಪ್ರಚಾರದಲ್ಲೂ ತೊಡಗಿದ್ದಾರೆ

ಪ್ರಭುತ್ವಕ್ಕೆ ಹತ್ತಿರವಾದ ಕರ್ನಾಟಕದ ಕೆಲವು ದಲಿತ ಮತ್ತು ಹಿಂದುಳಿದ ವರ್ಗಗಳ ಬುದ್ದಿಜೀವಿಗಳ ಮತ್ತು ‘ ಸಾಮಾಜಿಕ ನ್ಯಾಯದ ಹೋರಾಟಗಾರ ‘ ರ ಚಿತಾವಣೆಯಿಂದಾಗಿ , ಕಳೆದ 2009 ನೆ ಇಸವಿಯಿಂದಲೂ ಇಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ; ಒಂದು ಸಾವಿರ ಸರ್ಕಾರಿ ಶಾಲೆಗಳ ಇಂಗ್ಲಿಷ್ ಮಾದ್ಯಮೀಕರಣ ; ಪಬ್ಲಿಕ್ ಸ್ಕೂಲುಗಳ ಸ್ಥಾಪನೆ ;
RTE. ಸಮರ್ಥನೆ ; ತ್ರಿಭಾಷಾ ಸೂತ್ರಕ್ಕೆ ಮೌನ ಸಮ್ಮತಿ ಗಳ ಜೊತೆಗೆ ಕರ್ನಾಟಕದ ಭಾಷಾ ಅಲ್ಪ ಸಂಕ್ಯಾತರ ಕನ್ನಡ ವಿರೋಧ .. ಇವೆಲ್ಲವೂ ಒಟ್ಟಿಗೆ ಸೇರಿ ಕನ್ನಡವನ್ನು ವರ್ಷ ವರ್ಷವೂ ಇಷ್ಟಿಷ್ಟೆ ಇಷ್ಟಿಷ್ಟೆ ತಿಂದುಹಾಕುತ್ತಿವೆ…

ಬಹು ವೇಗವಾಗಿ ಘಟಿಸುತ್ತಿರುವ ಈ ಕನ್ನಡ ವಿನಾಶವನ್ನು ತಪ್ಪಿಸುವ ಮಾರ್ಗಗಳಿಗಾಗಿ ನಾವು ಹುಡುಕಾಟ ನಡೆಸಬೇಕಾಗಿದೆ..

ಕನ್ನಡ ಮಾತಾಡುವವರ ಸಂಖ್ಯೆ ಆತಂಕಕಾರಿಯಾಗಿ ತಗ್ಗುತ್ತಿರುವುದನ್ನು ತಪ್ಪಿಸಲು , ಕನ್ನಡ ಮಾದ್ಯಮದ ಶಾಲೆಗಳ ಮುಚ್ಚುವಿಕೆಯನ್ನು ತಡೆಯುವುದೊಂದೇ ನಮಗಿರುವ ಮಾರ್ಗವಾಗಿದೆ..

ಆದರೆ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿಕೊಳ್ಳುವುದು ಯಾಕೆ ಸವಾಲಿನ ಕೆಲಸವಾಗಿದೆಯೆಂದು ಕನ್ನಡದ ಹಿತ ಚಿಂತಕರು ಗಂಭೀರ ವಾಗಿ ಆಲೋಚಿಸಬೇಕಾಗಿದೆ

ನಮ್ಮಲ್ಲಿ ಅನೇಕ ಗೆಳೆಯರು ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಶೂ, ಶೌಚಾಲಯ .. ಇತ್ಯಾದಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡಿದರೂ ಯಾಕೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕುಗ್ಗುತ್ತಿದೆಯೆಂದು ಚಿಂತಿತರಾಗುತ್ತಾರೆ ಚಿಂತೆಯ ಮಟ್ಟದಲ್ಲೇ ಉಳಿಯುವ ಈ ಕಾಳಜಿ , ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಕಣ್ಣುಮುಚ್ಚುವುದನ್ನು ಅಸಹಾಯಕವಾಗಿ ನೋಡುತ್ತ ಮಾತ್ರ ನಿಲ್ಲುವಲ್ಲಿ ಪರ್ಯವಸಾನವಾಗುತ್ತದೆ ವಿನಹ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಮುಚ್ಚುವಿಕೆಗೆ ಏನು ಕಾರಣ ? ಯಾಕೆ ಶಾಲೆಗಳ ಮುಚ್ಚುವಿಕೆಯನ್ನು ತಡೆಯಲಾಗುತ್ತಿಲ್ಲ , ಈ ಮುಚ್ಚುವಿಕೆಗಿರುವ ಮೂಲಭೂತ ಕಾರಣ ಯಾವುವು ? ಎಂಬ ಪ್ರಶ್ನೆ ಗಳನ್ನು ಇದುವರೆವಿಗೆ ಕೇಳಿಕೊಂಡಿಲ್ಲ.

ಕರ್ನಾಟಕ ಪ್ರೌಢಶಾಲಾ ಮಂಡಳಿ ನೀಡಿರುವ ಕೆಳಗಿನ ಅಂಕಿಸಂಖ್ಯೆಗಳನ್ನು ನೋಡಿದರೆ , . ಸರ್ಕಾರಿ ಶಾಲೆಗಳ ಮುಚ್ಚುವಿಕೆಯ ಹಿಂದಿರುವ ಮುಖ್ಯ ಕಾರಣಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ

೧: ಹತ್ತನೆಯ ತರಗತಿಯ ನಂತರ ಕನ್ನಡ ಕಲಿಕಾ ಮಾಧ್ಯಮ ನಿಲುಗಡೆಗೆ ಬರುತ್ತದೆ. ಪಿಯುಸಿ, ಡಿಪ್ಲೊಮಾ, ಪದವಿ ಕೋರ್ಸುಗಳು ನಂತರದ ಸ್ನಾತಕೋತ್ತರ ಕೋರ್ಸುಗಳು ಎಲ್ಲವೂ ಸಹ ಇಂಗ್ಲಿಷ್ ಮಾದ್ಯಮದಲ್ಲಿರುವ ಕಾರಣ , ಹತ್ತನೆ ತರಗತಿಯವರೆಗೆ ಕನ್ನಡ ಮಾಧ್ಯಮ ದಲ್ಲಿ ಕಲಿತ ಮಕ್ಕಳು ಬೇರೆ ದಾರಿಕಾಣದೆ ತಮ್ಮ ಶಿಕ್ಷಣವನ್ನು ಅನಿವಾರ್ಯ ವಾಗಿ ನಿಲ್ಲಿಸಬೇಕಾಗಿಬರುತ್ತದೆ

ಈ ಕುರಿತು ಕನ್ನಡ ದ ಹಿತ ಚಿಂತನೆ ನಡೆಸುವ. ವ್ಯಕ್ತಿ , ಸಂಘಟನೆ ಸಂಸ್ಥೆಗಳನ್ನೂ ಒಳಗೊಂಡು , ಸರ್ಕಾರಗಳವರೆಗೆ ಯಾರೂ ಕಿಂಚಿತ್ ಆಲೋಚನೆಯನ್ನೂ ಮಾಡಿಲ್ಲ.

ಕೆಳಗೆ ಕೊಟ್ಟಿರುವ ಇಪ್ಪತ್ತು ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ , ಇವತ್ತಿಗೂ ಕರ್ನಾಟಕ ರಾಜ್ಯದಲ್ಲಿ 60% ವಿದ್ಯಾರ್ಥಿ ಗಳು (5,02,420 ) ಮೊದಲ ಹತ್ತು ವರ್ಷಗಳ ಶಿಕ್ಷಣವನ್ನು ಕನ್ನಡ ಮಾದ್ಯಮದಲ್ಲಿ ಕಲಿಯುತ್ತಿರುವುದು ನಮಗೆ ಖಚಿತವಾಗುತ್ತದೆ.

ಈ 5 ಲಕ್ಷ ಕನ್ನಡದ ಮಕ್ಕಳಿಗೆ ಕಳೆದ ಐವತ್ತು ವರ್ಷಗಳಿಂದಲೂ ನಮ್ಮ ಸರ್ಕಾರಗಳು ಮುಂದಿನ ವಿದ್ಯಾಬ್ಯಾಸವನ್ನು ಕನ್ನಡ ಮಾದ್ಯಮದಲ್ಲಿ ಕಲ್ಪಿಸದೆ ವಂಚನೆ ಮಾಡುತ್ತಿವೆ

ಆದರೆ ಉಳಿದ 40% ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ( 3,22,009 ) ಪೂರ್ವ ಪ್ರಾಥಮಿಕ ದಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೆ ( kg to pg ) ಎಲ್ಲ ಜ್ನಾನಶಾಖೆಗಳಲ್ಲೂ ಸುಸಜ್ಜಿತವಾದ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಕೊಡಲಾಗುತ್ತಿದೆ…

ಈ ಕನ್ನಡ ದ್ರೋಹವನ್ನು, ಕನ್ನಡಿಗರಿಗೆ ಮಾಡುತ್ತಿರುವ ವಂಚನೆಯನ್ನು ಪ್ರಶ್ನಿಸುವ ಕನ್ನಡಿಗರೇ ಈ ಕನ್ನಡದ ನೆಲದಲ್ಲಿ ಇನ್ನೂ ಹುಟ್ಟಿಲ್ಲ.

೨ : ಕನ್ನಡ ಮಾಧ್ಯಮದ ಶಿಕ್ಷಣ, ಕನ್ನಡದ ಮಕ್ಕಳಿಗೆ ಘಾತುಕವಾಗಿ ಪರಿಣಮಿಸಿರುವ ಎರಡನೆಯ ಕಾರಣವೇನೆಂದರೆ, ಕನ್ನಡ ಮಾದ್ಯಮದ ವಿಜ್ಞಾನ, ಗಣಿತ, ಸಮಾಜ ವಿಜ್ನಾನ, ಇತ್ಯಾದಿತ್ಯಾದಿ ಪಠ್ಯಗಳನ್ನು ರೂಪಿಸಿರುವವರು, ಈ ಎಲ್ಲಾ ಜ್ಞಾನ ಶಿಸ್ತುಗಳಲ್ಲಿ ಬರುವ ತಾಂತ್ರಿಕ ಪದಗಳ ಬದಲಾಗಿ, ಸಂಸ್ಕೃತ ಪದಗಳನ್ನು ತುಂಬಿ, ಕನ್ನಡ ಮಾಧ್ಯಮದಲ್ಲಿ ಕಲಿತ ಕನ್ನಡ ನಾಡಿನ ಮಕ್ಕಳು ಜಾಗತಿಕ ವ್ಯಾಪ್ತಿಯಲ್ಲಿ ನಡೆಸಬೇಕಾದ ಕಲಿಕೆ ಜ್ಙಾನ ಸಂವಹನ, ಸಂವಾದ ಮತ್ತು ಕೊಡುಕೊಳೆಗೆ ಕಲ್ಲುಹಾಕಿದ್ದಾರೆ..

ಉದಾಹರಣೆಗೆ : ಅಕ್ಸಿಜನ್ , ನೈಟ್ರೋಜನ್ , ಕಾರ್ಬನ್ , ಸ್ಪೀಡ್ ವೆಲಾಸಿಟಿ ರಿಟಾರ್ಡೇಷನ್ ಫೋರ್ಸ್ ಫಿಸಿಕ್ಸ್ ಕೆಮಿಸ್ಟ್ರಿ ಕಂಪ್ಯೂಟರ್ ಈ ಇಂತಹ ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿದ್ದು ಚಿರಪರಿಚಿತವಿರುವ ಪರಿಬಾಷೆಯನ್ನು ಕಣ್ಮರೆಮಾಡಿ ಆಮ್ಲಜನಕ ಸಾರಜನಕ ಇಂಗಾಲ ಜ ವ ವೇಗ ವೇ ಗಾಪಕರ್ಷ ಬಲ ಭೌತ ಶಾಸ್ತ್ರ ರಸಾಯನ ಶಾಸ್ತ್ರ ಗಣಕ ಯಂತ್ರ ಹೀಗೆಲ್ಲ
ಬದಲಿ ಅಪಪ್ರಯೋಗಗಳನ್ನು ಮಾಡಿ ಗಬ್ಬೆಬ್ಬಿಸಿ.. ಕನ್ನಡ ಮಾಧ್ಯಮದ ಮಕ್ಕಳ ಭವಿಷ್ಯವನ್ನು ಹಾಳುಗೆಡವಿದ್ದಾರೆ..

ಇದರಿಂದಾಗಿ ಹತ್ತನೆಯ ತರಗತಿಯವರೆಗೆ ಈ ಸಂಸ್ಕೃತ ಪಾರಿಭಾಷಿಕ ಗಳನ್ನು ಕಲಿಯುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹತ್ತನೆಯ ತರಗತಿಯ ನಂತರ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒಗ್ಗಿಕೊಳ್ಳಲಾಗದೆ ಸೋತು ಬಸವಳಿದು ಶಿಕ್ಷಣದಿಂದಲೇ ನಿರ್ಗಮಿಸುತ್ತಾರೆ

ಇದೊಂದು ಇಂಗ್ಲಿಷ್ ಮಾದ್ಯಮದ ವಂಚಕ ವ್ಯವಸ್ಥೆ ಯು ಸೃಷ್ಟಿಸಿರುವ ಮೋಸದ ಜಾಲವಾಗಿದ್ದು , ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಮಕ್ಕಳು ಇಂಜಿನಿಯರಿಂಗ್ , ಮೆಡಿಕಲ್ , ಮೂಲ ವಿಜ್ಙಾನ , ವಾಣಿಜ್ಯ. , ಮಾನವಿಕಗಳು …ಯಾವುದನ್ನೂ ಕಲಿಯಲಾಗದಂತಹ , ಕಲಿಯುವುದಿರಲಿ, ಕಲಿಕೆಯ ಆವರಣಗಳಿಗೂ ಪ್ರವೇಶಿಸದಂತಹ ಪರಿಸ್ಥಿತಿ ಯನ್ನು ಇಲ್ಲಿ ಕಟ್ಟಿನಿಲ್ಲಿಸಿದೆಯಷ್ಟೇ ಅಲ್ಲ , ಈ ಮೂಲಕ ಕನ್ನಡ ಮಾಧ್ಯಮದ ಮಕ್ಕಳಿಗೆ ಸಿಕ್ಕಬೇಕಾಗಿದ್ದ ಉದ್ಯೋಗಾವಕಾಶಗಳ ಸಿಂಹಪಾಲನ್ನು ಕಬಳಿಸುತ್ತದೆ …

೩ . ಕನ್ನಡ ಶಾಲೆಗಳು ಮುಚ್ಚಿಹೋಗುವ ಮೂರನೆಯ ಕಾರಣವೆಂದರೆ ಕರ್ನಾಟಕದ ಹಸು ಕಂದಗಳ ಮೇಲೆ ಹೇರಲಾಗಿರುವ ತ್ರಿಭಾಷಾ ಸೂತ್ರದ ಹಾವಳಿ .. ಈ ತ್ರಿಬಾಷಾ ಸೂತ್ರದ ಅನ್ವಯ ಹೇರಿಕೆಯ ಮೂಲಕ ಒತ್ತಾಯದಿಂದ ಕಲಿಸಲಾಗುವ ಸಂಸ್ಕೃತ ಮತ್ತು ಹಿಂದಿಗಳಂತಹ ಪರಕೀಯ ಬಾಷೆಗಳ ಕಾರಣ , ಕನ್ನಡದ ಮಕ್ಕಳು ರಾಜ್ಯಬಾಷೆಯಾದ. ಕನ್ನಡದ ಬಗೆಗೆ ತಾತ್ಸಾರ ಬೆಳೆಸಿಕೊಳ್ಲುತ್ತವೆ …

ಭಾಷಾ ವಿಜ್ನಾನಿ ಗಳು ಸತ್ತ ಭಾಷೆಯೆಂದೆ ಘೋಷಿಸಿರುವ. ಸಂಸ್ಕೃತ ವನ್ನು , ಭಾರತೀಯ ಭಾಷೆಗಳ ತಾಯಿ ಎಂದೂ ದೇವ ಭಾಷೆ ಎಂದೂ ; ಹಿಂದಿ ಭಾಷೆ ಯ ಬಗ್ಗೆ ರಾಷ್ಟ್ರ ಭಾಷೆ ಎಂಬ ಸುಳ್ಳನ್ನು ತುಂಬಿ ಕನ್ನಡದ ಬಗೆಗೆ ಕಿಳರಿಮೆಯನ್ನು ತುಂಬಲಾಗುತ್ತಿದೆ

ಹೀಗಾಗಿ ತ್ರಿಭಾಷಾ ಸೂತ್ರವೂ ಸಹ ರಾಷ್ಟ್ರ ಮಟ್ಟದಲ್ಲಿ ಕನ್ನಡ ಮಾತಾಡುವವರ ಸಂಖ್ಯೆಯು ಅತಿ ಕನಿಷ್ಟ ಮಟ್ಟ ಮುಟ್ಟಿರುವ ಕಾರಣಗಳಲ್ಲಿ ಮುಖ್ಯ ಕಾರಣವಾಗಿದೆ .. ಇದಷ್ಟೇ ಅಲ್ಲದೆ ಕನ್ನಡ ಬಾಷೆ ಮತ್ತು ಮಾಧ್ಯಮದ ಬಗ್ಗೆ ಕನ್ನಡದ ಮಕ್ಕಳು ಅಸಡ್ಡೆ ಯ ಮನೋಭಾವ ಹೊಂದಲೂ ಕಾರಣವಾಗಿದೆ

೪. ಕನ್ನಡ ಬಾಷೆ , ಕನ್ನಡ ಮಾದ್ಯಮ ಹಾಗೂ ಕನ್ನಡ ಮಾದ್ಯಮದ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗಲು ಹಾಗೂ ಕನ್ನಡ ಶಾಲೆಗಳು ಕ್ಷೀಣಿಸಲು ಇರುವ ಮತ್ತೊಂದು ಕಾರಣ ಎರಡು ಬಹುಮುಖ್ಯ. ಕಾನೂನು ಹೋರಾಟಗಳಲ್ಲಿ ಕನ್ನಡಕ್ಕೆ ಸೋಲಾಗಿದ್ದು ..

ಗೋಕಾಕ್ ಚಳವಳಿಯ ಜನಾಂದೋಲನದ ಗೆಲುವಿನ ನಂತರ. ಪ್ರೌಢ ಶಾಲೆಗಳಲ್ಲಿ ಕನ್ನಡವನ್ನು ವಪ್ರಥಮ ಭಾಷೆಯಾಗಿ ಕಲಿಯುವ ಸರ್ಕಾರದ ನಿರ್ಧಾರಕ್ಕೆ, ನ್ಯಾಯಾಂಗ ಹೋರಾಟದ ಮೂಲಕ ತಡೆಯೊಡ್ಡಿದ ಕನ್ನಡ ನಾಡಿನ. ಕನ್ಬಡ ವಿರೋಧಿ ಶಕ್ತಿಗಳು ಕನ್ನಡವನ್ನು ಪ್ರಥಮ ಬಾಷೆಯ ಸ್ಥಾನದಿಂದ ಪದಚ್ಯುತಗೊಳಿಸುತ್ತವೆ …

ಇದರಿಂದಾಗಿ ಕನ್ನಡಕ್ಕೆ ಆಧುನಿಕ ಕಾಲಘಟ್ಟದ ಮೊದಲ ಭಾಷಾಂದೋಲನ. ದಕ್ಕಿಸಿಕೊಟ್ಟ ಗೆಲುವು ಸೋಲಾಗಿ ಕನ್ನಡಿಗರಿಗೆ ಅದ ಮುಖಭಂಗವಾಗಿ ದಾಖಲಾಯಿತು . ಇದಾಗಿ ನಾಲ್ಕು ದಶಕಗಳೇ ಮುಗಿದುಹೋದವು

ಎರಡನೆಯ. ನ್ಯಾಯಾಂಗ ಹೊರಾಟದ ಸೋಲೆಂದರೆ ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃ ಬಾಷಾ ಮಾಧ್ಯಮವನ್ನು ಜಾರಿಮಾಡಿದ ಸರ್ಕಾರದ ನಿರ್ದಾರವನ್ನು ಪ್ರಶ್ನಿಸಿದ ಕನ್ನಡ ನಾಡಿನಲ್ಲೆ ಬೇರುಬಿಟ್ಟಿರುವ ಕನ್ನಡ ವಿರೋಧಿ ಶಕ್ತಿಗಳು ಅದನ್ನು ಇಪ್ಪತ್ತು ವರ್ಷಗಳ ಸುದೀರ್ಘ ಹೋರಾಟದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಗೆದ್ದುಕೊಳ್ಳುತ್ತವೆ.

ಸುಪ್ರೀಂ ಕೋರ್ಟು, ಕಲಿಕೆಯ ಮಾಧ್ಯಮದ ಆಯ್ಕೆಯು ವಿದ್ಯಾರ್ಥಿ ಮತ್ತು ಅವರ ಅಪ್ಪ ಅಮ್ಮನ ಆಯ್ಕೆ ಅದರಲ್ಲಿ ಸರ್ಕಾರಗಳು ಮೂಗು ತೂರಿಸುವಂತಿಲ್ಲ..ಎಂದು ತೀರ್ಪು ಬರೆಯುತ್ತದೆ. ಇದರಿಂದಾಗಿ ಇಪ್ಪತ್ತು ವರ್ಷಗಳ ಕಾಲದ ( 1994 – 2014 ) ನ್ಯಾಯಾಂಗ ಹೋರಾಟ ಮಣ್ಣುಮುಕ್ಕುತ್ತದೆ..

ಈ ತೀರ್ಪಿಗಾಗಿಯೇ ಕಾದಿದ್ದ , ಇಂಗ್ಲಿಷ್ ಮಾದ್ಯಮದ ಅಕ್ಷರ ಮಾರಾಟ ದ ಖಾಸಗಿ ಶಾಲೆಗಳು ಕರ್ನಾಟಕ ದಾದ್ಯಂತ ಅಣಬೆಗಳಂತೆ ಎದ್ದು ನಿಲ್ಲುತ್ತವೆ ..

ಇದರಿಂದಾಗಿ ಕನ್ನಡ ಶಾಲೆಗಳು ಅವಸಾನಮುಖಿಯಾದವು .. ಅದರೊಡನೆ ಕನ್ನಡವನ್ನು ಮಾತಾಡುವವರ ಸಂಖ್ಯೆಯೂ ಸಹ ಅವಸಾನಮುಖಿಯಾಯಿತು ..

೫. ಕನ್ನಡ ಭಾಷೆಯನ್ನು, ಕನ್ನಡ ಭಾಷಾ ಶಿಕ್ಷಣ ಮಾದ್ಯಮವನ್ನು, ಕನ್ನಡ ಶಾಲೆಗಳನ್ನು ಆಪೋಷನ ತೆಗೆದುಕೊಂಡ ಮತ್ತೊಂದು ಭೂತವೆಂದರೆ 2009 ರಲ್ಲಿ ಜಾರಿಗೆ ಬಂದ. ಶಿಕ್ಷಣ ಹಕ್ಕು ಕಾಯ್ದೆ .. ರೈಟ್ ಟು ಎಜುಕೇಷನ್ ಆಕ್ಟ್ ಈ ಕಾಯ್ದೆಯಡಿ ಪ್ರತಿ ವರ್ಷವೂ ಸುಮಾರು ಒಂದೂಕಾಲು ಲಕ್ಷ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಖಾ ಸಗಿಯವರ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ವಲಸೆ ಹೋದ ಕಾರಣ .. ಪ್ರತಿವರ್ಷವೂ ಸರ್ಕಾರಿ ಶಾಲೆಗಳಲ್ಲಿ ಸುಮಾರು ಐದನೆ ಒಂದು ಭಾಗದಷ್ಟು ಪ್ರವೇಶಾತಿ ನಷ್ಟವಾಗುತ್ತಬಂದು ಸರ್ಕಾರಿ ಶಾಲೆಗಳು ರಕ್ತಹೀನವಾಗುತ್ತನಡೆದು ಮುಚ್ಚಿಹೋಗುವ ಸ್ತಿತಿಗೆ ದೂಡಲ್ಪಟ್ಟವು …

ಆರ್ಟಿಇ. ರದ್ದುಗೊಳ್ಳದೆ ಸರ್ಕಾರಿ ಶಾಲೆಗಳ ಉಳಿವು ಸಾಧ್ಯವೇ ಇಲ್ಲ… ಸರ್ಕಾರಿ ಶಾಲೆಗಳು ಉಳಿಯದೆ ಕನ್ನಡ ಬಾಷೆ ಮತ್ತು ಕನ್ನಡ ಮಾಧ್ಯಮಗಳು ಉಳಿಯಲು ಸಾದ್ಯವೆ ಇಲ್ಲ…

ಇದು ಕನ್ನಡಿಗರಿಗೆ ಮನವರಿಕೆಯಾಗಿಯೇ ಇಲ್ಲ.. ಮನವರಿಕೆಯಾಗುವುದಿರಲಿ, ಕನ್ನಡ ವಿರೋಧಿ ಖಾಸಗಿ ಕುಳಗಳನ್ನು ದುಡ್ಡಿನ ದರೋಡೆಯ ಗಡವಗಳನ್ನಾಗಿ ಮಾಡುವ ಈ ಆರ್ಟಿಯಿ ವಿಚಾರ ನಮಗೆ ಯಾವ ದಿಗ್ಬ್ರಾಂತಿಗೂ ದೂಡಿಲ್ಲ ..

೬. ಕನ್ನಡಕ್ಕೆ ಹಾನಿಮಾಡಿದ. ಎರಡು ಮೂರು ರಾಜಕೀಯ ನಿರ್ದಾರಗಳನ್ನು ನಾವು ಮರೆಯುವ ಹಾಗೇ ಇಲ್ಲ..

ಇವೆಲ್ಲವೂ ಮಾನ್ಯ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದಂತಹ ಅನಾಹುತಗಳು ..

ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಒಂದು ಬಾಷೆಯಾಗಿ ಕಲಿಸುವ ನಿರ್ದಾರ ಮೊದಲನೆಯದು

ಇವರ ಎರಡನೆ ಯ ದುಸ್ಸಾಹಸ ,: ಒಂದು ಸಾವಿರ ಶಾಲೆಗಳನ್ನು ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಗೆ ಬದಲಿಸಿದ್ದು ..

ಮತ್ತೊಂದು ನಿರ್ದಾರ : ಕನ್ನಡ ಮುಕ್ತವಾದ ಕನ್ನಡ ಮಾದ್ಯಮದ ಜಿಲ್ಲೆಗೊಂದು ಪಬ್ಲಿಕ್ ಶಾಲೆಗಳು

ಇವೆಲ್ಲವನ್ನೂ ಮರುಪರಿಶೀಲನೆಗೆ ಒಳಪಡಿಸಿ , ದೂರದೃಷ್ಟಿಯಿಲ್ಲದ, ಕನ್ನಡ ಘಾತುಕವಾದ ಈ ಅಪನಿರ್ಧಾರಗಳನ್ನು ಹಿಂಪಡೆಯಲು ಒತ್ತಾಯ ತರದೆ ಇದ್ದಲ್ಲಿ ಸರ್ಕಾರಿ ಶಾಲೆಗಳೂ ಮತ್ತು ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆ ಯ ರಚನಾತ್ಮಕತೆಯೂ ಕ್ಷಯಿಸಿ, ಕನ್ನಡ ಮೂಲಕದ ಕಲಿಕೆಯೂ, ಆ ಮೂಲಕ ಕನ್ನಡ ಮಾತಾಡುವವರ ಸಂಕ್ಯೆಯೂ ಕ್ಷಯಿಸುತ್ತದೆ. ಮುಂದಿನ ದಶಕಗಳಲ್ಲಿ ಕನ್ನಡ ಬಾಷೆಯೂ ನಮ್ಮ ನಾಲಗೆಯ ಮೇಲಿಂದ ಕಣ್ಮರೆಯಾಗುತ್ತದೆ…..

೭. ಕನ್ನಡದ ಉಳಿವಿಗೂ, ಕನ್ನಡ ಬರೆಹಕ್ಕೂ ಅವಿನಾಭಾವ ಸಂಬಂಧವಿದೆ.. ಕನ್ನಡ ಬರೆಹ ಎಂದರೆ ಕನ್ನಡ ವರ್ಣ ಮಾಲೆ. ಕನ್ನಡ ಬರೆಹದ ಮೂಲವೇ ಕನ್ನಡ ಅಕ್ಷರಗಳು ..

ಈ ಅಕ್ಷರ ಮಾಲೆಯಲ್ಲಿ ಒಂದು ಚಾರಿತ್ರಿಕವಾದ ಸಾಂಸ್ಕೃತಿಕ ಆಕ್ರಮಣವೊಂದು ಹೋಗಿದೆ.. ಕನ್ನಡ ಬರವಣಿಗೆಗೆ ಅಗತ್ಯವಾದ ಅಕ್ಷರಗಳಿದ್ದೂ, ಕನ್ನಡದ ಪ್ರಾಚೀನ ವಿದ್ವಾಂಸರು ಅನಗತ್ಯವಾಗಿ ಹದಿನೇಳು ಹೆಚ್ಚುವರಿ ಸಂಸ್ಕೃತ ಅಕ್ಷರಗಳನ್ನು ತುಂಬಿಸಿಹೋಗಿದ್ದಾರೆ.. ಈ ಅಕ್ಷರಗಳು ಅದೇ ಬಗೆಯ ಉಚ್ಚಾರದ ಕನ್ನಡ ಅಕ್ಷರಗಳ ಜೊತೆಗಿರುವುದರಿಂದ. ನಮ್ಮ ಬರೆಹದ ಸಮಯದಲ್ಲಿ ಅಕ್ಷರದ ಆಯ್ಕೆಯ ಗೊಂದಲಕ್ಕೆ ಎಡೆಗೊಟ್ಟು ಬರೆಹದ ದೋಷಕ್ಕೆ ಕಾರಣವಾಗುತ್ತಿವೆ. ಅನವಶ್ಯಕವಾದ ಈ ಹದಿನೇಳು ಅಕ್ಷರಗಳನ್ನು ನಮ್ಮ ಅಕ್ಷರಮಾಲೆಯಿಂದ ಹೊರದೂಡಿ ನಮ್ಮ ವರ್ಣಮಾಲೆಯನ್ನು ಶುದ್ದೀಕರಿಸಿದರೆ , ನಮ್ಮ ಬರೆಹ ದೋಷ ಮುಕ್ತವಾಗುತ್ತದೆ..

ಈ ಕ್ರಮದಿಂದ ನಮ್ಮ ಅಕ್ಷರಮಾಲೆ 49 ರಿಂದ ಕುಗ್ಗಿ 32 ಅಕ್ಷರಗಳ ಕಿರುಗಾತ್ರದ, ಕಲಿಯಲು ಸುಲಭವಾದ ಅಕ್ಷರ ಮಾಲೆಯಾಗುತ್ತದೆ. ಈ ಸರಳೀಕರಣದ ಮೂಲಕ ಕನ್ನಡ ಕಲಿಕೆ ವ್ಯಾಪಕಗೊಂಡು ಜನಪ್ರಿಯವಾಗುತ್ತದೆ. ಇವಿಷ್ಟೂ ಸುದಾರಣೆಗಳನ್ನು ಕನ್ನಡಿಗರು ಏಕಕಾಲಕ್ಕೆ ಯುದ್ದೋಪಾದಿಯಲ್ಲಿ ಕೈಗೆತ್ತಿಕೊಂಡಲ್ಲಿ ಮಾತ್ರ ಕನ್ನಡ ಸಂವರ್ಧನೆಯ ಹೊಸ ಶಕೆಯೊಂದು ಇಲ್ಲಿ ಆರಂಭವಾಗಲು ಸಾಧ್ಯವಾಗುತ್ತದೆ.

ಕನ್ನಡವು ಜನರ ನಾಲಗೆಯ ಮೇಲೂ, ಕಲಿಕಾ ಮಾದ್ಯಮವಾಗಿಯೂ ಉಳಿಯಲು; ಹಾಗೆ ಉಳಿಯುವ ಮೂಲಕ ಸರ್ಕಾರಿ ಶಾಲೆಗಳು ಉಳಿಯುವಂತಾಗಲೂ ; ಕನ್ನಡ ಮಾಧ್ಯಮದ ಮಕ್ಕಳ ಶೈಕ್ಷಣಿಕ ಭವಿಷ್ಯ ವನ್ನು ರಕ್ಷಿಸಲು .. ಒಟ್ಟಾರೆಯಾಗಿ ಕನ್ನಡದ ಸರ್ವಾಂಗೀಣ ಉಳಿವಿಗಾಗಿ ನಾವು ಮೇಲೆ ಪಟ್ಟಿ ಮಾಡಿದ , ಎಲ್ಲ ಸುಧಾರಣಾ ಕಾರ್ಯಗಳನ್ನೂ ಒಟ್ಟಿಗೇ ಕೈಗೆತ್ತಿಕೊಳ್ಳಬೇಕಾಗಿದೆ..

  • ಡಾ ನಟರಾಜ ಕೆ ಪಿ, ಅಧ್ಯಾಪಕರು

Leave a Reply