ಬಾದಾಮಿ ಮತ್ತು ಗೋಡಂಬಿ ಷಟ್ಪದಿ

1 year ago

ವಿದ್ಯಾರ್ಥಿನಿಯೋರ್ವಳು ನನ್ನ ಬಳಿ ಬಂದು, ‘ಸರ್ ನನಗೆ ನಿಮ್ಮಿಂದ ಒಂದು ಹೆಲ್ಪ್ ಆಗ್ಬೇಕಿತ್ತು ಸರ್’ ಎಂದಳು.‌. ‘ಹೌದಾ… ಏನ್ ಹೇಳು ಪುಟ್ಟಾ‌…’ ಎಂದೆ. ‘ಸರ್, ಕನಕದಾಸರ ನಳಚರಿತೆಯಲ್ಲಿ ಬಾದಾಮಿ ಷಟ್ಪದಿಯ ಪದ್ಯಗಳು ಬೇಕಿತ್ತು ಸರ್…’ ಎಂದಳು.

‘ಇನ್ನೊಂದ್ ಸಲ ಹೇಳು ಎಂಥಾ ಷಟ್ಪದಿ?’ ಎಂದೆ. ‘ಅದೆ ಸರ್, ಕನಕದಾಸರ ಬಾದಾಮಿ ಷಟ್ಪದಿ’.. ‘ಅದು ಬಾದಾಮಿ ಷಟ್ಪದಿ ಅಲ್ಲಮ್ಮಾ… ಭಾಮಿನಿ ಷಟ್ಪದೀ ಭಾಮಿನಿ‌ ಭಾಮಿನಿ… ಭಾಮಿನಿ ಅಂದ್ರೆ ಕೋಪಗೊಂಡಿರುವ ಹೆಣ್ಣು ಅಥವಾ ಕೋಪದಿಂದ ಕಣ್ಣುಗಳು ಕೆಂಪಾದ ಸುಂದರಿ ಅಂತೆಲ್ಲಾ ಹೇಳ್ತಾರೆ. ಕನಕದಾಸರು ಸಾಂಗತ್ಯದಲ್ಲಿ ಮೋಹನ ತರಂಗಿಣಿ ಬರ್ದಿದಾರೆ ಬಿಟ್ರೆ ಅವರ ಮೂರು ಕೃತಿಗಳು ಭಾಮಿನಿಯಲ್ಲಿವೆ‌. ಯಾರಮ್ಮಾ ನಿನಿಗೆ ಬಾದಾಮಿ ಷಟ್ಪದಿ ಅಂದಿದ್ದೂ…’ ಎಂದೆ. ಪಾಪ ನಾಚಿಕೊಂಡು ನಿಲ್ತು ಆ ಮಗು…

‘ನೋಡಮ್ಮಾ ಪುಟ್ಟಾ‌‌‌… ಷಟ್ಪದಿಗಳಲ್ಲಿ ಮೂಲ ‘ಅಂಶ ಷಟ್ಪದಿ’ ಅಂತ ಇದೆ. ಅಮೇಲೆ ಮಾತ್ರಾ ಷಟ್ಪದಿಗಳು ಬಂದ್ವು. ಶರ ಕುಸುಮ ಭೋಗ ಭಾಮಿನಿ ಪರಿವರ್ಧಿನಿ ವಾರ್ಧಕ ಅಂತ ಆರು ಷಟ್ಪದಿಗಳು ಬಂದಿದಾವೆ‌. ರಾಘವಾಂಕ ಉದ್ದಂಡ ಎಂಬ ಷಟ್ಪದಿಯನ್ನೂ ಪ್ರಯೋಗಿಸಿದ್ದಾನೆ. ತಲ ಷಟ್ಪದಿ ಅಂತಲೂ ಇದೆ. ಕವಿಗಳು ಅತಿ ಹೆಚ್ಚು ಬಳಸಿರೋದು ಭಾಮಿನಿ ಮತ್ತೆ ವಾರ್ಧಕ ಷಟ್ಪದಿಗಳನ್ನ. ಅದರಲ್ಲಿ ಭಾಮಿನಿಯದ್ದೇ ಅಗ್ರಸ್ಥಾನ. ಬಿಟ್ಟರೆ ವಾರ್ಧಕ ಷಟ್ಪದಿ. ಇರೋದು ಭಾಮಿನಿ ಷಟ್ಪದಿ ಕಣಮ್ಮಾ… ಬಾದಾಮಿ ಷಟ್ಪದಿ ಗೋಡಂಬಿ ಷಟ್ಪದಿ ದ್ರಾಕ್ಷಿ ಷಟ್ಪದಿ ಅಂಜೂರಾ ಷಟ್ಪದಿ ಚಕ್ಕೆ ಲವಂಗ ಯಾಲಕ್ಕಿ ಷಟ್ಪದಿಗಳೆಲ್ಲ ಇಲ್ಲ‌. ಮುಂದೆ ‌ನನ್ನಂತ ವಿಚಿತ್ರ ಕವಿ ಏನಾದರೂ ಹೊಸ ಪ್ರಯೋಗ ಮಾಡಿ ಈ ಹೆಸರುಗಳನ್ನ ಇಡಬೇಕಷ್ಟೆ. ಮೇಷ್ಟ್ರು ಭಾಮಿನಿ ಅಂತ ಸರಿಯಾಗೇ ಹೇಳಿರ್ತಾರೆ ನೀನು ಬಾದಾಮಿ ಅಂತ ಕೇಳುಸ್ಕೊಂಡಿದಿಯ… ಅಂತ ಚೇಡಿಸಿದೆ. ಅವಳು ಅವಳ ಗೆಳತಿಯರು ಜೋರಾಗಿ ನಗಲಾರಂಭಿಸಿದರು.

ಹಿಂದೊಮ್ಮೆ ಹೀಗೇ ಆಗಿತ್ತು. ನಮ್ಮ ಇಂಗ್ಲಿಷ್ ಮೇಷ್ಟ್ರು ಬಿ.ಎಲ್.ರಾಜು ಸರ್ ತಮ್ಮ ಇಂಗ್ಲಿಷ್ ಮೇಜರ್ ವಿದ್ಯಾರ್ಥಿನಿಯೋರ್ವಳಿಗೆ ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕ ಓದಿ ವಿಮರ್ಶೆ ಬರ್ಕೊಂಡ್ ಬರೋಕೆ ಹೇಳಿದ್ದರಲ್ಲದೆ ಆ ಪುಸ್ತಕ ಕನ್ನಡ ವಿಭಾಗದಲ್ಲಿ ಸುರೇಶ್ ಸರ್ ಹತ್ರ ಇರಬಹುದು ಕೇಳಿನೋಡು ಅಂತ ಕಳಿಸಿದಾರೆ. ಆಕೆ ನಮ್ಮ ವಿಭಾಗಕ್ಕೆ ನನ್ನ ಬಳಿ ಬಂದು ‘ಸಾರ್‌‌.. ರಾಜು ಸರ್ ಹೇಳಿದ್ರು ನಿಮ್ಮತ್ರ  ‘ಎದೆಗೆ ಒದ್ದ ಅಕ್ಷರ’ ಬುಕ್ಕಾ ಇದೆಯಾ ಸಾರ್…?’.. ನಾನು ನನ್ನ ಸಹೋದ್ಯೋಗಿಗಳು ಅವಳನ್ನೆ ನೋಡ್ತಾ.. ಅವಳ ಕಡೆ ಕಿವಿ ತಿರುಗಿಸಿ.. ‘ಇನ್ನೊಮ್ಮೆ ಹೇಳಮ್ಮಾ ಯಾವ್ ಪುಸ್ತಕ?.. ಅದೇ ಸಾರ್ ದೇವನೂರರ ‘ಎದೆಗೆ ಒದ್ದ ಅಕ್ಷರ’ ಎನ್ನಬೇಕೆ….. ಅಲ್ಲಮ್ಮಾ ಅದು ಎದೆಗೆ ಬಿದ್ದ ಅಕ್ಷರ ಒದ್ದ ಅಕ್ಷರ ಅಲ್ಲ… ಒಂದರ್ಥದಲ್ಲಿ ಯಾರ್ ಎದೆಗೆ ಒದಿಬೇಕೊ ಅವರೆದೆಗೆ ಒದ್ದಂಗೇ ಇದೆ ಬಿಡು.. ನಿನ್ನದೇ ಆದ ನಾಮಕರಣ ಚನ್ನಾಗಿದೆ’ ಅಂತ ಹೇಳಿ ನಗ ತೊಡಗಿದೆವು.. ಪಾಪ ಆ ಹುಡುಗಿ ನಾಚಿಕೊಂಡಳು ಪುಸ್ತಕ ನಾಳೆ ತಂದು ಕೊಡ್ತೀನಿ ಹೇಳಿ ಕಳಿಸಿದೆ.

ಭಾಷೆ ನಿಂತ ನೀರಲ್ಲ‌ ಹಾಗಾಗಿ ಉತ್ಪಾದಕತೆ ಅದರ ಲಕ್ಷಣಗಳಲ್ಲೊಂದು. ಇರುವ ಧ್ವನಿ ಸಂಕೇತಗಳನ್ನು ಬಳಸಿಕೊಂಡೇ ನಾವು ಹೊಸ ಹೊಸ ಪದ ಸೃಷ್ಟಿಸಬಹುದು. ಆ ಮೂಲಕ ಭಾಷೆಯನ್ನು ಸಮೃದ್ಧವಾಗಿ ಬೆಳೆಸಲು ಸಾಧ್ಯ. ಕನ್ನಡದಲ್ಲಿ ಬಿ.ಎ. ವಿದ್ಯಾರ್ಥಿಗಳಿಗೆ. ನಾಗಚಂದ್ರ ಕವಿಯ ‘ರಾಮಚಂದ್ರ ಚರಿತಾ ಪುರಾಣ’ ದ ‘ಆಕೆಯಂ ತಾಯೆಂದು ವಕ್ರೋಕ್ತಿಯಿಂ ನುಡಿದಂ’ ಎಂಬ ಕಾವ್ಯಭಾಗವನ್ನ ಟೆಕ್ಸ್ಟ್ ಮಾಡಿದ್ದರು. ನಳಕೂಬರನ ಮೇಲೆ ದಂಡೆತ್ತಿ ಹೋಗುವ ರಾವಣ, ನಳಕೂಬರನ ಹೆಂಡತಿಯಿಂದ ದುರ್ಲಂಘ್ಯಪುರದ ದುರ್ಗಮವಾದ ಕೋಟೆಯನ್ನು ಗೆಲ್ಲಲು ಬೇಕಾದ ಸಾಲಭಂಜಿನಿ ವಿದ್ಯೆಯನ್ನು ತಂತ್ರದಿಂದ ಕಲಿಯುತ್ತಾನೆ. ಕೋಟೆಯನ್ನು ಗೆದ್ದು ನಳಕೂಬರನನ್ನು ಸೆರೆ ಹಿಡಿದು ನಡುರಾತ್ರಿ ರಾವಣನ ಮೇಲಿನ ಮೋಹದಿಂದ ಅವನಿಗೆ ಕೋಟೆ ಭೇದಿಸುವ ಸಾಲಭಂಜಿನಿ ವಿದ್ಯೆಯನ್ನು ಹೇಳಿಕೊಟ್ಟ ರಾಣಿಯನ್ನು ಕರೆಸುತ್ತಾನೆ. ಆಕೆಯಲ್ಲಿ ವಿದ್ಯೆ ಕಲಿತದ್ದರಿಂದ ನೀನು ನನಗೆ ಗುರುವೂ ತಾಯಿಯೂ ಆಗಬೇಕು ಎಂತಲೂ ಹೇಳಿ. ನಳಕೂಬರನ ಜೊತೆ ನಿಷ್ಠೆಯಿಂದ ಬದುಕುವಂತೆ ಬುದ್ಧಿ ಹೇಳಿ. ನಳಕೂಬರನಿಗೆ ಸಾಮಂತಾಧಿಕಾರ ಕೊಟ್ಟು ಗೌರವದಿಂದ ಕಾಣುವ ಕಾವ್ಯಭಾಗವದು. ಇಲ್ಲಿ ಇಂತಹಾ ಉದಾತ್ತ ರಾವಣ, ಪರಸತಿ ವಿರಾಂಗನಾ ವ್ರತ ಕೈಗೊಂಡ ದಾರ್ಶನಿಕ ರಾವಣ ಸೀತಾಪಹರಣದಂತಹ ಕೃತ್ಯಕ್ಕೆ ಇಳಿದು ಹೇಗೆ ತನ್ನ ದುರಂತವನ್ನು ತಂದುಕೊಂಡ ಎಂಬ ವಿಷಾದದ ಸಂಗತಿಯನ್ನು ಪರಿಣಾಮಕಾರಿಯಾಗಿ ಬೋಧಿಸಿದ್ದೆ‌. ಅದು ಒಬ್ಬ ವಿದ್ಯಾರ್ಥಿನಿಯ ಮೇಲೆ ಬಹಳ ಪ್ರಭಾವ ಬೀರಿತ್ತೇನೊ. ಅವಳೂ ಸಾಮ್ರಾಟ ಅಶೋಕನ ಕುರಿತು ಹಿಸ್ಟರಿ ಪಾಠವನ್ನು ಚನ್ನಾಗಿ ಕೇಳಿದ್ದಳಿರಬೇಕು. ದೇವನಾಂಪ್ರಿಯ ಅಶೋಕ ಎಂಬ ಅವನ ಬಿರುದು ಶಾಸನೋಕ್ತ ‘ದೇವಾನಾಂಪಿಯ ಪಿಯಸದಸಿ’ ಇವೆಲ್ಲವೂ ತಲೆಯಲ್ಲಿ ಕೂತಿದ್ದವಿರಬೇಕು. ಕನ್ನಡ ಆಂತರಿಕ ಕಿರುಪರೀಕ್ಷೆಯಲ್ಲಿ ರಾವಣನ ಬಗ್ಗೆ ಬರೆಯುತ್ತಾ ಉಪಸಂಹಾರದಲ್ಲಿ  ‘ರಾವಣನು ಅಶೊಕನಂತೆ ದೇವನಾಂಪ್ರಿಯನಾಗದೆ ಕಾಮನಾಂಪ್ರಿಯನಾಗಿಬಿಟ್ಟ’ ಎಂದು ಬರೆದುಬಿಟ್ಟಿದ್ದಳು‌. ಆ ಪತ್ರಿಕೆ ಮೌಲ್ಯಮಾಪನ ನಾನೇ ಮಾಡಿದ್ದೆ. ನೆನೆದರೆ ಅದೀಗಲೂ ನಗೆ ತರಿಸತ್ತೆ. ಆಕೆ ಹೊಸದೊಂದು ಪದ ಸೃಷ್ಟಿಸಿ ಕನ್ನಡ ಭಾಷೆಗೆ ಕೊಡುಗೆ ಕೊಟ್ಟಳಲ್ಲಾ ಎಂದು ನಕ್ಕುಬಿಟ್ಟೆ. ಭಾಷೆಯ ಲಕ್ಷಣಗಳಲ್ಲಿ ಭಾಷೆಯು ಹೊಂದಿರುವ ಉತ್ಪಾದಕ ಗುಣದ ಬಗ್ಗೆ ಹೇಳುವಾಗ ಇದನ್ನು ಉದಾಹರಿಸಿ ಮನಸಾರೆ ನಗುತ್ತಿರುತ್ತೇನೆ. ಆ ವಿದ್ಯಾರ್ಥಿನಿಯ ಹೊಳಹು ಅದ್ಭುತವೇ ಸರಿ. ಇದೊಂದು ಕ್ರಿಯೇಟಿವಿಟಿ. ಈ ಕ್ರಿಯೇಟಿವಿಟಿಯೇ ಭಾಷೆಯ ಬೆಳವಣಿಗೆ ಕಲೆ ಇತ್ಯಾದಿಗಳ ಜೀವಸತ್ವ.

ಪಾಠ ಹೇಳುವ ಬಹಳ ಮೇಷ್ಟ್ರು ಇಂತಹಾ ವೈಶಿಷ್ಟ್ಯಗಳಿಗೆ ಮುಖಾಮುಖಿ ಆಗ್ತಾನೇ ಇರ್ತೀವಿ. ನಮ್ಮ ವೃತ್ತಿ ಜೀವನದ ಸುಂದರ ಸುಮಧುರ ಅನುಭವಗಳಿವು…

– ಸುರೇಶ ಎನ್ ಶಿಕಾರಿಪುರ, ಚಿಂತಕರು

Leave a Reply